ಅಕ್ರಮ ಆಸ್ತಿಗಳಿಕೆ: ಉಪನ್ಯಾಸಕ ಡಿ.ಮಂಜುನಾಥಯ್ಯ ಅಮಾನತು
ಡಿ.ಮಂಜುನಾಥಯ್ಯ
ಉಡುಪಿ, ಮಾ.12: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಡಿ. ಮಂಜುನಾಥಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಲ್ಲಿ ಮಂಜುನಾಥಯ್ಯ ವಿರುದ್ಧ 2018ರ ಡಿ. 27ರಂದು ಭ್ರಷ್ಟಚಾರ ನಿಗ್ರಹ ದಳದ ಉಡುಪಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಿಂದ ಆರೋಪಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಕಂಡುಬಂದಿತ್ತು. ಈ ಹಿನ್ನೆಲೆ ಯಲ್ಲಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರು ಮಂಜುನಾಥಯ್ಯ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿತ್ತು.
ಶಿಕ್ಷಣ ಇಲಾಖೆ ಇದನ್ನು ಪರಿಶೀಲಿಸಿದ್ದು, ಮಂಜುನಾಥಯ್ಯ ತಮ್ಮ ಎಲ್ಲ ಮೂಲಗಳಿಂದ ಬಂದಿರುವ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರು ವುದು ಮತ್ತು ಅಕ್ರಮವಾಗಿ ಶೇ. 89.40ರಷ್ಟು ಆಸ್ತಿ ಅವರಲ್ಲಿ ಇರುವುದು ದಾಖಲೆಗಳಿಂದ ತಿಳಿದುಬಂದಿತು.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಡಿ.ಮಂಜುನಾಥಯ್ಯ ಅವರನ್ನು ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಂಜುನಾಥಯ್ಯ, ನಂತರ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಆಯುಕ್ತರಾಗಿ, ತಾಪಂ ಕಾರ್ಯನಿರ್ವ ಹಣಾಧಿಕಾರಿಯಾಗಿ ಮತ್ತು ಹಲವು ವರ್ಷಗಳ ಕಾಲ ಉಡುಪಿ ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ವಿಧಾನ ಸಭಾ ಚುನಾ ವಣಾ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಇವರು ಹಲವು ಸಮಯ ನಂತರ ಮಂಗಳೂರು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪ ನ್ಯಾಸರಾಗಿ ಸೇವೆಯನ್ನು ಆರಂಭಿಸಿದ್ದರು.