ಪೊಳಲಿ ಬ್ರಹ್ಮಕಲಶೋತ್ಸವ: ದೇವಳ ಪ್ರವೇಶ ಅವಧಿಯಲ್ಲಿ ಮಾರ್ಪಾಡು
ಮಂಗಳೂರು, ಮಾ.12: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.13ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ದೇವಸ್ಥಾನದ ಒಳಗೆ ಪೂಜಾ ವಿಧಿವಿಧಾನಗಳು ಜರುಗಲಿರುವುದರಿಂದ ಭಕ್ತರ ದೇಗುಲ ಪ್ರವೇಶ ಸಮಯದಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಬೆಳಗ್ಗೆ 4ರಿಂದ 8:10ರವರೆಗೆ ಬ್ರಹ್ಮಕಲಶ ನಡೆಯಲಿರುವುದರಿಂದ ಬೆಳಗ್ಗೆ 10 ಗಂಟೆಯ ತನಕ ದೇವಾಲಯದ ಒಳಗೆ ಭಕ್ತರ ಪ್ರವೇಶ ನಿಯಂತ್ರಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5:30 ಗಂಟೆ ತನಕ ದೇವರ ದರ್ಶನಕ್ಕೆ ಮುಕ್ತ ಅವಕಾಶವಿದೆ. ಸಂಜೆ ದೇವರಿಗೆ ರಂಗಪೂಜೆ ನಡೆಯಲಿರುವುದರಿಂದ 5:30ರಿಂದ 8:30 ತನಕ ಭಕ್ತರ ಪ್ರವೇಶವನ್ನು ಮತ್ತೆ ನಿಯಂತ್ರಿಸಲಾಗುತ್ತದೆ. ರಾತ್ರಿ 8:30ರ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಇದಕ್ಕೆ ಸಂಪೂರ್ಣ ಸಹಕರಿಸಬೇಕೆಂದು ದೇವಳದ ಆಡಳಿತ ಮಂಡಳಿ ವಿನಂತಿಸಿದೆ.
ಎಲ್ಇಡಿ ಅಳವಡಿಕೆ: ಬ್ರಹ್ಮಕಲಶೋತ್ಸವದ ಪ್ರಕ್ರಿಯೆಯನ್ನು ವೀಕ್ಷಿಸಲು ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಪರಿಸರದಲ್ಲಿ 10ಕ್ಕೂ ಅಧಿಕ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.