ವಿಮಾನ ನಿಯಂತ್ರಣದಲ್ಲಿ ಸಮಸ್ಯೆ ಇದೆ ಎಂದು ವರದಿ ಮಾಡಿದ್ದ ಪೈಲಟ್: ಇಥಿಯೋಪಿಯನ್ ಏರ್‌ಲೈನ್ಸ್
ಬ್ಲಾಕ್ ಬಾಕ್ಸ್ ಯುರೋಪ್‌ಗೆ
ಅಡಿಸ್ ಅಬಾಬ (ಇಥಿಯೋಪಿಯ), ಮಾ. 13: ಅಪಘಾತಕ್ಕೀಡಾಗಿರುವ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದ ಪೈಲಟ್, ವಿಮಾನದ ನಿಯಂತ್ರಣದಲ್ಲಿ ತಾನು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂಬ ಸಂದೇಶ ಕಳುಹಿಸಿದ್ದರು ಎಂದು ಏರ್‌ಲೈನ್ಸ್ ಬುಧವಾರ ಹೇಳಿದೆ.
ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿ ರವಿವಾರ ಸಂಭವಿಸಿದ ಅಪಘಾತದಲ್ಲಿ 157 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅದೇ ವೇಳೆ, ವಿಮಾನದ ಬ್ಯ್ಲಾಕ್ ಬಾಕ್ಸನ್ನು ವಿಶ್ಲೇಷಣೆಗಾಗಿ ಯುರೋಪ್‌ಗೆ ಕಳುಹಿಸಲು ಏರ್‌ಲೈನ್ಸ್ ನಿರ್ಧರಿಸಿದೆ.
ರವಿವಾರ ಅಡಿಸ್ ಅಬಾಬದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಏರ್‌ಲೈನ್ಸ್‌ನ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಪತನಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ಅಪಘಾತಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ.
ಇಂಡೋನೇಶ್ಯದಲ್ಲಿ 5 ತಿಂಗಳ ಹಿಂದೆ ಇನ್ನೊಂದು ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನಗೊಂಡಿರುವ ಹಿನ್ನೆಲೆಯಲ್ಲಿ, ಈ ವಿಮಾನದ ಬಳಕೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ.
ಇಂಡೋನೇಶ್ಯದಲ್ಲಿ ನವೆಂಬರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 189 ಮಂದಿ ಪ್ರಾಣ ಕಳೆದುಕೊಂಡಿದ್ದರು.
ನಾನು ವಿಮಾನವನ್ನು ನಿಯಂತ್ರಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂಬುದಾಗಿ ಪೈಲಟ್ ಮಾಹಿತಿ ನೀಡಿದ್ದರು ಹಾಗೂ ಅಡಿಸ್ ಅಬಾಬಕ್ಕೆ ವಾಪಸಾಗಲು ಅನುಮತಿ ಕೋರಿದ್ದರು ಎಂದು ಇಥಿಯೋಪಿಯ ಏರ್‌ಲೈನ್ಸ್ ವಕ್ತಾರ ಅಸ್ರತ್ ಬೇಗ್ ಶಾ ‘ರಾಯ್ಟರ್ಸ್’ಗೆ ತಿಳಿಸಿದರು.
ಯುರೋಪ್‌ನ ಯಾವ ದೇಶಕ್ಕೆ ಬ್ಲಾಕ್ ಬಾಕ್ಸನ್ನು ಕಳುಹಿಸುವುದು ಎಂಬ ನಿರ್ಧಾರವನ್ನು ಗುರುವಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.