ಮೈತ್ರಿ ಮಾಡಿಕೊಳ್ಳದ ಬಹುಜನ ಪಕ್ಷದ ರಾಜಕೀಯ ಪ್ರಮಾದ
ಇಡೀ ರಾಷ್ಟ್ರದಲ್ಲಿ ಭಾಜಪವನ್ನು ಸೋಲಿಸಲು ಮಹಾಘಟಬಂಧನ್ ರಚಿಸಿಕೊಳ್ಳುವ ಬಗ್ಗೆ ವಿರೋಧಪಕ್ಷಗಳು ಮಾತಾಡುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನಪಕ್ಷ ಮತ್ತು ಅಖಿಲೇಶ್ ಯಾದವರ ಸಮಾಜವಾದಿ ಪಕ್ಷಗಳು ಕಾಂಗ್ರೆಸನ್ನು ನಿರ್ಲಕ್ಷಿಸಿ ಮೈತ್ರಿಕೂಟವೊಂದನ್ನು ರಚಿಸಿಕೊಂಡು ಬಿಟ್ಟವು. ಈ ಪಕ್ಷಗಳ ಇಂತಹ ನಡೆ ಕಾಂಗ್ರೆಸ್ ಮುಂದಾಳತ್ವದಲ್ಲಿ ಮೈತ್ರಿಕೂಟ ರಚಿಸಿಕೊಳ್ಳಲು ಮುಂದಾಗಿದ್ದ ವಿರೋಧಪಕ್ಷಗಳಿಗೆ ಭಾರೀ ಹಿನ್ನಡೆಯನ್ನುಂಟುಮಾಡಿತು.
ಇದೀಗ ಮತ್ತೆ ಮಾಯಾವತಿಯವರು ದೇಶದ ಮಿಕ್ಕ ಯಾವುದೇ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಲ್ಲದೆ, ಉತ್ತರದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ ಮತ್ತು ದಕ್ಷಿಣದ ಕರ್ನಾಟಕದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಉತ್ತರಪ್ರದೇಶದ ವರ್ತಮಾನದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಹುಜನಪಕ್ಷಕ್ಕಾಗಲಿ, ಬಹುಜನಪಕ್ಷದಿಂದ ಕಾಂಗ್ರೆಸ್ಗಾಗಲಿ ಯಾವುದೇ ಉಪಯೋಗವಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಬಹುಜನಪಕ್ಷ, ಸಮಾಜವಾದಿ ಪಕ್ಷಗಳ ಮೈತ್ರಿಗೆ ಒಂದು ಅರ್ಥವಿದೆ. ಕಾಂಗ್ರೆಸನ್ನು ಹೊರಗಿಟ್ಟಿದ್ದರಲ್ಲಿ ಜಾಣ ರಾಜಕೀಯ ನಡೆ ಇದೆಯೆಂಬುದನ್ನೇನೋ ನಾವು ಒಪ್ಪಿಕೊಳ್ಳಬಹುದು. ಯಾಕೆಂದರೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಗೆ ಮೇಲ್ವರ್ಗಗಳೇ ಪರಂಪರಾನುಗತ ಮತದಾರರಾಗಿದ್ದು ಅ ಮತಗಳು ಬಹುಜನಪಕ್ಷಕ್ಕಾಗಲಿ ಅಥವಾ ಸಮಾಜವಾದಿ ಪಕ್ಷಕ್ಕಾಗಲಿ ವರ್ಗವಾಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮಾಯಾವತಿಯವರ ನಿಲುವು ಸರಿಯಿದೆ. ಆದರೆ ಇದೇ ಮಾತನ್ನು ಮಿಕ್ಕ ರಾಜ್ಯಗಳ ಮಟ್ಟಿಗೆ ಹೇಳಲಾಗುವುದಿಲ್ಲ. ಯಾಕೆಂದರೆ ಪ್ರಸ್ತುತ ಬಲಿಷ್ಠವಾಗಿರುವ ಭಾಜಪವನ್ನು ಸೋಲಿಸಬೇಕೆಂದರೆ ಭಾಜಪವಿರೋಧಿ ಮತಗಳು ಚದುರಿಹೋಗದಂತೆ ನೋಡಿಕೊಳ್ಳಬೇಕಿದೆ. ನಾನು ಮೇಲೆ ಹೇಳಿದ ರಾಜ್ಯಗಳಲ್ಲಿ ಭಾಜಪ ಮತ್ತು ಕಾಂಗ್ರೆಸ್ ಬಹುತೇಕ ಸಮಪ್ರಮಾಣದ ಮತಬ್ಯಾಂಕನ್ನು ಹೊಂದಿವೆ. ಇಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಬಹುಜನಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದರೆ ಉಂಟಾಗುವ ತ್ರಿಕೋನ ಸ್ಪರ್ಧೆಯಲ್ಲಿ ಭಾಜಪ ವಿರೋಧಿ ಮತಗಳು ಹಂಚಿಹೋಗುವುದರಿಂದ ಭಾಜಪ ನಿರಾಯಾಸವಾಗಿ ಗೆಲ್ಲಬಹುದು.
ಇದನ್ನು ನಾವು ಕೆಲವು ಅಂಕಿಅಂಶಗಳಿಂದ ನೋಡಬಹುದಾಗಿದೆ. 2018ರಲ್ಲಿ ನಡೆದ ಮೂರೂ ರಾಜ್ಯಗಳ ವಿಧಾನಸಭೆಯ ಚುನಾವಣೆಗಳಲ್ಲಿ ಭಾಜಪ, ಕಾಂಗ್ರೆಸ್ ಮತ್ತು ಬಹುಜನಪಕ್ಷ ಪಡೆದ ಮತಪ್ರಮಾಣಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದರೆ ಇದು ಅರ್ಥವಾಗುತ್ತದೆ. ರಾಜಸ್ಥಾನದಲ್ಲಿ ಕಳೆದ ಬಾರಿ(2018)ಭಾಜಪ ಮತ್ತು ಕಾಂಗ್ರೆಸ್ ಶೇಕಡಾ 39ರಷ್ಟು ಮತಗಳನ್ನು ಪಡೆದಿದ್ದರೆ ಬಹುಜನಪಕ್ಷ ಶೇಕಡಾ 4.1ಮತಗಳನ್ನು ಪಡೆದಿತ್ತು. ಮಧ್ಯಪ್ರದೇಶದಲ್ಲಿ ಭಾಜಪ ಮತ್ತು ಕಾಂಗ್ರೆಸ್ ಶೇಕಡಾ 41ರಷ್ಟು ಮತಗಳನ್ನು ಪಡೆದಿದ್ದರೆ ಬಹುಜನಪಕ್ಷ ಶೇಕಡಾ 5ರಷ್ಟು ಮತಗಳನ್ನು ಪಡೆದಿತ್ತು. ಇನ್ನು ಛತ್ತೀಸ್ಗಡದಲ್ಲಿ ಬಹುಜನಪಕ್ಷ ಶೇಕಡಾ 12ರಷ್ಟು ಮತಗಳನ್ನು ಪಡೆದಿತ್ತು. ಹಾಗೆ ನೋಡಿದರೆ ಬಹುಜನಪಕ್ಷ ಕಾಂಗ್ರೆಸ್ ಜೊತೆ ಸೇರಿದರೆ ಅದು ಪಡೆಯುವ ಮತಗಳ ಶೇಕಡಾ 90ರಷ್ಟು ಮತಗಳು ಕಾಂಗ್ರೆಸ್ಗೆ ವರ್ಗವಾಗಿ ಭಾಜಪದ ವಿರುದ್ಧ ಸುಲಭವಾಗಿ ಗೆಲ್ಲುವ ಅವಕಾಶ ಇರುತ್ತಿತ್ತು. ಆದರೆ ಬಹುಜನ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುವುದರಿಂದ ಅದು ತನ್ನ ನಿರ್ದಿಷ್ಟ ವರ್ಗದ ಮತಗಳ ಜೊತೆಗೆ ಕಾಂಗ್ರೆಸ್ನ ಮತಗಳನ್ನೇ ಸೆಳೆಯುತ್ತದೆ. ಯಾವತ್ತಿಗೂ ಬಹುಜನ ಪಕ್ಷ ಭಾಜಪದ ಪರಂಪರಾನುಗತ ಮತಗಳನ್ನು ಸೆಳೆಯಲಾರದು. ಇದರಿಂದ ಭಾಜಪಕ್ಕೆ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯಾದರೂ ಮಾಯಾವತಿಯವರು ಉತ್ತರಪ್ರದೇಶವನ್ನು ಹೊರತು ಪಡಿಸಿದಂತೆ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಭಾಜಪವನ್ನು ಸೋಲಿಸುವ ಅದರ ಪ್ರಯತ್ನದಲ್ಲಿ ಸಫಲವಾಗಬಹುದಿತ್ತೇನೊ!
ಇನ್ನು ನಮ್ಮ ರಾಜ್ಯಕ್ಕೆ ಬಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನೂ ಬಹುಜನಪಕ್ಷ ಮುರಿದು ಕೊಂಡು ಐತಿಹಾಸಿಕ ಪ್ರಮಾದ ಮಾಡಿದೆ. ಕರ್ನಾಟಕದ ಮಟ್ಟಿಗೆ ಬಹುಜನ ಪಕ್ಷ ಲೋಕಸಭಾ ಸ್ಥಾನಗಳನ್ನು ಗೆಲ್ಲುವಷ್ಟು ಬಲಿಷ್ಠವಾಗಿರದೆ ಹೋದರೂ ಶೇಕಡಾ ಐದರಿಂದ ಆರರಷ್ಟು ಮತಗಳನ್ನು ಪಡೆಯಲು ಶಕ್ತವಾಗಿದೆ. ಬಹುಜನ ಪಕ್ಷ ಹೀಗೆ ಪಡೆಯುವ ಆ ಶೇಕಡಾ ಐದರಷ್ಟು ಮತಗಳು ಕಾಂಗ್ರೆಸ್ ಮತ್ತು ಜನತಾದಳದ ಜಾತ್ಯತೀತ ವರ್ಗದ ಮತಗಳೇ ಆಗಿರುತ್ತವೆ ಎನ್ನುವುದನ್ನು ನಾವು ಮರೆಯಬಾರದು. ಹೀಗೆ ಅದು ಪಡೆಯಬಹುದಾದ ಅಲ್ಪಪ್ರಮಾಣದ ಮತಗಳು ಸಹ ಭಾಜಪದ ಗೆಲುವಿಗೆ ಪೂರಕವಾಗುತ್ತಾ ಹೋಗುತ್ತವೆ.
ಭಾಜಪವನ್ನು ಸೋಲಿಸುವುದೇ ಮಾಯಾವತಿಯವರ ಗುರಿಯಾಗಿದ್ದಿದ್ದರೆ ಕಾಂಗ್ರೆಸ್ ಮತ್ತು ಜನತಾದಳದ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಬೇಕಾಗಿತ್ತು. ಈ ವಿಷಯದಲ್ಲಿ ಬಹುಜನ ಪಕ್ಷದ ಜೊತೆಗೆ ಮಾತುಕತೆ ನಡೆಸದ ಕಾಂಗ್ರೆಸ್ನ ತಪ್ಪೂಸಹ ಇದೆ. ಈಗಿರುವ ಕಾಂಗ್ರೆಸ್ ಮತ್ತು ಜನತಾದಳದ ಮೈತ್ರಿಕೂಟದ ಜೊತೆ ಬಹುಜನ ಪಕ್ಷ ಸೇರಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದರೆ ಭಾಜಪ ಗೆಲುವಿಗೆ ಪ್ರಯಾಸ ಪಡಬೇಕಿತ್ತು. ಹಲವು ರಾಜಕೀಯ ವಿಶ್ಲೇಷಕರ ಪ್ರಕಾರ ರಾಜ್ಯದ 28 ಸ್ಥಾನಗಳ ಪೈಕಿ ಕಾಂಗ್ರೆಸ್ 16, ಜನತಾದಳ 10, ಬಹುಜನ ಪಕ್ಷ 2 ಸ್ಥಾನಗಳನ್ನು ಹಂಚಿಕೊಂಡು ಚುನಾವಣೆಗೆ ಹೋಗಬೇಕಿತ್ತು.
ಆದರೆ ಇವತ್ತಿಗೂ ತನ್ನ ದೊಡ್ಡಣ್ಣನ ಗತ್ತಿನ ನಡವಳಿಕೆಯನ್ನು ಬಿಟ್ಟುಕೊಡದ ಕಾಂಗ್ರೆಸ್ನ ಪ್ರತಿಷ್ಠೆಯ ವರ್ತನೆ, ಹಳೇ ಮೈಸೂರಿನ ಕ್ಷೇತ್ರಗಳಲ್ಲಿನ ತನ್ನ ಹಿಡಿತವನ್ನು ಬಿಟ್ಟುಕೊಡಲು ಇಚ್ಛಿಸದ ಜನತಾದಳ, ರಾಜಕೀಯವಾಗಿ ತನ್ನ ಜಿಗುಟುತನದಿಂದ ಹೊರಬಾರದ ಮಾಯಾವತಿಯವರು ಇಂತಹದೊಂದು ಮೈತ್ರಿಯನ್ನು ಮಾಡಿಕೊಳ್ಳದೆ ರಾಜಕೀಯವಾಗಿ ಎಡವಿದ್ದಾರೆ ಎನ್ನಬಹುದು.