ಭಾವ, ಗೇಯ ಪ್ರಧಾನವಾಗಿರುವ ಮುದ್ದು ಕವಿತೆಗಳು
ಈ ಹೊತ್ತಿನ ಹೊತ್ತಿಗೆ
ಕಾವ್ಯ ಕ್ಷೇತ್ರದಲ್ಲಿ ಮುದ್ದು ಮೂಡು ಬೆಳ್ಳೆಯವರದು ಚಿರಪರಿಚಿತ ಹೆಸರು. ಅವರ ಎರಡನೆಯ ಕವನ ಸಂಕಲನ ‘ಭಾವಗೇಯ ಯಾನ’. ನವೋದಯದ ರಮ್ಯತೆಯನ್ನು ಮೈಗೂಡಿಸಿಕೊಂಡಿರುವ ಸುಮಾರು 50 ಕವಿತೆಗಳು ಈ ಕೃತಿಯಲ್ಲಿವೆ.. ಮೊದಲ ಭಾಗದಲ್ಲಿ ಗೇಯ ಸ್ವರೂಪದ ಕವಿತೆಗಳು, ಎರಡನೆಯ ಭಾಗದಲ್ಲಿ ಮುಕ್ತ ರಚನೆಗಳೂ ಇವೆ. ಅಂದರೆ ಮೊದಲ ಭಾಗದಲ್ಲಿ ಹಾಡುವುದಕ್ಕೆ ಅನುಕೂಲವಾಗುವಂತಹ ಪದ್ಯಗಳಿದ್ದರೆ, ಎರಡನೆ ಭಾಗದಲ್ಲಿ ಪ್ರಾಸಗಳ ಹಂಗಿಲ್ಲದ ಆದರೆ ನವೋದಯದ ಲಯವನ್ನು ಮೀರದ ಕವಿತೆಗಳು. ಎಲ್ಲವೂ ಛಂದಸ್ಸಿನ ಬಂಧದೊಂದಿಗೆ ಮೈನವಿರೇಳಿಸಿಕೊಂಡ ಸಾಲುಗಳು. ತನಗೆ ತಾನೇ ಬಂಧವನ್ನಿಟ್ಟುಕೊಂಡು ಸ್ವತಂತ್ರವಾಗುವ ಹಂಬಲಿಕೆಯ ಪದ್ಯಗಳು ಇವು.
ಮೊದಲ ಭಾಗದ ಗೇಯ ಯಾನದ ವಸ್ತುಗಳು ಗೇಯತೆಯ ಭಾವಕ್ಕೆ ಪೂರಕವಾದವುಗಳು. ಸಖಿ, ಕನ್ನಡಾಂಬೆ, ಹೊಸ ವರುಷ, ಪ್ರಿಯತಮೆ, ಹುಡುಗಿ, ಜೋಗುಳ, ಬೆಳಗು ಇತ್ಯಾದಿಗಳನ್ನು ವಸ್ತುವಾಗಿಟ್ಟುಕೊಂಡು ತನ್ನ ಹೃದಯದ ಭಾವತೀವ್ರತೆಯನ್ನು ಕವಿ ಹಾಡಿದ್ದಾರೆ. ಎರಡನೆಯ ಭಾಗ, ಸಮಾಜದ ವಾಸ್ತವದ ಜೊತೆಗೆ ಮುಖಾಮುಖಿಯಾಗಲು ಹವಣಿಸುವ ಸಾಲುಗಳನ್ನು ಒಳಗೊಂಡಿವೆ. ಕವಿ ಇಲ್ಲಿ ನವ್ಯದವರಂತೆ ಸಿನಿಕನಲ್ಲ. ಸಮಾಜದಲ್ಲಿ ಇನ್ನೂ ಅಳಿದುಳಿದಿರುವ ಒಳ್ಳೆಯತನಗಳನ್ನು ಹೆಕ್ಕಿ ತನ್ನ ಕವಿತೆಯ ವಸ್ತುವಾಗಿಸಿದ್ದಾರೆ. ಮಾನವೀಯತೆಯ ತುಡಿತ ಪ್ರತಿ ಸಾಲುಗಳಲ್ಲೂ ಎದ್ದು ಕಾಣುತ್ತದೆ. ‘ಜನರು ಒಳ್ಳೆಯವರಾಗುತ್ತಿದ್ದಾರೆ’ ಎನ್ನುವ ಕವಿತೆಯೇ ಅದಕ್ಕೆ ಅತ್ಯುತ್ತಮ ಉದಾಹರಣೆ. ‘ಬಂಜರು ನೆಲಗಳು ಹಸುರು/ಹಸುರಾಗುತ್ತಾ/ತಂಪೀಯ ತೊಡಗಿವೆ/ಹೌದು, ಜನ ಈಗೀಗ ಹೆಚ್ಚು ಒಳ್ಳೆಯವರಾಗುತ್ತಿದ್ದಾರೆ...’ ಸಮಾಜದಲ್ಲಿ ಮಿಂಚಿನಂತೆ ಹೊಳೆಯುವ ಮನುಷ್ಯನ ಸಜ್ಜನಿಕೆಯನ್ನು ಗುರುತಿಸುತ್ತಾ ಕವಿ ಮೇಲಿನ ಸಾಲುಗಳ ಜೊತೆಗೆ ಮುಕ್ತಾಯಗೊಳಿಸುತ್ತಾರೆ.
ಮನುಷ್ಯನೊಳಗಿನ ಕೌರ್ಯವನ್ನು ಕಟ್ಟಿ ಹಾಕಿದ ಬಂಧನದ ಕಡೆಗೆ ಗಮನ ಸೆಳೆಯುತ್ತಾ ‘ಬಿಟ್ಟರೆ ಹುಲಿ/ಯಾಗುತ್ತಿದ್ದನೇನೋ/ಕಟ್ಟಿದಲ್ಲಿ ಗೂಟದ/ ಹಸುವಾದೆ’ ಎನ್ನುತ್ತಾರೆ ಕವಿ. ಅವಕಾಶ ಕೊಟ್ಟರೆ ಹುಲಿಯಾಗಿ ಎಗರುವ ಕ್ರೌರ್ಯ ಎಲ್ಲ ಮನುಷ್ಯರ ಒಳಗೂ ತಣ್ಣಗೆ ಮಲಗಿಕೊಂಡಿರುವುದನ್ನು ಈ ಕವಿತೆ ಹೇಳುತ್ತದೆ.
ಇಲ್ಲಿರುವ ಕವಿತೆಗಳು ಭಾವತೀವ್ರತೆಯಿಂದ ಕೊಚ್ಚಿ ಹೋಗಿಲ್ಲ. ಮೆಲು ದನಿಯಲ್ಲಿ ಹೇಳಬೇಕಾದುದನ್ನು ಸಹೃದಯನಿಗೆ ದಾಟಿ ಸುಮ್ಮನಿದ್ದು ಬಿಡುತ್ತದೆ. ಆಕೃತಿ ಆಶಯ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 60. ಮುಖಬೆಲೆ 65 ರೂ.