ವಿಮಾ ನೌಕರರಿಂದ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ
ಉಡುಪಿ, ಮಾ.16: ವಿಮಾ ನೌಕರರ ಸಂಘ ಉಡುಪಿ ವಿಭಾಗದ ಮಹಿಳಾ ಉಪಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇತ್ತೀಚೆ ಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾ.10ರಂದು ಶಂಕರಪುರದ ವಿಶ್ವಾಸದ ಮನೆಗೆ ಭೇಟಿ ನೀಡಿ ದೈನಂದಿನ ಬಳಕೆಯ ಗೃಹೋಪಯೋಗಿ ವಸ್ತುಗಳನ್ನು ಮತ್ತು ಬಿಸಿನೀರು ಮತ್ತು ತಣ್ಣೀರಿನ ಅಕ್ವಾಗಾರ್ಡ್ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ನಿರ್ವಾಹಕ ಪ್ರಶಾಂತ್ ಮಾತನಾಡಿದರು. ವಿಮಾ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕುಂದರ್, ಜತೆಕಾರ್ಯದರ್ಶಿ ಕವಿತಾ ಎಸ್., ಜಯಮೇರಿ, ಪ್ರಶಾಂತ್ ಉಪಸ್ಥಿತರಿದ್ದರು. ರತ್ನಾ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮಾ.11ರಂದು ಸಂಘದ ಕಛೇರಿಯ ಆವರಣದಲ್ಲಿ ಮಣಿಪಾಲ ಮಾಹೆ ಫಿಸಿಯೊಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್.ನಿರ್ಮಲಾ ನಾಯಕ್ ಅವರಿಂದ ‘ಫಿಸಿಯೊಥೆರಪಿಯಿಂದ ಆರೋಗ್ಯದ ಮೇಲಾಗುವ ಲಾಭಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಉಪಸಮಿತಿಯ ಹಿರಿಯ ಮಹಿಳಾ ಸದಸ್ಯೆಯರನ್ನು ಗುರುತಿಸಿ ಅಭಿನಂದಿಸಲಾಯಿತು. ಶೇಖರ ಪೂಜಾರಿ, ಜಯಮೇರಿ, ಅದಮಾರು ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ನಿರ್ಮಲಾ ಸ್ವಾಗತಿಸಿದರು. ಕವಿತಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾ ಕೆ. ವಂದಿಸಿದರು. ನೀರಜಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ಮಾ.13ರಂದು ನಿಟ್ಟೂರಿನ ಸರಕಾರಿ ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ದೈನಂದಿನ ಬಳಕೆಗಾಗಿ 40 ಅಲೂಮಿನಿಯಂ ಮತ್ತು ಫೈಬರ್ ಬಕೆಟುಗಳು, ಕೈಜಗ್ಗಳು ಹಾಗೂ ಒಳ ಉಡುಪುಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಮಂದಿರದ ಅಧೀಕ್ಷಕಿ ಕುಸುಮಾ ನಾಯಕ್ ಮಾತನಾಡಿದರು.
ಸಂಘಟನೆಯ ಜತೆ ಕಾರ್ಯದರ್ಶಿ ಕವಿತಾ ಎಸ್., ಸಂಘದ ಅಧ್ಯಕ್ಷ ವಿಶ್ವ ನಾಥ್, ಜಯಮೇರಿ, ಅದಮಾರು ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿ್ಷಕ ಸದಾನಂದ ಅಡಿಗ ವಂದಿಸಿದರು.