ಇತಿಹಾಸದ ಪುಟದಲ್ಲಿ ಮರೆಯಾದ ಅಬ್ಬಕ್ಕ ಚೌಟಳ ವೀರಗಾಥೆ
ಪೋರ್ಚುಗೀಸರ ದೈತ್ಯ ಸೇನಾ ಬಲದ ಹೊರತಾಗಿಯೂ, ತಾಯ್ನಡಿನ ರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವೀರರಾಣಿ ಅಬ್ಬಕ್ಕ ತನ್ನ ಆಳ್ವಿಕೆಯುದ್ದಕ್ಕೂ ಅವರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಳು. ಆಕೆಯ ಧೈರ್ಯ ಹಾಗೂ ಛಲದ ಶಕ್ತಿಯನ್ನು ಅರಿಯಲು ಇದೊಂದೇ ಸಾಕು. ಇಷ್ಟಿದ್ದರೂ, ಆಕೆಯ ಕಥನವು ಭಾರತದ ಇತಿಹಾಸದ ಪುಸ್ತಕಗಳಲ್ಲಿ ಬಹುತೇಕ ಮರೆಯಾಗಿಯೇ ಉಳಿದಿದೆ.
ವಸಾಹತುಶಾಹಿ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ಅವರನ್ನು ಹಲವು ಬಾರಿ ಸೋಲಿಸಿದ ಭಾರತದ ಏಕೈಕ ವೀರ ವನಿತೆ, ಉಳ್ಳಾಲದ ರಾಣಿ ಅಬ್ಬಕ್ಕ. ಆಕೆಯ ಅದಮ್ಯ ಧೈರ್ಯ ಹಾಗೂ ಪರಾಕ್ರಮ, ಭಾರತದ ಇತಿಹಾಸದಲ್ಲಿ ದಂತಕತೆಯಾಗಿ ರುವ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವಾರಂಗಲ್ನ ರಾಣಿ ರುದ್ರಮ್ಮ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಸರಿಸಾಟಿಯಾದುದಾಗಿದೆ. ಹೀಗಿದ್ದೂ, ಅಬ್ಬಕ್ಕಳ ಅದ್ಭುತ ಜೀವಂತ ಕಥಾನಕದ ಬಗ್ಗೆ ಇತಿಹಾಸ ಪುಸ್ತಕಗಳಲ್ಲಿ ಬರೆದಿರುವುದು ತೀರಾ ಕಡಿಮೆಯೆಂದೇ ಹೇಳಬಹುದು.
ಏಳನೇ ಶತಮಾನದಿಂದಲೂ, ಭಾರತದ ಪಶ್ಚಿಮ ಕರಾವಳಿ ಹಾಗೂ ಅರಬಿ ಪರ್ಯಾಯದ್ವೀಪ ಪ್ರದೇಶಗಳ ನಡುವೆ ವಾಸಿಸುವ ಜನಸಮುದಾ ಯಗಳ ನಡುವೆ ಸಮುದ್ರ ಮಾರ್ಗವಾಗಿ ವ್ಯಾಪಾರ (ಸಂಬಾರ ಪದಾ ರ್ಥಗಳು, ವಸ್ತ್ರ, ಯುದ್ಧ ಕುದುರೆಗಳು ಇತ್ಯಾದಿ) ವು ಉಚ್ಛ್ರಾಯಸ್ಥಿತಿ ಯಲ್ಲಿತ್ತು. ಈ ಲಾಭದಾಯಕ ವ್ಯಾಪಾರದ ಮೇಲೆ ಕಣ್ಣುಹಾಕಿದ ಕೆಲವು ಐರೋಪ್ಯ ಶಕ್ತಿಗಳು ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದವು. ಕೊನೆಗೂ, 1498ರಲ್ಲಿ ವಾಸ್ಕೋ ಡ ಗಾಮಾ ಸುದೀರ್ಘ ನೌಕಾಯಾನದ ಬಳಿಕ, ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದ.
ಇದಾದ ಐದು ವರ್ಷಗಳ ಬಳಿಕ ಪೋರ್ಚುಗೀಸರು ಕೇರಳದ ಕೊಚ್ಚಿಯಲ್ಲಿ ದೇಶದಲ್ಲೇ ತಮ್ಮ ಮೊತ್ತ ಮೊದಲ ಕೋಟೆಯನ್ನು ನಿರ್ಮಿಸಿ ದರು. ಆನಂತರ, ಅವರು ಭಾರತದ ಇನ್ನೂ ಕೆಲವೆಡೆ, ಮಸ್ಕತ್, ಮೊಝಾಂಬಿಕ್, ಶ್ರೀಲಂಕಾ, ಇಂಡೊನೇಶ್ಯ, ಚೀನಾದ ಮಕಾವುನಲ್ಲೂ ಹಿಂದೂ ಮಹಾಸಾಗರ ಪ್ರಾಂತದಲ್ಲಿ ಕೋಟೆಗಳ ವರ್ತುಲವನ್ನೇ ನಿರ್ಮಿ ಸಿದರು. ವಾಸ್ಕೋಡಗಾಮಾ ಐತಿಹಾಸಿಕ ನೌಕಾಯಾನ ಕೈಗೊಂಡ ಆನಂತರದ 20 ವರ್ಷಗಳೊಳಗೆ ಪೋರ್ಚುಗೀಸರು ಭಾರತದ ಎಲ್ಲಾ ಸಂಬಾರ ಪದಾರ್ಥ ವಾಣಿಜ್ಯ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಿದರು.
16 ಶತಮಾನವಿಡೀ, ಈ ಪ್ರದೇಶದಲ್ಲಿ ಪೋರ್ಚುಗೀಸರ ಪ್ರಾಬಲ್ಯ ವನ್ನು, ಯುರೋಪಿನ ಇತರ ಯಾವುದೇ ಶಕ್ತಿಗೂ ಪ್ರಶ್ನಿಸಲು ಸಾಧ್ಯವಾಗದೆ ಉಳಿಯಿತು. (ಡಚ್ಚರು,ಫ್ರೆಂಚರು ಹಾಗೂ ಬ್ರಿಟಿಶರು 17ನೇ ಶತಮಾನದ ಆರಂಭದಲ್ಲಷ್ಟೇ ಭಾರತಕ್ಕೆ ಆಗಮಿಸಿದ್ದರು).
16ನೇ ಶತಮಾನದವರೆಗೂ ಹಿಂದೂ ಮಹಾಸಾಗರವು, ಭಾರತ, ಅರಬ್, ಪರ್ಶಿಯ ಹಾಗೂ ಆಫ್ರಿಕದ ಹಡಗುಗಳಿಗೆ ಮುಕ್ತ ವ್ಯಾಪಾರ ದ ವಲಯವಾಗಿಯೇ ಉಳಿದಿತ್ತು. ಯಾವಾಗ ಪೋರ್ಚುಗೀಸರು ಈ ಸಾಗರ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದರೋ, ಆವಾಗಿನಿಂದ ವ್ಯಾಪಾರ ನಡೆಸಲು ಅವರಿಂದ ಪರವಾನಗಿ ಪಡೆದು ಕೊಳ್ಳುವುದು ಅಗತ್ಯವಾಗಿತ್ತು. ಪೋರ್ಚುಗೀಸರ ನೌಕಾ ಪಡೆಯ ಶ್ರೇಷ್ಠ ಸಾಮರ್ಥ್ಯ ದಿಂದಾಗಿ ಅವರಿಗೆ ತಮ್ಮ ವಿರುದ್ಧ ಬಂಡೆದ್ದ ಸ್ಥಳೀಯ ರಾಜರುಗಳನ್ನು ಪ್ರಯಾಸವಿಲ್ಲದೆ ಗೆಲ್ಲಲು ಸಾಧ್ಯವಾಯಿತು. 1526ರಲ್ಲಿ ಪೋರ್ಚುಗೀಸರು ಮಂಗಳೂರು ಬಂದರನ್ನು ವಶಪಡಿಸಿ ಕೊಂಡರು. ಅವರ ಮಂದಿನ ಗುರಿ ಉಳ್ಳಾಲ ಆಗಿತ್ತು. ಪಶ್ಚಿಮಘಟ್ಟದ ಗಿರಿ ಸಾಲುಗಳು ಹಾಗೂ ಕನ್ನಡಿಯಂತೆ ಹೊಳೆಯುವ ಸ್ವಚ್ಛ, ನೀಲ ಅರಬ್ಬಿ ಸಾಗರದ ಮಧ್ಯೆ ಗಂಭೀರವಾಗಿ ಮೈಯೆತ್ತಿ ನಿಂತಿದ್ದ ಬಂದರು ನಗರ ವಾದ ಉಳ್ಳಾಲದ ಮೇಲೆ ಅವರ ಹದ್ದಿನಕಣ್ಣು ಬಿದ್ದಿತ್ತು.
ಆಗ ಉಳ್ಳಾಲವು ಚೌಟ ಅರಸುವಂಶದ ದೊರೆ ಮೂರನೆ ತಿರುಮಲ ರಾಯನ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರಾಗಿದ್ದ ಚೌಟರು ಜೈನ ಧರ್ಮಾವಲಂಬಿಗಳಾಗಿದ್ದರು. ಅವರು ಸುಮಾರು 12ನೇ ಶತಮಾನದ ವೇಳೆಗೆ ಗುಜರಾತ್ನಿಂದ ತುಳುನಾಡಿಗೆ ವಲಸೆ ಬಂದಿದ್ದರು.
ಚೌಟರು ಅಳಿಯಕಟ್ಟು (ಮಾತೃಮೂಲದ ವಂಶಪರಂಪರೆ) ಪದ್ಧತಿ ಯನ್ನು ಅನುಸರಿಸುತ್ತಿದ್ದವರಾಗಿದ್ದರು. ಹೀಗಾಗಿ ಉಳ್ಳಾಲದ ಅರಸೊತ್ತಿಗೆ ಯ ಪಟ್ಟಕ್ಕೆ 3ನೇ ತಿರುಮಲರಾಯನ ಸೋದರಿಯ ಮಗಳು, ಅಬ್ಬಕ್ಕ ಉತ್ತರಾಧಿಕಾರಿಯಾದಳು.ಅಪ್ರತಿಮ ಪರಾಕ್ರಮಿಯಾದ ರಾಜಕುಮಾರಿ ಅಬ್ಬಕ್ಕ ಕತ್ತಿವರಸೆ,ಬಿಲ್ಗಾರಿಕೆ, ಅಶ್ವಾರೋಹ,ಸೇನಾ ಯುದ್ಧತಂತ್ರ,ರಾಜತಾಂತ್ರಿಕತೆ ಹೀಗೆ ಆಡಳಿತದ ಎಲ್ಲಾ ವಿಷಯಗಳ ಬಗ್ಗೆಯೂ ಸಣ್ಣ ವಯಸ್ಸಿನಲ್ಲೇ ಉತ್ತಮ ತರಬೇತಿ ಪಡೆದಳು. ಉಳ್ಳಾಲದ ರಾಣಿಯಾಗಿ ಅಬ್ಬಕ್ಕಳಿಗೆ ಪಟ್ಟಾಭಿಷೇಕವಾದಾಗ, ಕರಾವಳಿ ಪ್ರದೇಶದಲ್ಲಿನ ಪೋರ್ಚು ಗೀಸರ ಉಪಸ್ಥಿತಿಯಿಂದಾಗಿ ತನ್ನ ಸಾಮ್ರಾಜ್ಯಕ್ಕೆ ಎದುರಾಗಿರುವ ಬೆದರಿಕೆಯ ಬಗ್ಗೆ ಆಕೆಗೆ ಚೆನ್ನಾಗಿ ಅರಿವಿತ್ತು.
ತನ್ನ ನಿಧನಕ್ಕೆ ಮುನ್ನ, ಮೂರನೆ ತಿರುಮಲ ರಾಯನು, ವ್ಯೆಹಾತ್ಮಕ ದೃಷ್ಟಿಯಿಂದ, ಮಂಗಳೂರಿನ ಅರಸ ಲಕ್ಷ್ಮಪ್ಪ ಬಂಗರಾಜ ಜೊತೆ ಅಬ್ಬಕ್ಕಳಿಗೆ ವಿವಾಹ ಮಾಡಿಕೊಟ್ಟಿದ್ದ. ಉಳ್ಳಾಲದ ರಾಣಿಯಾಗಿ ಅಬ್ಬಕ್ಕ, ವಿವಾಹದ ಆನಂತರವೂ ತನ್ನ ಉಳ್ಳಾಲದ ಅರಮನೆಯಲ್ಲೇ ವಾಸಿಸಬೇಕಾಗಿತ್ತು. ಈ ದಂಪತಿಗೆ ಮೂರು ಮಕ್ಕಳಾದವು. ಅವರೆಲ್ಲರೂ, ಅಬ್ಬಕ್ಕಳ ಜೊತೆಗೆ ಉಳ್ಳಾಲದ ಅರಮನೆಯಲ್ಲೇ ಉಳಿದುಕೊಂಡರು. ಆದಾಗ್ಯೂ, ಬಂಗ ರಾಜ ಪೋರ್ಚುಗೀಸರ ಜೊತೆ ರಾಜಿ ಮಾಡಿಕೊಂಡ ಬಳಿಕ ಅವರ ದಾಂಪತ್ಯ ಮುರಿದುಬಿದ್ದಿತ್ತು. ಅಬ್ಬಕ್ಕ ರಾಣಿಯ ಸಮರ್ಥ ನಾಯಕತ್ವದಲ್ಲಿ ಸಮೃದ್ಧಿಯನ್ನು ಕಂಡ ಉಳ್ಳಾಲದ ವ್ಯಾಪಾರದ ಮೇಲೆ ಪೋರ್ಚುಗೀಸರು ಕಣ್ಣಿಟ್ಟರು. ಅವರು ರಾಣಿ ಅಬ್ಬಕ್ಕಳಿಂದ ಕಪ್ಪ ಹಾಗೂ ತೆರಿಗೆಯನ್ನು ವಸೂಲಿ ಮಾಡಿ ಕೊಳ್ಳಲು ಯತ್ನಿಸಿದರು. ಆದರೆ ರಾಣಿ ಅಬ್ಬಕ್ಕ ಪೋರ್ಚುಗೀಸರ ಅನ್ಯಾಯಯುತವಾದ ಬೇಡಿಕೆಗಳಿಗೆ ಮಣಿಯಲಿಲ್ಲ.
ಪೋರ್ಚುಗೀಸರ ದಾಳಿಯ ಹೊರತಾಗಿಯೂ, ಅಬ್ಬಕ್ಕ ಅರಬ್ಬ ರೊಂದಿಗೆ ತನ್ನ ಹಡಗುಗಳ ಮೂಲಕ ವಾಣಿಜ್ಯ ವ್ಯವಹಾರಗಳನ್ನು ಮುಂದುವರಿಸಿದಳು. ಮೊಗವೀರರು, ಬಿಲ್ಲವ ಬಿಲ್ಗಾರರಿಂದ ಹಿಡಿದು,ಬ್ಯಾರಿ ಸಮುದಾಯದ ಅಂಬಿಗರ ತನಕ, ಎಲ್ಲಾ ಜಾತಿಗಳು ಹಾಗೂ ಧರ್ಮಗಳಿಗೆ ಸೇರಿದವರು ಆಕೆಯ ಸೇನೆ ಹಾಗೂ ನೌಕಾಪಡೆಯ ಲ್ಲಿದ್ದರು. ತಮ್ಮನ್ನು ಲೆಕ್ಕಿಸದ ಅಬ್ಬಕ್ಕಳ ದಿಟ್ಟತನವನ್ನು ಕಂಡು,ರೊಚ್ಚಿಗೆದ್ದ ಪೋರ್ಚುಗೀಸರು ಉಳ್ಳಾಲದ ಮೇಲೆ ನಿರಂತರವಾಗಿ ಆಕ್ರಮಣವನ್ನು ನಡೆಸಲು ಆರಂಭಿಸಿದರು. 1556ರಲ್ಲಿ ಅಬ್ಬಕ್ಕಳ ಸೇನೆ ಹಾಗೂ ಪೋರ್ಚು ಗೀಸರ ನಡುವೆ ಮೊದಲ ಬಾರಿಗೆ ಯುದ್ಧ ನಡೆಯಿತು. ಅಡ್ಮಿರಲ್ ಡಾನ್ ಅಲ್ವರೊ ಡಿ ಸಿಲ್ವೇರಾ, ಪೋರ್ಚುಗೀಸರ ನೌಕಾಪಡೆಯ ನೇತೃತ್ವ ವಹಿಸಿದ್ದ. ಈ ಭೀಕರ ಯುದ್ಧವು, ಶಾಂತಿ ಒಪ್ಪಂದದೊಂದಿಗೆ ಅಂತ್ಯ ಗೊಂಡಿತ್ತು.
ಎರಡು ವರ್ಷಗಳ ಆನಂತರ ಪೋರ್ಚುಗೀಸರು ಬೃಹತ್ ಸೇನಾಬಲದೊಂದಿಗೆ ಉಳ್ಳಾಲದ ಮೇಲೆ ದಾಳಿ ನಡೆಸಿದರು ಹಾಗೂ ಕೆಲವು ಮಟ್ಟಿಗೆ, ಉಳ್ಳಾಲದ ವಸತಿಪ್ರದೇಶಗಳನ್ನು ಹಾಳುಗೆಡಹುವಲ್ಲಿ ಸಫಲರಾದರು. ಆದಾಗ್ಯೂ, ರಾಣಿ ಅಬ್ಬಕ್ಕಳ ಅಪ್ರತಿಮ ಯುದ್ಧ ಕೌಶಲ್ಯ ಹಾಗೂ ವ್ಯೆಹಾತ್ಮಕ ರಾಜತಾಂತ್ರಿಕತೆ (ಆಕೆ, ಅರಬ್ ಮೂರ್ ಅರಸರು ಹಾಗೂ ಕೋಝಿಕ್ಕೋಡ್ನ ಝಾಮೊರಿನ್ ದೊರೆಯ ಜೊತೆ ಸೇನಾ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದಳು)ಯು, ಪೋರ್ಚುಗೀಸರನ್ನು ಮತ್ತೊಮ್ಮೆ ಹಿಮ್ಮೆಟ್ಟುವಂತೆ ಮಾಡಿತು.
ಮುಂದಿನ ಯುದ್ಧದಲ್ಲಿ, ಜನರಲ್ ಜೊವಾವೊ ಪೆಕ್ಸಿವೊಟೊ ನೇತೃತ್ವದಲ್ಲಿ ಪೋರ್ಚುಗೀಸ್ ಸೇನೆಯು ಉಳ್ಳಾಲದ ಮೇಲೆ ದಾಳಿ ನಡೆಸಿ, ಅರಮನೆಯನ್ನು ವಶಪಡಿಸಿಕೊಳ್ಳುವಲ್ಲಿ ಸಫಲ ವಾಯಿತು. ಆದರೆ, ತನ್ನನ್ನು ಪೋರ್ಚುಗೀಸರು ಸೆರೆಹಿಡಿಯುವ ಮುನ್ನವೇ ಅಬ್ಬಕ್ಕ ಅಲ್ಲಿಂದ ತಪ್ಪಿಸಿಕೊಂಡಿದ್ದಳು.
ರೋಷಗೊಂಡ ಸಿಂಹಿಣಿಯಂತಾದ ಅಬ್ಬಕ್ಕ, ತನ್ನ 200 ಮಂದಿ ನಿಷ್ಠಾವಂತ ಸೈನಿಕರೊಂದಿಗೆ, ನಡುರಾತ್ರಿ ಯಲ್ಲಿ ಪೋರ್ಚುಗೀಸರ ಮೇಲೆ ದಾಳಿ ನಡೆಸಿದಳು. ಹಾಗೂ ಜನರಲ್ ಜೊವಾವೊ ಮತ್ತು ಆತನ 70 ಸೈನಿಕರನ್ನು ಕೊಂದು ಹಾಕಿದಳು. ಈ ಭೀಕರ ದಾಳಿಯಿಂದ ಭಯಭೀತರಾದ ಉಳಿದ ಪೋರ್ಚುಗೀಸ್ ಪಡೆಗಳು, ಜೀವವನ್ನು ಕೈಯಲ್ಲಿ ಹಿಡಿದುಕೊಂಡವರಂತೆ ಹಡಗುಗಳಲ್ಲಿ ಪಲಾಯನ ಗೈದರು.
ಈ ಬಾರಿ, ಅಬ್ಬಕ್ಕಳ ವಿಜಯಕೀರ್ತಿಯು ಉಳಿದ ಅರಸರಿಗೂ , ತಮ್ಮ ವಿರುದ್ಧ ಬಂಡೇಳಲು ಸ್ಫೂರ್ತಿ ನೀಡುತ್ತಿ ರುವುದರ ಬಗ್ಗೆ ಪೋರ್ಚುಗೀಸರು ಎಚ್ಚರಗೊಂಡರು. ಅಬ್ಬಕ್ಕಳನ್ನು ನೇರವಾಗಿ ಯುದ್ಧದಲ್ಲಿ ಸೋಲಿಸಲು ಸಾಧ್ಯವಾ ಗದೆಂದು ಮನವರಿಕೆಯಾದ ಬಳಿಕ ಅವರು ಕೃತ್ರಿಮ ಮಾರ್ಗವನ್ನು ಅನುಸರಿಸಿದರು. ತಮ್ಮನ್ನು ಧಿಕ್ಕರಿಸುತ್ತಿರುವ ಉಳ್ಳಾಲದ ರಾಣಿಯ ಜೊತೆ ಯಾವುದೇ ರೀತಿಯ ಮೈತ್ರಿ ಯನ್ನು ಬೆಳೆಸುವುದು ಕಾನೂನುಬಾಹಿರವೆಂಬ ಘೋಷಿಸಿ, ಆಸುಪಾಸಿನ ಪ್ರಾಂತಗಳ ಅರಸರಿಗೆ ಸರಣಿ ಸುಗ್ರೀವಾಜ್ಞೆ ಗಳನ್ನು ಹೊರಡಿಸಿದರು. ಅಬ್ಬಕ್ಕಳ ಪತಿ, ಮಂಗಳೂರಿನ ದೊರೆ ಬಂಗರಸನಿಗೂ ಉಳ್ಳಾಲಕ್ಕೆ ಯಾವುದೇ ರೀತಿ ನೆರವನ್ನು ನೀಡದಂತೆ ಪೋರ್ಚುಗೀಸರು ಕಟ್ಟಾಜ್ಞೆ ಮಾಡಿ ದರು. ತಪ್ಪಿದಲ್ಲಿ ಆತನ ರಾಜಧಾನಿಯನ್ನು ಸುಟ್ಟುಹಾಕು ವುದಾಗಿಯೂ ಬೆದರಿಕೆ ಹಾಕಿದರು.
ಆದಾಗ್ಯೂ ರಾಣಿ ಅಬ್ಬಕ್ಕ ಪೋರ್ಚುಗೀಸರ ಆಜ್ಞೆಗಳನ್ನು ಲೆಕ್ಕಿಸಲೇ ಇಲ್ಲ. ಆಘಾತಗೊಂಡ ಪೋರ್ಚುಗೀಸರು ಉಳ್ಳಾಲದ ಮೇಲೆ ದಾಳಿ ನಡೆಸಲು ಗೋವಾದ ವೈಸ್ರಾಯ್ ಆ್ಯಂಟನಿ ಡಿ ನೊರೊನ್ಹಾನ ನೇತೃತ್ವದಲ್ಲಿ ಬೃಹತ್ ಸೇನೆಯನ್ನ್ನು ಕಳುಹಿಸಿದರು. ಯುದ್ಧಹಡಗುಗಳ ಬೆಂಬಲ ದೊಂದಿಗೆ 3 ಸಾವಿರಕ್ಕೂ ಅಧಿಕ ಪೋರ್ಚುಗೀಸ್ ಸೈನಿಕರು, ನಸುಕಿನ ಮಬ್ಬುಗತ್ತಲಲ್ಲಿ ಉಳ್ಳಾಲದ ಮೇಲೆ ದಾಳಿ ಮಾಡಿದರು.
ಆ ಹೊತ್ತಿಗೆ ರಾಣಿ ಅಬ್ಬಕ್ಕ ಉಳ್ಳಾಲದ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದಳು. ಪೋರ್ಚು ಗೀಸರ ಹಠಾತ್ ದಾಳಿಯನ್ನು ಕಂಡು ಆಕೆ ಸ್ತಂಭೀಭೂತ ಳಾದಳು. ಆದರೂ ಸಾವರಿಸಿಕೊಂಡ ಆಕೆ ಕುದುರೆಯೇರಿ ಬಿಚ್ಚುಗತ್ತಿಯೊಂದಿಗೆ ಯುದ್ಧಭೂಮಿಗೆ ಧಾವಿಸಿದಳು. ತನ್ನ ಸೇನೆಯನ್ನು ಮುನ್ನಡೆಸಿದ ಅವಳು ಪೋರ್ಚುಗೀಸರ ವಿರುದ್ಧ ವೀರಾವೇಶದಿಂದ ಕಾದಾಡಿದಳು.
‘‘ತಾಯ್ನಡನ್ನು ಕಾಪಾಡಿ. ಅವರ ವಿರುದ್ಧ ಭೂಮಿ ಹಾಗೂ ಸಾಗರದಲ್ಲಿ ಹೋರಾಡಿ. ಸಮುದ್ರದಂಡೆಗಳಲ್ಲಿ ಹಾಗೂ ಬೀದಿಗಳಲ್ಲಿ ಅವರನ್ನು ಸದೆಬಡಿದು, ಅವರನ್ನು ಸಮುದ್ರಕ್ಕೆ ಅಟ್ಟಿ’’ ಎಂದು ಅಬ್ಬಕ್ಕಳ ಯುದ್ಧಗರ್ಜನೆಯು, ವೇಗವಾಗಿ ಬೀಸುವ ಗಾಳಿಯ ನಡುವೆ ಪ್ರತಿಧ್ವನಿಸುತ್ತಿತ್ತು. ಅಬ್ಬಕ್ಕ ಹಾಗೂ ಆಕೆಯ ಸೈನಿಕರು ಧಗಧಗನೆ ಉರಿಯುವ ಬೆಂಕಿಯ ಬಾಣಗಳನ್ನು ಹಾಗೂ ಸೂಟೆದಾರ (ತೆಂಗಿನ ಗರಿ ಗಳಿಂದ ಕಟ್ಟಿದ ಬೆಂಕಿಯ ಪಂಜು)ಗಳನ್ನು ಪೋರ್ಚು ಗೀಸರ ಹಡಗಿನ ಮೇಲೆ ನಿರಂತರವಾಗಿ ಎಸೆಯುತ್ತಿದ್ದರು.
ಅಬ್ಬಕ್ಕ ಸೇನೆಯ ಭೀಕರ ಬೆಂಕಿಯ ದಾಳಿಗೆ ಪೋರ್ಚು ಗೀಸರು ಹಲವು ಹಡಗುಗಳು ಸುಟ್ಟುಹೋದವು. ಆದರೆ ಯುದ್ಧರಂಗದಲ್ಲಿ ಪೋರ್ಚುಗೀಸರ ಗುಂಡು ತಗಲಿ ಅಬ್ಬಕ್ಕ ಗಾಯಗೊಂಡಳು. ಆದರೆ ಪೋರ್ಚುಗೀಸರ ಲಂಚದ ಆಮಿಷಕ್ಕೆ ಮರುಳಾಗಿ ಕೆಲವು ಸಾಮಂತರಸರು ಎಸಗಿದ ದ್ರೋಹದಿದಾಗಿ ಅಬ್ಬಕ್ಕ ಶತ್ರುಸೈನ್ಯಕ್ಕೆ ಸೆರೆಯಾದಳು. ಜೀವನದ ಕೊನೆಯವರೆಗೂ ತಲೆ ಎತ್ತಿಯೇ ಬದುಕಿದ್ದ ಈ ನಿರ್ಭೀತ ರಾಣಿ, ಬಂಧನದಲ್ಲಿಯೇ ತನ್ನ ಬದುಕಿನ ಕೊನೆದಿನಗಳನ್ನು ಕಳೆದಳು. ಆದಾಗ್ಯೂ, ಅಬ್ಬಕ್ಕಳಷ್ಟೇ ಪರಾ ಕ್ರಮಿ ಹಾಗೂ ಶೂರರಾದ ಆಕೆಯ ಪುತ್ರಿಯರು ಪೋರ್ಚು ಗೀಸರಿಂದ ತುಳುನಾಡನ್ನು ರಕ್ಷಿಸುವುದನ್ನು ಮುಂದುವರಿ ಸಿದರು.
ಪೋರ್ಚುಗೀಸರ ದೈತ್ಯ ಸೇನಾ ಬಲದ ಹೊರತಾಗಿ ಯೂ, ತಾಯ್ನಡಿನ ರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿ ಪಾಗಿಟ್ಟ ವೀರರಾಣಿ ಅಬ್ಬಕ್ಕ ತನ್ನ ಆಳ್ವಿಕೆಯುದ್ದಕ್ಕೂ ಅವರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಳು. ಆಕೆಯ ಧೈರ್ಯ ಹಾಗೂ ಛಲದ ಶಕ್ತಿಯನ್ನು ಅರಿಯಲು ಇದೊಂದೇ ಸಾಕು. ಇಷ್ಟಿದ್ದರೂ, ಆಕೆಯ ಕಥನವು ಭಾರತದ ಇತಿಹಾಸದ ಪುಸ್ತಕಗಳಲ್ಲಿ ಬಹುತೇಕ ಮರೆಯಾಗಿಯೇ ಉಳಿದಿದೆ.
ಸಂತಸದ ವಿಷಯವೆಂದರೆ, ಜನಮಾನಸದಲ್ಲಿ ದಂತಕತೆ ಯಾಗಿ ಉಳಿದಿರುವ ಉಳ್ಳಾಲದ ಈ ರಾಣಿಯ ವೀರಗಾಥೆ ಯು ಪಾಡ್ದನ ಹಾಗೂ ಯಕ್ಷಗಾನದ ರೂಪದಲ್ಲಿ ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿಯಲ್ಲಿ ಜೀವಂತವಾಗಿ ಉಳಿದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅಬ್ಬಕ್ಕಳ ಕಥೆಯು, ನಿಧಾನವಾಗಿ ದೇಶದ ಜನತೆಯ ಗಮನವನ್ನು ಸೆಳೆಯಲಾರಂಭಿಸಿದೆ.
ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕನ್ನಡದ ಉಳ್ಳಾಲ ಹಾಗೂ ಪರಿಸರದಲ್ಲಿ ಈ ವೀರರಾಣಿಯ ಸ್ಮರಣೆಗಾಗಿ ನಡೆಯುವ ಅಬ್ಬಕ್ಕ ಉತ್ಸವ ಜನರನ್ನು ಆಕರ್ಷಿಸತೊಡಗಿದೆ.
2015ರಲ್ಲಿ ಭಾರತೀಯ ಅಂಚೆ ಇಲಾಖೆಯು ಅಬ್ಬಕ್ಕ ಗೌರವಾರ್ಥವಾಗಿ ವಿಶೇಷ ಅಂಚೆ ಚೀಟಿಯೊಂದನ್ನು ಹೊರಡಿಸಿದೆ. ಭಾರತೀಯ ನೌಕಾಪಡೆ ಕೂಡಾ ತನ್ನ ಕಾವಲು ನೌಕೆಗೆ ಆಕೆಯ ಹೆಸರನ್ನಿಡುವ ಮೂಲಕ ಆಕೆಯ ನೌಕಾಸಾಹಸಕ್ಕೆ ಗೌರವ ಅರ್ಪಿಸಿದೆ.
ಕೃಪೆ: thebetterindia.com
► ಅಬ್ಬಕ್ಕ ನೆನಪಿಗಾಗಿ ‘ತುಳು ಬದುಕು ಮ್ಯೂಸಿಯಂ’
ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ, 16ನೇ ಶತಮಾನದ ಉಳ್ಳಾಲದ ರಾಣಿ ಅಬ್ಬಕ್ಕಳ ನೆನಪಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇತಿಹಾಸ ಪ್ರಾಧ್ಯಾಪಕ ಪ್ರೊ. ತುಕಾರಾಮ ಪೂಜಾರಿ ವಸ್ತು ಸಂಗ್ರಹಾಲಯವೊಂದನ್ನು ಸ್ಥಾಪಿಸಿದ್ದಾರೆ.
ಬಂಟ್ವಾಳದಲ್ಲಿರುವ ತುಳು ಬದುಕು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದಲ್ಲಿ, ರಾಣಿ ಅಬ್ಬಕ್ಕ ಹಾಗೂ ಆಕೆಯ ತಲೆಮಾರಿಗೆ ಸಂಬಂಧಿಸಿದ ಹಲವಾರು ಪ್ರಾಚೀನ ವಸ್ತುಗಳ ಸಂಗ್ರಹವನ್ನು ಕಾಣ ಬಹುದಾಗಿದೆ. ಕಳೆದ 20 ವರ್ಷಗಳಲ್ಲಿ ತುಕಾರಾಮ ಪೂಜಾರಿ ಯವರು ಈ ವಸ್ತುಸಂಗ್ರಹಾಲಯದಲ್ಲಿ 3 ಸಾವಿರಕ್ಕೂ ಅಧಿಕ ಪುರಾತನ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಮ್ಯೂಸಿಯಂಗೆ ಕಾಲಿಡುತ್ತಿದ್ದಂತೆಯೇ, ಪ್ರಾಚೀನ ತುಳುಸಂಸ್ಕೃತಿಯ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ.
‘‘ಇತಿಹಾಸದ ಪ್ರಾಧ್ಯಾಪಕನಾಗಿರುವ ನಾನು, ಅಬ್ಬಕ್ಕಳಂತಹ ಮಹಾನ್ ಸ್ವಾತಂತ್ರ ಹೋರಾಟಗಾರ್ತಿಯ ನೆನಪು ಮರೆಯಾ ಗಲು ಬಿಡಲಾರೆ. ಮುಂದಿನ ತಲೆಮಾರಿನ ಇತಿಹಾಸಕಾರರಿಗೂ ಅಬ್ಬಕ್ಕಳ ಬದುಕಿನ ಬಗ್ಗೆ ಅಳವಾದ ಅವಲೋಕನ ನಡೆಸಲು ಈ ವಸ್ತುಸಂಗ್ರಹಾಲಯ ಸ್ಫೂರ್ತಿಯಾಗಬೇಕೆಂಬುದೇ ನನ್ನ ಗುರಿ’’ ಎಂದು ತುಕಾರಾಮ ಪೂಜಾರಿ ಹೇಳುತ್ತಾರೆ.