ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ 7 ವರ್ಷ ಕಠಿಣ ಜೈಲುಶಿಕ್ಷೆ
ಮಂಗಳೂರು, ಮಾ.16: ನಾಲ್ಕೂವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕಾಸರಗೋಡು ಮಂಜೇಶ್ವರದ ವರ್ಕಾಡಿ ಗ್ರಾಮದ ಬಬ್ರುಕೋಡಿ ನಿವಾಸಿ ಕೆ.ಎಂ.ಅಶ್ರಫ್ (29) ಶಿಕ್ಷೆಗೊಳಗಾದವ. 10 ಸಾವಿರ ರೂ.ದಂಡದ ಹಣದಲ್ಲಿ 7,500 ರೂ. ಸಂತ್ರಸ್ತೆಗೆ ನೀಡಬೇಕು. ಅಲ್ಲದೆ, ಆಕೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸರಕಾರದಿಂದ ಪರಿಹಾರ ಪಡೆಯಲು ನ್ಯಾಯಾಲಯ ಶಿಫಾರಸು ಮಾಡಿದೆ.
ಪ್ರಕರಣ ಹಿನ್ನೆಲೆ: ಕೇಬಲ್ ಆಪರೇಟಿಂಗ್ ಕೆಲಸ ಮಾಡುತ್ತಿದ್ದ ಅಶ್ರಫ್ ದೇರಳಕಟ್ಟೆಯ ಮನೆಯೊಂದಕ್ಕೆ 2014ರ ಡಿ.23ರಂದು ಕೇಬಲ್ ರಿಪೇರಿಗೆಂದು ಹೋಗಿದ್ದ. ಈ ಸಂದರ್ಭ ಅಲ್ಲಿದ್ದ ನಾಲ್ಕೂವರೆ ವರ್ಷದ ಬಾಲಕಿಯನ್ನು ಮನೆಯ ಮೇಲ್ಛಾವಣಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಬೊಬ್ಬೆ ಹೊಡೆದಾಗ ಆರೋಪಿ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಎಂದು ಆರೋಪಿಸಿ ಬಾಲಕಿಯ ತಾಯಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಂದಿನ ಪಿಎಸ್ಸೈ ಸುಧಾಕರ್ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು 15 ಮಂದಿ ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ಸರಕಾರದ ಪರ ವಾದಿಸಿದ್ದರು.