ಚಿತ್ರ ಕಾವ್ಯವಾಗುವುದೆಂದರೆ...
ಭಾಗ-11
ಛಾಯಾಚಿತ್ರವೊಂದು ಕಾವ್ಯವಾಗುವುದು ಎಂದರೆ ಆ ಚಿತ್ರಕ್ಕೆ ಇರಬೇಕಾದ ಗುಣಲಕ್ಷಣಗಳೇನು? ಚಿತ್ರದಲ್ಲಿ ಒಡಮೂಡಿರುವ ಬೇರೆ ಬೇರೆ ಅಂಶಗಳೇನು ಸಹೃದಯದಲ್ಲಿ ಅದು ಸೃಜಿಸುವ ಭಾವಗಳೇನು? ಚಿತ್ರವು ಹೇಗೆ ತನ್ನೊಳಗೆ ತಾನೇ ಒಂದು ವಿಶಿಷ್ಟ ಕಲಾಕೃತಿಯಾಗುತ್ತದೆ- ಎಂಬ ಹಲವು ಆಯಾಮಗಳನ್ನು ಒಳಗೊಂಡಿರುತ್ತದೆ.
ಕಾವ್ಯ ಎಂದರೆ ಕೇವಲ ಪದಗಳ ಸಮುಚ್ಚಯವಲ್ಲ. ಅಲ್ಲಿ ಭಾವ, ಲಯ ಅರ್ಥಗಳ ಹೊಸ ಹೊಳಪುಗಳು ಇರುತ್ತದೆ. ಪ್ರತಿಯೊಬ್ಬ ಓದುಗನಿಗೂಕಾವ್ಯದ ಸಾಲುಗಳು ಭಿನ್ನ ನೆಲೆಗಳಲ್ಲಿ ಗೋಚರಿಸುತ್ತ ಹಲವು ಹೊಸ ಹೊಸ ಅರ್ಥಗಳಿಗೆ ಧ್ವನಿಯಾಗುತ್ತದೆ. ಓದುಗನ ಸಂವೇದನೆಗಳನ್ನು ಪುಟಿದೇಳಿಸುತ್ತದೆ. ಮತ್ತೆ ಮತ್ತೆ ಆ ಕಾವ್ಯ ಓದುವಂತೆ ಮಾಡುತ್ತದೆ. ಪ್ರತಿ ಬಾರಿಯೂ ನವನವೀನ ಅನುಭೂತಿ ಕಟ್ಟಿ ಕೊಡುತ್ತದೆ. ಹೀಗೆ ಹೊಸ ಸಂವೇದನೆಗಳನ್ನು ಹುಟ್ಟುಹಾಕುತ್ತ ವಿಭಿನ್ನ ನೆಲೆಯ ಅರ್ಥಗಳನ್ನು ಭಾವನೆಗಳನ್ನು ಸ್ಪುರಿಸುವ ಕ್ರಿಯೆ ಆಗುವುದಾದರೆ ಮಾತ್ರ ಅದು ನಿಜದ ಕಾವ್ಯವಾಗಬಲ್ಲದು. ಅಂತಹ ಕಾವ್ಯದ ಅಂಶಗಳನ್ನೇ ಛಾಯಾಚಿತ್ರವೊಂದು ನೋಡುಗನಲ್ಲಿ ಸಂವೇದನೆಗಳನ್ನು ಉದ್ದೀಪಿಸುವುದು, ಆಳವಾಗಿ ಚಿಂತಿಸುವಂತೆ ಮಾಡುವುದು, ದೃಶ್ಯ-ಬಣ್ಣಗಳನ್ನು ಕಣ್ತುಂಬಿಕೊಳ್ಳುವುದು ಇತ್ಯಾದಿ ನಡೆಯುತ್ತದೆ. ಹೀಗೆ ಹಲವು ನೆಲೆಗಳಲ್ಲಿ ಚಿತ್ರವನ್ನು ವ್ಯಾಖ್ಯಾನಿಸುವ ದೃಷ್ಟಿಕೋನವಿದ್ದರೆ ಆ ಚಿತ್ರವೇ‘ಕಾವ್ಯ’ ಎನಿಸಿಕೊಳ್ಳುತ್ತದೆ.
ನೆರಳು-ಬೆಳಕಿನ ಸಂಕೀರ್ಣ ಸಂಯೋಜನೆಯೊಂದಿಗೆ ಚಿತ್ರಿಸಿದ ನಿರ್ದಿಷ್ಟ ವಸ್ತುವೋ, ದೃಶ್ಯವೋ ನೋಡುಗನ ಮೇಲೆ ಬೀರಬಹುದಾದ ಪರಿಣಾಮವೇ ದೃಶ್ಯ ಕಾವ್ಯ ಎನಿಸಿಕೊಳ್ಳುತ್ತದೆ. ಚಿತ್ರವನ್ನು ಒಮ್ಮೆ ನೋಡಿದರೆ ಸಹೃದಯನ ದೃಷ್ಟಿ ಮತ್ತು ಮನಸ್ಸು ಆ ಚಿತ್ರದಲ್ಲೇ ಒಂದಷ್ಟು ಕಾಲ ನೆಟ್ಟಿರಬೇಕು. ನಂತರವೂ ಆ ಚಿತ್ರ ಆತನನ್ನು ಕಾಡುತ್ತಿರಬೇಕು. ಅಂತಹ ಚಿತ್ರ ಆತನನ್ನು ಮತ್ತೆ ಮತ್ತೆ ನೋಡುವಂತೆ ಮಾಡಬೇಕು. ಅದು ದೃಶ್ಯ ಕಾವ್ಯವೊಂದರ ಪ್ರಮುಖ ಗುಣಲಕ್ಷಣ. ಚಿತ್ರವೊಂದು ಹೆಚ್ಚು ಕಾಲ ಕಾಡದಿದ್ದರೆ ಅದೊಂದು ಸೃಜನಶೀಲ, ಕಲಾತ್ಮಕ ಚಿತ್ರ ಎನಿಸಿಕೊಳ್ಳುವುದಿಲ್ಲ. ಅಂತೆಯೇ ನೋಡುಗರೆಲ್ಲರ ಭಾವನೆಗಳಲ್ಲಿ ವ್ಯಾಖ್ಯಾನಗಳಾಗಲಿ ಏಕ ಪ್ರಕಾರವಾಗಿದ್ದರೆ ಅಂತಹ ಚಿತ್ರ ಎಂದಿಗೂ ಕಾವ್ಯವಾಗುವುದಿಲ್ಲ. ಹಾಗಾಗಿ ಚಿತ್ರವೊಂದನ್ನು ಚಿತ್ರಿಸುವ ಮನ್ನ ಹಲವಾರು ಅಂಶಗಳು ಅದರಲ್ಲಿ ಮೂಡಿಬರುವಂತೆ ನಾವು ಆಲೋಚಿಸಬೇಕಾಗುತ್ತದೆ. ಉತ್ತಮ ಚಿಂತನೆಯೊಂದು ಸೃಜನಶೀಲತೆಯ ಮೂಲಕ ಹೊರಹೊಮ್ಮಿದರೆ ಪ್ರತಿಯೊಂದು ಚಿತ್ರವೂ ಕೂಡ ಕಾವ್ಯವಾಗಬಲ್ಲದು. ಹೀಗೆ ಚಿತ್ರವೊಂದು ಕಾವ್ಯವಾದಾಗ ಅದು ಕಲಾತ್ಮಕ ಕೃತಿಯಾಗುತ್ತದೆ.
ಜೀವಂತ ಚಿತ್ರಗಳು, ಸುದ್ದಿಗಳ ನಡುವೆ ಮಾನವಾಸಕ್ತಿ ಮೂಡುವ ಚಿತ್ರಗಳೇ ನೋಡುಗರನ್ನು ಸೆಳೆಯುವ ಪ್ರಮುಖ ಕಾರಣ. ಅಂದರೆ ಮಾನವಾಸಕ್ತ ಚಿತ್ರಗಳಲ್ಲಿ ನೋವು-ನಲಿವು, ಸೌಂದರ್ಯ, ಜೀವಂತಿಕೆ, ಕಲಾತ್ಮಕತೆ ತುಂಬಿರಬೇಕು.
ರಾಜಕಾರಣದ ವೇದಿಕೆಯೊಂದರ ಚಿತ್ರ ಸುದ್ದಿ ಚಿತ್ರಕ್ಕಿಂತ ಹೆಚ್ಚಿನ ಸಂಗತಿಯನ್ನು ಹೇಳಲಾರದು. ಹಾಗೆಯೇ ಕ್ರೀಡಾ ಛಾಯಾಗ್ರಾಹಕ ಕೂಡಾ ಕ್ರೀಡಾ ಚಟುವಟಿಕೆಯ ವಿಚಾರ ವನ್ನಷ್ಟೇ ಹೇಳಬಲ್ಲ. ಹಾಗೆಂದ ಮಾತ್ರಕ್ಕೆ ಸುದ್ದಿ ಚಿತ್ರ ಹಾಗೂ ಕ್ರೀಡಾ ಚಿತ್ರಗಳಲ್ಲಿ ಮಾನವಾಸಕ್ತ ಅಂಶಗಳು ಇರುವುದೇ ಇಲ್ಲವೆಂದೇನೂ ಇಲ್ಲ. ಇರಬಾರದು ಎಂದೇನೂ ಅಲ್ಲ. ಆದರೆ ಮಾನವಾಸಕ್ತ ಅಂಶಗಳು ಅದರಲ್ಲಿ ಕಡಿಮೆ ಇರುತ್ತದೆ ಎಂದರ್ಥ. ಆದರೆ ಪತ್ರಿಕೆಯ ಪುರವಣಿಗಳಲ್ಲಿ ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾಗುವ ಮಾನವೀಯ ವರದಿಗಳಿಗೆ ಬೇಕಾಗುವ ಚಿತ್ರಗಳಲ್ಲಿ ಮಾನವಾಸಕ್ತ ಚಿತ್ರಗಳನ್ನು ಸಾಮಾನ್ಯವಾಗಿ ಪ್ರಕಟಿಸಲಾಗುತ್ತದೆ. ಅಂತಹ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ಕಾವ್ಯದ ಅಂಶಗಳು ಕಾಣುತ್ತಿರುತ್ತವೆ. ಅಂತಹ ಚಿತ್ರಗಳಲ್ಲಿ ಬದುಕಿಗೆ ಸಂಬಂಧಿಸಿದ ಅದರ ಸುತ್ತಮುತ್ತಲಿನ ಪರಿಸರ, ನೋವು-ನಲಿವು, ಸೌಂದರ್ಯ, ಆತಂಕ, ಅಚ್ಚರಿಯ ಮತ್ತು ಕುತೂಹಲಕಾರಿ ಅಂಶಗಳು ತುಂಬಿರುತ್ತದೆ. ನೋಡುಗರಿಗೆ ಅಂತಹ ಚಿತ್ರಗಳು ಆಪ್ತವಾಗುತ್ತವೆ. ಒಂದಂಕ್ಕಿಂತ ಹೆಚ್ಚು ಅರ್ಥಗಳಿಗೆ, ಕಲ್ಪನೆಗಳಿಗೆ ದಾರಿಯಾಗುತ್ತದೆ. ಅಂತಹ ಚಿತ್ರಗಳು ದೃಶ್ಯಕಾವ್ಯವಾಗುತ್ತವೆ. ಛಾಯಾಗ್ರಾಹಕನ ಸಾರ್ಥಕ ಕ್ಷಣವಾಗುತ್ತದೆ..