1948ರಲ್ಲಿ ಆರೆಸ್ಸೆಸ್ ನಿಷೇಧಕ್ಕೆ ಕೇಂದ್ರ ಸರಕಾರ ನೀಡಿದ ವಿವರಣೆ
ಇತಿಹಾಸ
ಕೇಂದ್ರ ಸರಕಾರವು 1948ರ ಫೆಬ್ರವರಿ 4ರಂದು ಜಾರಿಗೊಳಿಸಿದ ಸೂಚನಾ ಪತ್ರವೊಂದರಲ್ಲಿ, ತಾನು ಆರೆಸ್ಸೆಸನ್ನು ನಿಷೇಧಿಸುತ್ತಿರುವುದಾಗಿ ತಿಳಿಸಿತ್ತು. ನಮ್ಮ ದೇಶದಲ್ಲಿ ದ್ವೇಷ ಹಾಗೂ ಹಿಂಸೆಯನ್ನು ಹರಡುವುದರಲ್ಲಿ ಸಕ್ರಿಯವಾಗಿರುವ, ದೇಶದ ಸ್ವಾತಂತ್ರಕ್ಕೆ ಧಕ್ಕೆಯುಂಟು ಮಾಡುವ ಹಾಗೂ ಅದರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿರುವ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡಲು ತಾನು ಈ ಕ್ರಮ ಕೈಗೊಂಡಿರುವುದಾಗಿ ಅದು ತಿಳಿಸಿತ್ತು. ಕೇಂದ್ರ ಗೃಹಸಚಿವಾಲಯದ ಪತ್ರಾಗಾರದಲ್ಲಿ ಲಭ್ಯವಿರುವ ಈ ಸೂಚನಾ ಪತ್ರದ ಪೂರ್ಣ ಪಾಠವನ್ನು ಇಲ್ಲಿ ನೀಡಲಾಗಿದೆ.
1948ರ ಫೆಬ್ರವರಿ 2ರಂದು ಭಾರತ ಸರಕಾರವು ದೇಶದಲ್ಲಿ ಸಕ್ರಿಯವಾಗಿರುವ, ದ್ವೇಷ ಹಾಗೂ ಹಿಂಸೆಯನ್ನು ಹರಡುವ ಹಾಗೂ ದೇಶದ ಸ್ವಾತಂತ್ರಕ್ಕೆ ಸಂಕಷ್ಟವನ್ನು ತಂದೊಡ್ಡುವ ಮತ್ತು ಆದರ ಹೆಸರಿಗೆ ಕಳಂಕ ತರುವ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡುವ ತನ್ನ ದೃಢನಿರ್ಧಾರವನ್ನು ಘೋಷಿಸಿದೆ. ಈ ನೀತಿಯ ಅನುಸರಣೆಯಾಗಿ ಭಾರತ ಸರಕಾರವು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವನ್ನು ಮುಖ್ಯ ಆಯುಕ್ತರ ಪ್ರಾಂತಗಳಲ್ಲಿ ಕಾನೂನು ಬಾಹಿರವೆಂದು ಘೋಷಿಸಲು ನಿರ್ಧರಿಸಿದೆ. ರಾಜ್ಯಪಾಲರ ಪ್ರಾಂತಗಳಲ್ಲೂ ಇಂತಹದೇ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಪ್ರಜಾತಾಂತ್ರಿಕ ಸರಕಾರಗಳ ಮಾದರಿಯಲ್ಲಿ ಭಾರತ ಸರಕಾರ ಹಾಗೂ ಪ್ರಾಂತೀಯ ಸರಕಾರಗಳು, ಎಲ್ಲಾ ಪಕ್ಷಗಳಿಗೂ ಹಾಗೂ ಸಂಘಟನೆಗಳಿಗೆ ಅವುಗಳ ನೀತಿಗಳು ಹಾಗೂ ಉದ್ದೇಶಗಳು ಸರಕಾರ ನಿಲುವಿಗೆ ತದ್ವಿರುದ್ಧವಾ ಗಿದ್ದರೂ, ಅಂತಹ ಚಟುವಟಿಕೆಗಳು ಕಾನೂನು ಅಥವಾ ಔಚಿತ್ಯತೆಯ ಸಾಮಾನ್ಯ ಅಂಗೀಕೃತ ಪರಿಮಿತಿಯನ್ನು ಉಲ್ಲಂಘಿಸದಿದ್ದಲ್ಲಿ ಅವುಗಳಿಗೆ ಸದಾಕಾಲವೂ ನೈಜ ವಾದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಯೋಗ್ಯವಾದ ಅವಕಾಶವನ್ನು ನೀಡಲು ಉತ್ಸುಕವಾಗಿವೆ. ಹಿಂದೂಗಳ ದೈಹಿಕ,ಬೌದ್ಧಿಕ ಹಾಗೂ ನೈತಿಕ ಯೋಗಕ್ಷೇಮಕ್ಕೆ ಉತ್ತೇಜನ ನೀಡುವುದು ಹಾಗೂ ಅವರ ನಡುವೆ ಭ್ರಾತೃತ್ವ, ಪ್ರೀತಿ ಹಾಗೂ ಸೇವಾ ಭಾವನೆಗಳನ್ನು ಮೂಡಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತಿಪಾದಿಸುತ್ತಿರುವ ಗುರಿ ಹಾಗೂ ಉದ್ದೇಶಗಳಾಗಿವೆ.
ಎಲ್ಲಾ ವರ್ಗದ ಜನರ ಭೌತಿಕ ಹಾಗೂ ಬೌದ್ಧಿಕ ಯೋಗಕ್ಷೇಮವನ್ನು ಸಾರ್ವತ್ರಿಕವಾಗಿ ಸುಧಾರಿಸಲು ಸ್ವತಃ ಸರಕಾರವು ಅತ್ಯಂತ ಉತ್ಸುಕವಾಗಿದೆ ಹಾಗೂ ಈ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಅದರಲ್ಲೂ ವಿಶೇಷವಾಗಿ ದೈಹಿಕ ತರಬೇತಿ ಹಾಗೂ ಮಿಲಿಟರಿ ವಿಷಯಗಳಲ್ಲಿ ದೇಶದ ಯುವಜನತೆಗೆ ಶಿಕ್ಷಣ ನೀಡಲು ಅದರ ಬಳಿ ಹಲವಾರು ಯೋಜನೆಗಳಿವೆ. ಆದಾಗ್ಯೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ತಾವು ಪ್ರತಿಪಾದಿಸುತ್ತಿರುವ ಆದರ್ಶಗಳನ್ನು ಆಚರಣೆಗೆ ತರುವುದರಲ್ಲಿ ಬದ್ಧತೆ ಹೊಂದಿಲ್ಲವೆಂಬುದನ್ನು ಸರಕಾರ ಗಮನಿಸಿದೆ.
ಅನಪೇಕ್ಷಣೀಯವಾದ ಹಾಗೂ ಅಪಾಯಕಾರಿ ಚಟುವಟಿಕೆ ಗಳನ್ನು ಕೂಡಾ ಸಂಘದ ಸದಸ್ಯರು ನಡೆಸುತ್ತಿದ್ದಾರೆ. ದೇಶದ ಹಲ ವಾರು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವೈಯಕ್ತಿಕ ವಾಗಿ ದೊಂಬಿ,ದರೋಡೆ, ಡಕಾಯಿತಿ ಹಾಗೂ ಕೊಲೆಗಳನ್ನು ಒಳಗೊಂಡಂತಹ ಹಿಂಸಾಚಾರದ ಕೃತ್ಯಗಳಲ್ಲಿ ನಿರತರಾಗಿದ್ದಾರೆ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ. ಭಯೋತ್ಪಾದಕ ವಿಧಾನಗಳಲ್ಲಿ ತೊಡಗುವಂತೆ, ಬಂದೂಕುಗಳನ್ನು ಸಂಗ್ರಹಿಸುವಂತೆ, ಸರಕಾರದ ವಿರುದ್ಧ ವೈಮನಸ್ಸನ್ನು ಸೃಷ್ಟಿಸುವುದಕ್ಕಾಗಿ ಜನರನ್ನು ಪ್ರಚೋದಿಸಲು ಹಾಗೂಪೊಲೀಸ್ ಹಾಗೂ ಮಿಲಿಟರಿಯನ್ನು ಎತ್ತಿಕಟ್ಟಲು ಕರ ಪತ್ರಗಳನ್ನು ಅವು ವಿತರಿಸುತ್ತಿರುವುದು ಕಂಡು ಬಂದಿದೆ. ಈ ಚಟುವಟಿಕೆಗಳನ್ನು ರಹಸ್ಯವಾಗಿ ನಡೆಸಲಾಗುತ್ತಿದೆ. ನವೆಂಬರ್ ತಿಂಗಳ ಕೊನೆಯಲ್ಲಿ ದಿಲ್ಲಿಯಲ್ಲಿ ನಡೆದ ಪ್ರಾಂತಗಳ ಮುಖ್ಯಸ್ಥರು ಹಾಗೂ ಗೃಹಸಚಿವರ ಸಮಾವೇಶದಲ್ಲಿ ಈ ಪ್ರವೃತ್ತಿಯ ಬಗ್ಗೆ ವ್ಯಾಖ್ಯಾನಿಸಿತ್ತು.
ಸಂಘವನ್ನು ಒಂದು ಸಂಸ್ಥೆಯಾಗಿ ನಿಭಾಯಿಸುವ ಹಂತಇನ್ನೂ ಬಂದಿಲ್ಲ, ಆದರೆ ಸಂಘದ ವ್ಯಕ್ತಿಗಳ ಜೊತೆ ಕಟ್ಟು ನಿಟ್ಟಾಗಿ ವ್ಯವಹರಿಸಬೇಕಾಗಿದೆಯೆಂದು ಆಗ ಅವಿರೋಧ ವಾಗಿ ಸಮ್ಮತಿಸಲಾಗಿತ್ತು. ಆದಾಗ್ಯೂ, ಸಂಘದ ಆಕ್ಷೇಪಕಾರಿ ಹಾಗೂ ಹಾನಿಕಾರಕ ಚಟುವಟಿಕೆಗಳು ಅವ್ಯಾಹತವಾಗಿ ಮುಂದುವರಿದಿವೆ ಹಾಗೂ ಸಂಘದ ಚಟುವಟಿಕೆಗಳಿಂದ ಪ್ರೇರಿತವಾಗಿ ಹಾಗೂ ಪ್ರಾಯೋಜಿತವಾಗಿ ನಡೆದ ಹಿಂಸಾಚಾರಕ್ಕೆ ಹಲವಾರು ಜೀವಗಳು ಬಲಿಯಾಗಿವೆ. ಇದಕ್ಕೆ ಮಹಾತ್ಮಾಗಾಂಧಿ ಅವರು ತೀರಾ ಇತ್ತೀಚಿನ ಹಾಗೂ ಅತ್ಯಂತ ಅಮೂಲ್ಯವಾದ ಬಲಿಪಶುವಾಗಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಹಿಂಸಾಚಾರವು ವಿಷಪೂರಿತ ರೂಪದಲ್ಲಿ ಮರಳಿ ಪ್ರತ್ಯಕ್ಷವಾಗುವುದನ್ನು ಹತ್ತಿಕ್ಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಬದ್ಧ ಕರ್ತವ್ಯವಾಗಿದೆ ಹಾಗೂ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಅದು ಸಂಘವನ್ನು ಕಾನೂನುಬಾಹಿರ ಸಂಸ್ಥೆಯೆಂದು ಘೋಷಿಸಲು ನಿರ್ಧರಿಸಿದೆ.ಈ ಕ್ರಮವನ್ನು ಕೈಗೊಳ್ಳುವುದಕ್ಕೆ ತನಗೆ ಎಲ್ಲಾ ಕಾನೂನು ಪಾಲಕ ನಾಗರಿಕರ, ದೇಶದ ಕಲ್ಯಾಣದ ಬಗ್ಗೆ ಹೃತ್ಪೂರ್ವಕ ಭಾವನೆ ಹೊಂದಿರುವವರ ಬೆಂಬಲವಿದೆ ಯೆಂಬುದರಲ್ಲಿ ಸರಕಾರಕ್ಕೆ ಯಾವುದೇ ಸಂದೇಹವಿಲ್ಲ.