ನಕಲಿ ಗೋರಕ್ಷಕರಿಗೆ ಮಾಸಾಶನ ಭರವಸೆ!!
ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ಅಬ್ಬರ ಮುಗಿಲು ಮುಟ್ಟುತ್ತಿದ್ದವು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳು ರಹಸ್ಯ ಸ್ಥಳಗಳಲ್ಲಿ ಗುಟ್ಟಾಗಿ ತಮ್ಮ ಪ್ರಣಾಳಿಕೆಗಳನ್ನು ರೂಪಿಸತೊಡಗಿದವು. ವಿವಿಧ ಪಕ್ಷಗಳು ಅದೆಷ್ಟು ಗುಟ್ಟಾಗಿಟ್ಟರೂ ಪತ್ರಕರ್ತ ಎಂಜಲು ಕಾಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅವುಗಳ ಜೆರಾಕ್ಸ್ ಪ್ರತಿಗಳನ್ನು ಹಿಡಿದುಕೊಂಡು ಕಚೇರಿಗೆ ಬಂದ. ವಿವಿಧ ಪಕ್ಷಗಳು ಪ್ರಕಟಿಸುವ ಮೊದಲೇ ಎಂಜಲು ಕಾಸಿ ಸೋರಿಕೆ ಮಾಡಿದ ಪ್ರಣಾಳಿಕೆ ಕೆಳಗಿನಂತಿವೆ.
ಕಾಂಗ್ರೆಸ್ ಪ್ರಣಾಳಿಕೆ:
1. ಹಳೆಯ ಒಂದು ಸಾವಿರ ರೂಪಾಯಿ ನೋಟು ಮತ್ತು ಐನೂರು ರೂ. ನೋಟನ್ನು ಮರು ಚಲಾವಣೆ.
2. ರೈತರಿಗೆ ಸಾಲ ನೀಡಿದ ಮರುದಿನವೇ ಎಲ್ಲ ಸಾಲಗಳ ಮನ್ನಾ.
3. ಬಿಜೆಪಿ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ, ಕಾಂಗ್ರೆಸ್ ಸರಕಾರದಿಂದ ಚೀನಾದ ಗಡಿಯಲ್ಲಿ ವಿಶೇಷ ಸರ್ಜಿಕಲ್ ್ಟೈಕ್. ಅದನ್ನು ವೀಡಿಯೊ ಮಾಡಿ ಎಲ್ಲ ಥಿಯೇಟರ್‌ಗಳಲ್ಲಿ ಪುಕ್ಕಟೆ ವೀಕ್ಷಣೆಗೆ ಅವಕಾಶ.
4. ನರೇಂದ್ರ ಮೋದಿಯವರ ಮಂಕೀ ಬಾತ್ ಭಾಷಣ ಕೇಳಿ ಖಿನ್ನತೆಯಿಂದ ನರಳುತ್ತಿರುವ ಎಲ್ಲ ಪ್ರಜೆಗಳಿಗೆ ಪುಕ್ಕಟೆ ಮಾನಸಿಕ ಚಿಕಿತ್ಸೆ. ‘ಮಂಕೀ ಮಾನಸ ಯೋಜನೆ’ ಜಾರಿ.
5. ಪ್ರಿಯಾಂಕಾ ಗಾಂಧಿಯವರ ಅಮೃತ ಹಸ್ತದಿಂದ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಇಂದಿರಾಗಾಂಧೀಜಿಯನ್ನು ದೇಶಾದ್ಯಂತ ಸ್ಮರಿಸುವ ಯೋಜನೆ.
6. ರಫೇಲ್ ಹಗರಣಕ್ಕಿಂತಲೂ ಬೃಹತ್ ಹಗರಣವನ್ನು ರಕ್ಷಣಾ ಇಲಾಖೆಯಲ್ಲಿ ಮಾಡಿ, ಅದರ ದಾಖಲೆಗಳನ್ನು ಸೋರದಂತೆ ಬಿಗಿ ಭದ್ರತೆ. ಎಲ್ಲ ಜೆರಾಕ್ಸ್ ಮಷಿನ್‌ಗಳಿಗೆ ನಿಷೇಧ.
7. ಪಟೇಲರಿಗಿಂತಲೂ ಎತ್ತರವಾದ ಮನಮೋಹನ್ ಸಿಂಗ್ ಅವರ ಪ್ರತಿಮೆಯ ಸ್ಥಾಪನೆ.
ಬಿಜೆಪಿ ಚುನಾವಣಾ ಪ್ರಣಾಳಿಕೆ:
1. ಪಾಕಿಸ್ತಾನದ ಗಡಿಯಲ್ಲಿ ತಿಂಗಳಿಗೆ ಎರಡು ಬಾರಿ ಸರ್ಜಿಕಲ್ ಸ್ಟ್ರೈಕ್.
2. ಸರ್ಜಿಕಲ್ ಸ್ಟ್ರೈಕ್ ಆಧಾರಿತ ತಿಂಗಳಿಗೊಂಡು ಸಿನೆಮಾ ಬಿಡುಗಡೆ ಮತ್ತು ಅವುಗಳಿಗೆ ನೂರು ಶೇಕಡ ತೆರಿಗೆ ರಿಯಾಯಿತಿ.
3. ಪ್ರತಿ ದಿನ ಮೋದಿಯವರಿಂದ ಮಂಕೀ ಬಾತ್ ಭಾಷಣ. ಮಂಕೀ ಬಾತ್‌ನಂತೆ ಕೇಸರಿಬಾತ್, ಖಾರಾಬಾತ್ ಮೊದಲಾದ ಹೊಸ ಬಾತ್‌ಗಳ ಸೇರ್ಪಡೆ.
4. ದೇಶದಲ್ಲಿರುವ ಅಳಿದುಳಿದ ರೈತರ ಕೈಯಿಂದ ಭೂಮಿಯನ್ನು ಕಿತ್ತು ಅವರಿಗೆ ಸಂಪೂರ್ಣ ವಿಶ್ರಾಂತಿ.
5. ದೇಶವನ್ನು ಆಳುವುದಕ್ಕಾಗಿ ವಿವಿಧ ಬೃಹತ್ ಕಾರ್ಪೊರೇಟ್ ಕುಳಗಳಿಗೆ ಟೆಂಡರ್ ಆಹ್ವಾನ. ಪ್ರತಿ ವರ್ಷ ಹರಾಜು.
6. ಇನ್ನೊಮ್ಮೆ ನೋಟು ನಿಷೇಧ ಘೆಷಿಸಿ, ಇನ್ನಷ್ಟು ಕಪ್ಪು ಹಣ ವೂಲಿ. ಪ್ರತಿ ಗ್ರಾಮದಲ್ಲಿ ಪಟೇಲರ ಪ್ರತಿಮೆ ನಿರ್ಮಾಣ. ಅದರ ಜೊತೆಗೆ ಮೋದಿಯ ಪ್ರತಿಮೆ ನಿರ್ಮಾಣ ಯೋಜನೆ.
7. ಮೋದಿಯವರ ಭಾಷಣವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ. ದೇಶಾದ್ಯಂತ ಪುಕ್ಕಟೆ ವಿದ್ಯುತ್ ವಿತರಣೆ.
8. ಹಿಮಾಲಯದ ತುತ್ತ ತುದಿಯಲ್ಲಿ ಮೋದಿಯ ಪ್ರತಿಮೆ ನಿರ್ಮಾಣ.
9. ನಕಲಿ ಗೋರಕ್ಷಕರಿಗೆ ಮಾಸಾಶನ.
10. ವಿಜ್ಞಾನ ಪುಸ್ತಕಗಳಿಗೆ ನಿಷೇಧ. ಎಲ್ಲ ಚಿಂತಕರ ಗಡಿಪಾರು.
ಜೆಡಿಎಸ್ ಪ್ರಣಾಳಿಕೆ:
1. ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸಿನ ಇಳಿಕೆ. ಆ ಮೂಲಕ ದೇವೇಗೌಡರ ಮೊಮ್ಮಕ್ಕಳು ಮಾತ್ರವಲ್ಲ, ಮರಿ ಮಕ್ಕಳಿಗೂ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ.
2. ಎಲ್ಲ ಸಿನೆಮಾ ಮಂದಿರಗಳಲ್ಲಿ ನಿಖಿಲ್ ಚಿತ್ರಗಳ ಪ್ರದರ್ಶನಕ್ಕಷ್ಟೇ ಅವಕಾಶ.
3. ದೇವೇಗೌಡರು ಮತ್ತು ಕುಟುಂಬದಿಂದ ಪ್ರತಿದಿನ ಅಳು ಕಾರ್ಯಕ್ರಮ. ಹೀಗೆ ಸಂಗ್ರಹಿಸಲ್ಪಟ್ಟ ನೀರನ್ನು ರಾಜ್ಯಾದ್ಯಂತ ಗೃಹಬಳಕೆಗೆ ವಿತರಣೆ.
4. ‘ನಿಖಿಲ್ ಎಲ್ಲಿದ್ದೀಯ?’ ಯೋಜನೆಯ ಅಡಿಯಿಂದ ಎಲ್ಲ ನಾಪತ್ತೆಯಾದ ಮಕ್ಕಳ ಹುಡುಕಾಟಕ್ಕೆ ವಿಶೇಷ ಪಡೆ ರಚನೆ.
5. ದೇವೇಗೌಡರ ಕುಟುಂಬದ ರಾಷ್ಟ್ರೀಕರಣ. ‘ರಾಷ್ಟ್ರೀಯ ಕುಟುಂಬ’ ಎಂಬ ನಾಮಕರಣ.