varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 17 Mar, 2019

ಮಹಾಮೈತ್ರಿ ಗುದ್ದಾಟದಲ್ಲಿ ಕನ್ಹಯ್ಯಾ ಕುಮಾರ್
ಬಿಹಾರದಲ್ಲಿ ಮಹಾಮೈತ್ರಿ ಘೋಷಣೆಯಾಗಿದ್ದರೂ ಟೇಕಾಫ್ ಆಗಲು ವಿಫಲವಾಗಿದ್ದು, ಅದು ಸ್ಪಷ್ಟ ರೂಪು ಪಡೆಯುವ ಮುನ್ನವೇ ವಿಫಲವಾಗುತ್ತದೆ ಎಂಬ ಭೀತಿ ಹಲವರಲ್ಲಿದೆ. ಒಳಜಗಳ ಮತ್ತು ಬೆಗುಸರಾಯ್ ಕ್ಷೇತ್ರದಿಂದ ಸಿಪಿಐ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಇದಕ್ಕೆ ಕಾರಣ ಎಂದು ಕೆಲವರು ಆರೋಪಿಸುತ್ತಾರೆ. ಆರ್‌ಜೆಡಿಯ ಸ್ಥಳೀಯ ಮುಖಂಡರು ಹೇಳುವ ಪ್ರಕಾರ ಕೂಡಾ, ಕನ್ಹಯ್ಯಾ ಇಲ್ಲಿ ಸುಲಭವಾಗಿ ಗೆಲ್ಲಬಲ್ಲರು; ಆದರೆ ಲಾಲೂ ಅವರ ಆರ್‌ಜೆಡಿ ಈ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ; ಏಕೆಂದರೆ ಇಲ್ಲಿಂದ ಕುಮಾರ್ ಗೆದ್ದರೆ, ಬಿಹಾರದಲ್ಲಿ ಲಾಲೂ ಮಕ್ಕಳನ್ನು ಮೀರಿಸಿ ಪ್ರಮುಖ ನಾಯಕರಾಗಿ ಬೆಳೆಯುತ್ತಾರೆ ಎಂಬ ಭೀತಿ ಆ ಪಕ್ಷದ ಮುಖಂಡರದ್ದು. ಬೆಗುಸರಾಯ್ ಕ್ಷೇತ್ರಕ್ಕೆ ಕನ್ಹಯ್ಯೆ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸಿಪಿಐ ಈಗಾಗಲೇ ಸ್ಪಷ್ಟಪಡಿಸಿದೆ. ಇಡೀ ಬಿಹಾರದಲ್ಲಿ ಕನ್ಹಯ್ಯೆ ದೊಡ್ಡ ಪ್ರಮಾಣದಲ್ಲಿ ಸಮುದಾಯಗಳನ್ನು ಆಕರ್ಷಿಸುತ್ತಿದ್ದಾರೆ. 2014ರಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಸಂಸದ ಭೋಲಾ ಸಿಂಗ್ ಕಳೆದ ಅಕ್ಟೋಬರ್‌ನಲ್ಲಿ ನಿಧನರಾಗಿದ್ದರು. ಆ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಆರ್‌ಜೆಡಿ ಅಭ್ಯರ್ಥಿ, ಸಿಪಿಐ ಅಭ್ಯರ್ಥಿಗಿಂತ ಹೆಚ್ಚು ಮತ ಗಳಿಸಿದ್ದರು ಎಂಬ ಕಾರಣಕ್ಕೆ ಈ ಸ್ಥಾನದ ಮೇಲೆ ಆರ್‌ಜೆಡಿ ಹಕ್ಕು ಪ್ರತಿಪಾದಿಸಿದೆ. ಈ ಒಳಜಗಳ ಮುಂದುವರಿದಿದ್ದು, ಕುಮಾರ್‌ಗೆ ಈ ಸ್ಥಾನ ದಕ್ಕದಿದ್ದರೆ, ಬಿಹಾರದಲ್ಲಿ ಮಹಾಮೈತ್ರಿ ಬಿಜೆಪಿ-ಜೆಡಿಯು ಮೈತ್ರಿಕೂಟದ ವಿರುದ್ಧ ಹೀನಾಯವಾಗಿ ಸೋಲುತ್ತದೆ ಎನ್ನುವುದು ಖಚಿತ. ಇದರಿಂದಾಗಿ ಕುಮಾರ್ ಈ ಒಳಜಗಳದ ಕೇಂದ್ರಬಿಂದು ಎನಿಸಿದ್ದಾರೆ.


ಮುಕುಲ್ ಮ್ಯಾಜಿಕ್!
ದಿಲ್ಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಮುಖಂಡರಲ್ಲಿ ಹೊಸಚೈತನ್ಯ ಮೂಡಿದೆ. ಇದಕ್ಕೆ ಕಾರಣ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್‌ನ ಮಾಜಿ ಮುಖಂಡ ಮುಕುಲ್ ರಾಯ್. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಯಿಂದಾಗಿ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಂಡರೂ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಲಾಭ ಪಡೆಯುವುದರಿಂದ ಆ ನಷ್ಟ ಭರ್ತಿಯಾಗುತ್ತದೆ ಎಂಬ ವಿಶ್ಲೇಷಣೆ ಪಕ್ಷದ ಮುಖಂಡರದ್ದು. ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ 30 ಸ್ಥಾನಗಳವರೆಗೂ ಬಿಜೆಪಿ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಮುಖಂಡರು ಇದ್ದಾರೆ. ಅಷ್ಟರಮಟ್ಟಿಗೆ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಪಶ್ಚಿಮ ಬಂಗಾಳದ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ಮುಕುಲ್ ರಾಯ್ ಅವರು ಹಲವು ಮಂದಿ ಪ್ರಮುಖ ಟಿಎಂಸಿ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಕ್ಕೆ ಬಿಜೆಪಿ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ. ಟಿಎಂಸಿಯ ನಿಷ್ಠಾವಂತ ಸೈನಿಕ ಎನಿಸಿಕೊಂಡಿದ್ದ ರಾಯ್, ಇದೀಗ ಮಮತಾ ಬ್ಯಾನರ್ಜಿ ವಿರುದ್ಧ ಸೆಣಸುತ್ತಿದ್ದಾರೆ. ಮಮತಾ ಸರಕಾರ ತಮ್ಮ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಮುಕುಲ್ ರಾಯ್, ಟಿಎಂಸಿ ಮುಖಂಡರ ಜತೆ ವಾಟ್ಸ್‌ಆ್ಯಪ್ ಕರೆ ಮಾಡಿ ರಾತ್ರಿಯಿಡೀ ಮಾತನಾಡುತ್ತಿದ್ದಾರೆ. ರಾಯ್ ಅವರಿಂದಾಗಿ ಮತ್ತಷ್ಟು ಮಂದಿ ಟಿಎಂಸಿ ಮುಖಂಡರು ಬಿಜೆಪಿ ಪಾಳಯಕ್ಕೆ ಜಿಗಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.


ಪ್ರಿಯಾಂಕಾ ಹೆಸರಿನಲ್ಲೇನಿದೆ?
ಹೆಸರೂ ಕೆಲವೊಮ್ಮೆ ಪ್ರಮುಖವಾಗಿ ಕೆಲಸ ಮಾಡುತ್ತದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿದರ್ಶನವನ್ನೇ ತೆಗೆದುಕೊಳ್ಳೋಣ. ಬಿಜೆಪಿ ಸ್ನೇಹಿ ಪತ್ರಕರ್ತರು ಮತ್ತು ದೂರದರ್ಶನ, ಆಕಾಶವಾಣಿ ಸೇರಿದಂತೆ ಸರಕಾರದ ಪರವಾಗಿರುವ ಸುದ್ದಿ ಸಂಸ್ಥೆಗಳಿಗೆ ಪ್ರಿಯಾಂಕಾ ಹೆಸರನ್ನು ಪ್ರಿಯಾಂಕಾ ವಾದ್ರಾ ಎಂದೇ ಸಂಬೋಧಿಸುವಂತೆ ಬಿಜೆಪಿ ಮುಖಂಡರು ಸೂಚಿಸಿದ್ದಾರೆ. ಗಾಂಧಿ ಎನ್ನುವುದು ದೊಡ್ಡ ಪರಿಣಾಮ ಬೀರಿದರೆ, ವಾದ್ರಾ ಎಂದು ಸಂಬೋಧಿಸಿದರೆ ಅದು ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಬಿಜೆಪಿ ಮುಖಂಡರ ಲೆಕ್ಕಾಚಾರ. ಆದರೆ ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿ ಎಂಬ ಹೆಸರಿಗೇ ಅಂಟಿಕೊಂಡಿದ್ದು, ಅವರ ಪೂರ್ಣ ಹೆಸರು ಸಂಬೋಧಿಸುತ್ತಿಲ್ಲ. ಕಾಂಗ್ರೆಸ್ ಕೇಂದ್ರಕಚೇರಿಯಲ್ಲಿರುವ ಪ್ರಿಯಾಂಕಾ ನಾಮಫಲಕದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಎಂದು ಬರೆಯಲಾಗಿದೆ. ಆರಂಭದಲ್ಲಿ ಉತ್ಸಾಹ ಕಂಡುಬಂದರೂ ವಾಸ್ತವವಾಗಿ ಗಾಂಧಿ ಅಥವಾ ವಾದ್ರಾ ಹೆಸರಿನ ಪರಿಣಾಮ ತಳಮಟ್ಟದಲ್ಲೇನೂ ಕಾಣಿಸುತ್ತಿಲ್ಲ. ಪ್ರಿಯಾಂಕಾ ಉಸ್ತುವಾರಿ ಹೊಂದಿರುವ ಪೂರ್ವ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಕೆಲ ಮುಖಂಡರು ದಿಲ್ಲಿಗೆ ಮರಳಿ ಅಸಾಧ್ಯ ಎಂಬಂತೆ ತಲೆಯಾಡಿಸುತ್ತಿದ್ದಾರೆ. ಜಾತಿ ಸಮೀಕರಣದಿಂದಾಗಿ ಮೋದಿ, ರಾಜ್ಯದ ಈ ಭಾಗದಲ್ಲಿ 2014ರಲ್ಲಿದ್ದಷ್ಟೇ ಪ್ರಬಲವಾಗಿದ್ದಾರೆ ಎನ್ನುವುದು ಅವರ ಲೆಕ್ಕಾಚಾರ. ಪ್ರಿಯಾಂಕಾ ಅವರ ಪರಿಣಾಮ ಅತ್ಯಲ್ಪ. ಈ ಭಾಗದ ಚುನಾವಣಾ ಉಸ್ತುವಾರಿಗೆ ನಿಯೋಜನೆಯಾಗಿ ಎರಡು ತಿಂಗಳಾದರೂ, ಪ್ರಿಯಾಂಕಾ ಒಂದು ಬಾರಿ ಮಾತ್ರ ಕೆಲ ದಿನಗಳ ಭೇಟಿ ನೀಡಿದ್ದಾರೆ ಎನ್ನುವುದು ಅವರ ಆರೋಪ. ಅವರು ತಳಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಬದಲಾವಣೆ ಸಾಧ್ಯ ಎನ್ನುವುದು ಅವರ ಲೆಕ್ಕಾಚಾರ. ಆದರೆ ಅದಕ್ಕೆ ಈಗಾಗಲೇ ಸಮಯ ಮೀರಿದೆ.


ಕೇಜ್ರಿಯವರ ದಿಲ್ಲಿ ಬೇಡಿಕೆ
ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ. ದಿಲ್ಲಿಯಲ್ಲಿ ಹಿಂದೊಮ್ಮೆ ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷ ಇದೀಗ ಅಸ್ತಿತ್ವ ಉಳಿಸಿಕೊಳ್ಳುವ ಹೆಣಗಾಟದಲ್ಲಿದ್ದರೂ, ಆಮ್ ಆದ್ಮಿ ಜತೆ ಮೈತ್ರಿ ಮಾಡಿಕೊಳ್ಳುವ ಇಚ್ಛೆ ಪಕ್ಷದ ಮುಖಂಡರಿಗೆ ಇದ್ದಂತಿಲ್ಲ. ಮೈತ್ರಿ ಏರ್ಪಡದೇ ಇರಲು ಕೇಜ್ರಿವಾಲ್ ಕಾರಣ ಎನ್ನುವುದು ಕೆಲವರ ಅಭಿಪ್ರಾಯ. ದಿಲ್ಲಿಯ ಏಳು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ಕೇವಲ ಒಂದು ಸ್ಥಾನ ನೀಡಲು ಕೇಜ್ರಿ ಮುಂದಾಗಿದ್ದರು. ಕಾಂಗ್ರೆಸ್ ಬೇಡಿಕೆ ಮೂರು ಸ್ಥಾನಗಳಾಗಿದ್ದವು. ದಿಲ್ಲಿಯಲ್ಲಿ ಕಾರ್ಯಕರ್ತರಿಗಿಂತ ಹೆಚ್ಚು ಮಂದಿ ಮುಖಂಡರು ಪಕ್ಷದಲ್ಲಿರುವುದರಿಂದ ಸಹಜವಾಗಿಯೇ ಇದಕ್ಕೆ ಕಾಂಗ್ರೆಸ್ ಒಪ್ಪಿಕೊಂಡಿಲ್ಲ. ದಿಲ್ಲಿಯ ಬದಲಾಗಿ ಪಂಜಾಬ್ ಸ್ಥಾನ ಹಂಚಿಕೆಯಲ್ಲಿ ಒಂದಷ್ಟು ರಿಯಾಯಿತಿ ನೀಡಬಹುದು ಎಂದು ಕೇಜ್ರಿ ಪ್ರಸ್ತಾವ ಮುಂದಿಟ್ಟಿದ್ದರು. ಸ್ವಂತ ಬಲದಲ್ಲೇ ವಿಶ್ವಾಸ ಹೊಂದಿರುವ ಪಂಜಾಬ್‌ನಲ್ಲಿ ಯಾವ ಸ್ಥಾನವನ್ನೂ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿಲ್ಲ. ಆದ್ದರಿಂದ ಮೈತ್ರಿ ಮಾತುಕತೆ ನನೆಗುದಿಗೆ ಬಿದ್ದಿದೆ. ಆದರೆ ಕೇಜ್ರಿವಾಲ್ ನೇರವಾಗಿ ರಾಹುಲ್‌ಗಾಂಧಿಗೇ ಸಂದೇಶ ರವಾನಿಸಿ ದಿಲ್ಲಿಯಲ್ಲಿ ಜಂಟಿ ಹೋರಾಟದ ಪ್ರಸ್ತಾವ ಮುಂದಿಟ್ಟಿದ್ದಾರೆ. ದಿಲ್ಲಿಯಲ್ಲಿ ಆಪ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟರೂ ಫಲಿತಾಂಶದ ಮೇಲೆ ಯಾವ ಪರಿಣಾಮವೂ ಆಗದು; ಬಿಜೆಪಿ ಎಲ್ಲ ಏಳು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಕೆಲವರು ಹೇಳು ತ್ತಾರೆ. ಹೀಗಾದರೂ ಆಮ್ ಆದ್ಮಿಗಿಂತ ದೊಡ್ಡ ನಷ್ಟವಾಗುವುದು ಕಾಂಗ್ರೆಸ್ ಪಕ್ಷಕ್ಕೆ. ಕೇಜ್ರಿವಾಲ್ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಕುಟಿಲ ತಂತ್ರ ಹೂಡಿದ್ದಾರೆಯೇ ಎಂದು ಪಕ್ಷದೊಳಗಿನ ಕೆಲವರು ಪ್ರಶ್ನಿಸುತ್ತಾರೆ.


ಠಾಕೂರ್ ದ್ವಂದ್ವ
 ಹಲವು ಮಂದಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆದಂತೆ, ಗುಜರಾತ್‌ನ ಯುವ ಕಾಂಗ್ರೆಸ್ ಮುಖಂಡ ಅಲ್ಪೇಶ್ ಠಾಕೂರ್ ಪಕ್ಷಾಂತರ ಮಾಡಿ ಬಿಜೆಪಿ ಪಾಳಯಕ್ಕೆ ಧುಮುಕುತ್ತಾರೆ ಎಂಬ ವದಂತಿ ದಿಲ್ಲಿಯಲ್ಲಿ ದಟ್ಟವಾಗಿ ಹಬ್ಬಿದೆ. ಆದರೆ ಕಾಂಗ್ರೆಸ್ ಮುಖಂಡರ ಮಧ್ಯಪ್ರವೇಶದಿಂದಾಗಿ ಕೊನೆಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಠಾಕೂರ್ ಕೈಬಿಟ್ಟಿದ್ದಾರೆ. ಈ ಬಂಡಾಯ ನಾಯಕ ತಮ್ಮ ಪತ್ನಿಗೆ ಲೋಕಸಭಾ ಟಿಕೆಟ್ ನೀಡುವಂತೆ ಒತ್ತಡ ತಂದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ; ಈ ಹಿಂದಿನ ತಿಂಗಳುಗಳಲ್ಲಿ ರಾಹುಲ್‌ಗಾಂಧಿಯವರ ಜತೆ ಮಾತನಾಡಲು ಸಾಧ್ಯವಾಗುತ್ತಿದ್ದಂತೆ ಈಗ ಭೇಟಿ ಸಾಧ್ಯವಾಗದಿರುವುದು ಅವರ ಮುನಿಸಿಗೆ ಕಾರಣ ಎನ್ನುವುದು ಮತ್ತೆ ಕೆಲವರ ಅಂಬೋಣ. ಈ ಮೊದಲು ಅವರು ರಾಹುಲ್‌ಗಾಂಧಿ ಜತೆ ಯಾವುದೇ ಸಮಯದಲ್ಲಿ ಮಾತನಾಡಬಹುದಿತ್ತು ಅಥವಾ ಸಂದೇಶದ ಮೂಲಕ ಸಂವಹನ ಮಾಡಬಹುದಿತ್ತು. ಆದರೆ ಆ ಅವಕಾಶ ನಿಧಾನವಾಗಿ ಮರೆಯಾಗಿದೆ. ಬಹುತೇಕ ಕೇಂದ್ರ ಹಾಗೂ ರಾಜ್ಯ ನಾಯಕರು ಸೂಕ್ತ ಮಾರ್ಗದ ಮೂಲಕವೇ ಕಾರ್ಯನಿರ್ವಹಿಸಬೇಕು ಅಥವಾ ರಾಹುಲ್ ಕಚೇರಿಯಲ್ಲಿ ಭೇಟಿ ಸಮಯ ನಿಗದಿಪಡಿಸಿಕೊಳ್ಳಬೇಕು. ಬಾಸ್ ಜತೆಗೆ ಮೊಬೈಲ್‌ನಲ್ಲಿ ನೇರ ಸಂಪರ್ಕದ ಅವಕಾಶ ಕೆಲವರಿಗೆ ಮಾತ್ರ ಇದೆ. ಈ ಬಗ್ಗೆ ಠಾಕೂರ್ ನೇರವಾಗಿ ರಾಹುಲ್ ಬಳಿಯೇ ಅಸಮಾಧಾನ ತೋಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ರಾಹುಲ್ ಅವರು ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಮತ್ತು ಅವರ ರಣೋತ್ಸಾಹಕ್ಕೆ ಮನಸೋತು ಹಲವು ಮಂದಿ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸೇರಿದ್ದರು. ಆದರೆ ಬಾಸ್ ಜತೆಗಿನ ಹಾಟ್‌ಲೈನ್ ಕಡಿದುಹೋಗಿರುವ ಬಗ್ಗೆ ಇವರಲ್ಲಿ ಅಸಮಾಧಾನ ಇದೆ. ಠಾಕೂರ್‌ಗೆ ಇದು ಮನವರಿಕೆಯಾಗಿದೆ. ಇಷ್ಟಾಗಿಯೂ ಅವರು ಕಾಂಗ್ರೆಸ್ ತೊರೆದು, ಗುಜರಾತ್‌ನಲ್ಲಿ ಬಿಜೆಪಿಯ ಭರ್ಜರಿ ವಿಜಯಕ್ಕೆ ಕಾರಣರಾಗುತ್ತಾರೆ ಎಂಬ ಭೀತಿ ಕಾಂಗ್ರೆಸ್ ಮುಖಂಡರದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)