ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿಜೆಪಿ ಭದ್ರ ಕೋಟೆಗೆ ಲಗ್ಗೆಯಿಡಲು 'ಮೈತ್ರಿಕೂಟ'ದ ಕಾರ್ಯತಂತ್ರ
ಶಿವಮೊಗ್ಗ, ಮಾ. 18: ಶತಾಯಗತಾಗಯ ಬಿಜೆಪಿ ಭದ್ರ ಕೋಟೆಗೆ ಲಗ್ಗೆಯಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಡೆ ಮತ್ತೆ ದಂಡೆತ್ತಿ ಬಂದಿದೆ. ಇದಕ್ಕೆ ತಕ್ಕ ಎದಿರೇಟು ನೀಡಲು ಕೇಸರಿ ಪಡೆಯು ಭಾರೀ ಸಿದ್ಧತೆ ನಡೆಸುತ್ತಿದೆ. ಕೋಟೆ ಉರುಳಿಸಲು - ಉಳಿಸಲು ಭಾರೀ ತಂತ್ರ-ಪ್ರತಿತಂತ್ರಗಳು ನಡೆಯುತ್ತಿದೆ.
ಮಾಜಿ ಸಿಎಂ ಪುತ್ರರಿಬ್ಬರ ಸ್ಪರ್ಧೆಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರವು 'ಹೈವೋಲ್ಟೇಜ್' ಕಣವಾಗಿ ಬಿಂಬಿತವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ, ಮತ್ತೊಂದು ಸುತ್ತಿನ ನೇರ ಹಣಾಹಣಿಗೆ ಕ್ಷೇತ್ರ ವೇದಿಕೆಯಾಗುತ್ತಿದೆ.
ಬಿಜೆಪಿ ಪಾಳಯವು ಕ್ಷೇತ್ರದ ಮೇಲಿನ ತನ್ನ ಹಿಡಿತ ಮುಂದುವರಿಸಿಕೊಂಡು ಹೋಗಲು, ಕಳೆದ ನಾಲ್ಕೈದು ತಿಂಗಳಿನಿಂದಲೇ ವ್ಯಾಪಕ ಪೂರ್ವಸಿದ್ದತೆ ನಡೆಸುತ್ತಿದೆ. ಇನ್ನೊಂದೆಡೆ ಕಳೆದ ಕೆಲ ದಿನಗಳಿಂದ ಸಕ್ರಿಯವಾಗಿರುವ ಮೈತ್ರಿ ಪಡೆಯು, ಕಮಲ ಪಾಳಯದಿಂದ ಕ್ಷೇತ್ರ ವಶಕ್ಕೆ ಪಡೆಯುವ 'ಗೇಮ್ ಪ್ಲ್ಯಾನ್' ರೂಪಿಸಲಾರಂಭಿಸಿದೆ.
ಈ ಎಲ್ಲ ಕಾರಣಗಳಿಂದ ದಿನದಿಂದ ದಿನಕ್ಕೆ, ಕ್ಷೇತ್ರದ ರಾಜಕೀಯ ಚಟುವಟಿಕೆ ಬಿಸಿಲಿನ ಪ್ರಖರತೆಯ ರೀತಿಯಲ್ಲಿ ಬಿಸಿಯೇರಲಾರಂಭಿಸಿದೆ. 'ಪ್ರಚಾರ ಹೈಡ್ರಾಮಾ'ಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲಾರಂಭಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಮತ್ತಷ್ಟು ರಂಗೇರಲಿರುವ ಲಕ್ಷಣಗಳು ಗೋಚರವಾಗಲಾರಂಭಿಸಿವೆ.
ಫೈಟ್: ಕಳೆದ ನಾಲ್ಕು ತಿಂಗಳ ಹಿಂದೆ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲದೊಂದಿಗೆ ಇವರ ಎದುರಾಳಿಯಾಗಿ ಕಣಕ್ಕಿಳಿದಿದ್ದ, ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪರವರು ಪರಾಭವಗೊಂಡಿದ್ದರು.
ಬಿಎಸ್ವೈ ಕಾರಣದಿಂದ, ಅವರ ಪುತ್ರ ರಾಘವೇಂದ್ರ ಪರಾಭವಕ್ಕೆ ಜೆಡಿಎಸ್-ಕಾಂಗ್ರೆಸ್ ಪಡೆ ಭಾರೀ ಫೈಟ್ ನೀಡಿತ್ತು. ಸ್ವತಃ ಸಿಎಂ ಕುಮಾರಸ್ವಾಮಿ ಸೇರಿದಂತೆ ಎರಡೂ ಪಕ್ಷದ ಅತಿರಥ-ಮಹಾರಥ ನಾಯಕರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಮೈತ್ರಿಯ ಅಬ್ಬರದ ಪ್ರಚಾರವೂ, ಬಿಜೆಪಿ ಪಾಳಯವನ್ನು ತಬ್ಬಿಬ್ಬುಗೊಳಿಸುವಂತಾಗಿತ್ತು. ಆದರೆ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶವಾಗಿತ್ತು.
ಮತ್ತದೇ ತಂತ್ರ: ಬಿಎಸ್ವೈ ಫ್ಯಾಕ್ಟರ್ ಕಾರಣದಿಂದಲೇ, ಮತ್ತೆ ಮೈತ್ರಿಕೂಟ ಶಿವಮೊಗ್ಗದತ್ತ ಗಂಭೀರ ಚಿತ್ತ ಹರಿಸಿವೆ. ಬಿಜೆಪಿ ಅಭ್ಯರ್ಥಿಯಾಗಿರುವ ಅವರ ಪುತ್ರ ರಾಘವೇಂದ್ರ ಪರಾಭವಗೊಳಿಸಲು, ಮಧುಗೆ ಇನ್ನೊಮ್ಮೆ ಪಟ್ಟ ಕಟ್ಟಿ ಕಣಕ್ಕಿಳಿಸಿವೆ. ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡರವರು, ಶಿವಮೊಗ್ಗಕ್ಕೆ ಆಗಮಿಸಿ ರಣಕಹಳೆ ಮೊಳಗಿಸಿದ್ದಾರೆ. 'ಮಧು ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ' ಎಂದು ಮೈತ್ರಿಪಡೆಯ ಕಾರ್ಯಕರ್ತರಿಗೆ ಫರ್ಮಾನು ಹೊರಡಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿ ಕೂಡ, ಮೈತ್ರಿ ಪಡೆಯ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದೆ. ಪಕ್ಷದ ಪ್ರಭಾವಿ ನಾಯಕರನ್ನು ಕ್ಷೇತ್ರಕ್ಕೆ ಕರೆತಂದು ಪ್ರಚಾರದ ರೂಪುರೇಷೆ ಸಿದ್ಧಪಡಿಸುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ತಳಮಟ್ಟದಿಂದ ವ್ಯವಸ್ಥಿತ ಪ್ರಚಾರಕ್ಕೆ ಒತ್ತು ನೀಡಿದೆ. ಈಗಾಗಲೇ ಮತದಾರರನ್ನು ತಲುಪುವ ಕಾರ್ಯ ನಡೆಸುತ್ತಿದೆ. ಆದರೆ ಈ ವಿಷಯದಲ್ಲಿ ಮೈತ್ರಿಕೂಟ ಹಿಂದಿದೆ. ಇನ್ನಷ್ಟೆ ಮತದಾರರ ಮನೆ ಬಾಗಿಲಿಗೆ ಎಡತಾಕಬೇಕಾಗಿದೆ.
ವರ್ಕೌಟ್ ಆಗಲಿದೆಯಾ 'ಬಳ್ಳಾರಿ ಆಟ'?
ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯ ಹೊಣೆಯನ್ನು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್ ಗೆ ವಹಿಸಲಾಗಿದೆ. ಕಳೆದ ಉಪ ಚುನಾವಣೆ ವೇಳೆ ಬಿಜೆಪಿ ಭದ್ರಕೋಟೆ ಬಳ್ಳಾರಿ ಉಸ್ತುವಾರಿ ಹೊತ್ತಿದ್ದ ಡಿಕೆಶಿ, ಮೈತ್ರಿ ಅಭ್ಯರ್ಥಿಯನ್ನು ಭಾರೀ ಮತಗಳ ಅಂತರದಲ್ಲಿ ಗೆಲುವಿನ ದಡ ಸೇರಿಸುವಲ್ಲಿ ಸಫಲರಾಗಿದ್ದರು. ಡಿಕೆಶಿ ತಂತ್ರಗಾರಿಕೆಗೆ ಬಿಜೆಪಿ ಪಾಳಯ ತತ್ತರಿಸಿತ್ತು. ಈ ಕಾರಣದಿಂದಲೇ, ಡಿಕೆಶಿಗೆ ಶಿವಮೊಗ್ಗ ಕ್ಷೇತ್ರದ ಹೊಣೆ ಒಪ್ಪಿಸಲಾಗಿದೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಜೊತೆಗಿನ ಆಪ್ತತೆಯ ಕಾರಣದಿಂದ, ಶಿವಮೊಗ್ಗದ ಹೊಣೆ ಹೊತ್ತುಕೊಳ್ಳಲು ಡಿಕೆಶಿ ಹಿಂದೇಟು ಹಾಕುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. 'ಬಳ್ಳಾರಿ ಆಟ, ಶಿವಮೊಗ್ಗದಲ್ಲಿಯೂ ನಡೆಯಲಿದೆಯಾ?' ಎಂಬುವುದು ಕಾದು ನೋಡಬೇಕಾಗಿದೆ.
ಬರಲಿದ್ದಾರಾ ಮೋದಿ, ರಾಹುಲ್ ?
ಪ್ರತಿಷ್ಠಿತ ಕಣವಾಗಿರುವ ಶಿವಮೊಗ್ಗ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅತಿರಥ-ಮಹಾರಥ ನಾಯಕರು ಪ್ರಚಾರಕ್ಕೆ ಆಗಮಿಸುವ ಲಕ್ಷಣಗಳು ಗೋಚರವಾಗುತ್ತಿವೆ. ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಕರೆತರುವ ಕಾರ್ಯತಂತ್ರ ನಡೆಸುತ್ತಿದೆ. ಮತ್ತೊಂದೆಡೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರ ಸಮಾವೇಶ ಆಯೋಜನೆಗೆ ಯತ್ನಿಸುತ್ತಿದೆ. ಉಳಿದಂತೆ ಜೆಡಿಎಸ್ ಪಕ್ಷದಿಂದ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿಯವರು ಕ್ಷೇತ್ರದಲ್ಲಿ ಪ್ರವಾಸ ನಡೆಸುವುದು ಖಚಿತವಾಗಿದೆ.
ಮಾಜಿ ಸಿಎಂ ಪುತ್ರರ ಜಿದ್ದಾಜಿದ್ದಿ
ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅಖಾಡಕ್ಕಿಳಿಯುವುದು ಖಚಿತವಾಗಿದೆ. ಕಳೆದ ಉಪ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಇವರಿಬ್ಬರು, ಇದೀಗ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನೇರ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗುತ್ತಿದ್ದು, ಮಾಜಿ ಸಿಎಂ ಪುತ್ರರಿಬ್ಬರ ಸ್ಪರ್ಧೆಯ ಕಾರಣದಿಂದ ಮತ್ತೊಮ್ಮೆ ಕ್ಷೇತ್ರ ರಾಷ್ಟ್ರ- ರಾಜ್ಯದ ಗಮನ ತನ್ನತ್ತ ಸೆಳೆಯುತ್ತಿದೆ.