ಚುನಾವಣಾ ರಾಜಕೀಯದಲ್ಲಿ ಕಡಿಮೆಯಾಗುತ್ತಿರುವ ಎಡಪಕ್ಷಗಳ ಶಕ್ತಿ!
ರಾಷ್ಟ್ರದ ಶಕ್ತಿರಾಜಕಾರಣದ ಚುನಾವಣಾ ವ್ಯವಸ್ಥೆಯಲ್ಲಿ ನಮ್ಮ ಎಡಪಕ್ಷಗಳು ದಿನದಿಂದ ದಿನಕ್ಕೆ ದುರ್ಬಲವಾಗುತ್ತ ಸಾಗುತ್ತಿವೆಯೇ? ಹೀಗೊಂದು ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿರುವುದು ನಿಜ. ಎಂಬತ್ತರ ದಶಕದ ಅಂತ್ಯದ ಹೊತ್ತಿಗೆ ರಾಷ್ಟ್ರದಲ್ಲಿ ಕಾಂಗ್ರೆಸ್ನ ಪ್ರಭಾವ ಕ್ರಮೇಣ ಕ್ಷೀಣಿಸುತ್ತ ಜನತಾ ಪರಿವಾರ ಮತ್ತು ಹಲವಾರು ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟಗಳು ಪ್ರಾಮುಖ್ಯತೆ ಪಡೆಯುತ್ತಾ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳ ಯುಗವೊಂದು ಆರಂಭಗೊಂಡಿತು. ಕಾಂಗ್ರೆಸ್ ಮತ್ತು ಭಾಜಪವನ್ನು ಹೊರತು ಪಡಿಸಿದಂತೆ ಜನತಾ ಪರಿವಾರವೂ ಸೇರಿದಂತೆ ಇನ್ನಿತರ ಪ್ರಾದೇಶಿಕ ಪಕ್ಷಗಳು ಸೇರಿದಂತಹ ತೃತೀಯ ರಂಗವೊಂದು ಕಾಲಕಾಲಕ್ಕೆ ತನ್ನ ಸ್ವರೂಪ ಮತ್ತು ಹೆಸರುಗಳನ್ನು ಬದಲಾಯಿಸಿಕೊಂಡು ಅಸ್ತಿತ್ವಕ್ಕೆ ಬರಲು ತೊಡಗಿತ್ತು. ಇಂತಹ ಪರ್ಯಾಯ ರಾಜಕಾರಣಕ್ಕೆ ನೀರೆರೆದು ಪೋಷಿಸಿದ್ದರಲ್ಲಿ ಎಡಪಕ್ಷಗಳ ಕೊಡುಗೆ ಅಪಾರ ವಾಗಿದ್ದು, ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಲ್ಲಿ ಎಪ್ಪತ್ತರ ದಶಕದಿಂದ ಸತತವಾಗಿ ಆಡಳಿತ ನಡೆಸುತ್ತ ಬಂದಿದ್ದ (ಕೇರಳದಲ್ಲಿ ಕಾಂಗ್ರೆಸ್ ಎದುರಾಳಿಯಾಗಿ ಸರದಿಯಂತೆ) ಸಿಪಿಎಂ ಮತ್ತು ಸಿಪಿಐ ನಾಯಕರು ಪ್ರಾದೇಶಿಕ ಪಕ್ಷಗಳ ನಾಯಕರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದು ಈಗ ಇತಿಹಾಸ. ತದನಂತರವೂ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಬೆಂಬಲಿಸಿ ರಾಷ್ಟ್ರ ರಾಜಕಾರಣದ ಆಗುಹೋಗುಗಳಲ್ಲಿ ಮುಖ್ಯ ಪಾಲುದಾರ ಪಕ್ಷವಾಗಿದ್ದವು.
ಆದರೆ ಇದೀಗ ಎಡಪಕ್ಷಗಳಲ್ಲಿ ಅತ್ಯಂತ ದೊಡ್ಡ ಪಕ್ಷಗಳಾದ ಸಿಪಿಎಂ ಮತ್ತು ಸಿಪಿಐನ ಪ್ರಾಮುಖ್ಯತೆ ಮತ್ತು ಶಕ್ತಿರಾಜಕಾರಣದಲ್ಲಿನ ಅವುಗಳ ಮಹತ್ವ ದಿನೇದಿನೇ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ದಿನೇ ದಿನೇ ಸಂಸತ್ತಿನಲ್ಲಿ ಎರಡೂ ಪಕ್ಷಗಳ ಸಂಸತ್ ಸದಸ್ಯರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಕಂಡುಬರುತ್ತಿದೆ. ಇದಕ್ಕಿರಬಹುದಾದ ಕಾರಣಗಳನ್ನು ವಿಶ್ಲೇಷಿಸುವ ಮೊದಲು ಚುನಾವಣೆಯಲ್ಲಿ ಎಡಪಕ್ಷಗಳು ಹೇಗೆ ತಮ್ಮ ಚಾಪು ಕಳೆದುಕೊಳ್ಳುತ್ತಿವೆಯೆಂಬುದನ್ನು ಅಂಕಿ ಅಂಶಗಳನ್ನು ಆಧರಿಸಿ ನೋಡುವ.(ಬಾಕ್ಸ್ ನೋಡಿ)
1999ರ ಹೊತ್ತಿಗೆ ಎರಡೂ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳಿಕೆ ಪ್ರಮಾಣ ಶೇ. 6.88 ಇದ್ದರೆ ಗೆದ್ದ ಸ್ಥಾನಗಳ ಸಂಖ್ಯೆ 37 ಇತ್ತು. ಕಳೆದ ಚುನಾವಣೆಯಲ್ಲಿ ಅಂದರೆ 2014ರಲ್ಲಿ ಎರಡೂ ಎಡಪಕ್ಷಗಳು ಗಳಿಸಿದ ಮತಗಳಿಕೆಯ ಪ್ರಮಾಣ ಶೇಕಡಾ ಕೇವಲ 4.08 ಮತ್ತು ಗೆದ್ದ ಸ್ಥಾನಗಳ ಸಂಖ್ಯೆ ಕೇವಲ 10 ಮಾತ್ರ. ಈ ಅಂಕಿಸಂಖ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ರಾಷ್ಟ್ರದ ಚುನಾವಣಾ ರಾಜಕೀಯದಲ್ಲಿ ಎಡಪಕ್ಷಗಳ ಗೆಲುವಿನ ಶಕ್ತಿ ಕುಂದುತ್ತಾ ಬಂದಿರುವುದು ತಿಳಿಯುತ್ತದೆ
ಹಾಗಿದ್ದರೆ ಯಾಕೆ ಎಡಪಕ್ಷಗಳು ತಾವು ದೀರ್ಘಕಾಲ ಆಡಳಿತ ನಡೆಸಿದ ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಂತಹ ರಾಜ್ಯಗಳಲ್ಲಿಯೇ ತಮ್ಮ ಪ್ರಭಾವವನ್ನು ಗಣನೀಯವಾಗಿ ಕಳೆದುಕೊಳ್ಳುತ್ತಾ ಸಾಗಿವೆ ಎಂಬುದನ್ನು ವಿಶ್ಲೇಷಿಸಲು ಒಂದು ಸುದೀರ್ಘ ಪ್ರಬಂಧವನ್ನೇ ಬರೆಯಬೇಕಾಗುತ್ತದೆ. ಮೊದಲನೆಯದಾಗಿ, ಕಾಂಗ್ರೆಸ್ ಬಲಾಢ್ಯವಾಗಿದ್ದು ಭಾಜಪ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ರಾಷ್ಟ್ರದ ಇತರ ಪ್ರಾದೇಶಿಕ ಪಕ್ಷಗಳ ಜೊತೆ ಸಖ್ಯ ಸಾಧಿಸಿ ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಎಡಪಕ್ಷಗಳಿಗೆ ಅವಕಾಶ ಇತ್ತು. ಆದರೆ ಮೈತ್ರಿಕೂಟಗಳ ಮಹತ್ವವನ್ನು ಅರಿತ ಭಾಜಪ ಮತ್ತು ಕಾಂಗ್ರೆಸ್ಗಳು ಸ್ವತ: ತಮ್ಮಗಳ ನೇತೃತ್ವದಲ್ಲಿಯೇ ಎನ್ಡಿಎ ಮತ್ತು ಯುಪಿಎಗಳನ್ನು ರಚಿಸಿಕೊಂಡಿದ್ದು ಇವೆರಡೂ ಪಕ್ಷಗಳ ಹೊರತಾದ ರಂಗವೊಂದನ್ನು ಕಟ್ಟುವ ಎಡಪಕ್ಷಗಳ ಪ್ರಯತ್ನಕ್ಕೆ ಅಡ್ಡಿಯನ್ನುಂಟುಮಾಡಿತು. ನಂತರದಲ್ಲಿ ಎಡಪಕ್ಷಗಳ ಹಳೆಯ ತಲೆಮಾರಿನ ನಾಯಕರ ಕಣ್ಮರೆ ಎಡಪಕ್ಷಗಳಿಗೆ ತೀವ್ರವಾದ ಹಿನ್ನಡೆಯನ್ನುಂಟು ಮಾಡಿತು.
ಇವತ್ತಿನ ಎಡಪಕ್ಷಗಳ ನಾಯಕರು ಈಗಿರುವ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರಿಗೆ ನಿರ್ದೇಶನ ನೀಡುವಷ್ಟು ಮತ್ತು ಪ್ರಭಾವ ಬೀರುವಷ್ಟು ಅನುಭವಿಗಳು ಆಗಿಲ್ಲದಿರುವುದು ಮತ್ತೊಂದು ಕಾರಣ. 2004ರ ನಂತರ ಇಡೀ ದೇಶದಲ್ಲಿ ಮತೀಯವಾದಿ ಶಕ್ತಿಗಳು ಪ್ರಬಲವಾಗುತ್ತ ಹೋಗುತ್ತಿದ್ದಂತೆ ಎಡಪಕ್ಷಗಳ ಜಾತ್ಯತೀತ ನಿಲುವುಗಳು ಬಹುಸಂಖ್ಯಾತರಿಂದ ನಿರ್ಲಕ್ಷ್ಯಕ್ಕೆ ಈಡಾದವು. 2014ರ ಹೊತ್ತಿಗೆ ದೇಶದಾದ್ಯಂತ ನರೇಂದ್ರ ಮೋದಿಯವರ ಮತ್ತು ಹಿಂದುತ್ವದ ಪರ ಅಲೆ ಜೋರಾಗಿ ಬೀಸತೊಡಗಿ ಇತರ ಪಕ್ಷಗಳಂತೆ ಎಡಪಕ್ಷಗಳು ಸಹ ಭಾರೀ ಹಿನ್ನಡೆ ಅನುಭವಿಸಬೇಕಾಗಿ ಬಂತು. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ಕೈಯಲ್ಲಿ ಅನುಭವಿಸಿದ ಸೋಲು ಎಡಪಕ್ಷಗಳನ್ನು ಕಂಗೆಡಿಸಿತೆಂದರೆ ತಪ್ಪಾಗಲಾರದು. ಹೀಗಾಗಿ ಈಗ ಎಡಪಕ್ಷಗಳು ಚುನಾವಣಾರಂಗದಲ್ಲಿ ಎರಡಂಕಿಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಡತಾಗುವಂತಾಗಿದೆ.
ಇಷ್ಟಾದರೂ ಒಂದು ಮಾತಂತೂ ನಿಜ. ಇವತ್ತೇನು ರಾಷ್ಟ್ರದಲ್ಲಿ ಯುವಜನತೆಯನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂಚೂಣಿಗೆ ತಂದು ರಾಷ್ಟ್ರದ ಮತದಾರರ ಮುಂದಿಟ್ಟಿದ್ದು ಮಾತ್ರ ಎಡಪಕ್ಷಗಳ ಸತತ ಹೋರಾಟವೇ ಎನ್ನಬಹುದು. ಚುನಾವಣೆಗಳ ಶಕ್ತಿ ರಾಜಕಾರಣದ ಸೋಲುಗಳೇನೇ ಇದ್ದರೂ ಜನತೆಯ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟವನ್ನು ಎಡಪಕ್ಷಗಳು ಮಾಡುತ್ತಲೇ ಬರುತ್ತಿವೆ. ಕಳೆದ ವರ್ಷ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರೈತರ ಬೃಹತ್ ಸಮಾವೇಶಗಳನ್ನು ಸಂಘಟಿಸಿದ್ದು ಎಡಪಕ್ಷಗಳೇ. ಈ ನಿಟ್ಟಿನಲ್ಲಿ ನೋಡಿದರೆ ಎಡಪಕ್ಷಗಳು ಇವತ್ತಿಗೂ ಜನಪರ ಹೋರಾಟದಲ್ಲಿ ತೊಡಗಿರುವುದು 2019ರ ಚುನಾವಣೆಗಳಲ್ಲಿ ಅದಕ್ಕೆ ಲಾಭ ತಂದುಕೊಡಬಹುದಾಗಿದೆ. ಹೀಗಾಗಿಯೇ ಇದೀಗ ಬರಲಿರುವ ಚುನಾವಣೆಗಳಿಗಾಗಿ ಎಡಪಕ್ಷಗಳು ಬಿಹಾರದಲ್ಲಿ ಆರ್ಎಲ್ಡಿ ಜೊತೆಗೆ, ಮಹಾರಾಷ್ಟ್ರದಲ್ಲಿ ಎನ್ಸಿಪಿ ಜೊತೆಗೆ, ತಮಿಳುನಾಡಿನಲ್ಲಿ ಡಿಎಂಕೆ ಜೊತೆಗೆ ಮೈತ್ರಿಮಾಡಿಕೊಂಡು ಪಶ್ಚಿಮ ಬಂಗಾಳದಲ್ಲಿನ ಮೈತ್ರಿಗೆ ಕಾಂಗ್ರೆಸ್ನ ಕಡೆ ಕಣ್ಣು ನೆಟ್ಟು ಕೂತಿದೆ. ಚುನಾವಣೆಯ ಶಕ್ತಿರಾಜಕಾರಣದ ಅಖಾಡದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ತಮ್ಮ ಹಳೆಯ ಛಾಪನ್ನು ಮೂಡಿಸಲು ಎಡಪಕ್ಷಗಳುಪ್ರಯತ್ನ ನಡೆಸಿವೆ. ಮೇ 23ರಂದು ರಚನೆಯಾಗಬಹುದಾದ ಭಾಜಪೇತರ ಸರಕಾರವೊಂದರ ರಚನೆಯಲ್ಲಿ ಮಹತ್ತರಪಾತ್ರ ವಹಿಸುವ ನಿರೀಕ್ಷೆಯಲ್ಲಿ ಎಡಪಕ್ಷಗಳು ಇದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.