ತೊಳೆದಷ್ಟೂ ಮುಗಿಯದ ಪಾಪ
ಭಾಗ-2
ಮೋದಿಯವರಂತಹ ಜನರ ಮತ್ತು ಅವರ ಪೋಷಕ ಸಂಘಟನೆಯಾದ ಆರೆಸ್ಸೆಸ್‌ನ ಮನೋಧರ್ಮ ಮತ್ತು ಮೌಲ್ಯಗಳನ್ನು ಗಮನಿಸಿದರೆ ಮನುಷ್ಯರಿಂದ ಪಾಯಿಖಾನೆ/ಚರಂಡಿ ಸ್ವಚ್ಛಗೊಳಿಸುವಂತಹ ಅನಿಷ್ಠ ಪದ್ಧತಿ ಯಾಕೆ ತಲೆತಲಾಂತರದಿಂದ ನಡೆದು ಬಂದು ಇನ್ನೂ ಜಾರಿಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ‘ಕರ್ಮಯೋಗ’ವೆಂಬ (2007) ತನ್ನ ಪುಸ್ತಕದಲ್ಲಿ ಮೋದಿ ಹೀಗೆ ಬರೆಯುತ್ತಾರೆ: ‘‘ಸಫಾಯಿ ಕರ್ಮಚಾರಿಗಳ ಶೌಚಾಲಯ ವೃತ್ತಿ ವಾಲ್ಮೀಕಿ ಜಾತಿಯವರಿಗೆ ಒಂದು ಆಧ್ಯಾತ್ಮಿಕ ಅನುಭವವಾಗಿದ್ದಿರಬೇಕು. ಸಮಗ್ರ ಸಮಾಜದ ಹಾಗೂ ದೇವರುಗಳ ಸಂತೋಷಕ್ಕಾಗಿ ಕೆಲಸ ಮಾಡುವುದು ತಮ್ಮ ವಾಲ್ಮೀಕಿಗಳ ಸಮುದಾಯದ ಕರ್ತವ್ಯ ಎಂಬ ಜ್ಞಾನೋದಯ ಅವರಲ್ಲಿ ಯಾರಿಗೋ ಯಾವುದೋ ಒಂದು ಕಾಲಘಟ್ಟದಲ್ಲಿ ಆಗಿರಬೇಕು. ದೇವರು ತಮಗೆ ಆಶೀರ್ವದಿಸಿದ ಕೆಲಸವನ್ನು ತಾವು ಮಾಡಬೇಕು ಮತ್ತು ಸ್ವಚ್ಛಗೊಳಿಸುವ ಈ ಕೆಲಸ ಒಂದು ಆಂತರಿಕ ಆಧ್ಯಾತ್ಮಿಕ ಚಟುವಟಿಕೆ ಎಂದು ಶತ ಶತಮಾನಗಳವರೆಗೆ ಅವರಿಗೆ ಅನ್ನಿಸಿರಬೇಕು. ಈ ಚಟುವಟಿಕೆ, ಕೆಲಸ ತಲೆಮಾರಿನಿಂದ ತಲೆಮಾರಿಗೆ ಮುಂದುವರಿದಿದ್ದಿರಬೇಕು. ಇವರ ಪೂರ್ವಿಕರಿಗೆ ಬೇರೆ ಯಾವುದೇ ವೃತ್ತಿ ಅಥವಾ ವ್ಯಾಪಾರ ಮಾಡುವ ಆಯ್ಕೆ ಇರಲಿಲ್ಲವೆಂದು ನಂಬುವುದು ಅಸಾಧ್ಯ.’’
ಈ ಆಧ್ಯಾತ್ಮಿಕ ಅನುಭವವನ್ನು ದಲಿತರಲ್ಲಿ ಒಂದು ಉಪಜಾತಿಯಾಗಿರುವ ಮತ್ತು ಶತಮಾನಗಳ ಕಾಲದಿಂದ ಜಾಡಮಾಲಿ ವೃತ್ತಿ ಮಾಡಲೇಬೇಕಾಗಿ ಬಂದಿರುವ ವಾಲ್ಮೀಕಿಗಳಿಗೆ ಮೀಸಲಿಡಲಾಗಿದೆ. ಈ ಉಪಜಾತಿಯವರು ಮಾಡುವ ಕೆಲಸಗಳನ್ನು ಕೂಡ ತುಂಬಾ ಸೂಕ್ಷ್ಮವಾದ ರೀತಿಗಳಲ್ಲಿ ಇಂದಿಗೂ ವೈಭವೀಕರಿಸಲಾಗುತ್ತಿದೆ.
ಜಾತಿ ಪದ್ಧತಿಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದೇ ಮೋದಿ ಅವರ ಪೋಷಕ ಸಂಘಟನೆಯಾಗಿರುವ ಆರೆಸ್ಸೆಸ್‌ನ ಅಂತರಾಳದ ಗುರಿಯಾಗಿದೆ. ಜ್ಯೋತಿರಾವ್ ಫುಲೆ ಮತ್ತು ಭೀಮರಾವ್ ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದ ದಲಿತರು ತಮ್ಮ ಹಕ್ಕುಗಳನ್ನು ಸ್ಥಾಪಿಸುವಲ್ಲಿ ಪ್ರಬಲವಾದದ್ದು ಆರೆಸ್ಸೆಸ್‌ನ ಸ್ಥಾಪನೆಗೆ ಕಾರಣವಾದ ಮುಖ್ಯ ಕಾರಣಗಳಲ್ಲಿ ಒಂದು. ವಿದರ್ಭದಲ್ಲಿ 1920ರ ದಶಕದಲ್ಲಿ ದಲಿತರು ಅಬ್ರಾಹ್ಮಣ (ನಾನ್ ಬ್ರಾಹ್ಮಣ್) ಚಳವಳಿಯನ್ನು ಆರಂಭಿಸಿದ್ದರು. ದಲಿತರಲ್ಲಿ ಆದ ಈ ಎಚ್ಚರ, ಜಾಗೃತಿ ಮೇಲ್ಜಾತಿಗಳನ್ನು ತಳಮಳಕ್ಕೀಡು ಮಾಡಿತ್ತು. ಆಗ ಮೇಲ್ಜಾತಿಯ ಜನ ಸಾವಿರದ 1925ರಲ್ಲಿ ಒಟ್ಟಾಗಿ ಆರೆಸ್ಸೆಸನ್ನು ಸ್ಥಾಪಿಸಿದರು. ಮನುಸ್ಮತಿಯನ್ನು ಹಿಂದೂ ಸಮಾಜಕ್ಕೆ ಎಲ್ಲ ಕಾಲಕ್ಕೂ ಮೌಲಿಕವಾದ ಕಾನೂನುಗಳನ್ನು ನೀಡಿದ ಒಂದು ಶ್ರೇಷ್ಠ ಪುಸ್ತಕವೆಂದು ಆರೆಸ್ಸೆಸ್ ಸಿದ್ಧಾಂತಿ ಗೋಳ್ವಾಲ್ಕರ್ ಪರಿಗಣಿಸಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಅಂಬೇಡ್ಕರ್ ಅವರು ಜಾತಿ ಮತ್ತು ಲಿಂಗ ಶ್ರೇಣೀಕರಣದ ವಿರುದ್ಧ ಪ್ರತಿಭಟನೆಯ ಒಂದು ಸಂಕೇತವಾಗಿ ಮನುಸ್ಮತಿಯನ್ನು ಸಾರ್ವಜನಿಕವಾಗಿ ಸುಟ್ಟರು.
ಈಗಿನ ರೂಪದಲ್ಲಿರುವ ರೀತಿಯ ಮಲಹೊರುವ ಪದ್ಧತಿ/ಜಾಡಮಾಲಿ ವೃತ್ತಿಯನ್ನು ಬಹಳ ಹಿಂದೆಯೇ ನಿರ್ಮೂಲನ ಮಾಡಬೇಕಾಗಿತ್ತು. 1993ರಲ್ಲಿ ಭಾರತ ಸರಕಾರವು ಇದನ್ನು ಅಧಿಕೃತವಾಗಿ ನಿಷೇಧಿಸಿತ್ತು ಎನ್ನಲಾಗಿದೆ. ಸರಕಾರದ ತಪ್ಪುಗಳು ಮತ್ತು ಉಪೇಕ್ಷೆಯ ಮಾತು ಹಾಗಿರಲಿ, ಈ ಪದ್ಧತಿಯ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ನಡೆಸಿರುವ ಸಮೀಕ್ಷೆಗಳ ಪ್ರಕಾರ ಈಗ ಕೂಡ ಲಕ್ಷಗಟ್ಟಲೆ ಜಾಡಮಾಲಿಗಳು ಈ ಅವಮಾನವನ್ನು ಅನುಭವಿಸುತ್ತಿದ್ದಾರೆ ಮತ್ತು ವೃತ್ತಿ ಮಾಡುವವರ ಒಟ್ಟು ಮಂದಿಯಲ್ಲಿ ಶೇ. 95 ಮಂದಿ ಮಹಿಳೆಯರು. ಈ ಜಾಡಮಾಲಿಗಳು ದಲಿತರಲ್ಲಿ ಅಸ್ಪೃಶ್ಯ ವರ್ಗಕ್ಕೆ ಸೇರಿದವರು; ಇವರನ್ನು ಹುಟ್ಟಿನಿಂದಲೇ ಈ ವೃತ್ತಿ ಮಾಡಬೇಕಾದವರೆಂದು ಹಣೆಪಟ್ಟಿ ಅಂಟಿಸಿ ಈ ವೃತ್ತಿಯಲ್ಲಿ ಬಂಧಿಸಿಡಲಾಗಿದೆ. ಈ ಪದ್ಧತಿಯನ್ನು ನಿಷೇಧಿಸುವ ನಿಟ್ಟಿನಲ್ಲಿ ಸರಕಾರಗಳು ಗಂಭೀರವಾದ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ‘ಸಫಾಯಿ ಕರ್ಮಚಾರಿ ಆಂದೋಲನ’ ಎಂಬ ಸಾಮಾಜಿಕ ಕ್ರಿಯಾ ತಂಡವು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವಿರುದ್ಧ ಚಳವಳಿ ನಡೆಸುತ್ತಿದೆ ಮತ್ತು 2010ರ ವೇಳೆಗೆ ಈ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಅದು ಒಂದು ಕರೆ ನೀಡಿತ್ತು.
ಕೈಗಳಿಂದ ಮಲಹೊರುವ/ ಪಾಯಿಖಾನೆ ಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ಭಾರತದಲ್ಲಿ ಬಹಳ ಹಿಂದೆಯೇ ಆರಂಭಗೊಂಡಿತ್ತು ಮತ್ತು ಇದನ್ನು ಜಾತಿ ವ್ಯವಸ್ಥೆಯು ಸಮರ್ಥಿಸಿದ್ದರಿಂದ ಇದು ಮಧ್ಯಯುಗದಲ್ಲೂ ಮುಂದುವರಿಯಿತು. ಮುಸ್ಲಿಂ ದೊರೆಗಳು ವಿಲೇವಾರಿಗೆ ಜಲಾಧರಿತ ವ್ಯವಸ್ಥೆಯನ್ನು ಬಳಕೆಗೆ ತಂದರು. ಆದ್ದರಿಂದ ಆಗ ಕೋಮುವಾದಿ ರಾಜಕಾರಣ ಮಾಡುತ್ತಿರುವವರು ಮುಸ್ಲಿಮರು ಬುರ್ಖಾ ಬಳಸಿದ್ದರಿಂದ ಮುಸ್ಲಿಂ ಮಹಿಳೆಯರಿಗೆ ಹೊರಗೆ ಕಾಡಿಗೆ (ಬಹಿರ್ದೆಸೆಗೆ) ಹೋಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು (ಮುಸ್ಲಿಮರು) ಮನುಷ್ಯರೇ ಮಲ ಹೊರುವ ಪದ್ಧತಿಯನ್ನು ಜಾರಿಗೆ ತಂದರು ಎಂದು ವಾದಿಸುತ್ತಿದ್ದಾರೆ. ಇದು ಆಂತರಿಕ ಸಮಸ್ಯೆಯೊಂದನ್ನು ಬಾಹ್ಯ ವ್ಯಕ್ತಿಗಳ ಮೇಲೆ ಹೊರಿಸುವ ಇನ್ನೊಂದು ರೀತಿ. ಆದರೆ ಈ ವಾದ ಸತ್ಯಕ್ಕೆ ದೂರ. ಮೊಗಲರ ಕೋಟೆಗಳಲ್ಲಿದ್ದ ಸ್ನಾನದ ಕೋಣೆಗಳಲ್ಲಿ ಮಲವನ್ನು ಕೋಣೆಗಳಿಂದ ಹೊರಗೆ ಸಾಗಿಸಲು ಚಿಕ್ಕ ರಚನೆ (ಔಟ್ಲೆಟ್)ಗಳಿದ್ದವು; ಅವುಗಳನ್ನು ಶೌಚಾಲಯಗಳಾಗಿ ಬಳಸಲಾಗುತ್ತಿತ್ತು ಎಂಬುದು ಮೊಗಲರ ಕೋಟೆಗಳ ನೈರ್ಮಲ್ಯ ವ್ಯವಸ್ಥೆಯ ಪರಿಶೀಲನೆ ಮತ್ತು ಸಂಶೋಧನೆಯಿಂದ ತಿಳಿದು ಬಂದಿದೆ. ಈ ಶೌಚಾಲಯಗಳಿಂದ ತ್ಯಾಜ್ಯವನ್ನು ನೀರಿನ ಸಹಾಯದಿಂದ ಗುರುತ್ವಾಕರ್ಷಣ ಶಕ್ತಿಯ ಮೂಲಕ ಹೊರಗೆ ಸಾಗಿಸಲಾಗುತ್ತಿತ್ತು. ದಿಲ್ಲಿಯ ಕೆಂಪು ಕೋಟೆ, ರಾಜಸ್ಥಾನದ ಅರಮನೆಗಳು, ಕರ್ನಾಟಕದ ಹಂಪಿ ಮತ್ತು ಕೇರಳದ ತಿರುವನಂತಪುರದ ಅರಮನೆಗಳಲ್ಲಿ ಮಲವಿಲೇವಾರಿಯ ಈ ತಂತ್ರವನ್ನು ಬಳಸಲಾಗಿರುವುದು ಕಂಡುಬರುತ್ತದೆ.
ನಾವು ಎಲ್ಲರ ಘನತೆ ಆತ್ಮಗೌರವಕ್ಕಾಗಿ ಶ್ರಮಿಸಬೇಕಾಗಿದೆ. ಮನುಷ್ಯರಿಂದ ಶೌಚಾಲಯ ಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿಯನ್ನು ರದ್ದುಗೊಳಿಸುವುದು ಈ ರೀತಿಯ ಗುಲಾಮಗಿರಿಗೆ ತಳ್ಳಲ್ಪಟ್ಟ ಅವರಿಗೆ ನಾವು ತೋರಬಹುದಾದ ನಿಜವಾದ ಗೌರವ.