ಮುಸ್ಲಿಮರಿಗೆ ಕನಿಷ್ಠ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ: ದೋಸ್ತಿ ಪಕ್ಷಗಳಿಗೆ ಸಮುದಾಯದ ಮುಖಂಡರ ಆಗ್ರಹ
ಲೋಕಸಭೆ ಚುನಾವಣೆ
ಬೆಂಗಳೂರು, ಮಾ.19: ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರಿಗೆ ಕನಿಷ್ಠ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬರುವಂತೆ ಸಮುದಾಯದ ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ಆಗ್ರಹಿಸಿದ್ದಾರೆ.
ಬೀದರ್ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಮ್ ಸಮುದಾಯದ ಮತದಾರರ ಸಂಖ್ಯೆ ಗಣನೀಯವಾಗಿದೆ. ದೋಸ್ತಿ ಪಕ್ಷಗಳು ಈ ಕ್ಷೇತ್ರಗಳಲ್ಲಿ ಮುಸ್ಲಿಮರನ್ನು ಒಮ್ಮತದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವಂತೆ ಒತ್ತಡ ಹೆಚ್ಚುತ್ತಿದೆ.
2004ರ ನಂತರ ರಾಜ್ಯದಿಂದ ಒಬ್ಬ ಮುಸ್ಲಿಮ್ ಅಭ್ಯರ್ಥಿಯೂ ಲೋಕಸಭೆಗೆ ಆಯ್ಕೆಯಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಶೇ.57.78, ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.43.14, ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 44.44, ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 43.92 ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.56.91ರಷ್ಟು ಮತಗಳನ್ನು ಪಡೆದಿದ್ದಾರೆ.
ಬೀದರ್ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದಿದ್ದಾರೆ. ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದರಿಂದ, 3.33 ಲಕ್ಷದಷ್ಟಿರುವ ಲಿಂಗಾಯತರು, 2.35 ಲಕ್ಷದಷ್ಟಿರುವ ಮರಾಠರ ಬೆಂಬಲವನ್ನು ವೀರಶೈವ-ಲಿಂಗಾಯತ ಸಮುದಾಯದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪಡೆಯುವುದು ಕಷ್ಟಕರವಾಗಿದೆ ಎನ್ನಲಾಗುತ್ತಿದೆ.
ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಯಾರಾದರೂ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪರಿಶಿಷ್ಟ ಜಾತಿಯ 4.70 ಲಕ್ಷ, ಪರಿಶಿಷ್ಟ ಪಂಗಡದ 1.96 ಲಕ್ಷ, ಹಿಂದುಳಿದ ವರ್ಗದ 2.15 ಲಕ್ಷ ಹಾಗೂ ಕ್ರೈಸ್ತ ಸಮುದಾಯದ 98 ಸಾವಿರ ಮತದಾರರು ಬೆಂಬಲದಿಂದ ಕಾಂಗ್ರೆಸ್ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
ಆಕಾಂಕ್ಷಿಗಳು: ಬೀದರ್ ಲೋಕಸಭಾ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ, ಸಚಿವ ರಾಜಶೇಖರ್ ಪಾಟೀಲ್, ವಿಧಾನಪರಿಷತ್ ಸದಸ್ಯ ವಿಜಯ್ ಸಿಂಗ್ ಜೊತೆಗೆ ಬೀದರ್ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಶಾಹೀನ್ ಸಮೂಹ ಸಂಸ್ಥೆಗಳ ಪ್ರಮುಖ ಅಬ್ದುಲ್ ಮನ್ನಾನ್ ಸೇಠ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಮೌಲಾನ ಶೌಕತ್ ಅನ್ಸಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಆನಂತರ, 2009ರ ವರೆಗೆ ಇದು ಮೀಸಲು ಕ್ಷೇತ್ರವಾಗಿತ್ತು.
ಬೀದರ್ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲುವು ಸಾಧಿಸಲು ಪೂರಕವಾದ ವಾತಾವರಣವಿದೆ. ಬೀದರ್ ಜಿಲ್ಲೆಯಲ್ಲಿ ಜನಸಂಖ್ಯೆ 19,61,093 ಇದೆ. ಮತದಾರರ ಸಂಖ್ಯೆ 17,22,161 ಇದೆ. ಪರಿಶಿಷ್ಟ ಜಾತಿಯವರು 4.70 ಲಕ್ಷ, ಮುಸ್ಲಿಮರು 4.11 ಲಕ್ಷ, ಲಿಂಗಾಯತರು 3.33 ಲಕ್ಷ, ಮರಾಠ 2.35 ಲಕ್ಷ, ಎಸ್ಟಿ 1.96 ಲಕ್ಷ, ಕ್ರೈಸ್ತರು 98 ಸಾವಿರ, ಇತರ ಹಿಂದುಳಿದ ವರ್ಗದವರು 2.15 ಲಕ್ಷದಷ್ಟಿದ್ದಾರೆ.
ಕಳೆದ 15 ವರ್ಷಗಳಲ್ಲೆ ಈ ಬಾರಿ ಬೀದರ್ ಜಿಲ್ಲೆಗೆ ಸಾಕಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಈ ಬಾರಿ ಮೂವರು ಸಚಿವರು, ನಾಲ್ಕು ಮಂದಿ ವಿಧಾನಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಇದೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೇ, ಎಲ್ಲ ತಾಲೂಕು ಪಂಚಾಯತ್ ಗಳು ಹಾಗೂ ಮುನ್ಸಿಪಾಲಿಟಿಗಳು ಕಾಂಗ್ರೆಸ್ ನಿಯಂತ್ರಣದಲ್ಲಿವೆ. ಮುಸ್ಲಿಮ್ ಅಭ್ಯರ್ಥಿಯೊಬ್ಬರು ಗೆಲ್ಲಲು ಇದೊಂದು ಸುವರ್ಣ ಅವಕಾಶವಾಗಿದೆ.
ಅದೇ ರೀತಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 21,15,357 ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 11,91,532 ಮಂದಿ(ಶೇ.56.33) ಮತದಾನ ಮಾಡಿದ್ದರು. ಕಾಂಗ್ರೆಸ್ 5,59,775 ಹಾಗೂ ಜೆಡಿಎಸ್ 1,16,342 ಮತಗಳನ್ನು ಹಾಗೂ ಬಿಜೆಪಿ 4,69,483 ಮತಗಳನ್ನು ಪಡೆದಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಪಡೆದಿರುವ ಒಟ್ಟು ಮತಗಳು 6,76,117.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ 5 ಹಾಗೂ ಬಿಜೆಪಿಯ 3 ಶಾಸಕರಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 5,57,130 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್ 4,19,630 ಮತಗಳನ್ನು ಪಡೆದಿದ್ದರು.
ಕೇವಲ ಒಂದು ಕ್ಷೇತ್ರದಲ್ಲಿ ಟಿಕೆಟ್ !?
ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳ ಪ್ರಕಾರ ಈ ಬಾರಿ ಮುಸ್ಲಿಮರಿಗೆ ಕೇವಲ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಒಲವು ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲೇ ಈ ರೀತಿ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದು ಸರಿಯಲ್ಲ ಎಂದು ಸಮುದಾಯದಲ್ಲಿ ಬೇಸರ ಮನೆ ಮಾಡಿದೆ.
ದ.ಕ. ಜಿಲ್ಲೆಯಲ್ಲೂ ಸಿಗದ ಟಿಕೆಟ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮ್ ಮತದಾರರಿದ್ದಾರೆ. ಜಿಲ್ಲೆಯ ಮುಸ್ಲಿಮರು ಪ್ರತೀ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಒಂದು ಬಾರಿಯೂ ಕಾಂಗ್ರೆಸ್ನಿಂದ ಈ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಕೆಲವು ಸಮಯದ ಹಿಂದೆ ಸಮುದಾಯದಲ್ಲಿ ಕೇಳಿ ಬಂದಿತ್ತು. ಆದರೆ ಜಿಲ್ಲೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂಬ ವಾತಾವರಣವನ್ನು ಕಾಂಗ್ರೆಸ್ ನಾಯಕರೇ ಸೃಷ್ಟಿಸಿದ್ದರಿಂದ ಇದೀಗ ಆ ಆಗ್ರಹ ತಣ್ಣಗಾಗಿದೆ. ಆದರೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷ ರಾಜ್ಯದಲ್ಲಿ ಕನಿಷ್ಠ ಎರಡು ಸ್ಥಾನವನ್ನಾದರೂ ಮುಸ್ಲಿಮರಿಗೆ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.