ಉದ್ಘಾಟನೆಯಾಗದೆ ಪಾಳು ಬಿದ್ದಿದೆ ಮಣಿನಾಲ್ಕೂರು ಸರಕಾರಿ ಪಿಯು ಕಟ್ಟಡ!
ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂ ನನಸಾಗದ ಸ್ವಂತ ಕಟ್ಟಡ ಭಾಗ್ಯ
ಬಂಟ್ವಾಳ, ಮಾ.19: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಸರಕಾರಿ ಪಪೂ ಕಾಲೇಜಿನ ನೂತನ ಕಟ್ಟಡವು ಇನ್ನೂ ಉದ್ಘಾಟನೆಗೊಳ್ಳದೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗವಾಗಿರುವ ಮಣಿನಾಲ್ಕೂರಿಗೆ ಸರಕಾರಿ ಪಪೂ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣವಾಗಿದ್ದು, ಮೂಲಭೂತ ಸೌಕರ್ಯ, ಇನ್ನಿತರ ಕಾರಣಗಳಿಂದ ಉದ್ಘಾಟನೆಗೆ ತೊಡಕು ಉಂಟಾಗಿದೆ. ಸ್ವಂತ ಕಟ್ಟಡ ನಿರ್ಮಾಣಗೊಂಡರೂ ವಿದ್ಯಾರ್ಥಿಗಳಿಗೆ ತೆರಳುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ.
ಮೂರು ವರ್ಷಗಳಿಂದ ಕಟ್ಟಡವು ಸಂಪೂರ್ಣವಾಗಿ ಪಾಲುಬಿದ್ದಿದ್ದು, ಕಟ್ಟಡದ ಸುತ್ತಲೂ ಗಿಡ, ಪೊದೆಗಳು ಬೆಳೆದಿದ್ದು, ಕಿಡಿಗೇಡಿಗಳ ಹಾವಳಿ ಜಾಸ್ತಿಯಾಗಿ ಕಿಟಕಿಗಳ ಗಾಜುಗಳಿಗೆ ಹಾನಿಯಾಗಿದ್ದು, ನೂತನ ಕಟ್ಟಡ ಸಂಪೂರ್ಣ ಚಿತ್ರಣವು ಶೋಚನೀಯವಾಗಿದೆ.
ಪ್ರೌಢಶಾಲೆಯಲ್ಲಿ ಕಾಲೇಜು ತರಗತಿ: ಮಣಿನಾಲ್ಕೂರು ಗ್ರಾಮದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಸರಕಾರಿ ಪ್ರೌಢಶಾಲೆಯು ಕಾರ್ಯಾಚರಿಸುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇಲ್ಲಿಂದ ಬಂಟ್ವಾಳ ಪಟ್ಟಣಕ್ಕೆ ಸುಮಾರು 20 ಕಿ.ಮೀ. ದೂರವಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸದಿಂದ ವಂಚಿರಾಗಬಾರದು ಎನ್ನುವ ಉದ್ದೇಶದಿಂದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಬೇಡಿಕೆಯಿಡಲಾಗಿತ್ತು. ವಿದ್ಯಾರ್ಥಿಗಳ ಅಂಕಿಯಾಂಶಗಳನ್ನು ಮನಗಂಡ ಸರಕಾರ 25 ವರ್ಷಗಳ ಹಿಂದೆಯೇ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿತ್ತು. ಆದರೆ, ತಕ್ಷಣಕ್ಕೆ ಕಾಲೇಜು ತರಗತಿಗಳನ್ನು ನಡೆಸಲು ಸೂಕ್ತ ಕಟ್ಟಡಗಳು ಲಭ್ಯವಾಗದ ಕಾರಣ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕಾಲೇಜು ತರಗತಿಗಳನ್ನು ಆರಂಭಿಸಲಾಯಿತು. ಕಲಾ ವಿಭಾಗ ಮಾತ್ರವಿದ್ದ ಈ ಕಾಲೇಜಿಗೆ ವಾಣಿಜ್ಯ ವಿಭಾಗವೂ ಮಂಜೂರಾಯಿತು. ಆದರೂ, ಹೊಸ ಕಟ್ಟಡದ ಭಾಗ್ಯ ಲಭಿಸಲಿಲ್ಲ. ಪ್ರಸಕ್ತ ವರ್ಷ ಕಾಲೇಜಿನಲ್ಲಿ 106 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
55 ಲಕ್ಷ ರೂ. ಅನುದಾನ ಬಿಡುಗಡೆ: ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ವಿಶೇಷ ಮುತುರ್ಜಿ ವಹಿಸಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ 55 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಕಾಲೇಜು ಕಟ್ಟಡಕ್ಕೆ ಪತ್ಯೇಕ ಸೂಕ್ತ ಜಾಗದ ಕೊರತೆಯಿದ್ದ ಕಾರಣ ಪ್ರೌಢ ಶಾಲೆಯ ಇನ್ನೊಂದು ಬದಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಜೆಒಸಿ ವಿಭಾಗದ ಕಟ್ಟಡದ ಎರಡು ಕೋಣೆಗಳನ್ನು ಸೇರಿಸಿಕೊಂಡು ಒಟ್ಟು ಐದು ಕೊಠಡಿಗಳ ಕಾಲೇಜು ಕಟ್ಟಡ ಸಿದ್ಧಗೊಂಡಿದೆ. ಮೂರು ವರ್ಷಗಳ ಹಿಂದೆ ಕಾಲೇಜಿಗೆ ಹೊಸ ಕಟ್ಟಡವೇನೋ ನಿರ್ಮಾಣವಾಯಿತು, ಆದರೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳಿಲ್ಲದೆ ಹೊಸ ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂ ತರಿಸಲು ಸಾಧ್ಯವಾಗುತ್ತಿಲ್ಲ.
ಕಣ್ಮುಚ್ಚಿ ಕುಳಿತಿರುವ ಶಿಕ್ಷಣ ಇಲಾಖೆ: ಅನುದಾನ ಮಂಜೂರಾದರೂ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೂತನ ಕಾಲೇಜಿನ ಕಟ್ಟಡವನ್ನು ಅಭಿವೃದ್ಧಿ ಪಡಿಸುವುದನ್ನು ಮರತೇ ಬಿಟ್ಟಂತಿದೆ. ಜೊತೆಗೆ ಜನಪ್ರತಿನಿಧಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಇಚ್ಛಾಶಕ್ತಿಯ ಕೊರತೆಯಿಂದ ಕಾಲೇಜು ಕಟ್ಟಡಕ್ಕೆ ಈ ಪರಿಸ್ಥಿತಿ ಬಂದೊಗಿದೆ. ಈ ಅವ್ಯವಸ್ಥೆಯ ಬಗ್ಗೆ ಹಲವು ಭಾರೀ ಸಂಬಂಧಪಟ್ಟವರ ಗಮನಕ್ಕೂ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳ ಪಾಠಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಣಾಭಿಮಾನಿಗಳು ಆಗ್ರಹಿಸಿದ್ದಾರೆ.
ಈ ಮೊದಲು ಪದವಿಪೂರ್ವ ವಿದ್ಯಾರ್ಥಿಗಳ ತರಗತಿಗಳು ಪ್ರೌಢಶಾಲಾ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದವು. ಪಪೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಟ್ಟಡ ಅಗತ್ಯ ಇದ್ದ ಹಿನ್ನೆಲೆಯಲ್ಲಿ ಸರಕಾರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವ ಮಾಡಲಾಗಿದ್ದು, ಮಂಜೂರಾತಿ ಲಭಿಸಿ, ಕಾಮಗಾರಿ ಕೂಡ ನಡೆದಿದೆ. ಈ ನೂತನ ಕಟ್ಟಡ ಆದಷ್ಟು ಬೇಗ ಉದ್ಘಾಟನೆಗೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿಯಾಗಬೇಕಿದೆ.
ಸ್ಮಿತಾ,
ಪ್ರಭಾರ ಪ್ರಾಂಶುಪಾಲೆ ಮಣಿನಾಲ್ಕೂರು ಸರಕಾರಿ ಪಪೂ ಕಾಲೇಜು
ಪಿಯು ಕಟ್ಟಡ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಹಿತ ಕಾಲೇಜಿಗೆ ಬೇಕಾಗುವ ಇನ್ನಿತರ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ ನೂತನ ಸ್ವಂತ ಕಟ್ಟಡಕ್ಕೆ ಇಲ್ಲಿನ ಕಾಲೇಜನ್ನು ಶೀಘ್ರ ವರ್ಗಾಯಿಸಲು ಅನುಕೂಲ ಮಾಡಿಕೊಡಬೇಕಾಗಿದೆ.
ಫಾರೂಕ್,
ಮಣಿನಾಲ್ಕೂರು ಗ್ರಾಪಂ ಸದಸ್ಯ