ಪುಟಾಣಿ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ!
ಬಂಟ್ವಾಳ ಅಂಗನವಾಡಿ ಪಕ್ಕದಲ್ಲೇ ಘನತ್ಯಾಜ್ಯ ಸಂಗ್ರಹ
ಗಬ್ಬು ವಾಸನೆಗೆ ಮೂಗು ಮುಚ್ಚಿ ಪಾಠ ಕೇಳುವ ದುಸ್ಥಿತಿ
ಬಂಟ್ವಾಳ, ಮಾ. 20: ಅಂಗನಾಡಿ ಕೇಂದ್ರದ ಮಗ್ಗುಲಲ್ಲೇ ರಾಶಿರಾಶಿ ಕಸದಿಂದ ಗಬ್ಬು ನಾರುತ್ತಿರುವ ಪರಸರ. ಪುಟಾಣಿ ಮಕ್ಕಳಿಗೆ ಮೂಗು ಮುಚ್ಚಿಕೊಂಡೇ ಊಟ, ಪಾಠದ ಅನಿವಾರ್ಯತೆ. ಇದು ಬಂಟ್ವಾಳ ತಾಲೂಕಿನ ಬಿ. ಕಸಬಾ ಅಂಗನವಾಡಿ ಕೇಂದ್ರದ ದುಸ್ಥಿತಿ. ಬಂಟ್ವಾಳ ಪುರಸಭಾಡಳಿತ ಕಚೇರಿಯ
ಹಿಂಭಾಗದಲ್ಲೇ ಕಸದ ಸಂಗ್ರಹ ಮಾಡಿ ರುವುದರಿಂದ ಇಲ್ಲಿಯೇ ಕಾರ್ಯಾಚರಿಸು ತ್ತಿರುವ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ತೆರಳುವ ಮುನ್ನವೇ ದುರ್ವಾಸನೆ ಸ್ವಾಗತ ಕೋರುತ್ತಿದೆ. ಬಂಟ್ವಾಳ ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯಗಳ ಬಗ್ಗೆ ಹೆಗ್ಗಳಿಕೆ ಪಡೆದಿದೆ. ಆದರೆ, ಪುರಸಭಾಡಳಿತ ಕಚೇರಿಯ ಹಿಂಭಾಗದಲ್ಲೇ ಘನತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದ್ದು, ಇಲ್ಲಿ ಇಡೀ ಊರಿನ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರ ಪಕ್ಕದಲ್ಲೇ ಬಿ.ಕಸಬಾ ಅಂಗನವಾಡಿ ಕೇಂದ್ರವಿರುವುದರಿಂದ ಇದು ಪುಟಾಣಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ. ನಾಯಿ, ಬೆಕ್ಕು, ಕಾಗೆಗಳ ಹಿಂಡು ತ್ಯಾಜ್ಯವನ್ನು ಅಂಗನವಾಡಿಗೆ ತೆರಳುವ ದಾರಿಯಲ್ಲೇ ಎಳೆದು ಹಾಕಿ ಕುಕ್ಕಿ ತಿನ್ನುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳಾಂತರಕ್ಕೆ ಪ್ರಯತ್ನ: ಸ್ವಚ್ಛ ಬಂಟ್ವಾಳ, ಪುರಸಭೆಯ ಕನಸಾಗಿದ್ದು, ಇದಕ್ಕಾಗಿ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಘನತ್ಯಾಜ್ಯ ಸಂಗ್ರಹ ಮತ್ತು ಸ್ಥಳಾಂತರಿಸಲು ಜಾಗ ಸಿಗುತ್ತಿಲ್ಲ. ಪುರವಾಸಿಗಳ ಬೇಡಿಕೆಯಂತೆ, ಘಟಕಕ್ಕೆ ಸೂಕ್ತ ಜಮೀನು ಪರಿಶೀಲನೆ ಮಾಡಿ ಆದಷ್ಟು ಶೀಘ್ರ ಕಸ ವಿಲೇವಾರಿ ಘಟಕ ನಿರ್ಮಿಸಲಾಗುವುದು. ಜತೆಗೆ ಇಲ್ಲಿನ ಜ್ವಲಂತ ಸಮಸ್ಯೆಯಾಗಿರುವ ಕಸ ವಿಲೇವಾರಿ ಘಟಕಕ್ಕೂ ಮುಕ್ತಿ ನೀಡಲು ಸಾಧ್ಯವಾಗುತ್ತದೆ ಎಂಬುದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರ ಅಭಿಪ್ರಾಯ.
ಆರೋಗ್ಯದ ಮೇಲೆ ಪರಿಣಾಮ: ಇಲ್ಲಿನ ಅಂಗನವಾಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದರು. ಸದ್ಯದ ಗಬ್ಬೆದ್ದ ವಾಸನೆಯಿಂದ ಮಕ್ಕಳ ಪೋಷಕರು ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳುಹಿಸುತ್ತಿಲ್ಲ. ತ್ಯಾಜ್ಯದ ರಾಶಿಯಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಅಂಗನವಾಡಿ ಮಕ್ಕಳು ಸೇರಿದಂತೆ ಪರಿಸರವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಬಂಟ್ವಾಳ ಪರಿಕಲ್ಪನೆಯಡಿ ಮುಲ್ಕಿ ನಗರ ಪಂಚಾಯತ್ ಮಾದರಿಯ ಘನತ್ಯಾಜ್ಯ ವಿಂಗಡಣಾ ಘಟಕ ಯೋಜನೆಯನ್ನು ರೂಪಿಸಲಾಗಿದೆ. ಇಲ್ಲಿ ತ್ಯಾಜ್ಯವನ್ನು ವಿಂಗಡಿಸಿ, ಸಂಸ್ಕರಣೆ ಮಾಡಿ ಗೊಬ್ಬರವನ್ನು ತಯಾರು ಮಾಡುವ ಚಿಂತನೆ ಇದೆ. ಇದಕ್ಕಾಗಿ ಪಾಣೆಮಂಗಳೂರಿನ ಸುಣ್ಣದ ಗೂಡು ಅಥವಾ ಪುರಸಭಾ ವ್ಯಾಪ್ತಿಯಲ್ಲಿ ಸೂಕ್ತ ಜಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
ಯಾಸ್ಮಿನ್ ಸುಲ್ತಾನ,
ಪರಿಸರ ಇಂಜಿನಿಯರ್
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಎಂಬುದೇ ಇಲ್ಲ. ಕಳೆದ 7ವರ್ಷ ಗಳಿಂದ ತ್ಯಾಜ್ಯ ವಿಲೇವಾರಿ ಸಂಬಂಧಿತ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದರೂ ಯಾವುದೂ ಕಾರ್ಯಗತಗೊಂಡಿಲ್ಲ. ಈ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆಗೆ ಕಸವಿಲೇವಾರಿ ಘಟಕ ಅತ್ಯವಶ್ಯವಾಗಿದೆ.
ಮುನೀಶ್ ಅಲಿ,
ಪುರಸಭಾ ಸದಸ್ಯ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲ. ಇದರಿಂದ ಪುರಸಭಾ ವ್ಯಾಪ್ತಿಯ ವಿವಿಧೆಡೆ ಸಂಗ್ರಹಿಸಿದ ಕಸಗಳನ್ನು ಪುರಸಭಾಡಳಿತ ಕಚೇರಿಯ ಹಿಂಭಾಗದಲ್ಲಿ ತಂದು ಶೇಖರಿಸಲಾಗುತ್ತಿದೆ. ಇಲ್ಲಿ ಕಸವನ್ನು ವಿಂಗಡಿಸಿ ಹೊರವಲಯದ ಡಂಪಿಂಗ್ ಯಾರ್ಡ್ಗಳಿಗೆ ಕಳುಹಿಸಲಾಗುತ್ತಿದೆ. ಕಸಸಂಗ್ರಹ ವಾಹನ ಬೆಳಗ್ಗೆ ಬಂದ ಸಂದರ್ಭದಲ್ಲಿ ವಾಸನೆ ಬರುತ್ತವೆ. ಈ ವಾಹನ ಬರುವಿಕೆಯ ಸಮಯವನ್ನು ಬದಲಾವಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಮಸ್ಯೆಯಾಗದಂತೆ ಯಾವುದೇ ತೊಂದರೆಯಾಗದು.
ರೇಖಾ ಜೆ. ಶೆಟ್ಟಿ,
ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ
ನನ್ನ ಮಗಳು ಬಿ. ಕಸಬಾ ಅಂಗನವಾಡಿ ಕೇಂದ್ರದಲ್ಲಿ ಕಲಿಯುತ್ತಿದ್ದಾಳೆ. ಈ ಅಂಗನವಾಡಿಯ ಪಕ್ಕದಲ್ಲೇ ತ್ಯಾಜ್ಯಗಳನ್ನು ತಂದು ಸುರಿಯುವುದರಿಂದ ಪರಿಸರ ದುರ್ನಾತದಿಂದ ಕೂಡಿದೆ. ಇಂತಹ ಕೊಳಕು ಜಾಗದಲ್ಲಿ ತಯಾರಿಸಿದ ಮಧ್ಯಾಹದ ಊಟವನ್ನು ಸೇವಿಸಬೇಕಾದ ದುಃಸ್ಥಿತಿ ಇಲ್ಲಿಯ ಮಕ್ಕಳದ್ದು.
ಶ್ರೀಕಾಂತ್, ಬಂಟ್ವಾಳ