ಮಹಿಳಾ ಮೀಸಲಾತಿ ಘೋಷಣೆಗಳ ಇಂಗಿತವೇನು?
ಸಂಸತ್ತಿನಲ್ಲಿ ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬ ಕಡಿಮೆ ಇರುವುದರಿಂದ ತನ್ನ ಪಕ್ಷವು ಅಲ್ಲಿ ಮಹಿಳೆಯರಿಗೆ ಶೇ. 33 ಸ್ಥಾನಗಳನ್ನು ಮೀಸಲು ಇಡುವುದಾಗಿ ರಾಹುಲ್ ಗಾಂಧಿಯವರು ಘೋಷಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಕೇಂದ್ರ ಸರಕಾರದ ವಿವಿಧ ಸೇವೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ನೌಕರಿಗಳು ದೊರಕುವಂತೆ ತಮ್ಮ ಪಕ್ಷ ನೋಡಿಕೊಳ್ಳುವುದಾಗಿಯೂ ಹೇಳಿದ್ದಾರೆ. ಇವೆಲ್ಲಾ ದೊಡ್ಡ ದೊಡ್ಡ ಘೋಷಣೆಗಳಾದರೂ ಇವುಗಳು ಅಪಾಯದ ಕರೆಗಂಟೆಯೂ ಹೌದು. ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನೂ ಜಾರಿಗೆ ತರುವುದಾಗಿಯೂ ಅವರು ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಅರಣ್ಯ ಹಕ್ಕುಗಳ ಕಾಯ್ದೆಯನ್ನು ಬಲಪಡಿಸುವುದಾಗಿಯೂ ಅವರು ಹೇಳಿದ್ದಾರೆ.
ಆದರೆ ಈ ಎಲ್ಲ ಘೋಷಣೆಗಳ ಇಂಗಿತವಾದರೂ ಏನು? ಎಂಬ ಬಗ್ಗೆ ನಾವು ಯೋಚಿಸಬೇಕಾಗಿದೆ. ಇವೆಲ್ಲ ಮೇಲ್ಜಾತಿಗಳ ಮೇಲುವರ್ಗದ ನಗರಗಳ ಶ್ರೀಮಂತ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಇವರ ಹೊರತಾಗಿ ಬೇರೆ ಒಂದು ಭಾರತ (ಬಡವರ ಭಾರತ) ಇಲ್ಲವೋ ಏನೋ ಎಂಬಂತೆ ಮಾಡಲಾಗಿರುವ ಘೋಷಣೆಗಳು ಅನ್ನಿಸುತ್ತದೆ. ರಾಹುಲ್ ಗಾಂಧಿಯವರು ನಿಜವಾಗಿ ತಲುಪಬೇಕಾಗಿದ್ದು ಗ್ರಾಮೀಣ ಭಾರತವನ್ನು. ಅವರು ಆದಿವಾಸಿಗಳು, ದಲಿತರು, ಮುಸ್ಲಿಮರು, ಒಬಿಸಿಗಳು ಕೇಳುವ ಜಾತಿ ತಾರತಮ್ಯದ ಕುರಿತಾದ ಪ್ರಶ್ನೆಗಳನ್ನು ಕೇಳಿಸಿಕೊಳ್ಳಲು ಸಿದ್ಧರಿದ್ದಾರೆಯೇ? ಈ ಬಾರಿ ತನ್ನ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತದೆ ಎಂದು ಅವರು ಆಶ್ವಾಸನೆ ನೀಡಲು ಸಮರ್ಥರಿದ್ದಾರೆಯೇ? ರಾಮಮಂದಿರ ಅಥವಾ ಗೋ ಶಾಲೆಗಳ ನಿರ್ಮಾಣಕ್ಕೆ ಮಹತ್ವ ಕೊಡದೆ ನಮ್ಮ ದೇಶದ ಸಂಸ್ಥೆಗಳನ್ನು ಬಲಪಡಿಸಿ ಅವುಗಳು ಇನ್ನಷ್ಟು ವೈವಿಧ್ಯಪೂರ್ಣ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಗಳಾಗುವಂತೆ ಮಾಡುವುದಾಗಿ ಅವರು ಆಶ್ವಾಸನೆ ನೀಡಬಲ್ಲರೇ?
ರಾಹುಲ್ ಗಾಂಧಿ ಹಾಗೂ ಅವರ ಪಕ್ಷದ ನಾಯಕರು ತಾವು ‘ಸಂಕೀರ್ಣ’ವೆಂದು ತಿಳಿದಿರುವ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. (ಇದು ಸ್ವಾಗತಾರ್ಹ) ಮಹಿಳಾ ಮೀಸಲಾತಿ ಮಸೂದೆ ಇಂತಹ ಒಂದು ‘ಸಂಕೀರ್ಣ’ ವಿಷಯ. ಯಾಕೆಂದರೆ ಪುರುಷ ಅಥವಾ ಮಹಿಳೆ ಎಂಬುದು ನಮ್ಮ ದೇಶದಲ್ಲಿ ವ್ಯಕ್ತಿಯೊಬ್ಬನ/ಳ ಮುಖ್ಯ ಮೂಲ ಗುರುತು, ಐಡೆಂಟಿಟಿ ಅಲ್ಲ. ಇಲ್ಲಿ ವ್ಯಕ್ತಿಯೊಬ್ಬನ ಜಾತಿಯೇ ಆತನ ಮುಖ್ಯ ಪ್ರಾಥಮಿಕ ಐಡೆಂಟಿಟಿ. ನಂತರ ಆತನ ಧರ್ಮ ಮತ್ತು ಊರು/ವಾಸಿಸುವ ಪ್ರದೇಶ. ಈ ಮೂರು ಗುರುತುಗಳ ಬಳಿಕ ಮಹಿಳೆ ಬರುತ್ತಾಳೆ. ಮಹಿಳೆಯೊಬ್ಬಳು ಅವಳು ಓರ್ವ ಮಹಿಳೆ ಎಂಬ ಕಾರಣಕ್ಕಾಗಿಯಷ್ಟೇ ತಾರತಮ್ಯಕ್ಕೆ ಒಳಗಾಗುವುದಿಲ್ಲ. ಬದಲಾಗಿ ಆಕೆ ಒಬ್ಬಳು ಆದಿವಾಸಿ ಮಹಿಳೆ, ಒಬ್ಬಳು ದಲಿತ ಮಹಿಳೆ ಅಥವಾ ಬೇರೆ ಒಂದು ಪ್ರದೇಶಕ್ಕೆ ಸೇರಿದವಳು ಎಂಬ ಕಾರಣಕ್ಕಾಗಿ ತಾರತಮ್ಯಕ್ಕೆ ಶೋಷಣೆಗೆ ಗುರಿಯಾಗುತ್ತಾಳೆ. ಇಂದಿನ ಭಾರತದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಅಸ್ಮಿತೆಯನ್ನು, ಅನನ್ಯತೆಯನ್ನು, ಐಡೆಂಟಿಟಿಯನ್ನು ಕಾಪಾಡಿಕೊಳ್ಳುವಲ್ಲಿ ಇತರ ಮಹಿಳೆಯರಿಗಿಂತ ಹೆಚ್ಚಿನ ಪ್ರಮಾಣದ ಬೆದರಿಕೆಯನ್ನು ಎದುರಿಸಬೇಕಾಗಿದೆ. ಆದ್ದರಿಂದ ರಾಹುಲ್ ಗಾಂಧಿಯವರು ಮಹಿಳಾ ಮೀಸಲಾತಿ ಮಸೂದೆ ತರುತ್ತೇವೆ ಎನ್ನುವಾಗ ನಾವು ಸಂಸತ್ತಿನಲ್ಲಿ ಹಾಗೂ ನೌಕರಿಗಳಲ್ಲಿ ಮಹಿಳೆಯರಿಗೆ ಪ್ರಮಾಣಾತ್ಮಕ(ಪ್ರಪೋರ್ಶನಲ್) ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಖಾತರಿ ನೀಡುತ್ತಾರೆಯೇ? ಅಂದರೆ ಜಾತಿ, ಧರ್ಮ ಮತ್ತು ಲಿಂಗ ಆಧಾರಿತವಾದ ಮಹಿಳೆಯರ ಅಸ್ಮಿತೆಯನ್ನು ಗೌರವಿಸಬೇಕು, ಪರಿಗಣಿಸಬೇಕು. ಇಲ್ಲವಾದಲ್ಲಿ ಭಾರತದಲ್ಲಿ ಮಹಿಳೆಯರ ಅಸ್ಮಿತೆ ಯೋಜನೆಯು ಸವರ್ಣೀಯ ಮೇಲ್ವರ್ಗದ ಮಹಿಳೆಯರಿಗೆ ಹಿಂದಿನ ಬಾಗಿಲಿನ ಮೂಲಕ ಪ್ರವೇಶಕ್ಕೆ ಅಥವ ನಮ್ಮ ವ್ಯವಸ್ಥೆಯಲ್ಲಿರುವ (ಬ್ರಾಹ್ಮನಿಕಲ್)ವೈದಿಕ ಯಜಮಾನಿಕೆಯ ಯಥಾಸ್ಥಿತಿ ವಾದವನ್ನು ಬಲಪಡಿಸುವುದಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ.
ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೇಗೆ ಶೇ. 33 ಮೀಸಲಾತಿ ನೀಡುತ್ತದೆ? ಎಂಬುದು ಕೂಡಾ ಯೋಚಿಸಬೇಕಾದ ವಿಷಯ. ಈಗ ಇರುವ ಎಲ್ಲ ಮೀಸಲಾತಿಯಿಂದ ಒಂದು ಪ್ರಮಾಣಾತ್ಮಕ ಹೊಂದಾಣಿಕೆಯ ಮೀಸಲಾತಿ ಅದಾಗ ಬೇಕು. ಹಾಗೆಯೇ, ರಾಹುಲ್ ಗಾಂಧಿಯವರು ಶೇ. 52 ಒಬಿಸಿ ಮೀಸಲಾತಿಗೆ, ಒಂದು ಅಖಿಲ ಭಾರತ ನ್ಯಾಯಾಂಗ ಸೇವೆಗಳ ಆಯೋಗಕ್ಕೆ ಹಾಗೂ ಬಡ ಸವರ್ಣೀಯರಿಗೆ ಶೇ. 10 ಮೀಸಲಾತಿಗೆ ತಮ್ಮ ಬದ್ಧತೆಯನ್ನು ಘೋಷಿಸಬೇಕು.
ಸೆಮಿನಾರ್‌ಗಳಲ್ಲಿ, ಅಧಿವೇಶನಗಳಲ್ಲಿ ಮಹಿಳೆಯರು ಮತ್ತು ಸ್ತ್ರೀವಾದ ಮುನ್ನೆಲೆಗೆ ಬಂದು ಅಲ್ಲಿ ಸವರ್ಣೀಯ ಮಹಿಳೆಯರ ಒಂದು ಕ್ಲಬ್ ರೂಪುಗೊಳ್ಳುವುದನ್ನು ನಾವೆಲ್ಲಾ ನೋಡಿದ್ದೇವೆ. ವಿಶ್ವದ ಮಹಿಳೆಯರು ಎಲ್ಲರೂ ಮಹಿಳೆಯರೇ. ಅಲ್ಲಿ ವರ್ಗ, ಜಾತಿ, ಧರ್ಮ ಮುಖ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಮುಝಫ್ಫರ್ ನಗರದಲ್ಲಿ ಮಹಿಳೆಯರ ಮೇಲೆ ನಡೆದ ದಾಳಿ, ಹಿಂಸೆ ಅವರು ಮುಸ್ಲಿಮರು ಎಂಬ ಕಾರಣಕ್ಕಾಗಿಯೇ ನಡೆಯಿತು.ಅವರಿಗೆ ಸರಕಾರವಾಗಲಿ, ರಾಜಕೀಯ ಪಕ್ಷಗಳಾಗಲಿ ನ್ಯಾಯ ದೊರಕಿಸಲಿಲ್ಲ. ಮಹಿಳೆಯರು ತಮ್ಮದೇ ಜಾತಿಗಳಿಂದ ಆಗುವ, ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಪ್ರತಿಭಟಿಸದೇ ಇರುವುದು ಕೂಡ ಅವರಿಗೆ ನ್ಯಾಯ ದೊರಕದೆ ಇರಲು ಕಾರಣವೆಂದು ನನಗೆ ಅನ್ನಿಸುತ್ತದೆ. ಮಹಿಳೆಯರು ಡಾ.ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ಮತ್ತು ಇವಿಆರ್ ಪೆರಿಯಾರ್‌ರವರ ಬರಹಗಳನ್ನು ಓದಬೇಕು. ಆಗ ಅವರು ಜಾತಿಪದ್ಧತಿಯ ನಿರ್ಮೂಲನದಲ್ಲಿ ಒಂದು ಮುಖ್ಯ ಪಾತ್ರ ವಹಿಸಲು ಸಾಧ್ಯವಾಗುತ್ತದೆ.
ಜಾತಿ ಪದ್ಧತಿಯಲ್ಲಿ ಕೇವಲ ವಿರೋಧಿಸುವುದಕ್ಕೆ ಸೀಮಿತವಾಗಿಸದೆ ಅದರ ಬಗ್ಗೆ ತಮ್ಮ ನಿಲುವುಗಳೇನೆಂದು ರಾಜಕೀಯ ಪಕ್ಷಗಳು (ನಿರ್ದಿಷ್ಟವಾಗಿ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ) ಸ್ಪಷ್ಟಪಡಿಸಬೇಕೆಂದು ನಾನು ವಿನಂತಿಸುತ್ತೇನೆ. ಇದರ ಹೊರತಾಗಿ ಮಹಿಳಾ ಮೀಸಲಾತಿ ಎಂಬುದು ಖಾಲಿ ಇರುವ ಸ್ಥಾನಗಳನ್ನು ಸವರ್ಣೀಯ ಮೇಲ್ಜಾತಿಗಳ ಬೀವಿ, ಬಹು, ಬೇಟಿ ಬ್ರಿಗೇಡ್‌ಗೆ ಕಾದಿರಿಸುವ ಒಂದು ಒಳಸಂಚು ಆಗುತ್ತದೆ. ಫುಲೆ, ಡಾ.ಅಂಬೇಡ್ಕರ್ ಮತ್ತು ಪೆರಿಯಾರ್‌ರವರ ಚಿಂತನೆಗಳನ್ನು ಆಧರಿಸಿದ ಒಂದು ದಾಖಲೆಯನ್ನು ಹೊರತಂದು ಅದರ ಆಧಾರದಲ್ಲಿ ಜಾತಿ ಪದ್ಧತಿಯ ನಿರ್ಮೂಲನದ ಅಭಿಯಾನ ನಡೆಯಬೇಕು.
ಕೃಪೆ: counterview.net