ಅಷ್ಟಗ್ರಹ ಕೂಟ
ಭಾಗ-15
ಗುಂಡಿಕ್ಕಿ ಕೊಂದವನು ನಾಥೂರಾಮ್ ಗೋಡ್ಸೆ ಒಬ್ಬನೇ ಆದರೂ, ಈ ಕೃತ್ಯ ಒಬ್ಬನಿಂದಲೇ ಆದದ್ದಲ್ಲ ಎಂಬುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಜನವರಿ 20ರಂದು ಕಾಟನ್ ಸ್ಲಾಬ್ ಸ್ಫೋಟಿಸಿದ ಮದನ್‌ಲಾಲನನ್ನು ಪೊಲೀಸರು ಅರೆಸ್ಟ್ ಮಾಡಿದ ಮೇಲೆ ಅವನು ಕೊಟ್ಟ ಹೇಳಿಕೆಯಿಂದ ಈ ಕೃತ್ಯದಲ್ಲಿ ಕನಿಷ್ಠ ಏಳೆಂಟು ಜನರು ಪಿತೂರಿ ಮಾಡಿದ್ದಾರೆ ಎಂಬುದು ಗೊತ್ತಾಗಿತ್ತು. ಪಿತೂರಿಯಲ್ಲಿ ಭಾಗಿಯಾದವರೆಲ್ಲ ಮಹಾರಾಷ್ಟ್ರದವರು ಎಂಬುದೂ ಸ್ಪಷ್ಟವಾಗಿತ್ತು. ಅವರು ಪುಣೆ, ಮುಂಬೈಯವರೆಂದೂ ತಿಳಿದಿತ್ತು.
ದಿಲ್ಲಿಯಲ್ಲಿ ಗೋಡ್ಸೆ ಗಾಂಧಿ ಎದೆಗೆ ಗುಂಡಿಕ್ಕಿ ಕೊಲ್ಲುವುದಕ್ಕಿಂತ ಒಂದೆರಡು ಗಂಟೆ ಮುಂಚೆಯೇ ನಾಥೂರಾಮ್ ಗೋಡ್ಸೆ, ಆಪ್ಟೆ, ಕರ್ಕರೆ ಮತ್ತು ಅವರ ಆರೆಸ್ಸೆಸ್ ಪರಿವಾರದವರು ಗಾಂಧಿ ಹತ್ಯೆಯಾದರೆಂದು ‘ಸಿಹಿಸುದ್ದಿ’, ಶುಭವಾರ್ತೆಯನ್ನು ಕೇಳಿದವರಂತೆ ಸಿಹಿತಿಂಡಿಯನ್ನು ಹಂಚಿ ಸಂತೋಷಪಟ್ಟಿದ್ದರು. ಅಂತಹ ‘ಸಿಹಿಸುದ್ದಿ’, ‘ಶುಭವಾರ್ತೆ’ಯನ್ನು ಕೇಳಲು ಐದು ಗಂಟೆಗೆ ತಮ್ಮ ರೇಡಿಯೋಗಳಿಗೆ ಕಿವಿಯೊಡ್ಡಬೇಕೆಂದು ಅಂದು ಬೆಳಗ್ಗೆಯೇ ಪುಣೆ, ಮುಂಬೈ, ಅಹಮದಾಬಾದ್, ದೂರದ ಕೊಲ್ಲಾಪುರ, ಸಾಂಗ್ಲಿ ಮುಂತಾದ ಕಡೆ ಆರೆಸ್ಸೆಸ್ ಶಾಖಾ ಕಚೇರಿಗಳಿಗೆ ಗುಟ್ಟಾಗಿ ಸುದ್ದಿ ತಲುಪಿತ್ತು! ಗ್ವಾಲಿಯರ್‌ನಲ್ಲಿ ಡಾ. ಪರಚುರೆಯ ಅಗ್ನಿ ಭಕ್ಷಕ ಹಿಂದೂ ರಾಷ್ಟ್ರಸೇನೆ ಗಾಂಧೀಜಿ ಮೊಘಲ್ ಚಕ್ರವರ್ತಿ ಔರಂಗಜೇಬನ ಅಪರಾವತಾರವೆಂದೇ ಪ್ರಚಾರ ಮಾಡಿ, ಅಂದು ಗಾಂಧಿ ಹತ್ಯೆಯಾದದ್ದು ಔರಂಗಜೇಬನ ಮೇಲೆ ಸೇಡು ತೀರಿಸಿಕೊಂಡಂತಾಯಿತೆಂದು ಕುಣಿದಾಡಿ, ಪಟಾಕಿ ಹಾರಿಸಿ, ಸಂತೋಷ ವ್ಯಕ್ತಪಡಿಸಿದರು! ಗಾಂಧಿ ಮುಸ್ಲಿಮರ ರಕ್ಷಣೆಗಾಗಿ ಉಪವಾಸ ಮಾಡಿದ್ದು ಔರಂಗಜೇಬನ ಹಿಂದೂಗಳ ದ್ವೇಷಕ್ಕೆ ಸಮಾನವೆಂದು ಪರಿಗಣಿಸಿದ್ದರು! ಡಾ.ಪರಚುರೆಯ ಈ ಗಾಂಧಿ ದ್ವೇಷವನ್ನು ಗಮನಕ್ಕೆ ತಂದುಕೊಂಡ ಆಗತಾನೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರಕಾರ ಅವನನ್ನು ಗ್ವಾಲಿಯರ್ ಕೋಟೆಯ ಮಿಲಿಟರಿ ಕಾರಾಗೃಹದಲ್ಲಿ ಬಂಧನದಲ್ಲಿಟ್ಟಿತು.
ಗಾಂಧಿ ಹತ್ಯೆಯಿಂದ ಸಂತೋಷಪಟ್ಟು ಪುಣೆ, ಸಾಂಗ್ಲಿ, ಕೊಲ್ಲಾಪುರ, ಬಳ್ಳಾರಿ ಜಿಲ್ಲೆಯ ಸೊಂಡೂರಿನಲ್ಲೂ ಸಿಹಿ ಹಂಚಿದರು! ಬಹುಮಟ್ಟಿಗೆ ಆರೆಸ್ಸೆಸ್ ಶಾಖೆಗಳು ಗಾಂಧಿ ಹತ್ಯೆಯಿಂದ ಸಂತೋಷ ಸಾಗರದಲ್ಲಿ ಮುಳುಗಿದವು. ಇವರ ಈ ಅಟ್ಟಹಾಸವನ್ನು ಕಂಡ ಕಡು ನಿಷ್ಠೆಯ ಗಾಂಧಿ ಭಕ್ತರು ಪುಣೆ, ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ ಮುಂತಾದ ಕಡೆ ಗೋಡ್ಸೆ ಜಾತಿಗೆ ಸೇರಿದ ಚಿತ್ಪಾವನ ಬ್ರಾಹ್ಮಣರ ಮೇಲೆ ಹಲ್ಲೆ ಮಾಡಿದರು. ಕೆಲವರನ್ನು ಕೊಂದರು. ಅವರ ಮನೆಗಳಿಗೆ, ಮಳಿಗೆಗಳಿಗೆ, ಬೆಳ್ಳಿ ಬಂಗಾರದ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಆಭರಣ ಮತ್ತು ಬೆಳ್ಳಿ ಬಂಗಾರ ಅಗ್ನಿ ಜ್ವಾಲೆಗೆ ಕರಗಿ ದ್ರವವಾಗಿ ಹರಿಯಿತು. ರೊಚ್ಚಿಗೆದ್ದ ಜನರನ್ನು ಹತೋಟಿಗೆ ತರಲು ಮುಂಬೈ ಸರಕಾರ ಕೆಲವು ಕಡೆ ಲಾಠಿಚಾರ್ಜ್, ಗೋಲಿಬಾರ್ ಮಾಡಬೇಕಾಯಿತು.
ಗುಂಡಿಕ್ಕಿ ಕೊಂದವನು ನಾಥೂರಾಮ್ ಗೋಡ್ಸೆ ಒಬ್ಬನೇ ಆದರೂ, ಈ ಕೃತ್ಯ ಒಬ್ಬನಿಂದಲೇ ಆದದ್ದಲ್ಲ ಎಂಬುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಜನವರಿ 20ರಂದು ಕಾಟನ್ ಸ್ಲಾಬ್ ಸ್ಫೋಟಿಸಿದ ಮದನ್‌ಲಾಲನನ್ನು ಪೊಲೀಸರು ಅರೆಸ್ಟ್ ಮಾಡಿದ ಮೇಲೆ ಅವನು ಕೊಟ್ಟ ಹೇಳಿಕೆಯಿಂದ ಈ ಕೃತ್ಯದಲ್ಲಿ ಕನಿಷ್ಠ ಏಳೆಂಟು ಜನರು ಪಿತೂರಿ ಮಾಡಿದ್ದಾರೆ ಎಂಬುದು ಗೊತ್ತಾಗಿತ್ತು. ಪಿತೂರಿಯಲ್ಲಿ ಭಾಗಿಯಾದವರೆಲ್ಲ ಮಹಾರಾಷ್ಟ್ರದವರು ಎಂಬುದೂ ಸ್ಪಷ್ಟವಾಗಿತ್ತು. ಅವರು ಪುಣೆ, ಮುಂಬೈಯವರೆಂದೂ ತಿಳಿದಿತ್ತು. ಮದನ್‌ಲಾಲನ ಹೇಳಿಕೆಯಿಂದ ಕೃತ್ಯವೆಸಗುವ ಮುನ್ನ ಪಿತೂರಿ ಮಾಡಿದವರು ‘ಸಾವರ್ಕರ್ ಸದನ’ಕ್ಕೆ ಹೋಗಿ ಸಾವರ್ಕರ್‌ರ ಆಶೀರ್ವಾದ ಪಡೆದಿದ್ದರೆಂಬುದರ ಸುಳಿವು ಹಿಡಿದು ಮುಂಬೈ ಪೊಲೀಸ್ ಕಮಿಷನರ್ ನಗರವಾಲಾ ‘ಸಾವರ್ಕರ್ ಸದನ’ಕ್ಕೆ ಹೋಗಿ ಫೆಬ್ರವರಿ 5ರಂದು ಸಾವರ್ಕರ್‌ರನ್ನು ಭೇಟಿ ಮಾಡಿದರು. ನಗರವಾಲಾರನ್ನು ಕಂಡ ಕೂಡಲೆ ಸಾವರ್ಕರ್: ‘‘ಮಹಾತ್ಮಾ ಗಾಂಧಿ ಖೂನಿ ಖಟ್ಲೆ ಸಂಬಂಧವಾಗಿ ನನ್ನನ್ನು ಅರೆಸ್ಟ್ ಮಾಡಲು ಬಂದಿರಾ?’’ ಎಂದು ನೇರವಾಗಿ ಕೇಳಿದರು. ನಗರವಾಲಾಗೆ ಆಶ್ಚರ್ಯವಾಯಿತು! ಸಾವರ್ಕರ್‌ರ ಹೆಸರು ಆಗ ಇನ್ನೂ ಬಯಲಿಗೆ ಬಂದಿರಲಿಲ್ಲ. ಸಾಧಾರಣ ಜನರಿಗೆ ಅವರು ಇಂತಹ ಹೀನ ಕೃತ್ಯ ಮಾಡಿರಬಹುದೆಂಬ ಗಾಳಿ ವರ್ತಮಾನದ ಸುಳಿವೂ ಸಿಕ್ಕಿರಲಿಲ್ಲ. ಆದರೂ ಸಾವರ್ಕರ್‌ರಿಗೆ, ಅವರನ್ನು ಅರೆಸ್ಟ್ ಮಾಡಬಹುದೆಂಬ ಮುನ್ಸೂಚನೆ ‘ಅಂತರ್‌ವಾಣಿ’ ದೃಢವಾಗಿತ್ತು. ಯಾಕೆಂದರೆ ‘ಕಳ್ಳನ ಮನಸ್ಸು ಹುಳ್ಳುಳ್ಳಗೆ’ ಎಂಬ ಗಾದೆಯ ವೇದ ಸತ್ಯ ಆ ಪರಿಶುದ್ಧ ಚಿತ್ಪಾವನರ ಆತ್ಮಕ್ಕೆ ವೇದ್ಯವಾಗಿತ್ತು. ನಗರವಾಲಾ: ‘‘ಆರೆಸ್ಟ್ ಮಾಡುವುದಿಲ್ಲ. ನಿಮ್ಮ ಮನೆ ಶೋಧ ಮಾಡಲು ಬಂದಿದ್ದೇನೆ’’ ಎಂದು ಉತ್ತರಿಸಿದರು. ಸಾವರ್ಕರ್‌ರ ಮನೆ ಶೋಧಿಸಿದರು. ಆಗ ಅವರಿಗೆ ದೊರಕಿದ್ದು ನಾಥೂರಾಮ್ ಮತ್ತು ಆಪ್ಟೆ ಬರೆದಿದ್ದ ಅನೇಕ ಪತ್ರಗಳು. ಆ ಪತ್ರಗಳಲ್ಲಿ ಗಾಂಧಿ ಹತ್ಯೆಗೆ ನೇರವಾಗಿ ಸಂಬಂಧಿಸಿದ ಪ್ರಸ್ತಾಪವಿರಲಿಲ್ಲ ನಿಜ. ಖೂನಿ ಮಾಡಲಿರುವವರು ತಮ್ಮ ಯೋಜನೆಯನ್ನು ಬರೆದಿಡುವಷ್ಟು ಮೂರ್ಖರೂ ಅಲ್ಲ, ಪ್ರಾಮಾಣಿಕರೂ ಅಲ್ಲ. ಆ ಪತ್ರ ವ್ಯವಹಾರದಿಂದ ಸ್ಪಷ್ಟವಾಗುತ್ತಿದ್ದ ಒಂದು ನಿಸಂದಿಗ್ಧ ಸತ್ಯ ಎಂದರೆ- ಗೋಡ್ಸೆಗೂ ಸಾವರ್ಕರ್‌ರಿಗೂ ನಿಕಟ ಪರಿಚಯವಿತ್ತು, ಆಪ್ತತ್ವ ಇತ್ತು. ಸಾವರ್ಕರ್ ಗೋಡ್ಸೆಯ ರಾಜಕೀಯ ಗುರುಗಳಾಗಿದ್ದರು. ಅದು ಒಂದೆರಡು ದಿನಗಳ/ತಿಂಗಳ/ವರ್ಷಗಳ ಪರಿಚಯವಲ್ಲ. 1930ರಷ್ಟು ಹಿಂದಿನಿಂದಲೂ ಗಾಢವಾದ ಪರಿಚಯವಿತ್ತು. ಸಾವರ್ಕರ್‌ರು ಅಂಡಮಾನ್ ದ್ವೀಪದಲ್ಲಿದ್ದಾಗ, ತಮಗೆ ಕ್ಷಮಾದಾನ ಮಾಡಬೇಕೆಂದು ಬ್ರಿಟಿಷ್ ಸರಕಾರಕ್ಕೆ ಮೊರೆಯಿಟ್ಟು ಬೇಡಿಕೊಂಡಾಗ ಅವರಿಗೆ ಕ್ಷಮಾದಾನ ಮಾಡಿ ರತ್ನಗಿರಿ ಪಟ್ಟಣದಲ್ಲಿ ಒಂದು ಬಂಗಲೆಯಲ್ಲಿ ಒಂದರ್ಥದ ‘ಗೃಹ ಬಂಧನ’ದಲ್ಲಿಟ್ಟಿದ್ದರು. ಅವರು ಯಾವ ಬಗೆಯ ರಾಜಕೀಯ ಚಟುವಟಿಕೆಯಲ್ಲ್ಲೂ ಭಾಗಿಯಾಗಕೂಡದು, ಭಾಷಣ ಮಾಡಕೂಡದು, ಬರೆಯಲೂಬಾರದು. ಈ ಷರತ್ತುಗಳಿಗೆ ಒಪ್ಪಿ ತಾವು ಬ್ರಿಟಿಷ್ ಸರಕಾರದೊಡನೆ ಸಹಕರಿಸುವುದಾಗಿಯೂ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಸಾವರ್ಕರ್‌ರು ಒಂದರ್ಥದಲ್ಲಿ ರಾಜಕೀಯ ಸನ್ಯಾಸ ಶಿಕ್ಷೆ (ದೀಕ್ಷೆ) ಅನುಭವಿಸುತ್ತ ರತ್ನಗಿರಿಯಲ್ಲಿ ಅಜ್ಞಾತವಾಸದಲ್ಲಿದ್ದಾಗ ನಾಥೂರಾಮ್ ಗೋಡ್ಸೆ ಅವರ ನಿಕಟ ಸಂಪರ್ಕ ಪಡೆದ. ಅವರಪ್ಪ ವಿನಾಯಕ ಗೋಡ್ಸೆ ಭಾರತ ಸರಕಾರದ ಅಂಚೆ ಇಲಾಖೆಯ ಒಂದು ಸಣ್ಣ ನೌಕರಿಯಲ್ಲಿದ್ದರು. 1931ರ ಹೊತ್ತಿಗೆ ಅವರು ನಿವೃತ್ತರಾಗಲಿದ್ದರು. 1930ರಲ್ಲಿ ಅವರನ್ನು ರತ್ನಗಿರಿಗೆ ವರ್ಗಾಯಿಸಲಾಯಿತು. ಆಗ ನಾಥೂರಾಮ್‌ಗೆ 19 ವರ್ಷವ ವಯಸ್ಸು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ನಿರುದ್ಯೋಗಿ ಆಗಿದ್ದ ನಾಥೂರಾಮ್ ಆರೆಸ್ಸೆಸ್ ಸದಸ್ಯನಾಗಿ ಅಂಡಲೆಯುತ್ತಿದ್ದ. ಆಗಾಗ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಆ ಚಟುವಟಿಕೆಗಳು ಸಾವರ್ಕರ್‌ರ ಗಮನಕ್ಕೆ ಬಂತು. ಒಮ್ಮೆ ಸಾವರ್ಕರ್‌ರ ಮನೆಗೆ ಹೋದ. ಅವರ ಮಾತು ಇವನಿಗೂ ಹಿಡಿಸಿತು. ಅವರಾಗ ರಾಜಕೀಯ ಸನ್ಯಾಸವಹಿಸಿ ಬ್ರಿಟಿಷರ ವಿರುದ್ಧ ದನಿಯೆತ್ತದೆ ‘ಮುನಿ’ (ವೌನಿ)ಯಾಗಿದ್ದರು. ಆದರೆ ಅವರ ರಾಜಕೀಯ ಜೀವನದ ಬೆಳ್ಳುಳ್ಳಿ ವಾಸನೆ ಅವರ ನರನಾಡಿಗಳಲ್ಲಿ ತುಂಬಿತ್ತು. ಅದು ಈ ದೇಶದ ದಾಸ್ಯಮುಕ್ತಿಗೆ ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷ ಮತ್ತು ಅದರ ಅಗ್ರನಾಯಕ ಗಾಂಧೀಜಿಯವರನ್ನು ವಿರೋಧಿಸುವುದರಲ್ಲಿ ವ್ಯಕ್ತವಾಗುತ್ತಿತ್ತು. ತಮ್ಮಲ್ಲಿಗೆ ಬರುತ್ತಿದ್ದ ನಾಥೂರಾಮನಂತಹ ಯುವಕರಿಗೆ ಅದು ಅಪ್ಯಾಯಮಾನವಾಗಿತ್ತು. ಕಾಂಗ್ರೆಸ್ ಮತ್ತು ಗಾಂಧೀಜಿಯ ಬಗ್ಗೆ ಅಸಮಾಧಾನ, ದ್ವೇಷದ ವಿಷವನ್ನು ಯುವಕರ ಮನದಲ್ಲಿ ತುಂಬುತ್ತಿದ್ದರು. ಜೊತೆಗೆ ಈ ದೇಶವನ್ನು ಮುಸ್ಲಿಮರ ಪ್ರಭಾವದಿಂದ ಬಿಡುಗಡೆ ಮಾಡಲು ‘ಹಿಂದುತ್ವ’ ಸಿದ್ಧಾಂತವನ್ನು ಪ್ರತಿಪಾದಿಸಿ ಯುವಕರನ್ನು ಹುರಿದುಂಬಿಸುತ್ತಿದ್ದರು. ಮುಸ್ಲಿಮರು ಹಿಂದೂಗಳನ್ನು ಮತಾಂತರಗೊಳಿಸಿ ಹಿಂದೂ ಧರ್ಮ ಧ್ವಂಸ ಮಾಡುತ್ತಿದ್ದಾರೆಂದು ತಮ್ಮಲ್ಲಿಗೆ ಬಂದವರಿಗೆ ಉಪದೇಶ ಮಾಡುತ್ತಿದ್ದರು. ಮತಾಂತರ ಹೊಂದಿದ ಹಿಂದೂಗಳನ್ನು ಮತ್ತೆ ಹಿಂದೂಗಳನ್ನಾಗಿ ಮಾಡಲು ಶುದ್ಧಿ ಸಂಘಟನೆಯೆಂಬ ಚಳವಳಿಯನ್ನೇ ಪ್ರಾರಂಭಿಸಿದರು. ಒಂದು ಕಡೆ ಕಾಂಗ್ರೆಸನ್ನು ದುರ್ಬಲಗೊಳಿಸುವುದು, ಇನ್ನೊಂದು ಕಡೆ ಮುಸ್ಲಿಮರನ್ನು ದ್ವೇಷಿಸುವುದು, ಇವೆರಡೂ ಬ್ರಿಟಿಷರ ಒಡೆದಾಳುವ ನೀತಿಗೆ ಪೋಷಕವಾಗಿದ್ದವು. ಬಹಿರಂಗವಾಗಿ ಈ ರಾಜಕೀಯ ಸಿದ್ಧಾಂತಗಳನ್ನು ಮಾತನಾಡಲಾರದ ಸಾವರ್ಕರ್‌ರು ನಾಥೂರಾಮನಂತಹವರ ಮೂಲಕ ಪ್ರಚುರಪಡಿಸುತ್ತಿದ್ದರು. ಅವರು ನಾಥೂರಾಮನನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿಯೂ ನೇಮಕ ಮಾಡಿಕೊಂಡಿದ್ದರು.
ನಾಥೂರಾಮ್ ಮತ್ತು ಸಾವರ್ಕರ್‌ರ ಈ ನಿಕಟ ಸಂಪರ್ಕವನ್ನು ಇಲ್ಲಿ ಯಾಕೆ ಇಷ್ಟು ವಿವರವಾಗಿ ಪ್ರಸ್ತಾವಿಸಬೇಕಾಯಿತೆಂದರೆ, ಪೊಲೀಸ್ ಅಧಿಕಾರಿ ನಗರವಾಲಾ ಅವರ ಮನೆಗೆ ಹೋದೊಡನೆಯೆ: ‘‘ಗಾಂಧಿ ಹತ್ಯೆಯ ಸಂಬಂಧ ನನ್ನನ್ನು ಆರೆಸ್ಟ್ ಮಾಡಲು ಬಂದಿದ್ದೀರಾ?’’ ಎಂದು ಕೇಳುವುದರ ಕಾರಣ ನಾಥೂರಾಮನ ಈ ಕೃತ್ಯ ತಮಗೆ ತಿಳಿಯದೆ ಆಗಿರಲಿಕ್ಕಿಲ್ಲ ಎಂಬ ನಂಬಿಕೆ ತಪಾಸಣಾಧಿಕಾರಿಗಿದ್ದಿರಬೇಕು. ಎರಡನೆಯದಾಗಿ, ಗಾಂಧಿ ಹತ್ಯೆಗೆ ತಾನೊಬ್ಬನೆ ಕಾರಣ. ಅದರಲ್ಲಿ ಮತ್ತಾರೂ ಭಾಗಿಯಾಗಿಲ್ಲ ಎಂದು ನಾಥೂರಾಮ್ ಸಾಧಿಸುತ್ತಿದ್ದ. ಸಾವರ್ಕರ್‌ರೂ ನಾಥೂರಾಮ್ ತಮಗೆ ಗೊತ್ತೇಯಿಲ್ಲ ಎಂದು ವಿಚಾರಣೆಯ ಕಾಲಕ್ಕೆ ವಾದಿಸಿದ್ದರು. ಗಾಂಧಿ ಹತ್ಯೆಯ ವಿಚಾರಣೆಯ ಕಾಲಕ್ಕೆ ಒಂದು ದಿನವಾದರೂ ಸಾವರ್ಕರ್‌ರು ನಾಥೂರಾಮನತ್ತ ಕಣ್ಣೆತ್ತಿ ನೋಡಿರಲಿಲ್ಲ! ಅವನು ಕೇವಲ ಅಪರಿಚಿತ ವ್ಯಕ್ತಿ ಎಂಬುದನ್ನು ತೋರಿಸಿಕೊಳ್ಳಲು ಹೂಡಿದ ಕಪಟ ನಾಟಕ. ಅವರು ಸುಧೀರ್ಘ ಕಾಲ 1930ರಿಂದ 1948ರಚರೆಗೆ ನಿಕಟ ಪರಿಚಯವಿದ್ದ ಗಳಸ್ಯ ಕಂಠಸ್ಯ ನಿಕಟವರ್ತಿಗಳು ಎಂಬುದನ್ನೂ ಇಲ್ಲಿಯೇ ಪ್ರಸ್ತಾವಿಸುವುದು ಯುಕ್ತ.
(ಬುಧವಾರದ ಸಂಚಿಕೆಗೆ ಮುಂದುವರಿಯುವುದು)