ಮಾ.25ರಂದು ಪ್ರಮೋದ್ ಮಧ್ವರಾಜ್ ರಿಂದ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಕೆ
ಉಡುಪಿ, ಮಾ.23: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ಮಾ.25ರ ಸೋಮವಾರ ಅಪರಾಹ್ನ 2:00 ಗಂಟೆಗೆ ಕಾಂಗ್ರೆಸ್ ಭವನದಿಂದ ಕಾರ್ಯಕರ್ತರೊಂದಿಗೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸರಳರೀತಿಯಲ್ಲಿ ನಾಮಪತ್ರ ಸಲಿ್ಲಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ: ಮಾ.25ರ ಸೋಮವಾರ ಬೆಳಗ್ಗೆ 10:30ಕ್ಕೆ ಉಡುಪಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆ ನಡೆಯಲಿದೆ.
ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದು, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಯು.ಆರ್. ಸಭಾಪತಿ, ಪಿ.ಬಸವರಾಜ್ ಅಲ್ಲದೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ಜಿ.ಎ. ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಮೊದಲಾದವರು ಉಪಸ್ಥಿತರಿರುವರು.
ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.