varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 23 Mar, 2019

ವಡಕ್ಕನ್ ಕೆಡವಿದ ಸಿನ್ಹಾ?
ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಬಂಡಾಯ ಸಾರಿ ಬಿಜೆಪಿ ಸೇರುವುದನ್ನು ತೀರಾ ರಹಸ್ಯವಾಗಿಡಲಾಗಿತ್ತು ಹಾಗೂ ಇದು ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಅದರಲ್ಲೂ ಮುಖ್ಯವಾಗಿ ದಶಕದಿಂದ ಕಾಂಗ್ರೆಸ್ ಪಕ್ಷದ ವರದಿಗಾರಿಕೆ ಮಾಡುತ್ತಿದ್ದ ಪತ್ರಕರ್ತರಿಗೆ ಆಘಾತಕಾರಿ ಬೆಳವಣಿಗೆ. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವ್ಯಕ್ತಿಯೊಬ್ಬರಿಂದ ಕೋಟ್ ಅಥವಾ ಬೈಟ್ ಬೇಕೆಂದರೆ ತಕ್ಷಣ ಮುಖ ಮಾಡುತ್ತಿದ್ದುದು ವಡಕ್ಕನ್ ಕಡೆಗೆ. ಇದು ಯಾವಾಗ ಸಂಭವಿಸಿತು ಎನ್ನುವುದು ಹಲವರಿಗೆ ನಂಬಲು ಕೂಡಾ ಸಾಧ್ಯವಾಗುತ್ತಿಲ್ಲ. ಅದೇನೇ ಇರಲಿ, ಟಾಮ್ ಬಿಜೆಪಿಗೆ ಸೇರುವಂತೆ ಮನವೊಲಿಸಿದ್ದು ಯಾರು ಎನ್ನುವುದನ್ನು ಪತ್ತೆ ಮಾಡುವ ಕಾರ್ಯವನ್ನು ಇದೀಗ ಆರಂಭಿಸಿದ್ದಾರೆ. ಬಹುಶಃ ಸೋನಿಯಾಗಾಂಧಿಯವರ ನಿಕಟವರ್ತಿಯ ಸರ್ಜಿಕಲ್ ದಾಳಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದವರು ಆರೆಸ್ಸೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ. ಕೆಲ ಕಾಲ ಹಿಂದಿನಿಂದಲೇ ಸಿನ್ಹಾ, ವಡಕ್ಕನ್ ಅವರ ಸಂಪರ್ಕದಲ್ಲಿದ್ದು, ಈ ವ್ಯವಹಾರ ಕುದುರಿಸಲು ಸಾಧ್ಯವಾಯಿತು. ವಡಕ್ಕನ್, ಕೇರಳದ ರೋಮನ್ ಕೆಥೊಲಿಕ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಬಿಜೆಪಿ ಚರ್ಚ್‌ಗಳನ್ನು ಮತ್ತು ಕೇರಳೀಯರನ್ನು ತಲುಪಲು ಮುಂದಾದಂತಿದೆ. ಆದರೆ ಇದು ಎಷ್ಟು ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕು.


ತ್ರಿವೇದಿ ಆತಂಕ

ತೃಣಮೂಲ ಕಾಂಗ್ರೆಸ್‌ನ ಪ್ರಬಲ ನಾಯಕ ಹಾಗೂ ಪಶ್ಚಿಮ ಬಂಗಾಳದ ಬರಾಕ್‌ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಭಟ್‌ಪಾರಾ ಶಾಸಕ ಅರ್ಜುನ್ ಸಿಂಗ್ ಅವರು ಬಿಜೆಪಿ ಸೇರದಂತೆ ಮಮತಾ ಬ್ಯಾನರ್ಜಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಸಿಂಗ್ ಭಾರೀ ಆಡಂಬರದೊಂದಿಗೆ ದಿಲ್ಲಿಯಲ್ಲಿ ಬಿಜೆಪಿ ಸೇರಿದ್ದಾರೆ ಹಾಗೂ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯೂ ಆಗಿದ್ದಾರೆ. ಬರಾಕ್‌ಪುರ ಹಾಲಿ ಸಂಸದ ಮತ್ತು ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿಯವರಿಗೆ ಈಗ ಆತಂಕ ಶುರುವಾಗಿದೆ. ಪತ್ರಕರ್ತರು ಹಾಗೂ ಟಿವಿ ಚಾನಲ್ ಮುಖ್ಯಸ್ಥರಿಗೆ ಕರೆ ಮಾಡಿ, ಸಿಂಗ್ ಬಿಜೆಪಿ ಸೇರಿರುವುದನ್ನು ಏಕೆ ಅಷ್ಟು ಮಹತ್ವದ ಸುದ್ದಿಯಾಗಿ ಪ್ರಸಾರ ಮಾಡಲಾಗಿದೆ ಹಾಗೂ ಪದೇ ಪದೇ ಅವರನ್ನು ಏಕೆ ಸಂದರ್ಶಿಸಲಾಗುತ್ತಿದೆ ಎಂದು ಕೇಳಿದ್ದಾರೆ. ತ್ರಿವೇದಿಯವರು ಚುನಾವಣೆಯಲ್ಲಿ ಗೆಲ್ಲಲು ಸಿಂಗ್ ಈ ಹಿಂದೆ ಬಹಳಷ್ಟು ಸಹಾಯ ಮಾಡಿದ್ದರು. ಜತೆಗೆ ಬರಾಕ್‌ಪುರ ಪ್ರದೇಶದಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಕಾರ್ಯತಂತ್ರಗಳನ್ನು ಕರಗತ ಮಾಡಿಕೊಂಡ ಮುಖಂಡ ಎನಿಸಿಕೊಂಡಿದ್ದಾರೆ. ಚುನಾವಣೆ ಗೆಲ್ಲಲು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರನ್ನೇ ಅವಲಂಬಿಸಬೇಕಾದ ಅನಿವಾರ್ಯಕ್ಕೆ ಸಿಲುಕಿರುವ ತ್ರಿವೇದಿ, ಆತಂಕಿತರಾಗಿದ್ದಾರೆ. ಆದರೆ ಅವರು ತಳಮಟ್ಟದಲ್ಲಿ ಕೆಲಸ ಮಾಡುವುದು ಹಾಗೂ ಸಿಂಗ್ ವಿರುದ್ಧ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದನ್ನು ಬಿಟ್ಟು, ವರದಿಗಾರರಿಗೆ ಮತ್ತು ಟಿವಿ ವಾಹಿನಿಗಳ ಮುಖ್ಯಸ್ಥರಿಗೆ ಕರೆ ಮಾಡುವುದರಿಂದ ಯಾವ ಪ್ರಯೋಜನವೂ ಆಗದು.

ಚುನಾವಣೆ ಸಂದರ್ಭದ ಭವಿಷ್ಯ ಮತ್ತು ಅಮಿತ್ ಶಾ

ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಚುನಾವಣೆ ಗೆಲ್ಲಿಸುವಲ್ಲಿ ನಿಸ್ಸೀಮರು. ಅವರು ತಳಮಟ್ಟದಲ್ಲಿ ಕಾಣಿಸಿಕೊಳ್ಳುವ ಜತೆಗೆ, ಕೇಂದ್ರ ಕಚೇರಿಯಲ್ಲೂ ಕಾರ್ಯ ನಿರ್ವಹಿಸುತ್ತಾರೆ. ಆದರೆ ದಿಲ್ಲಿಯಲ್ಲಿ ನಿರ್ಮಿಸಿರುವ ಪಕ್ಷದ ಹೊಸ ಕೇಂದ್ರ ಕಚೇರಿಯ ಐದನೇ ಮಹಡಿಯಲ್ಲಿರುವ ಕಚೇರಿಯನ್ನು ಬಿಟ್ಟು, ಕೇಂದ್ರ ಕಚೇರಿಯ ನೆಲಮಹಡಿಯಲ್ಲಿರುವ ಲಾಂಜ್‌ನಲ್ಲೇ ಕುಳಿತುಕೊಳ್ಳುತ್ತಾರೆ. ಉನ್ನತ ಮೂಲಗಳಿಂದ ತಿಳಿದುಬಂದಂತೆ, ಪ್ರಮುಖ ಜ್ಯೋತಿಷಿಯೊಬ್ಬರ ಸಲಹೆಯಂತೆ ಶಾ ಇಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಈ ಜ್ಯೋತಿಷಿ ಐದನೇ ಮಹಡಿಯ ಕಚೇರಿಯನ್ನು ಪರಿಶೀಲಿಸಿ, ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥರಿಗೆ ಅಷ್ಟೊಂದು ಸೂಕ್ತವಾದ ಜಾಗ ಅಲ್ಲ ಎಂಬ ಅಭಿಪ್ರಾಯ ತಿಳಿಸಿದರು ಎನ್ನಲಾಗಿದೆ. ಈ ಸಲಹೆಯನ್ನು ಸ್ವೀಕರಿಸಿದ ಶಾ, ಜ್ಯೋತಿಷಿ ಉತ್ತಮ ಸ್ಥಳ ಎಂದು ಸೂಚಿಸಿರುವ ನೆಲಮಹಡಿಯ ಲಾಂಜ್‌ಗೆ ತಮ್ಮ ಕಚೇರಿಯನ್ನು ಸ್ಥಳಾಂತರಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಮೇ 23ರಂದು ಪ್ರಕಟವಾಗಲಿದ್ದು, ಜ್ಯೋತಿಷಿಯ ಸಲಹೆ ಎಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಆಗಷ್ಟೇ ಖಾತ್ರಿಯಾಗಲಿದೆ. ಆದರೆ ಪಕ್ಷದ ಮುಖಂಡರು ಹೇಳುವಂತೆ, ಇದರ ಪರಿಣಾಮ ಈಗಾಗಲೇ ಕಂಡುಬರುತ್ತಿದ್ದು, ವಿರೋಧ ಪಕ್ಷಗಳ ಪಾಳಯದಿಂದ ಕೇಸರಿ ಪಕ್ಷದತ್ತ ನಾಯಕರ ಪ್ರವಾಹ ಹರಿಯುತ್ತಿದೆ.

ಜಿತಿನ್ ಪ್ರಸಾದ್‌ರ ವಿಸ್ತೃತ ಸಂದೇಶ
ಗಾಂಧಿ ಕುಟುಂಬದ ನಿಷ್ಠ ಹಾಗೂ ರಾಹುಲ್‌ಗಾಂಧಿಯವರ ಮಿತ್ರ ಎನಿಸಿಕೊಂಡಿರುವ ಜಿತಿನ್ ಪ್ರಸಾದ್ ಸಂಪ್ರದಾಯಸ್ಥ ಕಾಂಗ್ರೆಸ್ ಕುಟುಂಬದಿಂದ ಬಂದವರಾದರೂ, ಅವರು ಬಿಜೆಪಿ ಸೇರುವ ಬಗ್ಗೆ ಮಾಧ್ಯಮಗಳಲ್ಲಿ ಪುಕಾರು ಹಬ್ಬಿತ್ತು. ಅವರು ಇದನ್ನು ನಿರಾಕರಿಸಿಯೂ ಇಲ್ಲ; ಇದು ಕಾಂಗ್ರೆಸ್ ಪಕ್ಷದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ ಅವರ ಭಿನ್ನಮತ ಪಕ್ಷಕ್ಕೆ ದೊಡ್ಡ ಹೊಡೆತವಾಗಲಿದೆ. ಜಿತಿನ್ ಬಿಜೆಪಿ ಸೇರುವ ವಿಚಾರವನ್ನು ಇನ್ನೂ ತಳ್ಳಿಹಾಕುವಂತಿಲ್ಲ. ಆದರೆ ಅದು ಕಾಂಗ್ರೆಸ್‌ಗೆ ವಿಸ್ತೃತವಾದ ಸಂದೇಶ ರವಾನಿಸಿದೆ. ಅವರು ಉತ್ತರ ಪ್ರದೇಶದ ಪ್ರಭಾವಿ ಹಾಗೂ ತಾರಾವರ್ಚಸ್ಸಿನ ಬ್ರಾಹ್ಮಣ ಮುಖಂಡರಾಗಿದ್ದು, ಅವರ ಮೂಲಕ ಬ್ರಾಹ್ಮಣ ಸಮುದಾಯ, ಅವರೊಂದಿಗೆ ಇಡೀ ಸಮುದಾಯವೇ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದೆ ಎಂಬ ಪರೋಕ್ಷ ಸಂದೇಶವನ್ನು ರವಾನಿಸುತ್ತಿದೆ. ಇವರು ಪ್ರಿಯಾಂಕಾಗಾಂಧಿ ಮತ್ತು ಇತರ ಹಿಂದುಳಿದ ವರ್ಗದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವ ಇತರ ಮುಖಂಡರ ಜತೆಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಉಳಿದುಕೊಂಡಿರುವುದೇ ಬ್ರಾಹ್ಮಣರು ಮತ್ತು ಇತರ ಕೆಲವರ ಕಾರಣದಿಂದ. ಪ್ರಸಾದ್ ಅವರು ಮೇಲ್ವರ್ಗದ ಕೆಲ ಅನುಯಾಯಿಗಳನ್ನು ಕೂಡಿಕೊಂಡು ಪಕ್ಷ ತೊರೆದರೆ, ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತದೆ. ಇದರಿಂದಾಗಿ ಪ್ರಸಾದ್ ಅವರನ್ನು ಉಳಿಸಿಕೊಳ್ಳುವ ಭಾರಿ ಪ್ರಯತ್ನಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಪಾಳಯದಲ್ಲೇ ಅವರನ್ನು ಉಳಿಸಿಕೊಳ್ಳಲು ಪಕ್ಷ ಯಶಸ್ವಿಯಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.

ಭಾಯಿ- ಬೆಹನ್ ಸಂದೇಶ
 ನಿಮ್ಮೆದುರಿನ ರಾಜಕೀಯದಲ್ಲಿ ಸೂಕ್ಷ್ಮ ವ್ಯತ್ಯಾಸಕ್ಕೂ ಅವಕಾಶವಿಲ್ಲ. ಗಾಂಧಿ ಕುಟುಂಬದ ಒಡಹುಟ್ಟಿದವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾದ ಬಳಿಕ ಗುಜರಾತ್‌ನಲ್ಲಿ ಮಂಗಳವಾರ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಭಾಷಣ ಆರಂಭಿಸುವ ‘ಭಾಯಿಯೊಂ ಔರ್ ಬೆಹನೊ’ ಎಂಬ ಬದಲಾಗಿ ‘ಬೆಹನೊ ಔರ್ ಭಾಯಿಯೊಂ’ ಎಂದು ಭಾಷಣ ಆರಂಭಿಸಿದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡುವವರೆಗೂ ಯಾರೂ ಇದನ್ನು ಗಮನಿಸಲಿಲ್ಲ. ಪ್ರಿಯಾಂಕಾ ಅವರು ದೇವ್ ಟ್ವೀಟನ್ನು ಉಲ್ಲೇಖಿಸಿದ್ದಲ್ಲದೇ, ಮಿಟುಕಿಸುವ ಇಮೋಜಿಯನ್ನೂ ಟ್ವೀಟ್ ಮಾಡಿದ್ದಾರೆ. ಹಾಗೂ ‘‘ನಾನು ತಿಳಿದಂತೆ ಯಾರೂ ಇದನ್ನು ಗಮನಿಸಲಿಲ್ಲ!!’’ ಎಂದು ಟ್ವೀಟಿಸಿದ್ದರು, ಅವರು ಅದೇ ದಿನ ತಮ್ಮ ಪ್ರೊಫೈಲ್ ಚಿತ್ರವನ್ನೂ ಬದಲಾಯಿಸಿದರು. ಸೀರೆ ಧರಿಸಿದ ಚಿತ್ರದ ಬದಲಾಗಿ ಜೀನ್ಸ್, ಅಂಗಿ ಮತ್ತು ಶೂ ಧರಿಸಿದ ಚಿತ್ರ ಹಾಕಿದರು. ಅದೇ ದಿನ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಿಯಾಂಕಾ ಸಹೋದರ ರಾಹುಲ್‌ಗಾಂಧಿ, ಜೀನ್ಸ್, ಟಿ-ಶರ್ಟ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿ, ಸ್ಟೆಲ್ಲಾ ಮೇರಿಸ್ ಕಾಲೇಜಿನ ವಿದ್ಯಾರ್ಥಿಗಳ ಗಮನ ಸೆಳೆದರು. ಇದು ಖಂಡಿತವಾಗಿಯೂ ಭಾರತದ ಮೊದಲ ಬಾರಿಯ ಮತದಾರರ ಮೇಲೆ ಪ್ರಭಾವ ಬೀರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)