ಬೋಯಿಂಗ್ ವೈಫಲ್ಯ, ವಿಮಾನ ನಿಲ್ದಾಣಗಳ ಖಾಸಗೀಕರಣ: ಆತಂಕದಲ್ಲಿ ವಿಮಾನ ಯಾನಿಗಳು
ವಿಮಾನ ನಿಲ್ದಾಣಗಳು ರಾಷ್ಟ್ರದ ಭದ್ರತೆಯ ಮೂಲ ದ್ವಾರ. ಇವುಗಳು ಸರಕಾರದ ನಿಯಂತ್ರಣದಲ್ಲಿದ್ದರೇನೇ ಭದ್ರತೆಯ ಗುರಿ ತಲುಪುದು ಸಾಧ್ಯ. ಅದನ್ನು ಬಿಟ್ಟು ಬೇಕಾಬಿಟ್ಟಿ ಕಾರ್ಪೊರೇಟ್ ಕೈಗಳಲ್ಲಿ ಇವು ಬಂದಿಯಾದರೆ ಅಲ್ಲಿ ನಡೆಯಲಿರುವ ಯಡವಟ್ಟುಗಳನ್ನು ಊಹಿಸಲು ಅಸಾಧ್ಯ. ತೆರಿಗೆ ಮತ್ತಿತರ ಹೆಸರಿನಲ್ಲಿ ಬಡ ಪ್ರವಾಸಿಗರಂತೂ ಬವಣೆಯನ್ನು ಎದುರಿಸಬೇಕಾಗುತ್ತದೆ ಎಂಬುದಂತೂ ಶೇ. 100 ಸತ್ಯ.
ವಿಮಾನಯಾನಿಗಳ ಸುರಕ್ಷೆಯ ಕುರಿತು ವಿಶ್ವದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಬೋಯಿಂಗ್ 737 ಮಾಕ್ಸ್ ಇಥಿಯೋಪಿಯನ್ ವಿಮಾನ ಇತ್ತೀಚೆಗೆ ಅಪಘಾತಕ್ಕೀಡಾಗಿ 157 ಮಂದಿ ಸಾವಿಗೀಡಾದ ಬಳಿಕ ವಿಮಾನ ಪ್ರಯಾಣಿಕರ ಮನಸ್ಸಿನಲ್ಲಿ ಸುಪ್ತವಾಗಿ ಹುದುಗಿಕೊಂಡಿದ್ದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಇದೇ ಕಂಪೆನಿಯ ಲಯನ್ ಏರ್ ಬೋಯಿಂಗ್ 737 ಇಂಡೋನೇಶಿಯನ್ ವಿಮಾನವು ಕಳೆದ ಅಕ್ಟೋಬರ್ನಲ್ಲಿ ಅಪಘಾತಕ್ಕೀಡಾಗಿ 189 ಮಂದಿಯ ಪ್ರಾಣಹಾನಿಗೆ ಕಾರಣವಾಗಿತ್ತು.
ವಿಮಾನ ನಿರ್ಮಾಣ ಸಂಸ್ಥೆಯಲ್ಲಿ ಅಗ್ರಗಣ್ಯ ಎಂದು ಗುರುತಿಸಿಕೊಂಡಿರುವ ಬೋಯಿಂಗ್ ಈ ರೀತಿ ಪದೇ ಪದೇ ಅಪಘಾತಕ್ಕೀಡಾಗುತ್ತಿದೆ ಎಂದಾದರೆ ಇನ್ನಿತರ ವಿಮಾನ ನಿರ್ಮಾಣ ಸಂಸ್ಥೆಗಳ ಪರಿಸ್ಥಿತಿ ಹೇಳಲಿಕ್ಕಿದೆಯೇ?. ಬೋಯಿಂಗ್ ವಿಮಾನಗಳು ಒಂದರ ಹಿಂದೆ ಒಂದು ಎಂಬಂತೆ ನಿರಂತರವಾಗಿ ಅಪಘಾತಕ್ಕೀಡಾಗುವುದನ್ನು ಎಲ್ಲಾ ರಾಷ್ಟ್ರಗಳು ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ 737 ಮಾಕ್ಸ್ ಶ್ರೇಣಿಯ ವಿಮಾನಗಳನ್ನು ಯುಎಇ ಸಂಪೂರ್ಣವಾಗಿ ವಿರೋಧಿಸಿದೆ. ದುಬೈಯ ಜನಪ್ರಿಯ ವಿಮಾಣ ಸಾರಿಗೆ ಸೇವಾ ಸಂಸ್ಥೆಗಳಲ್ಲೊಂದಾದ ಫ್ಲೈ ದುಬೈ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೋಯಿಂಗ್ನ್ನು ಆಕಾಶದಲ್ಲಿ ಹಾರಿಸುತ್ತಿತ್ತು. ಇದೀಗ ಈ ಸಂಸ್ಥೆಯು ಬೋಯಿಂಗ್ನ್ನು ಬಿಟ್ಟು ಇನ್ನಿತರ ವಿಮಾನ ನಿರ್ಮಾಣ ಕಂಪೆನಿಗಳ ಕಡೆಗೆ ಕಣ್ಣಾಡಿಸಿದೆ. ತನ್ಮಧ್ಯೆ ದುಬೈಯಲ್ಲಿ ರನ್ ವೇ ನವೀಕರಣ ಕಾಮಗಾರಿಗಳೂ ಅತ್ಯಂತ ಭರದಿಂದ ಸಾಗುತ್ತಿದೆ. ಯಾತ್ರಿಕರಿಗೆ ತುರ್ತಾಗಿ ಅತೀ ಹೆಚ್ಚಿನ ಸುರಕ್ಷೆಯನ್ನು ಒದಗಿಸಿಕೊಡುವ ಉದ್ದೇಶವನ್ನಿಟ್ಟುಕೊಂಡು ಈ ಕಾಮಗಾರಿ ನಡೆಯುತ್ತಿದೆ. ಎಪ್ರಿಲ್ 16ರಿಂದ ಮೇ 30ರವರೆಗೆ ಇದಕ್ಕಾಗಿ ವಿಮಾನ ನಿಲ್ದಾಣಗಳನ್ನು ಪಾರ್ಶ್ವವಾಗಿ ಮುಚ್ಚಲಾಗುತ್ತದೆ. 32 ಶೇ.ವಿಮಾನವನ್ನು ಇದು ಬಾಧಿಸಲಿದೆ. ಇಲ್ಲಿಗೆ ಭಾರತದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವ ಏರ್ ಇಂಡಿಯಾ ಸೇವೆಗಳಲ್ಲಿ ಹೆಚ್ಚಿನವುಗಳು ಶಾರ್ಜಾ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ.
ಇವೆಲ್ಲದರ ಹಿಂದಿನ ಉದ್ದೇಶ ಯಾತ್ರಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಿಕೊಡುವುದು ಮಾತ್ರವಾಗಿದೆ. ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವಾಗಲೂ ಯಾತ್ರಿಕರಿಗೆ ಅಗತ್ಯವಾಗಿ ಬೇಕಾದ ಯಾವುದೇ ಸೌಲಭ್ಯಗಳಲ್ಲಿಯೂ ಕೊರತೆಯುಂಟಾಗಬಾರದು ಎಂಬ ನಿಟ್ಟಿನಲ್ಲಿ ಅನಿವಾರ್ಯವಾಗಿ ಕಲ್ಪಿಸಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿಕೊಡಲಾಗಿದೆ. ದುಬೈ ದೇಶೀಯ ವಿಮಾನ ನಿಲ್ದಾಣದಿಂದ ದುಬೈ ವರ್ಲ್ಡ್ ಟ್ರೇಡ್ ಸೆಂಟರ್ಗೆ ಉಚಿತ ಬಸ್ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಎಲ್ಲಾ ವಿಮಾಣ ನಿಲ್ದಾಣಗಳು ಸರಕಾರದ ಅಧೀನದಲ್ಲಿದೆ.
ಯಾತ್ರಿಕರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲು ಇಲ್ಲಿನ ಸರಕಾರ ಸದಾ ಸನ್ನದ್ದವಾಗಿದೆ.
ತನ್ಮಧ್ಯೆ ಭಾರತದಲ್ಲಿ ಸರಕಾರದಿಂದ ವಿಮಾನ ನಿಲ್ದಾಣಗಳನ್ನು ಕಾರ್ಪೊರೇಟ್ಗಳಿಗೆ ಮಾರುವ ಪ್ರಕ್ರಿಯೆ ಜಾರಿಯಲ್ಲಿದೆ. ತಿರುವನಂತಪುರಂ, ಮಂಗಳೂರು ವಿಮಾನ ನಿಲ್ದಾಣಗಳು ಸೇರಿದಂತೆ ಒಟ್ಟು ಆರು ವಿಮಾನ ನಿಲ್ದಾಣಗಳು ಖಾಸಗೀಕರಣದತ್ತ ಮುಖಮಾಡಿವೆ. ತಿರುವನಂತಪುರಂ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪಿಗೆ ಮಾರಾಟಮಾಡಲಾಗಿದೆ. ರಾಜ್ಯ ಸರಕಾರಗಳ ವಿರೋಧವನ್ನು ಲೆಕ್ಕಿಸದೆ ಕೇಂದ್ರವು ಈ ನಿರ್ಧಾರಕ್ಕೆ ಬಂದಿದೆ. ತಿರುವನಂತಪುರಂ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ವಹಿಸಿಕೊಳ್ಳಲು ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ಕಾರ್ಪೊರೇಶನ್ ಲಿಮಿಟೆಡ್ ತಯಾರಾಗಿತ್ತು. ರಾಜ್ಯ ಸರಕಾರ ಉಚಿತವಾಗಿ ನೀಡಿರುವ 635 ಎಕರೆ ಭೂಮಿಯಲ್ಲಿ ಈ ವಿಮಾನ ನಿಲ್ದಾಣವಿದೆ. 2005ರಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ 23.57 ಎಕರೆ ಭೂಮಿಯನ್ನು ಒದಗಿಸಿಕೊಡಲಾಗಿತ್ತು. ಈ ವಿಮಾಣ ನಿಲ್ದಾಣ ಖಾಸಗೀಕರಣದ ಸುದ್ದಿ ಕೇಳಿದ್ದೇ ತಡ ಸೌದಿ ಏರ್ಲೈನ್ಸ್, ಫ್ಲೈ ದುಬೈ, ಜೆಟ್ ಎಂಬಿತ್ಯಾದಿಗಳು ಕೋಝಿಕ್ಕೋಡ್ ಹಾಗೂ ಕಣ್ಣೂರಿನತ್ತ ತನ್ನ ರೆಕ್ಕೆಯನ್ನು ತಿರುಗಿಸಿದೆ. ಖಾಸಗೀಕರಣದ ಕಾರಣದಿಂದ ಸೇವಾ ತೆರಿಗೆಯಲ್ಲಿ ಹೆಚ್ಚಳವಾಗುತ್ತದೆ ಎಂಬ ದೃಷ್ಟಿಯಿಂದ ವಿಮಾನ ಕಂಪೆನಿಗಳು ಈ ನಿರ್ಧಾರಕ್ಕೆ ಬಂದಿವೆೆ. ಸದ್ಯ ಭಾರತದ ಎಲ್ಲ ವಿಮಾಣ ನಿಲ್ದಾಣಗಳು ಲಾಭದಿಂದಲೇ ಕಾರ್ಯನಿರ್ವಹಿಸುತ್ತಿವೆ. ಆದರೂ ಯಾತಕ್ಕಾಗಿ ವಿಮಾಣ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಾರ್ಪೊರೇಟ್ ಕಂಪೆನಿಗಳನ್ನು ಸಂತೃಪ್ತಿಗೊಳಿಸುವುದೇ ಇದರ ಹಿಂದಿರುವ ಉದ್ದೇಶ ಎಂಬ ಸತ್ಯ ಅಪಥ್ಯವೇನಲ್ಲ. ವಿಮಾನ ನಿಲ್ದಾಣಗಳು ರಾಷ್ಟ್ರದ ಭದ್ರತೆಯ ಮೂಲ ದ್ವಾರ. ಇವುಗಳು ಸರಕಾರದ ನಿಯಂತ್ರಣದಲ್ಲಿದ್ದರೇನೇ ಭದ್ರತೆಯ ಗುರಿ ತಲುಪುದು ಸಾಧ್ಯ. ಅದನ್ನು ಬಿಟ್ಟು ಬೇಕಾಬಿಟ್ಟಿ ಕಾರ್ಪೊರೇಟ್ ಕೈಗಳಲ್ಲಿ ಇವು ಬಂದಿಯಾದರೆ ಅಲ್ಲಿ ನಡೆಯಲಿರುವ ಯಡವಟ್ಟುಗಳನ್ನು ಊಹಿಸಲು ಅಸಾಧ್ಯ. ತೆರಿಗೆ ಮತ್ತಿತರ ಹೆಸರಿನಲ್ಲಿ ಬಡ ಪ್ರವಾಸಿಗರಂತೂ ಬವಣೆಯನ್ನು ಎದುರಿಸಬೇಕಾಗುತ್ತದೆ ಎಂಬುದಂತೂ 100 ಶೇ.ಸತ್ಯ.