ನಿಮ್ಮ ಹೆಸರನ್ನು ಇನ್ನೊಂದು ಡೈರಿಯಲ್ಲಿ ಬರೆದಿಟ್ಟಿದ್ದೇನೆ ಸಾರ್!
ಮೊನ್ನೆಯಷ್ಟೇ ರಫೇಲ್ ಒಪ್ಪಂದದ ಸೋರಿಕೆ ಸುದ್ದಿಯಾಗಿತ್ತು. ಇದೀಗ ಐಟಿ ಅಧಿಕಾರಿಗಳ ಬಳಿ ಇದ್ದ ಯಡಿಯೂರಪ್ಪರ ‘ಡೈರಿ’ ಸೋರಿಕೆಯಾಗಿರುವುದು ಬಿಜೆಪಿಯ ನಾಯಕರಿಗೆ ಭಾರೀ ಆಘಾತವನ್ನುಂಟು ಮಾಡಿತು. ತಕ್ಷಣ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯ ಸಭೆ ಕರೆಯಲಾಯಿತು. ನರೇಂದ್ರ ಮೋದಿಯವರು ಚೌಕಿದಾರ್ ವೇಷದಲ್ಲೇ ಸಭೆಗೆ ಆಗಮಿಸಿದರು. ಉಳಿದವರೂ ಅದೇ ವೇಷವನ್ನು ಅನುಕರಿಸಿದ್ದರು. ಸಭೆಯನ್ನು ಅಖಿಲ ಭಾರತ ಚೌಕಿದಾರರ ಸಭೆ ಎಂದು ಕರೆಯಲಾಯಿತು. ಕಟಕಟೆಯ ಮೇಲೆ ಯಡಿಯೂರಪ್ಪ ಕೂಡ ಚೌಕಿದಾರರ ವೇಷದಲ್ಲಿ ನಿಂತಿದ್ದರು. ಅವರ ಕೈಯಲ್ಲಿದ್ದ ಕೋಲನ್ನು ಶೋಭಾ ಕರಂದ್ಲಾಜೆ ಹಿಡಿದು ಪಕ್ಕದಲ್ಲೇ ನಿಂತಿದ್ದರು.
‘‘ಅಲ್ರೀ....ಯಾರ್ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟಿದ್ದೇನೆ ಎನ್ನುವುದನ್ನು ಡೈರಿಯಲ್ಲಿ ಅಷ್ಟೊಂದು ವಿವರವಾಗಿ ಬರೆದಿದ್ದೀರಲ್ಲ...ಅದೇನು ನಿಮ್ಮ ಮನೆಯ ಆಸ್ತಿಯ ಉಯಿಲು ಎಂದು ತಿಳಿದುಕೊಂಡಿದ್ದೀರಾ?’’ ಸಭೆ ಆರಂಭವಾಗುವುದಕ್ಕೆ ಮುನ್ನವೇ ನಿತಿನ್ ಗಡ್ಕರಿ ಜೋರು ದನಿಯಲ್ಲಿ ಕೇಳಿದರು. ‘‘ಅಲ್ರೀ....ನನಗೆ ಕೊಟ್ಟದ್ದು ಸ್ವಲ್ಪ. ನೂರಾರು ಕೋಟಿ ಬರೆದಿದ್ದೀರಿ? ಉಳಿದದ್ದನ್ನು ಯಾರಿಗೆ ಕೊಟ್ರೀ? ಅದನ್ನು ಮೊದಲು ತಿಳಿಸಿ?’’ ಜೇಟ್ಲಿ ವರಾತ ತೆಗೆದರು.
‘‘ನನ್ನ ಮಗನ ಮದುವೆಗೆ ಕೊಟ್ಟ ಹಣವನ್ನೂ ಬರೆದು ಬಿಟ್ಟಿದ್ದೀರಿ. ಇದೀಗ ಆ ಹಣ ಎಲ್ಲಿ ಎಂದು ಮಗ ಕೇಳ್ತಾ ಇದ್ದಾನೆ? ನಾನೇನು ಮಾಡ್ಲಿ?’’ ನಿತಿನ್ ಗಡ್ಕರಿ ಸಿಟ್ಟಿನಿಂದ ಅಬ್ಬರಿಸಿದರು.
‘‘ಬರೆಯುವುದೇನೋ ಬರೆದು ಬಿಟ್ರಿ. ಅದನ್ನು ಪ್ರಕಟಿಸಿದ ಆ ಕಾರವಾನ್ ಪತ್ರಿಕೆಗೆ ನೂರು ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಬರೆದು ಬಿಟ್ಟಿದ್ದರೆ ಪತ್ರಕರ್ತರನ್ನು ಜೈಲಿಗೆ ಹಾಕಿ ರುಬ್ಬಬಹುದಿತ್ತು....’’ ಇನ್ನೊಬ್ಬ ಹಿರಿಯ ನಾಯಕರು ಹೇಳಿದರು.
‘‘ಅದಿರಲಿ, ಅವರಿಗೆಲ್ಲ ಅಷ್ಟು ಕೋಟಿ ಕೊಟ್ರಿ....ನಮ್ಮನ್ನು ಯಾಕೆ ಮರೆತು ಬಿಟ್ರಿ....’’ ಇದೀಗ ಮೆಲ್ಲಗೆ ಅಮಿತ್ ಶಾ ಗಡ್ಡ ಸವರಿ ಕೇಳಿದರು.
ಈಗ ಯಡಿಯೂರಪ್ಪ ಬಾಯಿ ತೆರೆದರು ‘‘ಸಾರ್...ಮನೆಯಲ್ಲಿ ಇನ್ನೊಂದು ಡೈರಿ ಇದೆ. ಅದರಲ್ಲಿ ನಿಮಗೆ ಒಂದು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಬರೆದಿದ್ದೇನೆ. ಇನ್ನೊಮ್ಮೆ ಐಟಿ ರೈಡ್ ಆದಾಗ ಅದು ಪೇಪರಲ್ಲಿ ಬರತ್ತೆ, ಚಿಂತೆ ಬೇಡ...’’ ಯಡಿಯೂರಪ್ಪ ಸಮಾಧಾನಿಸಿದರು.
‘‘ಏನ್ರೀ...ರಾಜಕೀಯ ಮಾಡೋದು ಬಿಟ್ಟು ಡೈರಿ ದಂಧೆ ಶುರು ಮಾಡಿದ್ದೀರಲ್ಲ? ಅದಿರ್ಲಿ....ನನ್ನ ಒಂದು ಸಾವಿರ ಕೋಟಿ ಬರ್ಲೇ ಇಲ್ಲ....’’ ಅಮಿತ್ ಶಾ ಚೌಕಾಶಿಗಿಳಿದರು.
‘‘ಮತ್ತೆ ನನ್ನನ್ನು ಮುಖ್ಯಮಂತ್ರಿ ಮಾಡಿದ್ರೆ ಬರತ್ತೆ ಸಾರ್...’’ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
‘‘ನಿಮ್ಮನ್ನು ಮುಖ್ಯಮಂತ್ರಿ ಮಾಡೋದಕ್ಕೆ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತೆ .....’’ ಅಮಿತ್ ಶಾ ಹೇಳಿದರು.
‘‘ಭಾರೀ ಏನೂ ಇಲ್ಲ ಸಾರ್...ಒಂದು ಸಾವಿರ ಕೋಟಿ ರೂಪಾಯಿ....’’ ಯಡಿಯೂರಪ್ಪ ಸಮಸ್ಯೆಯನ್ನು ತೆಳು ಮಾಡಿದರು.
‘‘ಇಲ್ಲಾರೀ ಇದು ಸಾಧ್ಯಾನೆ ಇಲ್ಲ...ಕಾಂಗ್ರೆಸ್‌ನೋರು ಸಿದ್ಧರಿದ್ದಾರೆ. ಆದರೆ ಬಿಜೆಪಿಯೋರು ಸಿದ್ಧರಿಲ್ಲ....’’ಅಮಿತ್ ಶಾ ತಲೆ ಸವರಿಕೊಂಡರು.
‘‘ಆದ್ರೆ ಡೈರಿಯಲ್ಲಿ ಈಗಾಗಲೇ ನಿಮಗೆ ಒಂದು ಸಾವಿರ ಕೋಟಿ ರೂಪಾಯಿ ಕೊಟ್ಟಿರೋದು ಬರೆದು ಆಗಿದೆ ಸಾರ್....ಡೈರಿಯನ್ನು ಭದ್ರವಾಗಿಟ್ಟುಕೊಳ್ಳಲು ಡಿಕೆಶಿ ಅವರ ಕೈಗೆ ಒಪ್ಪಿಸಿದ್ದೇನೆ....’’ ಯಡಿಯೂರಪ್ಪ ಹೇಳಿದರು.
‘‘ಏನ್ರೀ...ನಮ್ಮ ಕೈಗೆ ಕೊಡೋದು ಬಿಟ್ಟು.... ಕಾಂಗ್ರೆಸ್‌ನೋರ ಕೈಗೆ ಕೊಟ್ಟಿದ್ದೀರಾ....?’’ ಶಾ ಕೆಂಡವಾಗಿ ಕೇಳಿದರು.
‘‘ಅದೇ ಸಾರ್...ನಮ್ಮ ಚೌಕಿದಾರ್ ತುಂಬಾ ವೀಕು ಅಂತಾ ಜನ ಆಡ್ಕೋತಿದ್ದಾರೆ. ಅದಕ್ಕೆ ಭದ್ರವಾಗಿರಲಿ ಅಂತಾ....’’ ಯಡಿಯೂರಪ್ಪ ತಲೆತಗ್ಗಿಸಿ ಹೇಳಿದರು.
‘‘ಅದಿರಲಿ...ಯಡಿಯೂರಪ್ಪ ಮೊದಲ ಡೈರಿ ಸೋರಿಕೆ ಆಗಿರುವುದು ಹೇಗೆ....? ಪೇಪರ್‌ನೋರಿಗೆ ಅದರ ಜೆರಾಕ್ಸ್ ಕಾಪಿ ಸಿಕ್ಕಿರೋದು ಹೇಗೆ?’’ ಗಡ್ಕರಿ ಜೋರು ದನಿಯಲ್ಲಿ ಕೇಳಿದರು.
‘‘ಜೆರಾಕ್ಸ್ ಕಾಪಿ ಪ್ರಿಂಟ್ ತುಂಬಾ ಚೆನ್ನಾಗಿ ಬಂದಿದೆ. ಅದನ್ನು ನೋಡಿದ್ರೆ ಮೋದಿ ಕಂಪೆನಿ ಜೆರಾಕ್ಸ್ ಮಶಿನ್‌ನಲ್ಲೇ ಮಾಡಿರಬೇಕು...’’ ಜೇಟ್ಲಿ ಗೊಣಗಿದರು.
‘‘ಸುಮ್ಮೆ ಆರೋಪ ಮಾಡಬೇಡಿ....ಐಟಿ ಕಚೇರಿಯ ಸಿಸಿ ಟಿವಿಯಲ್ಲಿ ಅದನ್ನು ಕದ್ದಿರೋದು ಯಾರು ಎನ್ನುವುದು ದಾಖಲಾಗಿದೆ... ಆ ಸಿಸಿಟಿವಿ ದಾಖಲೆ ಇದೀಗ ಸೋರಿಕೆಯಾಗಿದೆ....’’ ರಾಜನಾಥ್ ಸಿಂಗ್ ಸ್ಫೋಟಿಸಿದರು.
ಇದೀಗ ಮೋದಿಯವರು ಎದ್ದು ನಿಂತರು ‘‘ದೇಖಿಯೇ...ದೇಶದ ಭದ್ರತೆಯ ದೃಷ್ಟಿಯಿಂದ ಆ ಸಿಸಿಟಿವಿ ದಾಖಲೆಗಳನ್ನು ಬಹಿರಂಗ ಪಡಿಸುವುದು ತಪ್ಪು....’’
‘‘ಇಲ್ಲ ಬಹಿರಂಗವಾಗಲೇ ಬೇಕು....’’ ಗಡ್ಕರಿ ಅಬ್ಬರಿಸಿದರು.
ಕೊನೆಗೂ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಲು ನಿರ್ಧಾರಕ್ಕೆ ಬರಲಾಯಿತು. ನೋಡಿದರೆ ‘‘ಐಟಿ ಕಚೇರಿಯ ಚೌಕಿದಾರ ನಕಲಿ ಕೀಲಿ ಕೈ ಮೂಲಕ ದಾಖಲೆಗಳನ್ನು ಅಪಹರಿಸುತ್ತಿದ್ದಾನೆ....!’’
ನಿತಿನ್ ಗಡ್ಕರಿ ತಲೆ ಎತ್ತಿದರೆ ಮೋದಿಯವರು ನಾಪತ್ತೆ! ‘‘ಚೌಕಿದಾರ್ ಚೋರ್ ಹೈ....’’ ನಿತಿನ್ ಗಡ್ಕರಿ ಇದೀಗ ಜೋರಾಗಿ ಕೂಗುತ್ತಿದ್ದಂತೆಯೇ ಸಭೆ ಮುಕ್ತಾಯವಾಯಿತು.