varthabharthi


ತುಂಬಿ ತಂದ ಗಂಧ

ಎಲ್. ವಿ. ಶಾರದಾ-ಕಾತ್ಯಾಯನಿ ಮತ್ತು ಪಣಿಯಮ್ಮ

ವಾರ್ತಾ ಭಾರತಿ : 24 Mar, 2019

ಚಲನಚಿತ್ರ ಮೀಮಾಂಸೆ ಸಮಕಾಲೀನ ಚಲನಚಿತ್ರರಂಗದ ಆಗುಹೋಗುಗಳು, ಚಾರಿತ್ರಿಕ ಮಹತ್ವದ ಸಂಗತಿಗಳು, ಸ್ವಾರಸ್ಯಕರ ಪ್ರಕರಣಗಳು ಇತ್ಯಾದಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕುರಿತು ಈ ಅಂಕಣದಲ್ಲಿ ಕೆ. ಪುಟ್ಟಸ್ವಾಮಿ ಅವರು ಬರೆಯಲಿದ್ದಾರೆ ಅನೇಕ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ ತಮ್ಮ ಅಪೂರ್ವ ಒಳನೋಟಗಳೊಡನೆ ಬರೆಯುವ ಪುಟ್ಟಸ್ವಾಮಿ ಅವರ ಲೇಖನಗಳು ಓದುಗರನ್ನು ಮುದಗೊಳಿಸುತ್ತವೆ ಎಂಬ ವಿಶ್ವಾಸ ನಮ್ಮದು.
-ಸಂಪಾದಕ

‘ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟಿ ನೋಡು’ ಎಂದು ಹೇಳುತ್ತದೆ ಕನ್ನಡ ಜನಪದದ ವಿವೇಕ. ನಟಿ ಎಲ್.ವಿ. ಶಾರದಾ ಅವರು ಅಕ್ಷರಶಃ ಈ ನುಡಿಯನ್ನು ತಮ್ಮ ವೃತ್ತಿ ಜೀವನದಲ್ಲಿ ಪಾಲಿಸಿದವರು. ನಟಿಯಾಗಿ 1972ರಲ್ಲಿ ಅವರ ವೃತ್ತಿ ಬದುಕು ಅಮೋಘ ಯಶಸ್ಸಿನಿಂದ ಆರಂಭವಾದರೂ, ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ ಹತ್ತನ್ನು ಸಹ ತಲುಪಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ. ಚಿತ್ರಗಳ ಸಂಖ್ಯೆ ಮಿತಿಗೊಳಪಟ್ಟರೂ, ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮೇಲೆ ಗಾಢ ಪರಿಣಾಮ ಬೀರಿದರು. ಚಲನಚಿತ್ರ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನ ಪಡೆದರು.
1970ರ ದಶಕದಲ್ಲಿ ‘ಸಂಸ್ಕಾರ’ ಚಿತ್ರದ ಯಶಸ್ಸು ಮತ್ತು ಪ್ರಭಾವದಿಂದ ನಿರ್ಮಾಣವಾದ ‘ಭಿನ್ನ ಮಾದರಿ’ಯ ಚಿತ್ರಗಳು ಪಂಥವೊಂದನ್ನು ಹುಟ್ಟು ಹಾಕಿದ್ದಂತೂ ನಿಜ. ಈ ಪಂಥದ ಗುಣಲಕ್ಷಣಗಳನ್ನು ಹೀಗೆ ಎಂದು ಪಟ್ಟಿ ಮಾಡಲು ಸಾಧ್ಯವಾಗದಿದ್ದರೂ, ಭಿನ್ನ ಭಿನ್ನ ಕ್ಷೇತ್ರದ ಜನರು ಮಡಿವಂತಿಕೆಯ ತೆರೆಸರಿಸಿ ಚಿತ್ರ ನಿರ್ಮಾಣ, ನಿರ್ದೇಶನ ಮತ್ತು ಚಲನಚಿತ್ರರಂಗದ ಇತರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಹೊಸಬರಿಗೆ ಪ್ರೇರಣೆ ನೀಡಿತು. ಹಾಗೆ ಬಂದ ಅನೇಕರು ಈ ಪಂಥವನ್ನು ಕೆಲಕಾಲ ಮುನ್ನಡೆಸಲು ನೆರವಾದರು. ‘ಸಂಸ್ಕಾರ’ದ ನಂತರ ರಂಗತಜ್ಞ ಬಿ.ವಿ. ಕಾರಂತರ ಜೊತೆಯಲ್ಲಿ ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದ ‘ವಂಕ್ಷವೃಕ್ಷ’ (1972) ಹಲವು ಕಾರಣಗಳಿಂದ ಮಹತ್ವದ ಚಿತ್ರವೆನಿಸಿತು. ಅಜ್ಞಾತವಾಸದಲ್ಲಿದ್ದ ಜಿ.ವಿ. ಅಯ್ಯರ್ ‘ವಂಕ್ಷವೃಕ್ಷ’ ಚಿತ್ರ ನಿರ್ಮಾಣದ ಮೂಲಕ ಮರಳಿ ಚಿತ್ರರಂಗಕ್ಕೆ ಬಂದರು. ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಅದೇ ಹೆಸರಿನ ಬೃಹತ್ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ನಂಜನಗೂಡು, ಮೈಸೂರು ಪರಿಸರದಲ್ಲಿ ವಾಸ್ತವ ಶೈಲಿಯಲ್ಲಿ ಚಿತ್ರೀಕರಣಗೊಂಡು ಗಮನ ಸೆಳೆಯಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನಗಳಲ್ಲಿ 25 ವಾರ (ಪ್ರದರ್ಶನಗೊಂಡು ವಾಣಿಜ್ಯ ಯಶಸ್ಸನ್ನೂ ಕಂಡಿತು. ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿಯ ಜೊತೆಗೆ ಕಾರ್ನಾಡ್-ಕಾರಂತ ಜೋಡಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯೂ ಲಭ್ಯವಾಯ್ತು. ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿಯೂ ಅಗ್ರಸ್ಥಾನ ಪಡೆಯಿತು. (ಪ್ರಥಮ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ, ಅತ್ಯುತ್ತಮ ನಟ, ಸಂಭಾಷಣೆ)
‘ವಂಕ್ಷವೃಕ್ಷ’ ಬಿಡುಗಡೆಯಾದಾಗ ಮಾಧ್ಯಮಗಳು ಸಂಭ್ರಮದಿಂದ ಚಿತ್ರವನ್ನು ಸ್ವಾಗತಿಸಿದವು. ಚಿತ್ರದ ನಿರೂಪಣೆ, ಛಾಯಾಗ್ರಹಣ, ಸಂಗೀತದಿಂದ ಹಿಡಿದು ಕಪ್ಪು-ಬಿಳುಪಿನಲ್ಲಿ ವಿನ್ಯಾಸಗೊಳಿಸಿದ್ದ ಪೋಸ್ಟರ್‌ಗಳವರೆಗೆ ವಿಶ್ಲೇಷಣೆ ನಡೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ಶ್ರೀನಿವಾಸ ಶ್ರೋತ್ರಿಯವರ ಪಾತ್ರವಹಿಸಿದ್ದ ವೆಂಕಟರಾವ್ ತಲಗೇರಿ ಮತ್ತು ನಾಯಕಿ ಕಾತ್ಯಾಯನಿಯ ಪಾತ್ರವನ್ನು ವಹಿಸಿದ್ದ ಎಲ್.ವಿ. ಶಾರದಾ ಅವರ ಅಭಿನಯದ ಬಗ್ಗೆ ಅಭೂತ ಪೂರ್ವ ಶ್ಲಾಘನೆ ದೊರೆಯಿತು. ಭೈರಪ್ಪನವರ ಕಲ್ಪನೆಯ ಕಾತ್ಯಾಯನಿ ಮತ್ತು ಶ್ರೋತ್ರಿಗಳು ತೆರೆಯ ಮೇಲೆ ಜೀವಂತವಾದವು ಎನ್ನುವಷ್ಟರ ಮಟ್ಟಿಗೆ ಅವರ ಅಭಿನಯವನ್ನು ಕೊಂಡಾಡಿದರು.


ಹಾಗೆ ನೋಡಿದರೆ ಶ್ರೋತ್ರಿಯವರ ಪಾತ್ರ ನಿರ್ವಹಿಸಿದ ವೆಂಕಟರಾವ್ ತಲಗೇರಿ ಅವರಿಗೆ ಸುದೀರ್ಘ ರಂಗಾನುಭವವಾದರೂ ಇತ್ತು. ಆದರೆ ಕಾತ್ಯಾಯನಿ ಪಾತ್ರಕ್ಕೆ ಜೀವತುಂಬಿದ ಎಲ್.ವಿ. ಶಾರದಾ ಅವರಿಗೆ ನಟನೆಯೇ ಹೊಸದು. ಜೊತೆಗೆ ಅವರ ಶಿಕ್ಷಣ, ಜೀವನ ಶೈಲಿ ಮತ್ತು ಬೆಳೆದುಬಂದ ಹಿನ್ನೆಲೆ ಒಂದು ಸಾಮಾನ್ಯ ಕನ್ನಡ ಕುಟುಂಬದಲ್ಲಿ ಬೆಳೆದ ಹೆಣ್ಣು ಮಗಳೊಬ್ಬಳಿಗಿಂತ ಭಿನ್ನವಾಗಿತ್ತು. ಆರ್ಥಿಕ ವಹಿವಾಟು, ರಾಜಕೀಯ ಪ್ರಭಾವದ ಹಿನ್ನೆಲೆಯ ಶ್ರೀಮಂತ ಕುಟುಂಬದ, ಇಂಗ್ಲಿಷ್ ಶಿಕ್ಷಣ ಪಡೆದ ಶಾರದಾ ಅವರು ಕಾತ್ಯಾಯನಿಯಂಥ ಪಾತ್ರವನ್ನು ಪರಕಾಯ ಪ್ರವೇಶ ಮಾಡಿದ ಸಂಗತಿಯೇ ವಿಸ್ಮಯಕಾರಿಯಾಗಿತ್ತು. ಅಲ್ಲದೆ ಆವರೆವಿಗೂ ಕನ್ನಡ ಚಿತ್ರರಂಗದಲ್ಲಿ ಎಂ.ಆರ್. ವಿಠಲ್, ಎನ್. ಲಕ್ಷ್ಮೀನಾರಾಯಣ ಮತ್ತು ಪುಟ್ಟಣ್ಣ ಕಣಗಾಲ್ ಮುಂತಾದವರು ಕಡೆದ ಹೆಣ್ಣಿನ ಪಾತ್ರಗಳಿಗಿಂತ ವಿಭಿನ್ನವಾದ ಮಹಿಳಾ ಪಾತ್ರವೊಂದನ್ನು ಕಾರ್ನಾಡ್-ಕಾರಂತ ಜೋಡಿ ಭೈರಪ್ಪನವರು ಸೃಷ್ಟಿಸಿದ ಪಾತ್ರವನ್ನು ಆಧರಿಸಿ ರೂಪಿಸಿತ್ತು. ಹಾಗಾಗಿ ಆವರೆಗೆ ಗಮನ ಸೆಳೆದಿದ್ದ ಕನ್ನಡ ಚಿತ್ರರಂಗದ ಮಹತ್ವದ ಪಾತ್ರಗಳಾದ ಇಂದಿರೆ (ಬೆಳ್ಳಿಮೋಡ), ಮಂಗಳಾ (ಸರ್ವಮಂಗಳ), ಕಾವೇರಿ (ಶರಪಂಜರ), ರಾಧಾ (ಉಯ್ಯಿಲೆ), ಸರೋಜಿನಿ (ಮುಕ್ತಿ), ಚಂದ್ರ (ಗೆಜ್ಜೆಪೂಜೆ) ಮುಂತಾದವರಿಗಿಂತ ‘ವಂಕ್ಷವೃಕ್ಷ’ದ ಕಾತ್ಯಾಯನಿಯದು ತೀರಾ ವಿಭಿನ್ನವಾದ ಪಾತ್ರ, ಅನೇಕ ಮಾನಸಿಕ ಪಾತಳಿಗಳ, ಹಲವಾರು ಹೊಯ್ದಾಟಗಳ ಸಂಕೀರ್ಣ ಪಾತ್ರ. ಎಳೆಯ ವಿಧವೆಯ ಏಕಾಂಗಿತನ, ಓದುವ ಹಂಬಲ, ಮರುಮದುವೆ, ಅದಕ್ಕಾಗಿ ಮಗನ ಮೇಲಿನ ಹಕ್ಕನ್ನು ಬಿಟ್ಟುಕೊಡುವ ಅನಿವಾರ್ಯ, ಸಂಪ್ರದಾಯಗಳ ತಾಕಲಾಟಕ್ಕೆ ಸಿಕ್ಕಿ, ನಲುಗಿ, ಸರಣಿ ಗರ್ಭಪಾತಗಳಿಗೆ ಒಳಗಾಗುವ, ಅತ್ತ ಮತ್ತೊಮ್ಮೆ ತಾಯಿಯೂ ಆಗದೆ, ಇತ್ತ ಹೆತ್ತ ಮಗನ ಪ್ರೀತಿಯನ್ನೂ ಗಳಿಸಿಕೊಳ್ಳಲಾಗದೆ ದುರಂತ ತಲುಪುವ ಕಾತ್ಯಾಯನಿ ಪಾತ್ರದಲ್ಲಿ ಶಾರದಾ ಅವರದು ಊಹಿಸಲು ಸಾಧ್ಯವಾಗದಷ್ಟು ಪ್ರೌಢ ಅಭಿನಯವಾಗಿತ್ತು.
ನಟಿಸಿದ ಮೊದಲ ಚಿತ್ರದಲ್ಲಿಯೇ ದೊರೆತ ಇಂಥದೊಂದು ಸವಾಲಿನ ಪಾತ್ರಕ್ಕೆ ಜೀವ ತುಂಬಿದ ಶಾರದಾ ಅವರಿಗೆ ಸಿಕ್ಕ ಕಲಾತ್ಮಕ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಆ ಪ್ರಮಾಣದಲ್ಲಿ ಘಟಿಸಿದ್ದು ಅದೇ ಮೊದಲು. ಇಂಥ ಸವಾಲಿನ ಪಾತ್ರಗಳು ಕಲ್ಪನಾ (ಬೆಳ್ಳಿಮೋಡ) ಮತ್ತು ಉಮಾಶ್ರೀ (ಗುಲಾಬಿ ಟಾಕೀಸು) ಅಂಥ ನಟಿಯರಿಗೆ ದೊರೆತದ್ದು ದಶಕಗಳ ಕಾಲದ ಅನುಭವದ ನಂತರ.


ಕಾತ್ಯಾಯನಿ ಪಾತ್ರವು ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬರಲು ನಿರ್ದೇಶಕರ ಶ್ರಮದಷ್ಟೇ ನಟಿ ಶಾರದಾ ಅವರಿಗೆ ಜನ್ಮಜಾತವಾಗಿ ಬಂದಿದ್ದ ಬಳವಳಿಗಳನ್ನು ಮರೆಯುವಂತಿಲ್ಲ. ಯಾವುದೇ ಕಲಾವಿದನ ಮುಖವು ಹಲವು ಭಾವನೆಗಳನ್ನು ವ್ಯಕ್ತಪಡಿಸುವಷ್ಟು ಭಾವಪೂರ್ಣವಾಗಿದ್ದರೆ, ಅದರಲ್ಲೂ ಸಾವಿರ ನವಿರುಭಾವಗಳನ್ನು ಹೊಮ್ಮಿಸುವ ಕಣ್ಣುಗಳಿದ್ದರೆ ಕಲಾವಿದ ತನ್ನ ಸವಾಲನ್ನು ಗೆದ್ದಂತೆಯೇ! ಕನ್ನಡ ಸಂಸ್ಕೃತಿಯ ಮಾದರಿ ಹೆಣ್ಣಿನಂತಿದ್ದ ಶಾರದಾ ಅವರ ಭಾವಪೂರ್ಣ ಕಣ್ಣುಗಳು ಪಾತ್ರವನ್ನು ಸರಿದೂಗಿಸುವಲ್ಲಿ ಯಶಸ್ವಿಯಾದವು. ಅವರ ದನಿಯಲ್ಲಿನ ಹಿಂಜರಿಕೆ, ನೂರು ಭಾವಗಳನ್ನು ಹೊರಹೊಮ್ಮಿಸಬಲ್ಲ ಅವರ ಭಾವಪೂರ್ಣ ಕಣ್ಣುಗಳು ಕಾತ್ಯಾಯನಿಯ ನೋವು, ಕರುಳಿರಿಯುವ ಏಕಾಂಗಿತನ, ಕುತೂಹಲ, ಹಂಬಲ, ಅಸಹಾಯಕತೆ, ತಾಕಲಾಟ ಮತ್ತು ಗಾಢ ದುರಂತವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾದವು. ಆ ಮೂಲಕ ಅವರು ಅಭಿನಯಕ್ಕೆ ಒಂದು ಹೊಸಬಗೆಯ ವ್ಯಾಖ್ಯಾನ ನೀಡಿದರೆನ್ನಬಹುದು.
ಇಂಥ ಅಪರೂಪದ ಯಶಸ್ಸನ್ನು ಕಂಡರೂ ಶಾರದಾ ಅವರಿಗೆ ಅವಕಾಶಗಳು ಅರಸಿ ಬರಲಿಲ್ಲ. ಈ ರೀತಿಯ ಸಹಜಾಭಿನಯದ ಕಲಾವಿದರು ವಾಣಿಜ್ಯ ಚಿತ್ರಗಳಲ್ಲಿ ಯಶಸ್ಸು ಕಾಣುವುದಿಲ್ಲ ಎಂಬ ಮೂಢನಂಬಿಕೆ ಒಂದು ಕಡೆಯಾದರೆ ಮತ್ತೊಂದೆಡೆ ಸುಶಿಕ್ಷಿತರು ಮತ್ತು ಇಂಗ್ಲಿಷ್ ಬಲ್ಲವರನ್ನು ಅಪ್ರೋಚ್ ಮಾಡಲು ನಿರ್ದೇಶಕರು ಹಿಂಜರಿಯುತ್ತಿದ್ದ್ದುದ್ದು. ಸ್ವತಃ ಶಾರದಾ ಅವರೇ ಅಭಿನಯ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಬಗ್ಗೆ ಅವರ ವರ್ತನೆಯಲ್ಲಿ ಸಂಶಯಗಳನ್ನು ಮೂಡಿಸುತ್ತಿದ್ದವು ಎಂದು ಹಿರಿಯ ನಿರ್ದೇಶಕರೊಬ್ಬರು ಹೇಳುತ್ತಿದ್ದರು. ಎರಡು ಕನಸು ಚಿತ್ರದಲ್ಲಿ ಕಲ್ಪನಾ ನಿರ್ವಹಿಸಿದ ಗೌರಿ ಪಾತ್ರಕ್ಕೆ ಮೊದಲು ಶಾರದಾ ಅವರನ್ನೇ ಸಂಪರ್ಕಿಸಿದಾಗ ವಾಣಿಜ್ಯ ಚಿತ್ರಗಳಲ್ಲಿ ನಟಿಸುವುದಿಲ್ಲವೆಂದು ಅವಕಾಶ ತಿರಸ್ಕರಿಸಿದರೆಂದು ಸುದ್ದಿ ಆ ಕಾಲದಲ್ಲಿ ಹರಿದಾಡುತ್ತಿತ್ತು. ಹೀಗಾಗಿ ಆ ಕಾಲದಲ್ಲಿ ನಿರ್ಮಾಣ ಸಂಖ್ಯೆಯೇ ಮಿತಿಯಲ್ಲಿದ್ದ ಕಾರಣದಿಂದಲೂ ಶಾರದಾ ಅವರು ಹೆಚ್ಚು ತೊಡಗಿಸಿಕೊಳ್ಳಲಿಲ್ಲವೆಂದು ಕಾಣುತ್ತದೆ.
‘ವಂಕ್ಷವೃಕ್ಷ’ ಬಿಡುಗಡೆಯಾದ ಎರಡು ವರ್ಷಗಳ ತರುವಾಯ ಶಾರದಾ ಅವರು ಸಿದ್ದಲಿಂಗಯ್ಯ ಅವರ ‘ಬೂತಯ್ಯನ ಮಗ ಅಯ್ಯು’ (1974) ಚಿತ್ರದಲ್ಲಿ ಅಯ್ಯುವಿನ ಹೆಂಡತಿ ಗಿರಿಜೆಯ ಪಾತ್ರದಲ್ಲಿ ಕಾಣಿಸಿಕೊಂಡರು. ಬೂತಯ್ಯನ ಮನೆಯ ಅಸಹಾಯಕ ಸೊಸೆಯು ಅಂಚಿನ ಪಾತ್ರದಂತೆ ಕಾಣಿಸಿಕೊಂಡರೂ ಅಯ್ಯುವಿನ ಮನಪರಿವರ್ತನೆಯಲ್ಲಿ ಮತ್ತು ಕಥನವು ಹೊರಳುದಾರಿ ಹಿಡಿಯಲು ಅದೇ ಪಾತ್ರ ನಿರ್ಣಾಯಕವಾಗುತ್ತದೆ. ಊರಿನ ಎರಡು ದೈತ್ಯ ಶಕ್ತಿಗಳಾದ ಅಯ್ಯು-ಗುಳ್ಳ ಎದುರಾಗಿ ವಿನಾಶದ ಹಾದಿಯನ್ನು ಹಿಡಿಯುವುದನ್ನು ಕಂಡಕೂಡಲೇ ಗಟ್ಟಿತನವನ್ನು ತಾಳಿ ತನ್ನ ಗಂಡನನ್ನು ಎದುರಿಸಿ, ಅವನ ಮನಸ್ಸನ್ನು ಬದಲಾಯಿಸುವ ದೃಶ್ಯದಲ್ಲಿ ಶಾರದಾ ನೀಡಿರುವ ತಣ್ಣನೆಯ ಅಭಿನಯ ಮನಮುಟ್ಟುತ್ತದೆ. ಆನಂತರ ಅವರು ಕಂಕಣ (1975), ಹೇಮಾವತಿ (1977) ಚಿತ್ರಗಳಲ್ಲಿ ಪುಟ್ಟ ಪಾತ್ರವಹಿಸಿದರೂ ಗಮನಸೆಳೆಯಲಿಲ್ಲ. ಕನ್ನಡದ ಮೊದಲ ಕಪ್ಪು-ಬಿಳುಪು ಸಿನೆಮಾ ಸ್ಕೋಪ್ ಚಿತ್ರವೆಂಬ ಪ್ರಚಾರದೊಡನೆ ನಿರ್ಮಾಣವಾದ ‘ಒಂದು ಪ್ರೇಮದ ಕತೆ’ (1977)ಯಲ್ಲಿ ನಾಯಕಿಯ ಪಾತ್ರವಹಿಸಿದರೂ, ಅವರ ಪ್ರತಿಭೆಗೆ ಸವಾಲಾಗುವ ಪಾತ್ರವಾಗಿರಲಿಲ್ಲ. ಇದೇ ಅಭಿಪ್ರಾಯವು ಎಂ.ಆರ್.ಕೆ. ಮೂರ್ತಿ ಅವರ ‘ಮೈತ್ರಿ’ (1978) ಚಿತ್ರಕ್ಕೂ ಅನ್ವಯಿಸುತ್ತದೆ. ಇದ್ದುದರಲ್ಲಿ ವಾತ್ಸಲ್ಯ ಪಥ ಚಿತ್ರದಲ್ಲಿನ ಪಾತ್ರವೇ ಅವರ ಪ್ರತಿಭೆಯನ್ನು ದುಡಿಸಿಕೊಂಡ ಚಿತ್ರ. ಈ ಚಿತ್ರದ ಅಭಿನಯಕ್ಕಾಗಿ 1982-83ನೇ ಸಾಲಿನಲ್ಲಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರು.


ಶಾರದಾ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದ ಮತ್ತೊಂದು ಚಿತ್ರವೆಂದರೆ ‘ಫಣಿಯಮ್ಮ’ (1982). ಎಂ.ಕೆ. ಇಂದಿರಾ ಅವರ ಕಾದಂಬರಿಯನ್ನು ಆಧರಿಸಿದ, ಪ್ರೇಮಾ ಕಾರಂತ ಅವರ ಪ್ರೌಢ ನಿರ್ದೇಶನದ ಈ ಚಿತ್ರದಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಬಾಲವಿಧವೆಯೊಬ್ಬಳು ಮೂರು ತಲೆಮಾರನ್ನು ಕಂಡು, ತನ್ನ ಅಸಹಾಯಕತೆ, ನೋವುಗಳನ್ನು ನುಂಗಿ ಬದಲಾಗುತ್ತಿರುವ ಮೌಲ್ಯಗಳೊಡನೆ ತಾನೂ ಬದಲಾಗುತ್ತಾ ಸಾಗುವ ಕಥನವಿದೆ. ಫಣಿಯಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನುವಷ್ಟರ ಮಟ್ಟಿಗಿನ ಅವರ ಅಭಿನಯ ಮನ ಮುಟ್ಟುವಂತಿತ್ತು. ಭಾರತದ ಸಾಂಸ್ಕೃತಿಕ ಸಂದರ್ಭದಲ್ಲಿ ಮಹತ್ವಪೂರ್ಣ ಸ್ಥಾನವಿರುವ ಈ ಚಿತ್ರವು ಮೊದಲ ಬಾರಿಗೆ ಜರ್ಮನಿಯ ಮ್ಯಾನ್‌ಹೀಮ್ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಬಂಗಾರದ ಪದಕ, ನಗದು ಬಹುಮಾನಗಳ ಜೊತೆಗೆ ಮೂರು ಪ್ರಶಸ್ತಿಗಳನ್ನು ಪಡೆಯಿತು. (ಫಿಲಂ ಡ್ಯುಕಾಕ್ ಪ್ರಶಸ್ತಿ; ಕೆಥೊಲಿಕ್ ಜ್ಯುರಿ ಪ್ರಶಸ್ತಿ; ಅಂತರ್‌ರಾಷ್ಟ್ರೀಯ ವಿಮರ್ಶಕ ಪ್ರಶಸ್ತಿ) ಮುಂದೆ ಅವರು ‘ನಕ್ಕಳಾ ರಾಜಕುಮಾರಿ’ ಮತ್ತು ‘ಮಧ್ವಾಚಾರ್ಯ’ ಚಿತ್ರದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆ ನಂತರ ಅವರು ಸಾಕ್ಷ್ಯಚಿತ್ರಗಳ ನಿರ್ಮಾಣದ ಮೂಲಕ ಸಿನೆಮಾ ನಂಟು ಉಳಿಸಿಕೊಂಡರಷ್ಟೆ. ಕ್ಯಾನ್ಸರ್‌ನಿಂದ ಬಳಲಿದ ಅವರು 21ನೇ ಮಾರ್ಚ್ 2019ರಂದು ಕೊನೆಯುಸಿರಳೆದರು.
ತಮ್ಮ ವಿಶಿಷ್ಟವಾದ ನಟನೆಯಿಂದ ಅಭಿನಯದಲ್ಲಿ ಹೊಸ ಶೈಲಿ ರೂಪಿಸಿದ ಶಾರದಾ ಅವರು ಕನ್ನಡ ಸಂದರ್ಭದಲ್ಲಿ ಎರಡು ಮುಖ್ಯವಾದ ಪಾತ್ರಗಳಲ್ಲಿ ತಮ್ಮೆಲ್ಲ ಅಭಿನಯವನ್ನು ಬಸಿದರು. ಒಂದು ಭೈರಪ್ಪನವರ ಕಲ್ಪನೆಯಲ್ಲಿ ಮೂಡಿಬಂದ, ಪುರುಷ ದೃಷ್ಟಿಕೋನದ ಸಂಪ್ರದಾಯದ ಹಿಡಿತದಲ್ಲಿ ನವೆಯುವ ಕಾತ್ಯಾಯನಿಯ ಪಾತ್ರ. ಮತ್ತೊಂದು ಎಂ.ಕೆ. ಇಂದಿರಾ ಅವರು ತಾವು ಕಂಡ, ಒಡನಾಡಿದ ಅಸಹಾಯಕ ಹೆಣ್ಣೊಬ್ಬಳ ಒಳಗುದಿಯನ್ನು ಆಧರಿಸಿ ರೂಪಿಸಿದ ಫಣಿಯಮ್ಮನ ಪಾತ್ರ. ಈ ಪಾತ್ರಗಳಿಗೆ ಜೀವ ತುಂಬಿದ ಶಾರದಾ ಅವರು ಅವರೆಡು ಚಿತ್ರಗಳಿಂದಲೇ ಕನ್ನಡದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ತಮ್ಮ ವಿಶಿಷ್ಟವಾದ ನಟನೆಯಿಂದ ಅಭಿನಯದಲ್ಲಿ ಹೊಸ ಶೈಲಿ ರೂಪಿಸಿದ ಶಾರದಾ ಅವರು ಕನ್ನಡ ಸಂದರ್ಭದಲ್ಲಿ ಎರಡು ಮುಖ್ಯವಾದ ಪಾತ್ರಗಳಲ್ಲಿ ತಮ್ಮೆಲ್ಲ ಅಭಿನಯವನ್ನು ಬಸಿದರು. ಒಂದು ಭೈರಪ್ಪನವರ ಕಲ್ಪನೆಯಲ್ಲಿ ಮೂಡಿಬಂದ, ಪುರುಷ ದೃಷ್ಟಿಕೋನದ ಸಂಪ್ರದಾಯದ ಹಿಡಿತದಲ್ಲಿ ನವೆಯುವ ಕಾತ್ಯಾಯನಿಯ ಪಾತ್ರ. ಮತ್ತೊಂದು ಎಂ.ಕೆ. ಇಂದಿರಾ ಅವರು ತಾವು ಕಂಡ, ಒಡನಾಡಿದ ಅಸಹಾಯಕ ಹೆಣ್ಣೊಬ್ಬಳ ಒಳಗುದಿಯನ್ನು ಆಧರಿಸಿ ರೂಪಿಸಿದ ಫಣಿಯಮ್ಮನ ಪಾತ್ರ. ಈ ಪಾತ್ರಗಳಿಗೆ ಜೀವ ತುಂಬಿದ ಶಾರದಾ ಅವರು ಅವರೆಡು ಚಿತ್ರಗಳಿಂದಲೇ ಕನ್ನಡದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)