5ನೇ ಬಾರಿ ಮುಖಾಮುಖಿಯಾಗುತ್ತಿರುವ ಯಡಿಯೂರಪ್ಪ - ಬಂಗಾರಪ್ಪ ಕುಟುಂಬದಲ್ಲಿ ಜಯ ಯಾರಿಗೆ ?
ಶಿವಮೊಗ್ಗ, ಮಾ. 24: ಪ್ರಸ್ತುತ ಕುಟುಂಬ ರಾಜಕಾರಣ ಹಾಗೂ ಪ್ರಾಬಲ್ಯದ ಬಗ್ಗೆ, ರಾಜ್ಯದಲ್ಲಿ ಗಹನವಾದ ಚರ್ಚೆಗಳಾಗುತ್ತಿವೆ. ಶಿವಮೊಗ್ಗ ಜಿಲ್ಲೆ ಕೂಡ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಅದರಲ್ಲಿಯೂ ಬಿ.ಎಸ್.ಯಡಿಯೂರಪ್ಪ ಹಾಗೂ ಎಸ್.ಬಂಗಾರಪ್ಪ ಕುಟುಂಬಗಳು, ಕಳೆದ ಹಲವು ದಶಕಗಳಿಂದ ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆಯುವುದರ ಜೊತೆಗೆ, ಮಹತ್ವದ ಪಾತ್ರ ವಹಿಸುತ್ತಿವೆ.
ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವದಿಯಲ್ಲಿ, ಈ ಎರಡು ಕುಟುಂಬಗಳ ಸದಸ್ಯರು ಮೂರು ಲೋಕಸಭೆ ಹಾಗೂ ಒಂದು ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಲೋಕಸಭೆ ಉಪ ಚುನಾವಣೆ ಸೇರಿದಂತೆ, ಎಲ್ಲ ಚುನಾವಣೆಗಳಲ್ಲಿಯೂ ಬಿ.ಎಸ್.ಯಡಿಯೂರಪ್ಪ ಕುಟುಂಬವೇ ಮೇಲುಗೈ ಸಾಧಿಸಿದೆ.
ಪ್ರಸ್ತುತ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ಈ ಎರಡು ಕುಟುಂಬಗಳು ಎದುರಾಳಿಯಾಗಿವೆ. ನೇರ ಹಣಾಹಣಿಗೆ ವೇದಿಕೆ ನಿರ್ಮಾಣವಾಗಿದೆ. ಇದರಿಂದ ಶಿವಮೊಗ್ಗ ಕ್ಷೇತ್ರ ರಾಜ್ಯದ 'ಹೈವೋಲ್ಟೇಜ್' ಕಣಗಳಲ್ಲೊಂದಾಗಿದೆ. ಈ ಬಾರಿ ಜಯ ಯಾವ ಕುಟುಂಬದ ಪಾಲಾಗಲಿದೆ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಅಪ್ಪಂದಿರ ಅಖಾಡ: ಮೊದಲ ಬಾರಿಗೆ 2008 ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ-ಬಂಗಾರಪ್ಪ ಕುಟುಂಬ ಎದುರಾಳಿಯಾಗಿದ್ದವು. ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿಎಸ್‍ವೈ ಎದುರು, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಎಸ್.ಬಂಗಾರಪ್ಪ ಸ್ಪರ್ದಿಸಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಂಗಾರಪ್ಪಗೆ ಬೆಂಬಲಿಸಿದ್ದವು. ಬಿ.ಎಸ್.ಯಡಿಯೂರಪ್ಪರವರು 83,491 ಮತ ಪಡೆದು, 45,927 ಮತಗಳ ಅಂತರದಲ್ಲಿ ಜಯ ಸಂಪಾದಿಸಿದ್ದರು. ಆದರೆ ಭಾರೀ ಕುತೂಹಲ ಕೆರಳಿಸಿದ್ದ, ಬಂಗಾರಪ್ಪರವರು ಕೇವಲ 37,564 ಮತ ಪಡೆದು ಹೀನಾಯ ಸೋಲನುಭವಿಸಿದ್ದರು.
ಪುತ್ರನ ಸ್ಪರ್ಧೆ: 2009ರ ಲೋಕಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಬಂಗಾರಪ್ಪ ಕಣಕ್ಕಿಳಿದಿದ್ದರು. ಆ ವೇಳೆ ಸಿಎಂ ಆಗಿದ್ದ ಬಿಎಸ್ ವೈ ರವರು, ತಮ್ಮ ಪುತ್ರ ಬಿ.ವೈ.ರಾಘವೇಂದ್ರರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದರು. ಬಿ.ವೈ.ರಾಘವೇಂದ್ರರವರು 4,82,783 ಮತ ಪಡೆದು, 52,893 ಮತಗಳ ಅಂತರದಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಎಸ್.ಬಂಗಾರಪ್ಪರವರು 4,29,890 ಮತ ಪಡೆದು, ಪ್ರಬಲ ಸ್ಪರ್ಧೆ ನೀಡಿದ್ದರು.
ಪುತ್ರಿಯ ಸವಾಲು: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ, 2014 ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್ ವೈ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ನಡುವೆ, ಬಂಗಾರಪ್ಪರ ಪುತ್ರಿ ಹಾಗೂ ಚಿತ್ರನಟ ಶಿವರಾಜ್‍ಕುಮಾರ್ ರವರ ಪತ್ನಿ, ಗೀತಾ ಶಿವರಾಜ್‍ಕುಮಾರ್ ರವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಪಕ್ಷದಿಂದ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದರು.
ನರೇಂದ್ರ ಮೋದಿ ಅಲೆಯಲ್ಲಿ, ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಕ್ಷರಶಃ ಧೂಳೀಪಟವಾಗಿತ್ತು. ಬಿಎಸ್ ವೈ ರವರು 6,06,216 ಮತ ಪಡೆದು 3,63,305 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. 2 ನೇ ಸ್ಥಾನ ಪಡೆದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯವರು 2,42,911 ಹಾಗೂ ಗೀತಾ ಶಿವರಾಜ್‍ಕುಮಾರ್ ರವರು 2,40,636 ಮತ ಪಡೆದಿದ್ದರು.
ಪುತ್ರರ ಮುಖಾಮುಖಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಸದ ಬಿಎಸ್ ವೈ ರವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಕಾರಣದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಕಳೆದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಿತ್ತು. ಬಿಜೆಪಿಯಿಂದ ಬಿಎಸ್ ವೈ ಪುತ್ರ ಬಿವೈಆರ್ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಬಂಗಾರಪ್ಪ ಪುತ್ರ ಮಧು ಕಣಕ್ಕಿಳಿದಿದ್ದರು.
ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿದ್ದ ಈ ಉಪ ಚುನಾವಣೆಯಲ್ಲಿ, ಮತ್ತೆ ಬಿಎಸ್.ವೈ ಕುಟುಂಬ ಪ್ರಾಬಲ್ಯ ಮೆರೆದಿತ್ತು. ಬಿವೈಆರ್ 5,43,306 ಮತ ಪಡೆದು, 52,148 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಮಧು ಬಂಗಾರಪ್ಪರವರು 4,91,158 ಮತ ಗಳಿಸಿದ್ದರು.
ಮತ್ತೆ ಪುತ್ರರು: ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ, ಬಿಎಸ್ವೈ ಹಾಗೂ ಬಂಗಾರಪ್ಪ ಪುತ್ರರು ಮತ್ತೆ ಕಣಕ್ಕಿಳಿದಿದ್ದಾರೆ. ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜಯ ಯಾರ ಪಾಲಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.