ಬಿಸಿಲ ಬೇಗೆಗೆ ತತ್ತರಿಸಿದ ಮಲೆನಾಡು
ಶಿವಮೊಗ್ಗ, ಮಾ. 24: ತಣ್ಣನೆಯ ಹವಾಗುಣಕ್ಕೆ ಹೆಸರಾದ ಮಲೆನಾಡಿನಲ್ಲಿ, ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಬಯಲುಸೀಮೆ ಅನುಭವ ಉಂಟು ಮಾಡುತ್ತಿದೆ. ರಣ ಬಿಸಿಲ ಬೇಗೆಗೆ ಅಕ್ಷರಶಃ ಮಲೆನಾಡಿಗರು ತತ್ತರಿಸಿ ಹೋಗಿದ್ದಾರೆ.
ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಪ್ರಸ್ತುತ ಬೇಸಿಗೆಯಲ್ಲಿ ದಾಖಲಾಗುತ್ತಿರುವ ತಾಪಮಾನದ ಪ್ರಮಾಣ ಹೆಚ್ಚಿದೆ. ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲು ಆಗದಷ್ಟು ಬಿಸಿಲು ಬಿದ್ದಿರುತ್ತದೆ. ಸುಡು ಬಿಸಿಲು ನಾಗರೀಕರ ನೆತ್ತಿ ಸುಡಲಾರಂಭಿಸಿದೆ. ತೀವ್ರ ಸ್ವರೂಪದ ಉಷ್ಣಾಂಶವು, ನಾಗರಿಕರನ್ನು ಆತಂಕಿತರನ್ನಾಗಿಸಿದೆ.
ಕಳೆದ ಚಳಿಗಾಲದ ಡಿಸೆಂಬರ್-ಜನವರಿ ಅವಧಿಯಲ್ಲಿಯೇ, ಜಿಲ್ಲೆಯಲ್ಲಿ ಬಿಸಿಲ ಬೇಗೆ ಏರುಗತಿಯಲ್ಲಿತ್ತು. ಇದೀಗ ಇಡೀ ಮಲೆನಾಡು ಕಾದ ಕಾವಲಿಯಂತಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಬಿಸಿಲು-ಸೆಕೆಯ ಧಗೆ ಜೋರಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಉಷ್ಣಾಂಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ.
ಮಲೆನಾಡಿನಲ್ಲಿ ಹಿಂಗಾರು ಮಳೆ ಸಂಪೂರ್ಣ ವೈಫಲ್ಯಕ್ಕೀಡಾಗಿದೆ. ಕಳೆದೆರೆಡು ತಿಂಗಳಿನಿಂದ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಬೇಸಿಗೆ ಬಿಸಿಲ ವೇಳೆ ಬೀಳುತ್ತಿದ್ದ ಅಕಾಲಿಕ ಮಳೆ, ಪ್ರಸ್ತುತ ವರ್ಷ ಇಲ್ಲವಾಗಿದೆ. ಇದು ಕೂಡ ತಾಪಮಾನ ಏರಿಕೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ.
ಕುಸಿತ: ಉಷ್ಣಾಂಶ ಹೆಚ್ಚಳದಿಂದ ಅಂತರ್ಜಲ ಮಟ್ಟ ಗಂಭೀರ ಸ್ವರೂಪದಲ್ಲಿ ಕುಸಿಯಲಾರಂಭಿಸಿದೆ. ಜಲಮೂಲಗಳು ಬರಿದಾಗುತ್ತಿವೆ. ಜೀವನದಿಗಳು ನೀರಿಲ್ಲದೆ ಸೊರಗಿವೆ. ಇದು ಜನ-ಜಾನುವಾರುಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಹಲವೆಡೆ ಕುಡಿಯುವ ನೀರಿನ ಹಾಹಾಕಾರ ತಲೆದೋರಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಲವು ಪ್ರದೇಶಗಳಲ್ಲಿ ನೀರಿನ ತತ್ವಾರ ಮತ್ತಷ್ಟು ಉಲ್ಬಣಿಸಲಿದೆ.
'ಜಿಲ್ಲೆಯಲ್ಲಿ ನೂರಾರು ಕೆರೆ-ಕಟ್ಟೆ, ಬಾವಿ, ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿವೆ. ನೀರಿಲ್ಲದೆ ಬರಿದಾಗಿವೆ. ಇಂತಹ ಪ್ರದೇಶಗಳಲ್ಲಿ ಹೊಸದಾಗಿ ಬೋರ್‍ವೆಲ್ ಕೊರೆಯಿಸಿ ನೀರು ಪೂರೈಕೆ ಹಾಗೂ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಟ್ಯಾಂಕರ್ ನೀರು ಸರಬರಾಜಿಗೆ ಗ್ರಾಮ ಪಂಚಾಯತ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿಯಂತ್ರಣದಲ್ಲಿದೆ' ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.
ಜಾನುವಾರುಗಳ ಗೋಳು: ಬಿಸಿಲಿನಿಂದ ಕೆರೆಕಟ್ಟೆಗಳಲ್ಲಿ ನೀರು ಬರಿದಾಗುತ್ತಿರುವುದು ಹಾಗೂ ಹಸಿರು ಮೇವು ಒಣಗಿ ಹೋಗಿರುವುದರಿಂದ ಜಾನುವಾರುಗಳ ಗೋಳು ಹೇಳತೀರದಾಗಿದೆ. ನೀರು-ಮೇವಿಗಾಗಿ ಜಾನುವಾರುಗಳು ಪರದಾಡುತ್ತಿವೆ. ಹಸಿವು ಇಂಗಿಸಿಕೊಳ್ಳಲು ಪ್ಲಾಸ್ಟಿಕ್ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ಜಾನುವಾರುಗಳು ತಿನ್ನುತ್ತಿವೆ. ನಾನಾ ರೋಗ-ರುಜಿನಗಳಿಗೆ ತುತ್ತಾಗುತ್ತಿವೆ ಎಂದು ಕೆಲ ಜಾನುವಾರುಗಳ ಮಾಲಕರು ಹೇಳುತ್ತಾರೆ.
ಅರಣ್ಯದಲ್ಲಿಯೂ ಜಲಮೂಲಗಳು ಬರಿದಾಗುತ್ತಿರುವುದರಿಂದ, ಕಾಡು ಪ್ರಾಣಿಗಳು ಕೂಡ ನೀರಿಗೆ ಪರಿತಪಿಸುವಂತಾಗಿದೆ. ದಾಹ ಇಂಗಿಸಿಕೊಳ್ಳಲು ಕಾಡಿನಂಚಿನಲ್ಲಿರುವ ಗ್ರಾಮಗಳಿಗೆ ಆಗಮಿಸುತ್ತಿವೆ. ಇದು ಅರಣ್ಯದಂಚಿನ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
ಒಟ್ಟಾರೆ ಮಲೆನಾಡು ಪ್ರಸ್ತುತ ಬೇಸಿಗೆಯಲ್ಲಿ ಬಯಲುಸೀಮೆಯಾಗಿ ಮಾರ್ಪಟ್ಟಿದೆ. ಸುಡು ಬಿಸಿಲು ಮಲೆನಾಡಿಗರ ಮೈಸುಡುತ್ತಿದೆ. ಪಶುಪಕ್ಷಿಗಳು ಕೂಡ ಪರಿತಪಿಸುವಂತಾಗಿದೆ. 'ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ..' ಮಲೆನಾಡಿನಲ್ಲಿ ಹಿಂಗಾರು ಮಳೆಯೂ ಕೈಕೊಟ್ಟಿರುವುದು, ಜನ-ಜಾನುವಾರುಗಳ ಸಂಕಷ್ಟ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಕಣ್ಮರೆಯಾದ ಮಳೆ
ಮಲೆನಾಡಿನಲ್ಲಿ ಕಳೆದ ಕೆಲ ತಿಂಗಳಿನಿಂದ ಮಳೆ ಕಣ್ಮರೆಯಾಗಿದೆ. ಸರ್ವೇಸಾಮಾನ್ಯವಾಗಿ ಬೇಸಿಗೆ ಬಿಸಿಲ ತಾಪಕ್ಕೆ ಅಕಾಲಿಕ ಮಳೆಯಾಗುತ್ತದೆ. ಬಹುತೇಕ ಗುಡುಗು ಸಹಿತ ಧಾರಾಕಾರ ವರ್ಷಧಾರೆ ಬೀಳುತ್ತದೆ. ಆದರೆ ಅಕಾಲಿಕ ಮಳೆಯೂ ಬೀಳದಿರುವುದು, ಉರಿ ಬಿಸಿಲ ತಾಪ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿಯೂ, ಅತ್ಯಂತ ಗಂಭೀರ ಸ್ವರೂಪದಲ್ಲಿ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ಭೀಕರ ಜಲಕ್ಷಾಮ ಕಾಣಿಸಿಕೊಂಡರೂ ಅಚ್ಚರಿಯಿಲ್ಲವಾಗಿದೆ ಎಂದು ಪರಿಸರ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಾರೆ.