ಮೀಸಲಾತಿ ಕುರಿತ ಮಿಲ್ಲರ್ ವರದಿಗೆ ನೂರು ವರ್ಷ
ಒಂದು ನೆನಪು
ಮೀಸಲಾತಿಯ ಪ್ರಯೋಜನ ಪಡೆದ ಹಿಂದುಳಿದ ವರ್ಗದವರು ಉತ್ತಮ ಶಿಕ್ಷಣ ಮತ್ತು ಅವಕಾಶಗಳನ್ನು ಪಡೆಯುವುದರ ಮೂಲಕ ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ಕ್ರಮೇಣ ಉತ್ತಮಪಡಿಸಿಕೊಂಡರು ಎನ್ನಲು ಅಡ್ಡಿ ಇಲ್ಲ. ಇದಕ್ಕೆಲ್ಲಾ ಕಾರಣವಾದ ಮಿಲ್ಲರ್ ವರದಿಗೆ ಇಂದು ಶತಕದ ಸಂಭ್ರಮ.ಇಂದಿನ ಪೀಳಿಗೆಗೆ ಇದರ ಬಗ್ಗೆ ಅರಿವು ಮುಖ್ಯ.
ಭಾರತದಂತಹ ಬಹು ಜಾತಿಯ ದೇಶಕ್ಕೆ ಮೀಸಲಾತಿ ಅನ್ನುವುದು ಒಂದು ಬಹುಮುಖ್ಯ ವಸ್ತು ವಿಚಾರವಾಗಿದೆ. ಸಾವಿರಾರು ವರ್ಷಗಳಿಂದ ಸಾಮಾಜಿಕವಾಗಿ ಹೊರಗುಳಿದಿರುವ ನೂರಾರು ಹಿಂದುಳಿದ ಸಮುದಾಯಗಳಿಗೆ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ಮೀಸಲಾತಿಯು ಒಂದು ಪ್ರಮುಖ ಅಂಶವಾಗಿದೆ. ಇದರಿಂದ ಕೆಲವು ಸಮುದಾಯಗಳು ಒಳಗೊಳ್ಳುವಿಕೆಯ ಬೆಳವಣಿಗೆಗೆ ಸೇರಿಕೊಂಡಿವೆ, ಇನ್ನೂ ಕೆಲವು ಸೇರಿಕೊಳ್ಳುವ ಹಾದಿಯಲ್ಲಿವೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ಪರಿಣಾಮಕಾರಿಯಾದ ವಿಚಾರಧಾರೆಗಳನ್ನು ನಾವು ಈ ಸಂದರ್ಭದಲ್ಲಿ ಆವಶ್ಯಕವಾಗಿ ನೆನಪಿಸಿಕೊಳ್ಳಬೇಕಾಗುತ್ತದೆ.
ಬ್ರಿಟಿಷರ ಕಾಲದಲ್ಲಿ ಮೀಸಲಾತಿ ಕುರಿತು ಬಹಳಷ್ಟು ರೀತಿಯ ಹೋರಾಟಗಳು, ವಿಚಾರಧಾರೆಗಳು ನಡೆದಿರುವುದು ನಮಗೆಲ್ಲರಿಗೂ ತಿಳಿದ ವಿಚಾರವಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಇದರ ಬಗ್ಗೆ ಸಾಕಷ್ಟು ಹೋರಾಟಗಳು ನಡೆದು ಅಲ್ಲಿನ ದಮನಿತ ಸಮುದಾಯಗಳು ಎಚ್ಚೆತ್ತು ಕೊಳ್ಳುವುದರಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿವೆ. ಕೆಲವು ತಜ್ಞರ ಪ್ರಕಾರ ಮೀಸಲಾತಿ ಅಂಶವನ್ನು ಅಂದಿನ ಬ್ರಿಟಿಷ್ ಸರಕಾರವು ಆಡಳಿತವನ್ನು ಸುಗಮವಾಗಿ ನಡೆಸಲು ಬಳಸಿಕೊಂಡಿರುವುದನ್ನು ಇತಿಹಾಸ ನಮಗೆ ತಿಳಿಸುತ್ತದೆ. ಕೊಲ್ಲಾಪುರದ ಶಾಹು ಮಹಾರಾಜ ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ತಂದ ಮೊದಲ ರಾಜವಂಶ ಎನ್ನಬಹುದು.
ಉತ್ತರ ಭಾರತದ ಕೆಲವು ರಾಜ ಮನೆತನಗಳು ಮೀಸಲಾತಿಯ ಕುರಿತು ಮೊದಲು ಯೋಚಿಸಿದ್ದರೂ ಸಹ ಪರಿಣಾಮಕಾರಿಯಾಗಿ ಅದನ್ನು ಜಾರಿಗೆ ತಂದವರು ಮೈಸೂರು ರಾಜಮನೆತನದವರು ಮಾತ್ರ. ಹಾಗಾಗಿ ಇದರ ಕೀರ್ತಿ ಮೈಸೂರು ರಾಜಮನೆತನಕ್ಕೆ ಸೇರಬೇಕಾಗಿದೆ. ಸುಮಾರು ಕ್ರಿ.ಶ.1851-1881ರಲ್ಲಿ ಸರಕಾರಿ ಸೇವೆಗಳಲ್ಲಿ ಬ್ರಾಹ್ಮಣರಿಗೆ ಅಲ್ಲದ ಇತರ ಹಿಂದುಳಿದ ಜನಗಳಿಗೆ ಮೀಸಲಾತಿಯನ್ನು ತರಲು ಮೈಸೂರು ಸರಕಾರ ಮೊದಲ ಬಾರಿಗೆ ಯೋಚಿಸಿತ್ತು. ಇದರ ಕುರಿತು ಅಂದಿನ ಕಾಲದಲ್ಲಿ ಮೇಲ್‌ವರ್ಗದ ಜನರ ವಿರೋಧ ಎಷ್ಟೇ ಇದ್ದರೂ ಅಂದಿನ ಮೈಸೂರು ಮಹಾರಾಜರು ಅದಕ್ಕೆ ತಲೆ ಕೆಡಿಸಿಕೊಳ್ಳದೆ ದಮನಿತ ಗುಂಪುಗಳಿಗೆ ಸರಕಾರದ ಸೇವೆಗಳಲ್ಲಿ ಮೀಸಲಾತಿಯನ್ನು ತರುವ ಯೋಚನೆ ಮಾಡಿದ್ದು ಒಂದು ರೀತಿಯಲ್ಲಿ ಅಂದಿನ ಕಾಲಕ್ಕೆ ಸಾಹಸವೇ ಎನ್ನಬಹುದು.ಈ ಮಧ್ಯೆ ಕ್ರಿ.ಶ. 1850 ರಲ್ಲಿ ಅಂದಿನ ಬ್ರಿಟಿಷ್ ಸರಕಾರ ‘ಕ್ಯಾಸ್ಟ್ ಡಿಸೆಬಿಲಿಟಿ’ ಎಂಬ ಕಾಯ್ದೆಯನ್ನು ಜಾರಿಗೆ ತಂದಿತು. ಇದರ ಅನ್ವಯ ಶೇ.20ರಷ್ಟು ಕೆಳ, ಮತ್ತು ಮಧ್ಯಮ ವರ್ಗದ ಸರಕಾರಿ ಹುದ್ದೆಗಳನ್ನು ಬ್ರಾಹ್ಮಣರಿಗೂ, ಉಳಿದ ಶೇ.80ರಷ್ಟು ಹುದ್ದೆಗಳನ್ನು ಗ್ರಾಮೀಣ, ರೈತ, ಹಿಂದುಳಿದ, ಮುಸ್ಲಿಂ ಮತ್ತಿತರ ಜನರಿಗೆ ಮೀಸಲಾಗಿತ್ತು ಎನ್ನಬಹುದು. ಮುಂದೆ ಕ್ರಿ.ಶ.1882 ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ವ್ಯವಸ್ಥೆಯಲ್ಲಿ ಪ್ರಾಯೋಗಿಕವಾಗಿ ದಮನಿತ ಸಮುದಾಯಗಳಿಗೆ ಮೀಸಲಾತಿ ನೀಡಲಾಯಿತು. ಆದರೆ ಇದರಿಂದ ಯಾವ ಪ್ರಯೋಜನವೂ ಆಗುತ್ತಿರಲಿಲ. ಏಕೆಂದರೆ ಈ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಸದಸ್ಯರಿಗೆ ಯಾವುದೇ ರೀತಿಯ ಸಾಂವಿಧಾನಿಕ ಹಕ್ಕುಗಳು ಇರುತ್ತಿರಲಿಲ್ಲ.
ಅಂದಿನ ಮೈಸೂರು ಮಹಾರಾಜರಿಗೆ ಸಾರ್ವಜನಿಕ ಸೇವೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರಾಹ್ಮಣೇತರಿಗೆ ಅಂದರೆ ದಮನಿತ ವರ್ಗದವರಿಗೆ ಸೂಕ್ತವಾದ ಮೀಸಲಾತಿ ವ್ಯವಸ್ಥೆಯನ್ನು ನೀಡಬೇಕೆಂಬ ಕನಸು ಹೆಚ್ಚಾಗಿತ್ತೆನ್ನಬಹುದು. ಆದರೆ ಇದಕ್ಕೆ ಅಂದಿನ ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಸೈದಾಂತಿಕ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೂ ಯಾವುದನ್ನು ಲೆಕ್ಕಿಸದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಅಂದಿನ ಮೈಸೂರು ನ್ಯಾಯಾಲಯದ ಮುಖ್ಯಸ್ಥರಾಗಿದ್ದ ‘ಲೆಸ್ಲಿ ಮಿಲ್ಲರ್’ ರವರ ನೇತೃತ್ವದಲ್ಲಿ ಮೀಸಲಾತಿ ಕುರಿತಾದ ಸ್ಪಷ್ಟ ಯೋಜನೆಯನ್ನು ರೂಪಿಸಲು ಕ್ರಿ.ಶ.1918 ರಲ್ಲಿ ಒಂದು ಸಮಿತಿಯನ್ನು ರಚಿಸುತ್ತಾರೆ. ಈ ಸಮಿತಿಗೆ ಮುಖ್ಯವಾಗಿ ಸಾರ್ವಜನಿಕ ಸೇವೆಗಳಲ್ಲಿ ದಮನಿತ ವರ್ಗದವರಿಗೆ ಯಾವ ರೀತಿ ಮೀಸಲಾತಿ ವ್ಯವಸ್ಥೆಯನ್ನು ನೀಡಬಹುದು ಎನ್ನುವುದನ್ನು ಕುರಿತು ಸಲಹೆ ನೀಡುವ ಗುರುತರ ಜವಾಬ್ದಾರಿಯನ್ನು ವಹಿಸಲಾಯಿತು. ಈ ಸಮಿತಿಯಲ್ಲಿ ಇಬ್ಬರು ಬ್ರಾಹ್ಮಣ ವರ್ಗಕ್ಕೆ ಸೇರಿದ ಎಂ.ಸಿ. ರಂಗಯ್ಯರ್ ಮತ್ತು ದಿವಾನ್ ಶ್ರೀಕಂಠೇಶ್ವರ ಅಯ್ಯರ್, ಮುಸ್ಲಿಂ ವರ್ಗದ ಗುಲಾಂ ಮುಹಮ್ಮದ್ ಕಲಾಂ, ಒಕ್ಕಲಿಗ ವರ್ಗದ ಎಂ.ಎಚ್ ಚನ್ನಯ್ಯ, ಲಿಂಗಾಯತ ವರ್ಗದ ಎಂ. ಬಸವಯ್ಯ ಮತ್ತು ಕೊಡಗಿನ ಎಂ.ಮುತ್ತಣ್ಣನವರಿದ್ದರು.
ಅಂದು ಈ ಸಮಿತಿಗೆ ಮುಖ್ಯವಾಗಿ ನಾಲ್ಕು ಮುಖ್ಯ ವಿಷಯಗಳ ಕುರಿತು ಸಲಹೆ ನೀಡುವಂತೆ ಮಹಾರಾಜರು ಕೋರುತ್ತಾರೆ.
♦ ಹಿಂದುಳಿದ ವರ್ಗದವರಿಗೆ ಸರಕಾರಿ ಸೇವೆಯಲ್ಲಿ ಸೂಕ್ತ ಮೀಸಲಾತಿ ನೀಡಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು?
♦ ಸಾರ್ವಜನಿಕ ನೇಮಕ ವಿಚಾರದಲ್ಲಿ ಸದ್ಯ ಚಾಲ್ತಿಯಲ್ಲಿರುವ ನಿಯಮಗಳನ್ನು ಬದಲಾಯಿಸಬೇಕೆ?
♦ ಹಿಂದುಳಿದ ವರ್ಗದವರು ಉನ್ನತ ಶಿಕ್ಷಣವನ್ನು ಪಡೆಯಲು ಯಾವ ರೀತಿಯ ವಿಶೇಷ ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕು?
♦ ಆಡಳಿತ ವ್ಯವಸ್ಥೆಯ ಗುಣಾತ್ಮಕತೆಗೆ ತೊಂದರೆ ಆಗದಂತೆ ದಮನಿತ ವರ್ಗದವರಿಗೆ ಯಾವ ರೀತಿ ವಿಶೇಷ ಯೋಜನೆಗಳನ್ನು ಕೈಗೊಳ್ಳಬಹುದು?.
♦ಸುಮಾರು ಒಂದು ವರ್ಷದ ಸತತ ಅಧ್ಯಯನದ ನಂತರ ಕ್ರಿ.ಶ.1919ರಲ್ಲಿ ಮಿಲ್ಲರ್ ಸಮಿತಿಯು ಕೆಳಗಿನ ಶಿಫಾರಸುಗಳನ್ನು ಮಾಡುತ್ತದೆ.
♦ ಸರಕಾರದ ಎಲ್ಲಾ ವ್ಯವಸ್ಥೆಯಲ್ಲಿ ಶೇ.75ರಷ್ಟು ಮೀಸಲಾತಿಯನ್ನು ನಿಗದಿಪಡಿಸಬಹುದಾಗಿದೆ
♦ ನಿಗದಿತ ಕಾಲಮಿತಿಯಲ್ಲಿ ಕನಿಷ್ಠ ಶೇ.50ರಷ್ಟು ಮೀಸಲಾತಿಯನ್ನು ದಮನಿತ ವರ್ಗದವರಿಗೆ ಅಥವಾ ಹಿಂದುಳಿದ ವರ್ಗದವರಿಗೆ ವಿವಿಧ ಸರಕಾರಿ ಸೇವೆಗಳಲ್ಲಿ ಜಾರಿಗೆ ತರಲೇ ಬೇಕು
♦ ಅಭ್ಯರ್ಥಿಯು ಶೈಕ್ಷಣಿಕವಾಗಿ ತಾನು ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿಯನ್ನು ಆದಷ್ಟು ಕಡಿಮೆ ಮಾಡಿ ಅಭ್ಯರ್ಥಿಯ ಪ್ರಾಮಾಣಿಕತೆ, ಪಾರದರ್ಶಕತೆ, ಸಾಮರ್ಥ್ಯ, ಅನುಭವ ಮತ್ತು ಆಸಕ್ತಿಯ ಆಧಾರದ ಮೇಲೆ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸತಕ್ಕದ್ದು.
♦ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಷ್ಯ ವೇತನವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೆ ತರಬೇಕು
♦ ಶಾಲೆ ಮತ್ತು ಹಾಸ್ಟೆಲ್‌ಗಳನ್ನು ನಿರ್ಮಿಸಲು ಮುಂದೆ ಬರುವವರಿಗೆ ಉಚಿತವಾಗಿ ಭೂಮಿಯನ್ನು ಸರಕಾರವು ಒದಗಿಸಬೇಕು.
ಒಂದು ವರ್ಷದ ಸುದೀರ್ಘ ಅಧ್ಯಯನದಲ್ಲಿ ಮಿಲ್ಲರ್ ಆಯೋಗವು ಅಂದಿನ ಜಾತಿಗಳ ನೈಜ ಚಿತ್ರಣವನ್ನು ನೀಡಿತ್ತು. ಅದರಲ್ಲಿ ಅಂದು ಸರಕಾರಿ ಉದ್ಯೋಗದಲ್ಲಿ ಬ್ರಾಹ್ಮಣರು ಶೇ.69 ರಷ್ಟು ಇದ್ದರೆ, ಕ್ಷತ್ರಿಯರು ಶೇ.1.58, ಒಕ್ಕಲಿಗರು ಶೇ.2.42, ಲಿಂಗಾಯತರು ಶೇ.3.6, ಮುಸ್ಲಿಮರು ಶೇ. 7.37, ಹಿಂದುಳಿದ ವರ್ಗದ ಬೇರೆ ಹಿಂದೂಗಳು ಶೇ. 7.18, ಕ್ರಿಶ್ಚಿಯನ್ನರು ಶೇ. 2.83 ಹಿಂದುಳಿದ ಮತ್ತು ದಮನಿತ ವರ್ಗಗಳು ಕೇವಲ ಶೇ.1.18ರಷ್ಟು ಸ್ಥಾನ ಪಡೆದುಕೊಂಡಿದ್ದರು (ವಿವಿಧ ಮೂಲಗಳಿಂದ).
ಇದರೊಂದಿಗೆ ಈ ಸಮಿತಿಯು ಸರಕಾರಿ ಸೇವೆಗಳಲ್ಲಿ ಉನ್ನತ ಜಾತಿಯ ಅಧಿಕಾರಿಗಳು ಸರಕಾರದ ನೀತಿ ನಿರೂಪಣೆಗಳ ವಿಚಾರದಲ್ಲಿ ಯಾವ ರೀತಿಯ ಪ್ರಭಾವವನ್ನು ಪ್ರಾಬಲ್ಯತೆಯನ್ನು ಹೊಂದಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಮಹಾರಾಜರ ಮುಂದೆ ಬಿಚ್ಚಿಟ್ಟಿತು. ಇದು ಒಂದು ರೀತಿಯಲ್ಲಿ ತುಂಬಾ ಪ್ರಮುಖವಾದ ಅಂಶವಾಗಿತ್ತು. ಸಮಿತಿಯು ಸರಕಾರಿ ಸೇವೆಗಳಲ್ಲಿ ಎಲ್ಲಾ ವರ್ಗದವರಿಗೂ ಸೂಕ್ತ ಪ್ರಾತಿನಿಧ್ಯ ನೀಡಿದರೆ ಎಲ್ಲಾ ವರ್ಗಗಳ ಒಳಗೊಳ್ಳುವಿಕೆಯ ಬೆಳವಣಿಗೆಗೆ ಕಾರಣವಾಗಬಹುದು ಎಂದು ಸೂಕ್ಷ್ಮವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಅಲ್ಲದೆ ಸರಕಾರದ ವಿವಿಧ ಹುದ್ದೆಗಳಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಅಧಿಕಾರಿಗಳಿದ್ದರೆ ಸರಕಾರದ ಆಡಳಿತ ವ್ಯವಸ್ಥೆಯು ಸುಗಮವಾಗಿರುತ್ತದೆ ಎಂಬ ಅಭಿಪ್ರಾಯವನ್ನು ಸಮಿತಿಯು ಸ್ಪಷ್ಟವಾಗಿ ತಿಳಿಸಿತ್ತು. ಅಂದಿನ ಕಾಲದಲ್ಲಿ ಒಳಗೊಳ್ಳುವಿಕೆಯ ಬೆಳವಣಿಗೆ ಎಂಬ ಪದವನ್ನು ಸಮಿತಿಯು ಸೂಚಿಸದಿದ್ದರೂ ಸಮಿತಿಯ ಒಟ್ಟಾರೆ ಅಭಿಪ್ರಾಯದಲ್ಲಿ ಅದು ಎಲ್ಲಾ ವರ್ಗದವರನ್ನು ಬೆಳವಣಿಗೆಯ ಮುಖ್ಯವಾಹಿನಿಗೆ ಕರೆ ತರುವುದರಲ್ಲಿ ಮೀಸಲಾತಿಯ ಒಂದು ಪ್ರಮುಖ ಅಸ್ತ್ರ ಎಂಬ ನಿಖರ ಅಭಿಪ್ರಾಯವನ್ನು ಸ್ಪಷ್ಟವಾಗಿ ಮೊದಲ ಬಾರಿಗೆ ಸೂಚಿಸಿತ್ತು ಎನ್ನಬಹುದು. ಈ ಕಾರಣಕ್ಕಾಗಿ ದೇಶದಲ್ಲಿ ಮಿಲ್ಲರ್ ವರದಿ ಅತ್ಯಂತ ಪ್ರಮುಖವಾದ ಮತ್ತು ಸಮಗ್ರವಾದ ವರದಿ ಎಂದು ತಜ್ಞರು ವ್ಯಾಖ್ಯಾನಿಸುತ್ತಾರೆ.
ಈ ಸಂದರ್ಭದಲ್ಲಿ ಸಮಿತಿಯು ನೀಡಿದ ವರದಿಯ ಕೆಲವು ಸಾಲುಗಳಲ್ಲಿ ಸರಕಾರದ ಕೆಲವು ಅಧಿಕಾರಿಗಳು ದಿನನಿತ್ಯ ಪ್ರಜೆಗಳನ್ನು ಒಂದಲ್ಲ ಒಂದು ಕಾರಣಕ್ಕೆ ಭೇಟಿ ಆಗಬೇಕಾಗುತ್ತದೆ. ಇಂತಹ ಅಧಿಕಾರಿಗಳು ಸಮಾಜದ ಎಲ್ಲಾ ವರ್ಗದಿಂದ ಬಂದಿದ್ದರೆ ಸರಕಾರದ ಆಡಳಿತ ವ್ಯವಸ್ಥೆಗೆ ಒಂದು ರೀತಿಯ ಅರ್ಥ ಬರುತ್ತದೆ. ಬೇರೆ ಬೇರೆ ವರ್ಗಕ್ಕೆ ಸೇರಿದ ಅಧಿಕಾರಿಗಳು ಬೇರೆ ಬೇರೆ ಜಾತಿ ಮತ್ತು ಧರ್ಮದ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ನಿವಾರಿಸುವ ಅವಕಾಶಗಳು ಹೆಚ್ಚಾಗಿರುವುದರಿಂದ, ಸರಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಒಂದು ಪ್ರಮುಖ ವ್ಯವಸ್ಥೆಯನ್ನಾಗಿ ಮಾಡಬೇಕಾಗುತ್ತದೆ ಎಂದು ಬರೆಯಲಾಗಿತ್ತು. ದಮನಿತ ವರ್ಗದವರ ಬಗ್ಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆಇದ್ದ ದೂರದೃಷ್ಟಿ ಮತ್ತು ಆ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಆದಷ್ಟು ಬೇಗ ಕರೆತರುವ ಯೋಜನೆಗಳು ಮತ್ತು ಯೋಚನೆಗಳು ನಿಜಕ್ಕೂ ಅಂದಿನ ಕಾಲದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಯಿತು ಎನ್ನಬಹುದು. ಮಿಲ್ಲರ್ ವರದಿಯು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಮತ್ತು ವಿಚಾರಧಾರೆಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಾಯಕವಾಯಿತು ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ.
ಅಂದು ಈ ವರದಿ ಹೊರ ಬಂದಾಗ ಮೈಸೂರು ಪ್ರಾಂತದಲ್ಲಿ ಅಲ್ಲೋಲ ಕಲ್ಲೋಲವಾಯಿತೆಂದೇ ಹೇಳಬಹುದು. ಸಮಿತಿಯ ಸದಸ್ಯರುಗಳೇ ಇದನ್ನು ವಿರೋಧಿಸಲು ಆರಂಭಿಸಿದರು. ಇದರ ವಿರುದ್ಧ ಬ್ರಾಹ್ಮಣರು ದಂಗೆ ಏಳಬಹುದೆಂದು ಮಹಾರಾಜರಿಗೆ ಕಿವಿ ಊದಿದರು. ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರು ಈ ವರದಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕ್ರಿ.ಶ.1921ರ ವರೆಗೆ ಈ ವರದಿಯನ್ನು ಜಾರಿಗೆ ತರಲು ಹಿಂದೆ ಮುಂದೆ ನೋಡಿದರು. ಆದರೂ ಮಿಲ್ಲರ್ ವರದಿಯನ್ನು ಜಾರಿಗೆ ತರಲೇಬೇಕೆಂದು ದೃಢನಿರ್ಧಾರ ಮಾಡಿದ ಮಹಾರಾಜರು ಯುವರಾಜ ನರಸಿಂಹರಾಜ ಒಡೆಯರ್ ಮತ್ತು ತಮ್ಮ ಇತರ ಆಪ್ತರಾದ ಬಸವಯ್ಯ ಮತ್ತು ಕೆ.ಎಚ್.ರಾಮಯ್ಯರವರ ಸಹಾಯದಿಂದ ಮಿಲ್ಲರ್ ವರದಿಯನ್ನು ಮೈಸೂರಿನಲ್ಲಿ ಕಾರ್ಯಗತಗೊಳಿಸಿದರು. ದಿವಾನ್ ಸರ್.ಎಂ. ವಿಶ್ವೇಶ್ವರಯ್ಯನವರಿಗೂ ತಿಳಿಸದೇ ರಾಜಸ್ಥಾನದಿಂದ ಮಿರ್ಜಿಯವರನ್ನು ಕರೆಸಿ ಅರಮನೆಯ ಖಜಾಂಚಿಯಾಗಿ ನೇಮಿಸಲಾಯಿತು. ಇದರಿಂದ ಸಿಟ್ಟಿಗೆದ್ದ ವಿಶ್ವೇಶ್ವರಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೊನೆಗೆ ಆನಂದ್ ರಾವ್ ಅವರನ್ನು ದಿವಾನರನ್ನಾಗಿ ಮಾಡಿ, ಮಿಲ್ಲರ್ ವರದಿಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲಾಯಿತು.
ಮಿಲ್ಲರ್ ವರದಿ ಮುಂದೆ ದೇಶದಲ್ಲಿ ಮೀಸಲಾತಿ ವಿಚಾರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು. ದೇಶದ ಇತರ ಭಾಗಗಳಲ್ಲಿ ಮೀಸಲಾತಿ ಯೋಜನೆಯನ್ನು ಜಾರಿಗೆ ತರಲು ದಾರಿ ದೀಪವಾಯಿತು. ಮುಂದೆ ಸ್ವಾತಂತ್ರ್ಯದ ನಂತರವೂ ದಮನಿತ ವರ್ಗಗಳಿಗೆ ಸೂಕ್ತ ಮೀಸಲಾತಿ ಯೋಜನೆಯನ್ನು ಕಾಲಕಾಲಕ್ಕೆ ಜಾರಿಗೊಳಿಸುವುದಕ್ಕೂ ಮಿಲ್ಲರ್ ವರದಿ ಕಾರಣೀಭೂತವಾಯಿತು. ಒಂದೆಡೆ ಮಿಲ್ಲರ್ ವರದಿಯಲ್ಲಿ ಉಲ್ಲೇಖಿಸಿರುವಂತೆ ಅಂದು ದೊಡ್ಡ ಪ್ರಮಾಣದಲ್ಲಿದ್ದ ಲಿಂಗಾಯತರ ಸ್ಥಿತಿಯೇ ಚಿಂತಾಜನಕವಾಗಿತ್ತು ಎಂದರೆ ಕೆಳಮಟ್ಟದ ದಮನಿತ ವರ್ಗಗಳ ಸ್ಥಿತಿ ಹೇಗಿದ್ದಿರಬಹುದು ಎಂದು ನಾವು ಯೋಚಿಸಬೇಕಾದ ವಿಚಾರ.
ಮಿಲ್ಲರ್ ವರದಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಯಥಾವತ್ತಾಗಿ ಜಾರಿಗೆ ತಂದರು. ಒಂದು ಅರ್ಥದಲ್ಲಿ ಸರಕಾರದ ಹುದ್ದೆಗಳ ಮೇಲೆ ಬ್ರಾಹ್ಮಣ ವರ್ಗದ ಏಕಮುಖ ಪ್ರಾಬಲ್ಯವನ್ನು ಕಡಿಮೆ ಮಾಡಲು ಸಹಾಯವಾಯಿತು. ಸರಕಾರದ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲು ಆರಂಭವಾಯಿತು. ಆದರೆ ಇದೇ ಸಂದರ್ಭದಲ್ಲಿ ಕೆಲವು ಅತೀ ಪ್ರಬಲ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಮೀಸಲಾತಿಯ ಉಪಯೋಗ ಪಡೆಯುತ್ತಾ ಅದು ಇನ್ನೊಂದು ರೀತಿಯಲ್ಲಿ ಆಡಳಿತ ವ್ಯವಸ್ಥೆಯಲ್ಲಿ ನಿರ್ದಿಷ್ಟ ವರ್ಗ ಪ್ರಾಬಲ್ಯ ಸಾಧಿಸಲು ಪರೋಕ್ಷವಾಗಿ ಕಾರಣವಾಯಿತು ಎನ್ನಬಹುದು. ಒಂದು ಪ್ರಬಲ ಹಿಂದುಳಿದ ವರ್ಗ ಮೀಸಲಾತಿಯ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಾ ಹೋದಂತೆ ಇತರ ಸೂಕ್ಷ್ಮ ಹಿಂದುಳಿದ ವರ್ಗಗಳು ಆ ಅವಕಾಶವನ್ನು ಪಡೆಯುವುದರಲ್ಲಿ ವ್ಯವಸ್ಥಿತವಾಗಿ ಹಿಂದುಳಿಯಲು ಕಾರಣವಾಯಿತು ಎಂಬ ವಿಚಾರ ದುರಂತವೇ ಸರಿ. ಅಲ್ಲಿಗೆ ಮೀಸಲಾತಿಯ ಪ್ರಮುಖ ಉದ್ದೇಶವೇ ದಾರಿ ತಪ್ಪುವಂತಾಯಿತು. ಇನ್ನು ಒಂದು ಪ್ರಮುಖ ವಿಚಾರವೆಂದರೆ ಆರ್ಥಿಕ ಹಿಂದುಳಿಯುವಿಕೆಯ ಹೆಸರಿನಲ್ಲಿ ಪ್ರಬಲ ಬ್ರಾಹ್ಮಣ ವರ್ಗವು ಇತರ ಸಮಾನಾಂತರ (ಶ್ರೇಣೀಕೃತ ವ್ಯವಸ್ಥೆಯಲ್ಲಿ) ಜಾತಿ-ವರ್ಗಗಳೊಂದಿಗೆ ಉತ್ತಮ ಬಾಂಧವ್ಯವನ್ನು ಏರ್ಪಡಿಸಿಕೊಳ್ಳುವುದರ ಮೂಲಕ ಇನ್ನೊಂದು ರೀತಿಯಲ್ಲಿ ಇಡೀ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆಯಿತು ಎನ್ನುತ್ತಾರೆ ಇತಿಹಾಸ ತಜ್ಞರು. ಕಾಲಕ್ರಮೇಣ ಇದು ಇತರ ಹಿಂದುಳಿದ ವರ್ಗಗಳ ವಿವಿಧ ರೀತಿಯ ಹೊಸ ಹೋರಾಟಕ್ಕೆ ಮೈಸೂರು ಪ್ರಾಂತವು ದೇಶದಲ್ಲಿ ಮೊದಲ ಬಾರಿಗೆ ಸಾಕ್ಷಿ ಆಯಿತು ಎನ್ನಬಹುದು.
ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಜಾತಿ ರಹಿತ ಸಮಾಜದ ನಿರ್ಮಾಣಕ್ಕೆ ಯಾವುದೇ ಪ್ರಯತ್ನ ಮಾಡದಿದ್ದರೂ ದಮನಿತ ವರ್ಗಗಳಿಗೆ ಮೊದಲ ಬಾರಿಗೆ ಮೀಸಲಾತಿ ನೀಡುವುದರ ಮೂಲಕ ಅವರು ಸಮಾಜದ ಮುಖ್ಯವಾಹಿನಿಗೆ ತ್ವರಿತವಾಗಿ ಬರಲು ಕಾರಣಕರ್ತರಾದರು. ಮೀಸಲಾತಿಯ ಪ್ರಯೋಜನ ಪಡೆದ ಹಿಂದುಳಿದ ವರ್ಗದವರು ಉತ್ತಮ ಶಿಕ್ಷಣ ಮತ್ತು ಅವಕಾಶಗಳನ್ನು ಪಡೆಯುವುದರ ಮೂಲಕ ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ಕ್ರಮೇಣ ಉತ್ತಮಪಡಿಸಿಕೊಂಡರು ಎನ್ನಲು ಅಡ್ಡಿ ಇಲ್ಲ. ಇದಕ್ಕೆಲ್ಲಾ ಕಾರಣವಾದ ಮಿಲ್ಲರ್ ವರದಿಗೆ ಇಂದು ಶತಕದ ಸಂಭ್ರಮ.ಇಂದಿನ ಪೀಳಿಗೆಗೆ ಇದರ ಬಗ್ಗೆ ಅರಿವು ಮುಖ್ಯ.