ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರು, ಮಾ.25: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಜಕ್ಕೂರು ಬಳಿ ನಡೆದಿರುವುದು ವರದಿಯಾಗಿದೆ.
ಸಂತ್ರಸ್ತೆಯನ್ನು ಆಕೆಯ ತಾಯಿ ಬಾರ್ಗರ್ಲ್ ಆಗುವಂತೆ ಸತಾಯಿಸಿದ್ದರು. ಅದಕ್ಕೆ ಆಕೆ ನಿರಾಕರಿಸಿದ್ದರಿಂದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ತಾಯಿಯೇ ಡೀಲ್ ಕೊಟ್ಟಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು, ದುಷ್ಕರ್ಮಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಯುವಕರಿಂದ ಹಣ ಪಡೆದು ತಾಯಿಯು ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಲಾಗಿದ್ದು, ಯುವತಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಜಕ್ಕೂರು ಕೆರೆ ಬಳಿ ಕರೆತಂದು ಹಲ್ಲೆಗೆ ಮುಂದಾಗಿದ್ದರು. ಆಗ ಯುವತಿ ಕಿರುಚಾಡಿದಾಗ ಸಾರ್ವಜನಿಕರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಿಸಿ ಯಲಹಂಕ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾರ್ಗರ್ಲ್ ಆಗುವಂತೆ ಒತ್ತಾಯಿಸುತ್ತಿದ್ದ ಯುವತಿಯ ತಾಯಿಯ ಮೇಲೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.