ಉಡುಪಿ: ಪ್ರಮೋದ್ ಮಧ್ವರಾಜ್ ಆಸ್ತಿ 10 ತಿಂಗಳಲ್ಲಿ 8.84 ಕೋಟಿ ರೂ. ಏರಿಕೆ
ಉಡುಪಿ, ಮಾ.25: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಪ್ರಮೋದ್ ಮಧ್ವರಾಜ್, ಅದರೊಂದಿಗೆ ಸಲ್ಲಿಸಿರುವ ಅಫಿದವಿತ್ನಲ್ಲಿ ಒಟ್ಟು 87.30 ಕೋಟಿ ರೂ.ಗಳ ಚರಾಸ್ಥಿ ಹಾಗೂ ಸ್ಥಿರಾಸ್ಥಿ ಯನ್ನು ಘೋಷಿಸಿದ್ದಾರೆ.
ಇದು ಕಳೆದ ಎಪ್ರಿಲ್ನಲ್ಲಿ ಪ್ರಮೋದ್, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿಯ ವಿವರಕ್ಕೆ ಹೋಲಿಸಿದರೆ 8.84 ಕೋಟಿ ರೂ.ಏರಿಕೆಯಾಗಿದೆ. 10 ತಿಂಗಳ ಹಿಂದೆ ಅವರು ಒಟ್ಟು 78.46 ಕೋಟಿ ರೂ. ಮೌಲ್ಯದ ಚರಾಸ್ಥಿ-ಸ್ಥಿರಾಸ್ಥಿಯನ್ನು ಘೋಷಿಸಿದ್ದರು.
ಒಟ್ಟು 83,71,38,439 ರೂ. ಮೌಲ್ಯದ ಚರಾಸ್ಥಿ ಹಾಗೂ ಒಟ್ಟು 3,59,67,420ರೂ. ಮೌಲ್ಯದ ಸ್ಥಿರಾಸ್ಥಿಯನ್ನು ಹೊಂದಿರುವ ಪ್ರಮೋದ್ ಮಧ್ವರಾಜ್, ಅಫಿದವಿಟ್ನಲ್ಲಿ ಯಾವುದೇ ಕಾರು, ಸ್ವಂತ ವಾಹನ ಇಲ್ಲ ಎಂಬುದಾಗಿ ಘೋಷಿಸಿದ್ದಾರೆ. ಅದೇ ರೀತಿ ಪತ್ನಿ ಹಾಗು ಮಗಳ ಹೆಸರಿನಲ್ಲೂ ವಾಹನಗಳಿಲ್ಲ.
ಪ್ರಮೋದ್ ಪತ್ನಿ ಸುಪ್ರಿಯಾ ಪ್ರಮೋದ್ ಹೆಸರಿನಲ್ಲಿ ಒಟ್ಟು 5,70,06,557 ರೂ. ಮೌಲ್ಯದ ಚರಾಸ್ಥಿ ಮತ್ತು 2,86,55,000 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪುತ್ರಿ ಪ್ರತ್ಯಕ್ಷ ಪ್ರಮೋದ್ ಒಟ್ಟು 3,19,72,362 ರೂ. ಆಸ್ತಿಯನ್ನು ಹೊಂದಿದ್ದಾರೆ. ಪ್ರಮೋದ್ ಬಳಿ 7.65 ಲಕ್ಷ ರೂ.ನಗದು, ಪತ್ನಿ ಬಳಿ 2.94 ಲಕ್ಷ ರೂ.ನಗದು ಇವೆ.
ಪ್ರಮೋದ್ ವಿವಿಧ ಬ್ಯಾಂಕ್ ಖಾತೆಗಳಲ್ಲಿ 72 ಲಕ್ಷ ರೂ. ವಿವಿಧ ಬಾಂಡ್ಗಳಲ್ಲಿ 11.07 ಕೋಟಿ ರೂ. ಹಾಗೂ ಎನ್ಎಸ್ಎಸ್, ಪೋಸ್ಟಲ್, ವಿಮೆಗಳಲ್ಲಿ 1.55ಕೋಟಿ ರೂ.ಹೂಡಿಕೆ ಮಾಡಿದ್ದಾರೆ. 10 ಲಕ್ಷ ರೂ.ಮೌಲ್ಯದ 424.26ಗ್ರಾಂ ಚಿನ್ನ ಅವರ ಬಳಿ ಇದೆ. ಪ್ರಮೋದ್ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಕಳೆದ ಚುನಾವಣೆಯ ವೇಳೆ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾದರೂ, ಅದಕ್ಕೆ ಬಿ ರಿಪೋರ್ಟ್ ಹಾಕಲಾಗಿದೆ ಎಂದು ಅಫಿದವಿತ್ನಲ್ಲಿ ತಿಳಿಸಲಾಗಿದೆ.