ಜಾಗೃತಿ ಮೂಲಕ ಕ್ಷಯ ರೋಗ ನಿಯಂತ್ರಣ ಸಾಧ್ಯ: ಸಿಂಧೂ ಬಿ. ರೂಪೇಶ್
ಉಡುಪಿ, ಮಾ.25: ಕ್ಷಯ ರೋಗದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸಬಹುದು ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದ್ದಾರೆ.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಉಡುಪಿ, ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ(ಎನ್ಟಿಸಿಪಿ ಯುನಿಟ್), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಹಾಗೂ ವಿದ್ಯಾರತ್ನ ಕಾಲೇಜ್ ಆಪ್ ನರ್ಸಿಂಗ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತರಬೇತಿ ಕೇಂದ್ರದ ಪ್ರಗತಿ ಸೌಧದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಕ್ಷಯರೋಗ ಅತ್ಯಂತ ಅಪಾಯಕಾರಿಯಾಗಿದ್ದು, ಇದರ ನಿಯಂತ್ರಣಕ್ಕಾಗಿ ಹಲವಾರು ಕಾರ್ಯಾಗಾರವನ್ನು ನಡೆಸಿದರೂ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ಜಾಗೃತಿ ಮೂಡಿಸುವ ಮೂಲಕ 2020-25ಕ್ಕೆ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತರಬೇತಿ ಕೇಂದ್ರದ ನಿರ್ದೇಶಕ ಪುರುಷೋತ್ತಮ್ ಮಾತನಾಡಿ, 25-30 ವರ್ಷಗಳ ಹಿಂದೆ ದೇಶದಲ್ಲಿ ಕ್ಷಯ ರೋಗ ವ್ಯಾಪಕವಾಗಿ ಹಬ್ಬಿತ್ತು. ಇತ್ತೀಚಿನ ದಿನಗಳಲ್ಲಿ ಕ್ಷಯ ರೋಗದ ನಿರ್ಮೂಲನೆಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕ್ಷಯರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಸೇರಿ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಣಾಧಿಕಾರಿ ನಾಗರಾಜ್ ಕೆ.ವಿ ಮಾತನಾಡಿ, ಕ್ಷಯರೋಗ ನಿಯಂತ್ರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಮಾದರಿ ಕಾರ್ಯ್ರಮಗಳು ನಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉಡುಪಿಯ ವಿದ್ಯಾರತ್ನ ಕಾಲೇಜ್ ಆಪ್ ನರ್ಸಿಂಗ್ನ ವಿದ್ಯಾರ್ಥಿಗಳಿಂದ ಕ್ಷಯರೋಗದ ಜಾಗೃತಿ ಕುರಿತು ಕಿರುನಾಟಕ ಪ್ರದರ್ಶನ ನಡೆಯಿತು.
ಐಎಂಎ ಉಡುಪಿ ಅಧ್ಯಕ್ಷ ಡಾ. ಗುರುಮೂರ್ತಿ, ಉಡುಪಿ ವಿದ್ಯಾರತ್ನ ಕಾಲೇಜ್ ಆಪ್ ನರ್ಸಿಂಗ್ನ ಪ್ರಾಂಶುಪಾಲೆ ಡಾ. ಅನಿತಾ ಸಿ.ರಾವ್, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮದುಸೂಧನ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾದ್ಯಾಯ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ. ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓಂ ಪ್ರಕಾಶ್ ಕಟ್ಟಿಮನಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕ್ಷಯರೋಗದ ಬಗ್ಗೆ ಮಾಹಿತಿ ನೀಡಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ನಾಗರತ್ನ ಸ್ವಾಗತಿಸಿ, ಆಲಂದೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.