ಕಾವೂರು: ಮನೆಯಲ್ಲಿದ್ದ ಚಿನ್ನಾಭರಣ ಕಳವು
ಮಂಗಳೂರು, ಮಾ. 25: ಮನೆ ಮಾಲಕರು ಬೇರೆ ಊರಿಗೆ ತೆರಳಿದ್ದಾಗ ಮನೆಗೆಲಸದಾಕೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ್ದಾಳೆ ಎಂದು ಆರೋಪಿಸಿ ಕಾವೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.
ಕಾವೂರು ಜೆಲ್ಲಿಗುಡ್ಡೆ ನಿವಾಸಿ ಶೆಲ್ಲಿನಾ ಕೊರೆಯ ಚಿನ್ನಾಭರಣ ಕಳೆದುಕೊಂಡವರು.
ಘಟನೆ ವಿವರ: ಮನೆ ಒಡತಿ ಶೆಲ್ಲಿನಾ ಕಳೆದ ತಿಂಗಳು ಸಂಬಂಧಿಕರ ಮರಣದ ಬಗ್ಗೆ ಚಿಕ್ಕಮಗಳೂರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಕೆಲಸ ಮಾಡಿ ಕೊಂಡಿದ್ದ ಲತಾಮರಿಯಾ ಲಸ್ರಾದೋ ಎಂಬವರಿಗೆ ಮನೆಯ ಕೀ ಕೊಟ್ಟು ಮನೆಯನ್ನು ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು. ಶೆಲ್ಲಿನಾ ವಾಪಸಾದಾಗ ಮನೆಯಲ್ಲಿನ ಲಾಕರ್ನಲ್ಲಿದ್ದ 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಲಾಕರ್ನಲ್ಲಿದ್ದ ಮೂರು ಲಕ್ಷ ರೂ. ಮೌಲ್ಯದ ಬಂಗಾರ-ವಜ್ರದ ಹರಳಿನ ನೆಕ್ಲೆಸ್, ಎರಡು ಲಕ್ಷ ರೂ. ಮೌಲ್ಯದ ಸುಮಾರು 100 ಗ್ರಾಂ ತೂಕದ ಚಿನ್ನದ ಬಳೆಗಳು, 60 ಸಾವಿರ ರೂ. ಮೌಲ್ಯದ ಸುಮಾರು 20 ಗ್ರಾ ತೂಕದ ಚಿನ್ನದ ನೆಕ್ಲೆಸ್, 40 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಉಂಗುರಗಳು, 30 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಎರಡು ಸಣ್ಣ ಚೈನ್ಗಳು ಕಳವಾಗಿವೆ. ಈ ಚಿನ್ನಾಭರಣಗಳನ್ನು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಲತಾಮರಿಯಾ ಲಸ್ರಾದೋ ಎಂಬವರು ಕಳವುಗೈದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.