ಉಡುಪಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ, ಮಾ.26: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ರಾತ್ರಿ ಉಡುಪಿಗೆ ಆಗಮಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಅದರಲ್ಲಿ ಭಾಗಿಯಾಗುವ ಉದ್ದೇಶದಿಂದ ಅವರು ಆಗಮಿಸಿದ್ದಾರೆ.
ಸೋಮವಾರ ರಾತ್ರಿ ಉಡುಪಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಮಣಿಪಾಲದ ಕಂಟ್ರಿ ಇನ್ ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. ಬೆಳಗ್ಗೆ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪರ್ಯಾಯ ಪಲಿಮಾರು ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರುಶ್ರೀ, ದೇಶದ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗೆಲ್ಲಬೇಕು ಮತ್ತು ಗೆಲ್ಲುತ್ತಾರೆ. ದೇಶದ ಜನರ ಜೊತೆಗೆ ದೇವರ ಆಶೀರ್ವಾದ ಕೂಡ ಅವರ ಮೇಲೆ ಇದ್ದೇ ಇರುತ್ತದೆ ಎಂದು ಶುಭಹಾರೈಸಿದರು.
ಈ ಸಂದರ್ಭ ಸಚಿವರ ಜೊತೆಗೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಪಕ್ಷದ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಭಾರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.