ಆಸ್ಟ್ರೇಲಿಯಾ ಕ್ವೀನ್ಸ್ ಲ್ಯಾಂಡ್ ವಿವಿ ಜೊತೆಗೆ ಯೆನೆಪೋಯ ವಿ.ವಿ. ಒಪ್ಪಂದ
ಉಳ್ಳಾಲ: ಪರಸ್ಪರ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವಕ್ಕಾಗಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದೊಂದಿಗೆ ಯೆನೆಪೋಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯವು ಪರಸ್ಪರ ಒಡಂಬಡಿಕೆಯ ತಿಳುವಳಿಕೆ ಪತ್ರಕ್ಕೆ ಗುರುವಾರ ದೇರಳಕಟ್ಟೆಯ ಯೆನೆಪೊಯ ದಂತ ವೈದ್ಯಕೀಯ ಕಾಲೇಜು ಆಡಿಟೋರಿಯಂನಲ್ಲಿ ಜರಗಿದ ಸಮಾರಂಭದಲ್ಲಿ ಸಹಿ ಹಾಕುವುದರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ದಂತ ವಿಭಾಗದ ಮುಖ್ಯಸ್ಥೆ ಪ್ರೊ. ಪೌಲೀನ್ ಫೋರ್ಡ್ ಮಾತನಾಡಿ, ಸಮಗ್ರ ತತ್ವಶಾಸ್ತ್ರಗಳನ್ನು ಒಳಗೊಂಡು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸಮುದಾಯವನ್ನು ಶೈಕ್ಷಣಿಕ ಅಭಿವೃದ್ಧಿಗೊಳಿಸುತ್ತಿರುವ ಯೆನೆಪೋಯ ಸಂಸ್ಥೆಯ ಜೊತೆಗಿನ ಒಪ್ಪಂದ ಹೊಸ ಮೈಲಿಗಲ್ಲು ಆಗಲಿದೆ ಎಂದು ಹೇಳಿದರು.
ಅದ್ಭುತವಾದ ಮೂಲಸೌಕರ್ಯಗಳನ್ನು ಒದಗಿಸುತ್ತಿರುವ ಯೆನೆಪೋಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿ.ವಿ ಜತೆಗಿನ ಒಪ್ಪಂದದ ಮೂಲಕ ಪರಸ್ಪರ ಜ್ಞಾನವನ್ನು ಹಂಚಿಕೊಳ್ಳಲು ಸಾಧ್ಯ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪರಸ್ಪರ ಒಪ್ಪಂದ ಸಹಕಾರಿ. ಈ ಮೂಲಕ ನಾವೀನ್ಯತೆಯನ್ನು ಕಂಡುಕೊಳ್ಳುವ ಸಂಶೋಧಕರಿಗೆ ತಮ್ಮೊಳಗಿರುವ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಿಗುವಂತಹ ಅವಕಾಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ ಜ್ಞಾನವಿನಿಮಯಕ್ಕೆ ಉತ್ತಮ ವೇದಿಕೆಯಾಗಿರುವ ಈ ಅವಕಾಶವನ್ನು ಯೆನೆಪೋಯ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜ್ಞಾನ ವೃದ್ಧಿಸುವುದರ ಜತೆಗೆ ತಮ್ಮ ಭವಿಷ್ಯ ವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಡಾ.ಎಂ. ವಿಜಯಕುಮಾರ್, ಉಪ ಕುಲಪತಿ ಡಾ.ಸಿ.ವಿ. ರಘುವೀರ್, ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಹಾಗೂ ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಷನ್ನ ಕಾರ್ಯದರ್ಶಿ ಡಾ. ಅಖ್ತರ್ ಹುಸೈನ್ ಉಪಸ್ಥಿತರಿದ್ದರು.
ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ.ಹೆಚ್ ಶ್ರೀಪತಿ ರಾವ್ ಸ್ವಾಗತಿಸಿದರು. ಡಾ. ಅರುಣ್ ಭಾಗವತ್ ಒಪ್ಪಂದದ ಮಹತ್ವ ತಿಳಿಸಿದರು. ದಂತ ಕಾಲೇಜು ಉಪ ಪ್ರಾಂಶುಪಾಲ ಡಾ. ಶ್ಯಾಂ ಎಸ್ ಭಟ್ ವಂದಿಸಿದರು.
ಡಾ. ಅಖ್ತರ್ ಹುಸೈನ್ ಅವರು ರಚಿಸಿದ ಮಂಗಳೂರು ಕಲೆ ಕಂಬಳದ ಓಟದ ಚಿತ್ರವನ್ನು ಪ್ರೊ. ಪೌಲಿನ್ ಫೋರ್ಡ್ ಅವರಿಗೆ ಗೌರವಪೂರ್ವಕವಾಗಿ ನೀಡಿದರು.