ಪಟಾಕಿ ಉದ್ಯಮ: ಮಾಲಿನ್ಯ, ನೌಕರಿಗಳು ಮತ್ತು ಆದಾಯ
2018ರ ಅಕ್ಟೋಬರ್ ಸುಪ್ರೀಂಕೋರ್ಟ್ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ಪಟಾಕಿ, ಸುಡುಮದ್ದು ಉದ್ಯಮವನ್ನು ಮುಚ್ಚುವಂತೆ ಆದೇಶಿಸಿತ್ತು. ಆದರೆ 2019ರ ಮಾರ್ಚ್ 12ರಂದು ಅದು ಈಗ ಇರುವ ಸುಡುಮದ್ದನ್ನು ನಿಷೇಧಿಸುವ ತನ್ನ ಆಜ್ಞೆಯನ್ನು ಮರುಪರಿಶೀಲಿಸಿತು. ಸುಡುಮದ್ದುಗಳಿಗಿಂತ ವಾಹನಗಳು ಹೆಚ್ಚು ಮಾಲಿನ್ಯ ಉಂಟು ಮಾಡುತ್ತವೆಂದು ಸಾಬಿತು ಪಡಿಸುವಂತಹ ಯಾವುದಾದರೂ ತುಲನಾತ್ಮಕ ಅಧ್ಯಯನ ನಡೆಸಲಾಗಿದೆಯೇ? ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತು ಎಸ್. ಅಬ್ದುಲ್ ನಝೀರ್‌ರವರ ನ್ಯಾಯಪೀಠವೊಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.
ಕೋರ್ಟ್‌ನ ಹೃದಯ ಪರಿವರ್ತನೆಗೆ ಬೇರೆ ಒಂದು ಕಾರಣವೂ ಇತ್ತು. ತಮ್ಮ ಆಜ್ಞೆಯ ಸಮಗ್ರ ಸುಡುಮದ್ದು ಉದ್ಯಮವನ್ನು ತಟಸ್ಥಗೊಳಿಸಿ ಸಾವಿರಾರು ಮಂದಿ ನೌಕರಿ ಕಳೆದುಕೊಂಡಿದ್ದಾರೆಂದು ನ್ಯಾಯಮೂರ್ತಿಗಳಿಗೆ ಅನ್ನಿಸಿತು.
ವಾಹನ ಉದ್ಯಮಕ್ಕೆ ಹೋಲಿಸಿದಾಗ, ಮಾಲಿನ್ಯಕ್ಕೆ ಸಂಬಂಧಿಸಿದ ತಾವೂ ಚಿಕ್ಕಪುಟ್ಟ (ಮೈನರ್) ಅಪರಾಧಿಗಳೆಂದು ಪಟಾಕಿ ತಯಾರಕರು ಕೋರ್ಟಿಗೆ ಅರಿಕೆ ಮಾಡಿಕೊಂಡಿದ್ದರು.
ನ್ಯಾಯಾಲಯವು ನಾಗರಿಕರ ಬದುಕುವ ಹಕ್ಕನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿತು. ಈ ಹಕ್ಕಿನಲ್ಲಿ ನೌಕರಿ ಮಾಡುವ ಹಕ್ಕು ಹಾಗೂ ವ್ಯಾಪಾರ ಮಾಡುವ ಹಕ್ಕು ಕೂಡಾ ಸೇರಿದೆ. ನಾವು ನಿರುದ್ಯೋಗ ಸೃಷ್ಟಿಸಲು ಬಯಸುವುದಿಲ್ಲ. ಈ ವ್ಯಾಪಾರವೂ (ಸುಡುಮದ್ದು ತಯಾರಿಕೆ) ಪರವಾನಗಿ ಪಡೆದಿರುವ ಒಂದು ವ್ಯಾಪಾರವಾಗಿರುವುದರಿಂದ ಅದು ಅಕ್ರಮವಲ್ಲ. ಅದನ್ನು ಹೇಗೆತಾನೇ ನಿಲ್ಲಿಸಲು ಸಾಧ್ಯ? ಹೆಚ್ಚೆಂದರೆ ಇದನ್ನು ನಿಯಂತ್ರಿಸಬಹುದು.
ಆದರೆ ಸುಪ್ರೀಂಕೋರ್ಟಿನ ಈ ನಿಲುವುಗಳು ಗಂಭೀರ ಸ್ವರೂಪದ ದೋಷಗಳಿಂದ ಕೂಡಿದೆ. ಸುಡುಮದ್ದು ಉದ್ಯಮ ಇಡೀ ವರ್ಷ ನಡೆಯುವ ಉದ್ಯಮವಲ್ಲ; ಅದು ಸೀಸನಲ್ ಉದ್ಯಮ; ವಾಹನ ಉದ್ಯಮದ ಹಾಗೇ ಅದು ಇಡೀ ವರ್ಷ ವಾತಾವರಣ ಮಾಲಿನ್ಯ ಉಂಟು ಮಾಡುವುದಿಲ್ಲ; ಅದು ಚಿಕ್ಕ ಪುಟ್ಟ ಅಪರಾಧಿ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಒಂದು ಅಪರಾಧ ಸೀಸನಲ್ ಇರಲಿ, ಅಥವಾ ಯಾವಾಗಲೂ / ವರ್ಷ ಇಡೀ ನಡೆಯುವುದಿರಲಿ, ಅಪರಾಧ ಅಪರಾಧವೇ. ಅಲ್ಲದೇ ಗಂಭೀರ ಸ್ವರೂಪದ ಅಪರಾಧವಲ್ಲ ಎಂಬ ಕಾರಣಕ್ಕಾಗಿ ಗಂಭೀರ ಅಪರಾಧ ಎಸಗುವ ಹಲವರು ಶಿಕ್ಷೆ ಇಲ್ಲದೆ ಪಾರಾಗುತ್ತಾರೆ ಎಂಬ ಕಾರಣಕ್ಕಾಗಿ ಸಣ್ಣಪುಟ್ಟ ಅಪರಾಧ ಎಸಗುವವರನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸದೆ ಅವರನ್ನು ದೋಷಮುಕ್ತಗೊಳಿಸಿ ಬಿಡುತ್ತದೆಯೇ? ಬಿಡಬಹುದೇ?
ನೌಕರಿಯ ಹಕ್ಕು ಮತ್ತು ವ್ಯಾಪಾರ ಮಾಡುವ ಹಕ್ಕು ಬಹಳ ಮುಖ್ಯವಾದ ಹಕ್ಕುಗಳು ಹೌದಾದರೂ ಜೀವನ, ಪ್ರಾಣ, ಆರೋಗ್ಯ ಮತ್ತು ಪರಿಸರ ಜನರಿಗೆ ಇದೆಲ್ಲಕ್ಕಿಂತಲೂ ಹೆಚ್ಚು ಮಹತ್ವ ಪೂರ್ಣವೆಂಬುದನ್ನು ನ್ಯಾಯಾಲಯ ಅಲ್ಲಗಳೆಯುವಂತಿಲ್ಲ. ವ್ಯಾಪಾರ ಮಾಡುವ ಹಕ್ಕು ವ್ಯಾಪಾರಿಗೆ ಉದ್ಯಮಿಗೆ ವಾತಾವರಣವನ್ನು ಮಾಲಿನ್ಯಗೊಳಿಸುವ ಹಕ್ಕನ್ನು ನೀಡುವುದಿಲ್ಲ.
ಕಾರ್ಖಾನೆಗಳಿಂದಾಗಿ ಉಂಟಾಗುವ ವಾತಾವರಣ ಮಾಲಿನ್ಯ ಸಂಬಂಧಿ ಕೆಲವು ಮೊಕದ್ದಮೆಗಳನ್ನು ಈಗ ಪರಿಶಿಲಿಸೋಣ.
ನಮ್ಮ ಸಂವಿಧಾನವು ಪರಿಸರ ಮಾಲಿನ್ಯದ ಬಗ್ಗೆ ಬಹಳ ಕಾಳಜಿ ತೋರುತ್ತದೆ. ಸಂವಿಧಾನದ 48-ಎ ಪರಿಚ್ಚೇದವು ಸರಕಾರ ಪರಿಸರವನ್ನು ರಕ್ಷಿಸಿ ಉತ್ತಮಪಡಿಸ ಬೇಕೆಂದು ನಿರ್ದೇಶಿಸುತ್ತದೆ. ಹಾಗೆಯೇ 51-ಎ ಪರಿಚ್ಚೇದವು ಪ್ರಾಕೃತಿಕ ಪರಿಸರವನ್ನು ಕಾಪಾಡುವುದು ಮತ್ತು ಉತ್ತಮಪಡಿಸುವುದು ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಒಂದು ಎಂದು ಹೇಳುತ್ತದೆ.
ಇಷ್ಟಾಗಿಯೂ ಪರಿಸರ ಮಾಲಿನ್ಯ ತಡೆ ಇಲ್ಲದೆ ಮುಂದುವರಿದಿದೆ. ಕಾನ್ಪುರದ ಕೆಲವು ಚರ್ಮದ ಕಾರ್ಖಾನೆಗಳ ತ್ಯಾಜ್ಯವನ್ನು ನದಿಗೆ ಬಿಟ್ಟಿದ್ದರಿಂದಾಗಿ ಗಂಗಾ ನದಿ ಭಾರೀ ಮಾಲಿನ್ಯಕ್ಕೆ ಗುರಿಯಾಯಿತು. ಹಾಗಾಗಿ ಆ ಕಾರ್ಖಾನೆಗಳನ್ನು ಮುಚ್ಚಬೇಕೆಂದು ಸುಪ್ರೀಂಕೋರ್ಟ್ ಆಜ್ಞೆಮಾಡ ಬೇಕಾಯಿತು. ಇದರಿಂದಾಗಿ ಸಮಸ್ಯೆ ಉಂಟಾಗುತ್ತದೆಂದು ತಿಳಿದಿದ್ದರೂ ಜನರಿಗೆ ಜೀವನ ಆರೋಗ್ಯ ಮತ್ತು ಪರಿಸರ ತುಂಬ ಹೆಚ್ಚು ಮುಖ್ಯವೆಂದು ಅದು ಹೇಳಿತು.
ಓಲಿಯಂ ಅನಿಲ ಸೋರಿಕೆ ಪ್ರಕರಣದಲ್ಲಿ ಯಾವುದೇ ಉದ್ಯಮವು ನಾಗರಿಕ ಬದುಕು ಮತ್ತು ಆರೋಗ್ಯ ಹಾಗೂ ಪರಿಸರಕ್ಕೆ ಅಪಾಯ ತಂದೊಡ್ಡುವಂತಿಲ್ಲ; ಯಾರಿಗೂ ತನ್ನ ಉದ್ಯಮದಿಂದ ಅಪಾಯಕಾರಿ ಪರಿಣಾಮಗಳಾಗದಂತೆ ನೋಡಿಕೊಳ್ಳುವ ಸಂಪೂರ್ಣ ಕರ್ತವ್ಯ ಉದ್ಯಮದ್ದಾಗಿದೆ ಎಂದು ನ್ಯಾಯಾಲಯ ಹೇಳಿತು.
ಮೊದಲ ನೋಟಕ್ಕೆ ಇದು ತುಂಬ ಕಠಿಣ, ಕ್ರೂರ ಅನ್ನಿಸಬಹುದಾದರೂ ನ್ಯಾಯಾಲಯ ಈ ಕ್ರಮಕ್ಕೆ ನೀಡಿರುವ ಸಮರ್ಥನೆ ಹೀಗಿದೆ: ಯಾವುದೇ ಉದ್ಯಮವು ತನ್ನಿಂದಾಗಿ ಸಂತ್ರಸ್ತರಾಗುವವರಿಗೆ ಆಗುವ ವಿವಿಧ ರೀತಿಯ ನಷ್ಟಗಳಿಗೆ, ಹಾನಿಗಳಿಗೆ ಸಂಪೂರ್ಣ ಪರಿಹಾರ ನೀಡುವ ಜವಾಬ್ದಾರಿ ವಹಿಸಿಕೊಂಡಲ್ಲಿ ಮಾತ್ರ ಲಾಭಕ್ಕಾಗಿ ಅದು ಮಾಡುವ ಅದರ ಅಪಾಯಕಾರಿ ಕಾರ್ಯವನ್ನು, ಚಟುವಟಿಕೆಯನ್ನು ಸಹಿಸಿಕೊಳ್ಳಬಹುದು. ಆದರೆ ಯಾವ ಉದ್ಯಮವೂ ಈ ಜವಾಬ್ದಾರಿಯನ್ನು ವಹಿಸಿಕೊಳ್ಳವುದಿಲ್ಲ.
ಅಲ್ಲದೆ ವೆಲ್ಲೂರು ನಾಗರಿಕ ವೇದಿಕೆ ಮೊಕದ್ದಮೆಯ ತೀರ್ಪಿನಲ್ಲಿ ನ್ಯಾಯಮೂರ್ತಿ ಕುಲದೀಪ್ ಸಿಂಗ್ ತಾಳಿಕೊಳ್ಳಬಲ್ಲ (ಸಸ್ಟೈನಬಲ್) ಅಭಿವೃದ್ಧಿಯ ಮುಖ್ಯ ತತ್ವಗಳೆಂದರೆ ಮುಂಜಾಗರೂಕತಾ ತತ್ವಗಳು ಮತ್ತು ಮಾಲಿನ್ಯ ಉಂಟುಮಾಡುವವ (ಪರಿಹಾರ) ತೆರಬೇಕು ಎಂಬ ತತ್ವಗಳು ಎಂದಿದ್ದಾರೆ. ನಮ್ಮ ಪರಿಸರ ಕಾನೂನಿನ ಪರಿಧಿಯಲ್ಲಿ ಇದೊಂದು ಮೈಲುಗಲ್ಲು ತೀರ್ಪು.
ಮಾರ್ಚ್ 12ರಂದು ನ್ಯಾಯಪೀಠವು ವ್ಯಾಪಾರ/ಉದ್ಯಮ ಮಾಡುವ ಹಕ್ಕಿನ ಕುರಿತು ಮಾತನಾಡಿದಾಗ ಅದು ಈ ತೀರ್ಪನ್ನು ನಿರ್ಲಕ್ಷಿಸಿತು. ಯಾವುದೆ ವ್ಯಾಪಾರವನ್ನು ನಡೆಸುವ ಸಂಪೂರ್ಣ ಹಕ್ಕು ಎಂಬುದಿಲ್ಲ. ಅನುಮತಿ ಇರುವುದು ತಾಳಿಕೊಳ್ಳಬಲ್ಲ ವ್ಯಾಪಾರಕ್ಕೆ ಮಾತ್ರ. ಉದ್ಯಮವೊಂದನ್ನು ಆರಂಭಿಸುವುದರಿಂದ ಜನರಿಗೆ ಉದ್ಯೋಗ ಮತ್ತು ಸರಕಾರಕ್ಕೆ ಆದಾಯ ಸಿಗುತ್ತದೆಂಬ ಬಗ್ಗೆ ಎರಡು ಮಾತಿಲ್ಲ. ಆದರೆ ಆರೋಗ್ಯ ಮತ್ತು ಪರಿಸರ ಮಾಲಿನ್ಯದಿಂದ ನಮ್ಮ ಜನರನ್ನು ಕಾಪಾಡುವುದು ಅತ್ಯಂತ ಮುಖ್ಯ ಮತ್ತು ಉದ್ಯೋಗ ಸೃಷ್ಟಿಗಿಂತ ತುಂಬ ಮುಖ್ಯವೆಂಬ ಬಗ್ಗೆ ಒಂದೇ ಅಭಿಪ್ರಾಯ ಸಾಧ್ಯ. ಪಟಾಕಿ/ ಸುಡುಮದ್ದು ಅಥವಾ ವಾಹನಗಳ ತಯಾರಕರು ನಮ್ಮ ಜನರ ಮೂಲಭೂತ ಹಕ್ಕುಗಳ ಬಗ್ಗೆ ತಕರಾರು ಮಾಡುವಂತಿಲ್ಲ. ಜನರ ಬದುಕುವ ಮೂಲಭೂತ ಹಕ್ಕಿನ ರಕ್ಷಣೆ ಯಾವುದೇ ನಾಗರಿಕ ಪ್ರಜಾಸತ್ತಾತ್ಮಕ ಸರಕಾರದ ಅಥವಾ ನ್ಯಾಯಾಲಯದ ಪ್ರಾಥಮಿಕ ಕಾಳಜಿಯಾಗಬೇಕು.
ಕೃಪೆ: countercurrents