ದ.ಕ.ಜಿಲ್ಲೆಗೆ ಈ ಬಾರಿ ಕೇವಲ 424 ಆರ್ಟಿಇ ಸೀಟು!
ಅನುದಾನಿತ 86 ಮತ್ತು ಅನುದಾನ ರಹಿತ 10 ಸಹಿತ 96 ಶಾಲೆಗಳಿಗೆ ಮಾತ್ರ ಅನ್ವಯ
ಆರ್ಟಿಇ ಪರಿಷ್ಕೃತ ನಿಯಮಾವಳಿ ಪ್ರಕಾರ ಸೀಟು ಹಂಚಿಕೆ ಮಾಡಲಾಗಿದೆ. ಪ್ರವೇಶಾತಿಗೆ ಇಲಾಖೆಯು ಸಕಲ ಸಿದ್ಧತೆ ಮಾಡುತ್ತಿದೆ. ಸರಕಾರದ ನಿಯಮ ಪ್ರಕಾರ ಮುಂದಿನ ವರ್ಷದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ನಡೆಸಲು ಸಜ್ಜಾಗಿರುವ ಶಾಲೆಗಳ ಪಟ್ಟಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುತ್ತಿದೆ.
-ವೈ.ಶಿವರಾಮಯ್ಯ, ಡಿಡಿಪಿಐ ದ.ಕ.ಜಿಲ್ಲೆ
ಮಂಗಳೂರು, ಮಾ.26: ಎಲ್ಲರಿಗೂ ಶಿಕ್ಷಣ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನ ಆದೇಶದ ಮೇರೆಗೆ ಜಾರಿಗೊಳಿಸಲಾಗುತ್ತಿರುವ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಸೀಟುಗಳ ಮೀಸಲು ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೊನೆಗೂ ಬಿಡುಗಡೆಗೊಳಿಸಿದೆ. ಅದರಂತೆ ದ.ಕ.ಜಿಲ್ಲೆಯ ಅನುದಾನಿತ 86 ಮತ್ತು ಅನುದಾನ ರಹಿತ 10 ಸಹಿತ 96 ಶಾಲೆಗಳಲ್ಲಿ ಕೇವಲ 424 ಸೀಟುಗಳು ಲಭ್ಯವಿದೆ. ಪ್ರತೀ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೇ.25 ಸೀಟುಗಳನ್ನು ಆರ್ಟಿಇ ಕಾಯ್ದೆಯಡಿ ಅದರಲ್ಲೂ ಶೇ.7.25ಕ್ಕೆ ಕಡಿಮೆಯಾಗದಂತೆ ಎಸ್ಸಿಗೆ, ಶೇ.1.5ಕ್ಕೆ ಕಡಿಮೆಯಾಗದಂತೆ ಎಸ್ಟಿಗೆ, ಶೇ.16 ಕಡಿಮೆಯಾಗದಂತೆ ಇತರ ಜಾತಿಯ ಮಕ್ಕಳಿಗೆ ಸೀಟು ಮೀಸಲಿಡಬೇಕಾಗಿದೆ. ಹಾಗಾಗಿ ಈ ಹಿಂದೆ ಸಾವಿರಾರು ಮಂದಿ ಆರ್ಟಿಇ ಸೀಟುಗಳನ್ನು ಪಡೆಯುತ್ತಿದ್ದರೆ, ಈ ಬಾರಿ 500ರ ಗಡಿ ದಾಟದಿರುವುದು ಆರ್ಟಿಇ ಸೀಟುಗಳ ಆಕಾಂಕ್ಷಿಗಳಿಗೆ ಭಾರೀ ನಿರಾಶೆ ಹುಟ್ಟಿಸಿದೆ. ದ.ಕ.ಜಿಲ್ಲೆಯಲ್ಲಿ ಒಟ್ಟು 7 ಶೈಕ್ಷಣಿಕ ವಿಭಾಗವಿದೆ. ಅದರಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ವಿಭಾಗವಿದ್ದರೆ ಮಂಗಳೂರು ತಾಲೂಕಿನಲ್ಲಿ ಮಂಗಳೂರು ಉತ್ತರ ಮತ್ತು ದಕ್ಷಿಣ ಹಾಗು ಮೂಡುಬಿದಿರೆ ವಿಭಾಗವಿದೆ. ಈ ಹಿಂದಿನ ಆರ್ಟಿಇ ನಿಯಮಕ್ಕೆ ತಿದ್ದುಪಡಿ ತಂದ ಕಾರಣ ಬಹುತೇಕ ಖಾಸಗಿ ಶಾಲೆಗಳಲ್ಲಿ ಆರ್ಟಿಇ ಸೀಟುಗಳು ಲಭ್ಯವಿಲ್ಲ. ಅಂದರೆ ಪ್ರತಿಯೊಂದು ಗ್ರಾಮ, ವಾರ್ಡ್ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿದ್ದರೆ ಆರ್ಟಿಇ ಸೀಟು ಪಡೆಯಲು ಅವಕಾಶವಿಲ್ಲ. ಆಕಾಂಕ್ಷಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮೊದಲ ಆದ್ಯತೆ ನೀಡಬೇಕು. ಸರಕಾರಿ ಶಾಲೆಗಳಿಲ್ಲದಿದ್ದರೆ ಗ್ರಾಮ/ವಾರ್ಡ್ ವ್ಯಾಪ್ತಿಯ ಅನುದಾನಿತ ಖಾಸಗಿ ಶಾಲೆಗಳಿಗೆ ಸೇರ್ಪಡೆಗೊಳಿಸಬಹುದಾಗಿದೆ. ಸರಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳಿಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಿಗೆ ಸೇರಿಸಲು ಅವಕಾಶವಿದೆ. ಅದರಂತೆ ಸದ್ಯ ಮಂಗಳೂರು ಉತ್ತರದಲ್ಲಿ 3 ಮತ್ತು ಮಂಗಳೂರು ದಕ್ಷಿಣದ 7 ಖಾಸಗಿ ಶಾಲೆಗಳಲ್ಲಿ ಮಾತ್ರ ಅವಕಾಶ ಒದಗಿಸಲಾಗಿದೆ. ಈ 10 ಶಾಲೆಗಳಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳಿಗೆ ಪ್ರವೇಶವಿದೆ ಎಂಬ ನಿಖರ ಮಾಹಿತಿ ಇಲ್ಲ. ಕಳೆದ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆ ಆಧರಿಸಿ 2019-20ನೇ ಸಾಲಿನಿಂದ ನೆರೆಹೊರೆಯಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಗಳಲ್ಲಿ ಆರ್ಟಿಇ ಸೀಟು ಒದಗಿಸುವುದು ಮತ್ತು ಸರಕಾರಿ ಶಾಲೆಗಳಲ್ಲೇ ಹಂತಹಂತವಾಗಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸುವ ಮಹತ್ವದ ನಿರ್ಧಾರವನ್ನು ರಾಜ್ಯದ ಮೈತ್ರಿ ಸರಕಾರ ಕೈಗೊಂಡ ಹಿನ್ನಲೆಯಲ್ಲಿ ಆರ್ಟಿಇ ಸೀಟುಗಳಲ್ಲಿ ಕಡಿತಗೊಳಿಸಲಾಗಿದೆ ಎಂಬ ಮಾತು ಅಧಿಕಾರಿ ವಲಯದಿಂದ ಬರುತ್ತಿದೆ.
ಆರ್ಟಿಇ ಪರಿಷ್ಕೃತ ನಿಯಮಾವಳಿ ಪ್ರಕಾರ ಮಂಗಳೂರು ಉತ್ತರದ 3 ಮತ್ತು ದಕ್ಷಿಣದ 7 ಖಾಸಗಿ ಶಾಲೆಗಳನ್ನು ಹೊರತುಪಡಿಸಿದರೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶೈಕ್ಷಣಿಕ ವಲಯಗಳ ಖಾಸಗಿ ಶಾಲೆಗಳಲ್ಲಿ ಈ ಬಾರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವೇ ಇಲ್ಲ. ಕಳೆದ ವರ್ಷ (2018-19) ಜಿಲ್ಲೆಯಲ್ಲಿ ಅನುದಾನಿತ ಮತ್ತು ಖಾಸಗಿ ಒಳಗೊಂಡು 2,727 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿತ್ತು. ಆದರೆ, ಪ್ರಸಕ್ತ ಸಾಲಿನ ಮಿತಿಯನ್ನು 424ಕ್ಕೆ ಸೀಮಿತಗೊಳಿಸಲಾಗಿದೆ.
ಪ್ರವೇಶಾತಿಗೆ ವಯಸ್ಸಿನ ಮಿತಿ
- ಎಲ್ಕೆಜಿ ಸೇರ್ಪಡೆಗೆ 2014ರ ಆಗಸ್ಟ್ 1ರಿಂದ 2015ರ ಆಗಸ್ಟ್ 1ರೊಳಗೆ ಮಕ್ಕಳು ಜನಿಸಿರಬೇಕು.
- 1ನೆ ತರಗತಿ ಸೇರ್ಪಡೆಗೆ 2012ರ ಆಗಸ್ಟ್ 1ರಿಂದ 2013ರ ಆಗಸ್ಟ್ 1ರೊಳಗೆ ಮಕ್ಕಳು ಜನಿಸಿರಬೇಕು.
ಸರಕಾರಿ ಶಾಲೆಗಳಿಗೆ ಹೊಡೆತ
2012-13ನೆ ಶೈಕ್ಷಣಿಕ ವರ್ಷದಿಂದ ಆರ್ಟಿಇ ಯೋಜನೆಯಡಿ ಎಲ್ಲ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ.25 ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಅವಕಾಶ ದೊರೆಯುತ್ತಿತ್ತು. ಇದರಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಾ ಬಂತು. ಇದರಿಂದ ಎಚ್ಚೆತ್ತ ಶಿಕ್ಷಣ ಇಲಾಖೆಯು ನಿಯಮವನ್ನು ಪರಿಷ್ಕರಿಸಿತು. ಅದರಂತೆ ಆರ್ಟಿಇ ಸೀಟುಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಇಂಗ್ಲಿಷ್ ತರಗತಿಗೆ ಪ್ರಸ್ತಾವ
ಪ್ರಥಮ ಹಂತದಲ್ಲಿ ರಾಜ್ಯದ 1 ಸಾವಿರ ಸರಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಒದಗಿಸಲು ಸರಕಾರ ಕೈಗೊಂಡ ತೀರ್ಮಾನದಂತೆ ಪ್ರತೀ ವಿಧಾನಸಭಾ ಕ್ಷೇತ್ರದಿಂದ ಐದು ಶಾಲೆಗಳ ಪಟ್ಟಿಯನ್ನು ಇಲಾಖೆಯು ಕೇಂದ್ರ ಕಚೇರಿಗೆ ಕಳುಹಿಸಿದೆ.
ಇಂಗ್ಲಿಷ್ ಶಿಕ್ಷಕರ ಲಭ್ಯತೆ, ವಿದ್ಯಾರ್ಥಿಗಳ ಬಲ, ಶಿಕ್ಷಕರು ಮತ್ತು ಪೋಷಕರ ಬೆಂಬಲ, ಶಾಲೆಯ ಮೂಲಸೌಕರ್ಯ ಇತ್ಯಾದಿ ಮಾನದಂಡಗಳನ್ನು ಆಧರಿಸಿ ಇಂಗ್ಲಿಷ್ ತರಗತಿ ಆರಂಭಿಸಲು ಉದ್ದೇಶಿಸಿರುವ ಶಾಲೆಗಳ ಪಟ್ಟಿ ಸಿದ್ದಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೈಬರ್ ದಂಧೆ
ಆರ್ಟಿಇ ಸೀಟುಗಳ ಸಂಖ್ಯೆಯನ್ನು ಸರಕಾರ ಕಡಿತಗೊಳಿಸಿರುವ ಮಾಹಿತಿ ಗೊತ್ತಿದ್ದರೂ ಕೆಲವು ಖಾಸಗಿ ಸೈಬರ್ ಸೆಂಟರ್ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ‘ಮೊದಲು ಅರ್ಜಿ ಹಾಕಿ, ಮತ್ತೆ ನೋಡೋಣ’ ಎನ್ನುತ್ತಾ ಕೆಲವು ಸೈಬರ್ ಸೆಂಟರ್ನವರು ಅರ್ಜಿ ಹಾಕಿಸಲು ಪ್ರೇರೇಪಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಮಾಹಿತಿ ಇಲ್ಲದ ಪೋಷಕರು ಎಲ್ಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸೈಬರ್ ಸೆಂಟರ್ಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ.
ವಲಯವಾರು ಮೀಸಲು ಸೀಟುಗಳ ಸಂಖ್ಯೆ
1.ಮಂಗಳೂರು ಉತ್ತರ 102
2.ಮಂಗಳೂರು ದಕ್ಷಿಣ 138
3.ಮೂಡುಬಿದಿರೆ 16
4.ಬಂಟ್ವಾಳ 77
5. ಬೆಳ್ತಂಗಡಿ 24
6.ಪುತ್ತೂರು 41
7. ಸುಳ್ಯ 26
ಆರ್ಟಿಇ ಸೀಟು ಲಭ್ಯವಿರುವ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳು
ಮಂಗಳೂರು ಉತ್ತರ ವಲಯ
1.ಬಜ್ಪೆ ಬೆಥನಿ ಪ್ರೈಮರಿ ಸ್ಕೂಲ್
2. ಬಂಗ್ರಕೂಳೂರಿನ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
3. ಕೆಮ್ರಾಲ್ ಪಕ್ಷಿಕೆರೆಯ ಸಂತ ಜೂಡ್ ಇ.ಎಂ.ಲೋವರ್ ಪ್ರೈಮರಿ ಸ್ಕೂಲ್.
ಮಂಗಳೂರು ದಕ್ಷಿಣ ವಲಯ
1. ಅಡಾ್ಯರ್ನ ಗುಣಶ್ರೀ ವಿದ್ಯಾಲಯ ಹೈಯರ್ ಪ್ರೈಮರಿ ಸ್ಕೂಲ್
2. ಅಡ್ಯಾರ್ನ ದಿ ಕ್ಯಾಂಬ್ರಿಜ್ ಇಂಟರ್ನ್ಯಾಷನಲ್ ಸ್ಕೂಲ್
3. ಕದ್ರಿ ನಂತೂರಿನ ಸ್ವಾಮಿ ಸದಾನಂದಸರಸ್ವತಿ ಹೈಯರ್ ಪ್ರೈಮರಿ ಸ್ಕೂಲ್
4. ಕದ್ರಿ ನಂತೂರಿನ ಪದುವಾ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್
5. ಕದ್ರಿಯ ಚಿನ್ಮಯ ಹೈಯರ್ ಪ್ರೈಮರಿ ಸ್ಕೂಲ್
6. ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್
7. ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಹೈಯರ್ ಪ್ರೈಮರಿ ಸ್ಕೂಲ್.