ಮಾನವ ಪ್ರಜ್ಞೆ ಇಲ್ಲದ ಮತಗಟ್ಟೆಗಳತ್ತ ನಮ್ಮ ಹೆಜ್ಜೆ
ಭಾರತ ಮತ್ತೊಂದು ಮಹಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ವಸುದೈವ ಕುಟುಂಬಕಂ ತತ್ವ ಭಾರತದ ಇತಿಹಾಸದ ಯಾವ ಕಾಲಘಟ್ಟದಲ್ಲಿ ಉದ್ಭವಿಸಿತೋ ತಿಳಿಯದು. ಆದರೆ ಭಾರತದ ಇಂದಿನ ರಾಜಕಾರಣವನ್ನು ನೋಡಿದರೆ ಇದು ವಿಕೃತ ರೀತಿಯಲ್ಲಿ ಸಾಕಾರಗೊಳ್ಳುತ್ತಿರುವುದು ಸ್ಪಷ್ಟ. ಇಡೀ ವಿಶ್ವವೇ ಒಂದು ಕುಟುಂಬದಂತೆ ಎಂದು ಬೀಗುತ್ತಿದ್ದ ನಾವು ಈಗ ಒಂದು ಕುಟುಂಬವೇ ವಿಶ್ವ ಎನ್ನುವ ಹಂತಕ್ಕೆ ಬಂದು ತಲುಪಿದ್ದೇವೆ. ಭಾರತದ ಸಾರ್ವಭೌಮ ಪ್ರಜೆಗಳ ಮಡಿಲು ನಿಜಕ್ಕೂ ವಿಶಾಲವಾದದ್ದು. ಗಂಗೆಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದೆ. ಏಕೆಂದರೆ ದಶಕಗಳಿಂದ ಈ ದೇಶದ ಆಳುವ ವರ್ಗಗಳ ಪ್ರತಿನಿಧಿಗಳು ತಮ್ಮ ಒಡಲ ಕುಡಿಗಳನ್ನು ಈ ಮಡಿಲಿನಲ್ಲಿ ತುಂಬುತ್ತಲೇ ಇದ್ದಾರೆ. ಪ್ರತಿಯೊಂದು ಚುನಾವಣೆಯಲ್ಲೂ ‘‘ನನ್ನ ಮಗ/ಮಗಳು/ಸೊಸೆ/ಅಳಿಯ/ಮೊಮ್ಮಗ/ಮೊಮ್ಮಗಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಅರ್ಪಿಸಿಕೋ, ಕಾಪಾಡು’’ ಎನ್ನುವ ಆರ್ತನಾದ ಕೇಳಿಬರುತ್ತಲೇ ಇದೆ. ಈ ಮಡಿಲು ತುಂಬಿಸುವುದು ಸ್ವಾರ್ಥಕ್ಕಾಗಿ ಅಲ್ಲ ತಾಯಿ, ಇದು ಈ ದೇಶದ ಮಣ್ಣಿನ ಋಣ ತೀರಿಸಲು ಎನ್ನುವ ಮಾರ್ಮಿಕ ನುಡಿ ಗಳನ್ನೂ ಕೇಳಿ ಕೇಳಿ ಸಾಕಾಗಿದೆ. ಇಲ್ಲಿ ಭಾಷಾ ಬಳಕೆಯಲ್ಲಿ ವ್ಯತ್ಯಾಸ ಕಾಣಬಹುದು ಆದರೆ ಇರಾದೆ ಒಂದೇ ಎನ್ನುವುದನ್ನು ಗಮನಿಸಬೇಕು.
2019ರ ಚುನಾವಣೆಗಳು ಭಾರತದ ಭವಿಷ್ಯವನ್ನು ವಿಭಿನ್ನ ಮಾರ್ಗದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಗುತ್ತಿರುವುದು ಆತಂಕಕಾರಿ ವಿಚಾರ. ಭಾರತದ ಸಾರ್ವಭೌಮ ಪ್ರಜೆಗಳಾದ ನಾವು ಯಾವುದನ್ನು ತಾತ್ವಿಕವಾಗಿ ವಿರೋಧಿಸುತ್ತಿರುವೆಯೋ ಅದನ್ನೇ ತಾರ್ಕಿಕ ನೆಲೆಯಲ್ಲಿ ಒಪ್ಪಿಕೊಳ್ಳುತ್ತಿದ್ದೇವೆ. ಇದು ವಿಡಂಬನೆ ಎನಿಸಿದರೂ ಸತ್ಯ. ಆಳುವ ವರ್ಗಗಳು ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಈ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲೂ ಇವೆ. ಆದರೆ ನಮ್ಮ ಪ್ರಶ್ನೆಗಳು ಈ ತಾರ್ಕಿಕ ನೆಲೆಗಳಲ್ಲಿ ಹುದುಗಿಹೋಗುತ್ತಿವೆ. ತಾತ್ವಿಕ ನೆಲೆ ಬರಡಾಗುತ್ತಿದೆ. ಈ ದೇಶದ ಪ್ರಜೆಗಳಾಗಿ ನಮಗೆ ಸಂವಿಧಾನ ನೀಡಿರುವ ಪರಮೋಚ್ಚ ಹಕ್ಕು ಎಂದರೆ ಆಡಳಿತ ವ್ಯವಸ್ಥೆಯ ವಿರುದ್ಧ ದನಿ ಎತ್ತುವುದು. ಆಳುವವರ ಪ್ರತಿ ಹೆಜ್ಜೆಯನ್ನೂ ಪ್ರಶ್ನಿಸುವುದು. ಸರಕಾರಗಳ ತಪ್ಪು ಹೆಜ್ಜೆಗಳನ್ನು ಸರಿಪಡಿಸುವುದು. ಈ ಸಾಂವಿಧಾನಿಕ ಹಕ್ಕುಗಳನ್ನೇ ಕಸಿದುಕೊಳ್ಳಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಆದರೆ ಪ್ರಭುತ್ವ ಇದರಿಂದ ಪಾಠ ಕಲಿತಿಲ್ಲ. ಸಂವಿಧಾನದ ಮೌಲ್ಯಗಳನ್ನು ಮತ್ತು ನಿಯಮಗಳನ್ನು ವಾಮ ಮಾರ್ಗಗಳ ಮೂಲಕ ಗಾಳಿಗೆ ತೂರುವ ಪ್ರಯತ್ನಗಳು ನಡೆಯುತ್ತಿವೆ.
ಈ ಬಾರಿ ಮತ್ತೊಂದು ಕೂಗು ಕೇಳಿಬರುತ್ತಿದೆ. ಹೊಸ ಭಾರತಕ್ಕಾಗಿ ನಾನು ಕಡ್ಡಾಯವಾಗಿ ಮತ ಚಲಾಯಿಸುತ್ತೇನೆ ಎಂಬ ಈ ಕೂಗು ಒಂದು ನಿರ್ದಿಷ್ಟ ತಾತ್ವಿಕ, ಸೈದ್ಧಾಂತಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವೂ ಹೌದು. ನವ ಭಾರತ ನಿರ್ಮಾಣಕ್ಕಾಗಿ ಮತ ಚಲಾಯಿಸುವುದು ಸ್ವಾಗತಾರ್ಹವೂ ಹೌದು. ಆದರೆ ಈ ನವಭಾರತದ ಪರಿಕಲ್ಪನೆ ಹೇಗಿರುತ್ತದೆ ಎಂದು ಯೋಚಿಸಿದಾಗ ಈ ಕೂಗು ಆತಂಕಕಾರಿಯಾಗಿ ಕಾಣುತ್ತದೆ. ಸ್ವತಂತ್ರ ಭಾರತ ತನ್ನ ಏಳು ದಶಕಗಳ ಪಯಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಸಾಕಷ್ಟು ಹಿಂಸೆ ಅನುಭವಿಸಿದೆ. ಅಷ್ಟೇ ಪ್ರಗತಿಯನ್ನೂ ಕಂಡಿದೆ. ಇಂದು ನಮ್ಮ ದೇಶ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಲ್ಲಿ ಒಂದು ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ಮುನ್ನ ಬೆನ್ನ ಹಿಂದಿನ ಹೆಜ್ಜೆ ಗುರುತುಗಳನ್ನು ಗೌರವದಿಂದ ಗುರುತಿಸುವುದು ನಮ್ಮ ಕರ್ತವ್ಯವಲ್ಲವೇ ? ದುರಂತ ಎಂದರೆ 2019ರ ನಂತರದ ನವ ಭಾರತವನ್ನು ಬಯಸುತ್ತಿರುವ ಕಾವಲುಗಾರ ಮನಸ್ಸುಗಳು ಈ ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ಯತ್ನಿಸುತ್ತಿವೆ.
ಬಸಿದ ಬೆವರು, ಹರಿಸಿದ ನೆತ್ತರು ಮತ್ತು ಪಟ್ಟ ಶ್ರಮವನ್ನು ನಿರಾಕರಿಸಲು ಯತ್ನಿಸುತ್ತಿವೆ. ಭಾರತ ವಿಶ್ವ ಭೂಪಟದಲ್ಲಿ ಹೇಗೆ ವಿಜೃಂಭಿಸುತ್ತಿದೆ ಎನ್ನುವುದು ಆತ್ಮರತಿಗೆ ನೆರವಾಗುವ ಒಂದಂಶ. ಈ ಆತ್ಮರತಿಗೆ ಎಲ್ಲರೂ ಬಲಿಯಾಗಬೇಕೆಂದಿಲ್ಲ. ಏಕೆಂದರೆ ಭಾರತದ ಈ ವಿಜೃಂಭಣೆಗೂ ವಾಸ್ತವ ಸನ್ನಿವೇಶಕ್ಕೂ ಇರುವ ಕಂದರವನ್ನು ಗಮನಿಸುವ ಮನಸ್ಸುಗಳು ಈ ದೇಶದಲ್ಲಿ ಇನ್ನೂ ಬದುಕಿವೆ. ಚೀನಾ ಮತ್ತು ಅಮೆರಿಕವನ್ನು ಮೀರಿ ಭಾರತ ಬೆಳೆಯುತ್ತಿದೆ ಎಂದರೆ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತ ಆಳುವ ವರ್ಗಗಳ ಪ್ರತಿನಿಧಿಗಳು ಸಂಭ್ರಮಿಸಬಹುದು ಅಥವಾ ಆಡಳಿತಾರೂಢ ಪಕ್ಷಗಳ ಬೆಂಬಲಿಗರು ಸಂಭ್ರಮಿಸಬಹುದು. ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ತಮ್ಮ ಸ್ವಂತಿಕೆಯನ್ನೂ ಮಾರಿಕೊಂಡಿರುವ ಮಾಧ್ಯಮಗಳು ಇದನ್ನು ವೈಭವೀಕರಿಸಬಹುದು. ಆದರೆ ಚೀನಾ ಮತ್ತು ಅಮೆರಿಕಕ್ಕಿಂತಲೂ ಮುಂದಿರುವುದು ಎಂದರೇನು ? ಈ ಪ್ರಶ್ನೆಯನ್ನು ಕಳೆದ 25 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಮತ್ತು ಇಂದಿಗೂ ಬಲಿಯಾಗುತ್ತಿರುವ ಲಕ್ಷಾಂತರ ರೈತರ ಕುಟುಂಬಗಳು ಕೇಳಿದರೆ ಏನು ಉತ್ತರಿಸುವುದು? ನಾಳಿನ ಕೂಳಿಗಾಗಿ ದಿನನಿತ್ಯ ಅಲೆಮಾರಿಗಳಂತೆ ಅಂಡಲೆಯುತ್ತಾ ಬದುಕು ಸವೆಸುತ್ತಿರುವ ವಲಸೆ ಕಾರ್ಮಿಕರು, ಕೃಷಿ ಕಾರ್ಮಿಕರು, ಅನೌಪಚಾರಿಕ ಕ್ಷೇತ್ರದ ಕಾರ್ಮಿಕರು, ಗ್ರಾಮೀಣ ಕೂಲಿಗಳು ಕೇಳಿದರೆ ಏನು ಉತ್ತರಿಸುವುದು? ಅವರಿಗೆ ಜಿಡಿಪಿಯ ಪರಿವೆ ಇರುವುದಿಲ್ಲ, ಆಮದು ರಫ್ತುಗಳ ಜ್ಞಾನ ಇರುವುದಿಲ್ಲ. ಇದೊಂದು ರೀತಿ ಸಾವಿನ ಮನೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದಂತೆ ಎನಿಸುವುದಿಲ್ಲವೇ?
ಇಂತಹ ಸೂತಕದ ಮನೆಯ ಮುಂದೆ ನಾವಿಂದು ಚುನಾವಣೆ ಎನ್ನುವ ಚಪ್ಪರ ಕಟ್ಟುತ್ತಿದ್ದೇವೆ. ನವ ಭಾರತದ ಹರಿಕಾರರಿಗೆ ಭಯೋತ್ಪಾದನೆಯೂ ಬಂಡವಾಳವಾಗುತ್ತಿದೆ, ಯೋಧರ ಸಾವೂ ಬಂಡವಾಳವಾಗುತ್ತಿದೆ. ಪುಲ್ವಾಮದಲ್ಲಿ ಸತ್ತವರೆಷ್ಟು, ಬಾಲಕೋಟ್ನಲ್ಲಿ ಹತರಾದವರೆಷ್ಟು ಎಂದು ದಿನನಿತ್ಯ ಪಠಿಸುತ್ತಿರುವ ನಾಗರಿಕ ಸಮಾಜ ಮತ್ತು ಮಾಧ್ಯಮ ಲೋಕ ವಿದರ್ಭದಲ್ಲಿ ಎಷ್ಟು ರೈತರು ಸತ್ತಿದ್ದಾರೆ, ಸಾಯುತ್ತಿದ್ದಾರೆ, ದೇಶಾದ್ಯಂತ ಎಷ್ಟು ರೈತರು ನೇಣುಗಂಬ ಏರುತ್ತಿದ್ದಾರೆ ಎಂದು ಮಾತನಾಡುವುದಿರಲಿ ಯೋಚಿಸುತ್ತಲೂ ಇಲ್ಲ. ಏಕೆ? ಇವರು ಹುತಾತ್ಮರಾಗುವುದಿಲ್ಲ ನಿಜ ಏಕೆಂದರೆ ಇವರ ಆತ್ಮಗಳಿಗೆ ಆಳುವ ವರ್ಗಗಳು ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಬಿಡುತ್ತವೆ. ಸತ್ತ ಕೂಡಲೇ ಪರಿಹಾರದ ಚೆಕ್ಕುಗಳು ಮನೆ ಬಾಗಿಲಿಗೆ ಬಂದು ಬೀಳುತ್ತವೆ. ಮೂವತ್ತು ಲಕ್ಷ ಜನರ ಒಕ್ಕೊರಲ ದನಿಗೆ ಕಿವಿಗೊಡದ ಒಂದು ಆಡಳಿತ ವ್ಯವಸ್ಥೆ ಸತ್ತ ಕೂಡಲೇ ಪರಿಹಾರ ಘೋಷಿಸುವ ನೈತಿಕತೆ ಹೊಂದಿರಲು ಸಾಧ್ಯವೇ ? ಈ ದೇಶದಲ್ಲಿ ಇದು ಸಾಧ್ಯ. ನವ ಪರ್ವದ ಹೊಸ್ತಿಲಲ್ಲಿರುವ ಭಾರತೀಯರಲ್ಲಿ ರೈತರು ಎದ್ದು ಕಾಣುತ್ತಾರೆ. ಏಕೆಂದರೆ ಅವರ ಸಮಸ್ಯೆ ಮೂರು ದಶಕಗಳಿಂದ ಪರಿಹಾರ ಕಂಡಿಲ್ಲ ಮತ್ತು ಕೃಷಿ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಲೇ ಇದೆ. 60 ವರ್ಷಗಳ ಕಾಲ ಆಳಿದವರು ಏನು ಮಾಡಿದ್ದಾರೆ ಎಂಬ ಪ್ರಶ್ನೆಯೊಂದಿಗೇ ಐದು ವರ್ಷಗಳ ನಿಷಕ್ರೆಿಯ ಆಡಳಿತ ನಡೆಸಿದ ಸರಕಾರಕ್ಕೆ 60 ವರ್ಷಗಳ ಸಾಧನೆ ಏನೆಂದು ತಿಳಿದಿದೆ. ಆದರೆ 1989ರ ಮತೀಯ ರಾಜಕಾರಣಕ್ಕೆ ಬಲಿಯಾಗಿರುವ ಒಂದು ಇಡೀ ಪೀಳಿಗೆಗೆ ಇದು ತಿಳಿದಿಲ್ಲ.
ಈ ಪೀಳಿಗೆಗೆ ನೈತಿಕ ಸ್ಥೈರ್ಯ ತುಂಬುತ್ತಿರುವ ಮೇಲ್ ಮಧ್ಯಮ ವರ್ಗಗಳ ಒಂದು ಗುಂಪಿಗೆ ಇದು ತಿಳಿದಿದ್ದರೂ ಬದಲಾವಣೆಯ ಹಪಾಹಪಿ ಮತ್ತು ಶೋಷಿತ ವರ್ಗಗಳ ಬಗ್ಗೆ ಇರುವ ತಿರಸ್ಕಾರ ಭಾವನೆ ಈ ವರ್ಗಗಳನ್ನು ನಿಷ್ಕ್ರಿಯರನ್ನಾಗಿಸಿದೆ. ಒಂದು ವೇಳೆ ನೆಹರೂ ಆಡಳಿತದಲ್ಲಿ ವಸಾಹತು ಆಳ್ವಿಕೆಯನ್ನು ಹಳಿಯುತ್ತಲೇ ಕಾಲ ಕಳೆದಿದ್ದರೆ, ಹಸಿರು ಕ್ರಾಂತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ನೆಹರೂ ಆಡಳಿತವನ್ನು ಹಳಿಯುತ್ತಲೇ ಮುನ್ನಡೆದಿದ್ದರೆ ಇಂದು ನಾವು ಕಾಣುತ್ತಿರುವ ಭಾರತ ಅಂದಿಗೇ ಮುಗಿದುಹೋಗುತ್ತಿತ್ತು. ಆಧುನಿಕ ಭಾರತದ ನಿರ್ಮಾಣದಲ್ಲಿ ಆರು ದಶಕಗಳ ಆಡಳಿತ ವ್ಯವಸ್ಥೆಯ ಋಣಾತ್ಮಕ ಅಂಶಗಳನ್ನು ಸರಿಪಡಿಸುವುದು ಇಂದಿನ ತುರ್ತು ನಿಜ, ಆದರೆ ಈ ಆಡಳಿತಾವಧಿಗಳಲ್ಲಿನ ಧನಾತ್ಮಕ ಕೊಡುಗೆಗಳನ್ನು ಅಲ್ಲಗಳೆಯುತ್ತಲೇ ತಮ್ಮ ಭದ್ರ ಕೋಟೆಯನ್ನು ನಿರ್ಮಿಸಲು ಮುಂದಾಗುವುದು ಅಕ್ಷಮ್ಯವಷ್ಟೇ ಅಲ್ಲ ಅಪ್ರಬುದ್ಧ ಧೋರಣೆಯೂ ಹೌದು.
ತನ್ನ ಹಾದಿಯನ್ನು ಸರಿಯಾಗಿ ಅರಿಯದವನೇ ತಾನು ಕ್ರಮಿಸಿ ಬಂದ ಹಾದಿಯಲ್ಲಿನ ಹೊಂಡಗಳನ್ನು ಲೆಕ್ಕ ಹಾಕುತ್ತಾ ಕೂರುತ್ತಾನೆ. ಇದು ಚಾರಿತ್ರಿಕ ಸತ್ಯ. ನವ ಭಾರತಕ್ಕಾಗಿ ಹಾತೊರೆಯುತ್ತಿರುವ ಒಂದು ವರ್ಗದವರಲ್ಲಿ ಪ್ರಜಾತಂತ್ರ ವ್ಯವಸ್ಥೆಯೊಳಗೇ ಮೃದು ಸರ್ವಾಧಿಕಾರ ಸ್ಥಾಪನೆಯಾಗುವುದೂ ಅಪ್ಯಾಯಮಾನವಾಗುತ್ತಿರುವುದು ಪ್ರಸ್ತುತ ಸಂದರ್ಭದ ದುರಂತಗಳಲ್ಲೊಂದು. ದೇಶದ ಹಿತಾಸಕ್ತಿಗಾಗಿ ಎನ್ನುವ ಘೋಷಣೆ ಈ ದೇಶದ ಶೋಷಿತ, ದಮನಿತ, ಅವಕಾಶವಂಚಿತ ಜನಸಮುದಾಯಗಳನ್ನು ವಿನಾಶದ ಅಂಚಿಗೆ ತಳ್ಳಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಇದೀಗ ಮತ್ತೊಂದು ಹಂತವನ್ನು ತಲುಪಿದ್ದೇವೆ. ಲಕ್ಷಾಂತರ ಎಕರೆ ಅರಣ್ಯ ಭೂಮಿಯನ್ನು ಛತ್ತೀಸ್ಗಡದಲ್ಲಿ ಕಾರ್ಪೊರೇಟ್ ಉದ್ಯಮಿಗಳಿಗೆ ನೀಡಲಾಗುತ್ತಿದೆ. ಅರಣ್ಯ ಹಕ್ಕುಗಳ ಕಾಯ್ದೆಯಡಿ 10 ಲಕ್ಷಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಸಿದ್ಧತೆ ನಡೆದಿದೆ. ನಗರೀಕರಣ ಮತ್ತು ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ಭೂಸ್ವಾಧೀನ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದ್ದು ಕರ್ನಾಟಕವನ್ನೂ ಸೇರಿದಂತೆ ಹಲವು ರಾಜ್ಯ ಸರಕಾರಗಳು ಸಾರ್ವಜನಿಕ ಬಳಕೆಗಾಗಿ ಯಾವುದೇ ರೀತಿಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೆರವಾಗುವಂತಹ ಕಾನೂನು ಜಾರಿಗೊಳಿಸುತ್ತಿವೆ. ಇವೆಲ್ಲದರ ನಡುವೆ ಕೃಷಿ ಬಿಕ್ಕಟ್ಟು ಉಲ್ಬಣಿಸುತ್ತಿದ್ದು ರೈತರ ಆಕ್ರಂದನ ಮುಗಿಲು ಮುಟ್ಟುತ್ತಿದೆ. ಇದಕ್ಕೆ ಕಾರಣ ಯಾರು ? ಪ್ರಜ್ಞೆ ಇದ್ದವರು ಯೋಚಿಸಲಿ.
ಮತ್ತೊಂದೆಡೆ ಆಧುನಿಕ ಭಾರತದ ದೇವಾಲಯಗಳು ಎಂದೇ ಕರೆಯಲ್ಪಡುತ್ತಿದ್ದ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಅವಸಾನ ಹೊಂದುತ್ತಿರುವುದನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತಿದ್ದೇವೆ. ಕೋಟ್ಯಂತರ ಕಾರ್ಮಿಕರು ಪ್ರತಿವರ್ಷ ಮುಷ್ಕರ ಹೂಡುತ್ತಿದ್ದಾರೆ. ಎಚ್ಎಎಲ್, ಬಿಎಸ್ಸೆನ್ನೆಲ್, ಒಎನ್ಜಿಸಿ, ವಿಮಾ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕುಗಳು ನಿಧಾನಗತಿಯಲ್ಲಿ ಮಂಡಿಯೂರಿ ನಡೆಯುತ್ತಲೇ ಕಾರ್ಪೊರೇಟ್ ಉದ್ಯಮಿಗಳ ಕೂಪಕ್ಕೆ ಬೀಳುತ್ತಿವೆ, ಬೀಳಲು ಸಜ್ಜಾಗುತ್ತಿವೆ. ದುರಂತ ಎಂದರೆ ಕೆಂಬಾವುಟದಡಿ ತಮ್ಮ ಕೂಳಿಗಾಗಿ ತಾವು ಅವಲಂಬಿಸುವ ಸಾರ್ವಜನಿಕ ಉದ್ದಿಮೆಗಳ ರಕ್ಷಣೆಗಾಗಿ ಹೋರಾಡುವ ಮನಸ್ಸುಗಳೇ ಚುನಾವಣೆಗಳಲ್ಲಿ ಕಾರ್ಪೊರೇಟ್ ಉದ್ಯಮಿಗಳಿಗೆ ದೇಶವನ್ನು ಒಪ್ಪಿಸುತ್ತಿರುವ ಪಕ್ಷಗಳಿಗೆ ಮತ ನೀಡುತ್ತಾರೆ. ಇದು ರಾಜಕೀಯ ಪ್ರಜ್ಞೆಯ ಕೊರತೆಯೋ, ನಾಗರಿಕ ಪ್ರಜ್ಞೆಯ ಕೊರತೆಯೋ ಯೋಚಿಸಬೇಕಿದೆ. ಬ್ಯಾಂಕ್ ವಿಲೀನದ ಹಿಂದಿನ ರಾಜಕೀಯ ಪ್ರೇರಣೆ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಜನತೆಗೆ ಮನದಟ್ಟು ಮಾಡುವ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿದೆ.
ಆದರೆ ಬ್ಯಾಂಕ್ ರಾಷ್ಟ್ರೀಕರಣವೇ ಮಹಾ ದ್ರೋಹ ಎಂದು ಹೇಳುವ ರಾಜಕೀಯ ನಾಯಕರು ಸೃಷ್ಟಿಸಿರುವ ಭ್ರಮಾಲೋಕ ಈ ನಾಗರಿಕ ಸಮಾಜವನ್ನು ನಿಷ್ಕ್ರಿಯಗೊಳಿಸಿದೆ. ದಿನನಿತ್ಯ ಡಾಲರ್ ವಿರುದ್ಧ ಭಾರತದ ರೂಪಾಯಿಯ ಮೌಲ್ಯ ಎಷ್ಟಾಗಿದೆ ಎಂದು ನೋಡುತ್ತಲೇ ಸಂಭ್ರಮಿಸುತ್ತಿರುವ ಮಧ್ಯಮ ವರ್ಗಗಳಿಗೆ ಮತ್ತು ವಿರಮಿಸುತ್ತಿರುವ ಆಳುವ ವರ್ಗಗಳಿಗೆ ತಮ್ಮ ನಿತ್ಯ ಜೀವನದಲ್ಲಿ ಜನಸಾಮಾನ್ಯರು, ಶ್ರಮಜೀವಿಗಳು ತಮ್ಮ ಜೇಬಿನೊಳಗಿನ ರೂಪಾಯಿಯನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ ಎನ್ನುವ ಪರಿವೆ ಇದೆಯೇ ? ದೇಶದ ಪ್ರತಿಷ್ಠಿತ ಸಂಸ್ಥೆ ಬಿಎಸ್ಸೆನ್ನೆಲ್ ನೌಕರರಿಗೆ ವೇತನ ಪಾವತಿಯಾಗಿಲ್ಲ, ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರಿಗೆ ಕೂಲಿ ನೀಡಲಾಗಿಲ್ಲ. ಎಚ್ಎಎಲ್ ಸಂಸ್ಥೆಯಲ್ಲಿ ವೇತನ ನೀಡಲು ಹಣ ಇಲ್ಲ. ಈ ಪರಿಸ್ಥಿತಿಗೆ 60 ವರ್ಷದ ಆಡಳಿತ ಕಾರಣವೋ ಅಥವಾ ಹಾಲಿ ಸರಕಾರ ಹೊಣೆಯೋ? ಖಾಸಗಿ ಬಂಡವಾಳಿಗರ ನಿಯಂತ್ರಣದಲ್ಲಿದ್ದ ಹಣಕಾಸು ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ದೇಶದ ಜನಸಾಮಾನ್ಯರ ಜೀವನ ಹಸನಾಗಿಸಿದ್ದು ಮಹಾದ್ರೋಹ ಎಂದಾದರೆ ಇದೇ ಕ್ಷೇತ್ರವನ್ನು ಮತ್ತೊಮ್ಮೆ ಕಾರ್ಪೊರೇಟ್ ಖಾಸಗಿ ಉದ್ಯಮಿಗಳ ಮಡಿಲಿಗೆ ಹಾಕುವುದನ್ನು ಏನೆನ್ನಬೇಕು? ಪ್ರಜ್ಞೆ ಇದ್ದವರು ಉತ್ತರಿಸಬೇಕು.
ಇಂತಹ ವಿಷಮ ಸನ್ನಿವೇಶದಲ್ಲಿ ನವ ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವತ್ತ ದಾಪುಗಾಲು ಹಾಕುತ್ತಿದೆ. ಆದರೆ ಈ ಅಗ್ರಮಾನ್ಯ ರಾಷ್ಟ್ರದೊಳಗಿನ ಅಗ್ರಹಾರ ಸಂಸ್ಕೃತಿ ಈ ದೇಶವನ್ನು ಮತ್ತೊಮ್ಮೆ ಜಾತಿ ದೌರ್ಜನ್ಯ ಮತ್ತು ಜಾತಿ ತಾರತಮ್ಯಗಳ ಕೂಪಕ್ಕೆ ತಳ್ಳುತ್ತಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶೋಷಣೆಯನ್ನು ಎದುರಿಸುತ್ತಲೇ ಇದ್ದಾರೆ. ದಲಿತರ ಮತ್ತು ಅಲ್ಪಸಂಖ್ಯಾತರ ಮೇಲಿನ ಮಾರಣಾಂತಿಕ ಹಲ್ಲೆಗಳು ಯಾವುದೇ ಶಿಕ್ಷೆಯ ಹಂಗಿಲ್ಲದೆ ನಡೆಯುತ್ತಿವೆ. ದೇಶಭಕ್ತಿಯ ಉನ್ಮಾದ ಶಿಕ್ಷೆಯ ಭೀತಿಯನ್ನು ಹೋಗಲಾಡಿಸುತ್ತಿರುವುದು ಈ ದೇಶ ಫ್ಯಾಶಿಸಂನತ್ತ ಸಾಗುತ್ತಿರುವುದಕ್ಕೆ ಸ್ಪಷ್ಟ ಸಂದೇಶವಾಗಿದೆ. ಈ ಉನ್ಮಾದದ ಅಲೆಯ ನಡುವೆಯೇ ಇನ್ನು ಎರಡು ತಿಂಗಳ ಅವಧಿಯಲ್ಲಿ ನವ ಭಾರತದ ಉದಯವನ್ನು ಕಾಣಲು ಸಜ್ಜಾಗುತ್ತಿದ್ದೇವೆ. ಮತಗಟ್ಟೆಗಳಿಂದ ಹೊರಬೀಳುವ ಫಲಿತಾಂಶ ಯಾವುದೋ ಒಂದು ಪಕ್ಷವನ್ನು ಗದ್ದುಗೆಯಲ್ಲಿ ಕೂರಿಸುತ್ತದೆ. ಇನ್ನು ಐದು ವರ್ಷಗಳ ಕಾಲ ರಫೇಲ್, ಶಾರದಾ, ಮಲ್ಯ, ನೀರವ್, ಚೋಕ್ಸಿ ಮುಂತಾದ ಪದಗಳು ನಾಲಿಗೆಗಳ ಮೇಲೆ ಹರಿದಾಡುತ್ತವೆ. ಆದರೆ ಈ ಮತಗಟ್ಟೆಗಳಿಂದ ಹೊರಬೀಳುವ ಫಲಿತಾಂಶದಿಂದ ಈ ದೇಶದಲ್ಲಿ ಎಷ್ಟು ನಾಲಿಗೆಗಳು ಜೀವಸತ್ವ ಕಳೆದುಕೊಳ್ಳುತ್ತವೆ ಎನ್ನುವ ಪ್ರಶ್ನೆಯೂ ನಮ್ಮೆದುರಿದೆ. ನಾವು ಕಳೆದುಕೊಳ್ಳುತ್ತಿರುವುದು ಮಾನವ ಪ್ರಜ್ಞೆಯನ್ನು, ನಾಗರಿಕ ಪ್ರಜ್ಞೆಯನ್ನು ಆದರೆ ಪಡೆದುಕೊಳ್ಳುತ್ತಿರುವುದು ಏನನ್ನು? ಈ ಪ್ರಶ್ನೆಯೊಂದಿಗೇ ಮತಯಂತ್ರಗಳತ್ತ ನಡೆಯೋಣ. ನಮ್ಮ ಪ್ರಜ್ಞೆ ನಮ್ಮ ನಿಯಂತ್ರಣದಲ್ಲಿರುವುದು ಮುಖ್ಯ.