ಮಾ. 30: ಬಿ.ಸಿ.ರೋಡಿನಲ್ಲಿ ಮತದಾನ ಜಾಗೃತಿ-ಮಾಹಿತಿ ಕಾರ್ಯಕ್ರಮ
ಬಂಟ್ವಾಳ, ಮಾ. 28: ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಮಾ. 30ರಂದು ದಿನವಿಡೀ ಬಿ.ಸಿ.ರೋಡಿನಲ್ಲಿ ನಡೆಯಲಿದೆ.
ಈ ಸಂದರ್ಭ ವಿವಿ ಪ್ಯಾಟ್ ಮತ್ತು ಮತಯಂತ್ರದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಬಿ.ಸಿ.ರೋಡ್ ನಲ್ಲಿರುವ ಪುರಸಭಾ ಬಸ್ ನಿಲ್ದಾಣದಲ್ಲಿ ನಡೆಯುವುದು. ವಕೀಲರ ಸಂಘ ಬಂಟ್ವಾಳ, ಆಟೊ ಚಾಲಕ ಮಾಲಕರ ಸಂಘ (ಬಿಎಂಎಸ್) ಬಂಟ್ವಾಳ, ಗ್ಯಾರೇಜು ಮಾಲಕರ ಸಂಘ ಬಂಟ್ವಾಳ, ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ ಬಂಟ್ವಾಳ ಬಿ.ಸಿರೋಡ್, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ, ಡ್ರೈವರ್ ಅಸೋಸಿಯೇಶನ್ ಬಂಟ್ವಾಳ, ಸೋಶಿಯಲ್ ಡೆಮಾಕ್ರಾಟಿಕ್ ಆಟೊ ಚಾಲಕರ ಯೂನಿಯನ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗ ನೀಡಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9.30ರಿಂದ ಕೈಕಂಬ ಪೊಳಲಿ ದ್ವಾರದಿಂದ ಜಾಥಾ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ನಡೆಯಲಿದ್ದು, ಈ ಸಂದರ್ಭ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು. ಬಳಿಕ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ವಿವಿ ಪ್ಯಾಟ್ ಮತ್ತು ಮತದಾನದ ಕುರಿತು ಮಾಹಿತಿ ನೀಡುವ ಕಾರ್ಯ ಅಂದು ಸಂಜೆ 5 ಗಂಟೆವರೆಗೆ ನಡೆಯಲಿದೆ ಎಂದು ನೀತಿ ಸಂಹಿತೆ ಅಧಿಕಾರಿಯೂ ಆಗಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.