varthabharthi


ಭೀಮ ಚಿಂತನೆ

ಶೀಲವಿಲ್ಲದಂತಹ ಶಿಕ್ಷಣದ ಬೆಲೆ ಶೂನ್ಯ

ವಾರ್ತಾ ಭಾರತಿ : 29 Mar, 2019

ಈ ಮೊದಲು ನಿರ್ಧರಿಸಿದಂತೆಯೇ ರಾವಳಿ ಕ್ಯಾಂಪಿನ ಮಹಿಳಾ ಮಂಡಳದ ವಿನಂತಿಗೆ ಗೌರವ ಕೊಟ್ಟು ದಿನಾಂಕ 3ನೆಯ ಜೂನ್ 1953ರಂದು ಸಾಯಂಕಾಲ 7 ಗಂಟೆಯ ಹೊತ್ತಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಯಿಸಾಹೇಬ ಅಂಬೇಡ್ಕರ್ ಅವರೊಂದಿಗೆ ರಾವಳಿ ಕ್ಯಾಂಪಿಗೆ ಭೇಟಿ ನೀಡಿದರು.
ಸದರಿ ಪ್ರಸಂಗದಲ್ಲಿ ಸ್ತ್ರೀ- ಪುರುಷ ಸಮುದಾಯವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿತ್ತು. ಪ್ರಥಮವಾಗಿ ಅನೇಕ ಭಗಿನಿಯರು ಮತ್ತು ಸಂಸ್ಥೆಗಳವರು ಡಾ. ಬಾಬಾ ಸಾಹೇಬ ಮತ್ತು ಮಾಯಿಸಾಹೇಬ ಅಂಬೇಡ್ಕರ್ ಅವರಿಗೆ ಪುಷ್ಪಹಾರವನ್ನು ಅರ್ಪಿಸಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಈ ಸಂದರ್ಭದಲ್ಲಿ ಭಾಷಣ ಮಾಡುತ್ತಾ ಹೀಗೆ ಹೇಳಿದರು: ಭಗಿನಿಯರೇ ಮತ್ತು ಬಂಧುಗಳೆ,
 ಇಲ್ಲಿನ ಸ್ತ್ರೀಯರು ಕಟ್ಟಡದ ನಿಧಿಗೆ ರೂ.1001ನ್ನು ನೀಡುವುದಾಗಿ ನಿರ್ಧರಿಸಿ ಅದನ್ನು ಇಂದು ನೀಡುವುದರರ ಬಗೆಗೆ ನಾನು ಇವರಿಗೆ ಅಂತಃಕರಣ ಪೂರ್ವಕವಾಗಿ ಆಭಾರಿಯಾಗಿದ್ದೇನೆ. ಈ ಸ್ಥಳಕ್ಕೆ ನಾನು ಬಂದಿರುವುದು ಇದೇ ಮೊದಲು. ಇಂದು ಇಲ್ಲಿನ ಸ್ತ್ರೀಯರು ಹೇಗೆ ಸಹಾಯ ಮಾಡಿದರೋ ಹಾಗೆಯೇ ಇಲ್ಲಿನ ಒಂದು ಸೊಸೈಟಿಯೂ ಕೂಡ ಕಟ್ಟಡದ ನಿಧಿಗೆ ಸಹಾಯ ಮಾಡುವುದಿದೆ. ಈ ಸೊಸೈಟಿಯ ಒಂದಷ್ಟು ಹಣವು ಮುನ್ಸಿಪಾಲಿಟಿಯಲ್ಲಿ ಉಳಿದುಕೊಂಡಿದೆ. ಆ ಹಣವನ್ನು ಅವರು ಕಟ್ಟಡ ನಿಧಿಗೆ ಕೊಡುವವರಿದ್ದಾರೆ.

 ಆ ಮೊತ್ತವು ನನಗೆ ಈ ವಸತಿಯ ವತಿಯಿಂದ ನೀಡಲಾಗಿರುವ ಎಲ್ಲಾ ಮೊತ್ತಕ್ಕಿಂತಲೂ ಬಹಳ ದೊಡ್ಡ ಪ್ರಮಾಣದ್ದಾಗಿದೆ. ಆದರೆ ಅದನ್ನು ತೆಗೆದುಕೊಳ್ಳುವುದಕ್ಕೆ ನಾನು ಮತ್ತೊಮ್ಮೆ ಇಲ್ಲಿಗೆ ಬರಬೇಕಾಗಿದೆ. ನಾನು ಆ ಹೊತ್ತಿಗೆ ಖಂಡಿತವಾಗಿಯೂ ಬರುತ್ತೇನೆ.
ನಿಮಗೆ ಒಂದು ಮಹತ್ವದ ವಿಚಾರವನ್ನು ಈಗ ನಾನು ಹೇಳುವವನಿದ್ದೇನೆ. ಮೊನ್ನೆ ದಿನಾಂಕ 27-05-1943ರಂದು ನೀವು ಬೃಹತ್ ಮಟ್ಟದಲ್ಲಿ ಬುದ್ಧ ಜಯಂತಿಯನ್ನು ಆಚರಣೆ ಮಾಡಿದಿರಿ. ಪ್ರಾಸ್ತಾವಿಕವಾಗಿ ನೀವು ಈ ಮೂಲಕ ಬಹಳ ಶ್ರೇಷ್ಠವಾದ ಒಂದು ಒಳ್ಳೆಯ ಕಾರ್ಯವನ್ನೇ ಮಾಡಿದಿರಿ ಎಂದು ನನಗೆ ಅನ್ನಿಸುತ್ತದೆ. ಆದರೆ ಕೆಲವು ವರ್ತಮಾನ ಪತ್ರಿಕೆಗಳು ಈ ವಿಚಾರವಾಗಿ ವಿರುದ್ಧ ಸ್ವರೂಪದಲ್ಲಿ ವರದಿ ಮಾಡಿದವು. ಎಲ್ಲಿ 30 ಸಾವಿರ ಜನರು ಹಾಜರಿದ್ದರೋ ಅಲ್ಲಿ ಕೇವಲ 3 ಸಾವಿರ ಜನರಷ್ಟೇ ಹಾಜರಾಗಿದ್ದರು ಎಂಬುದಾಗಿ ತಮ್ಮ ವರದಿಯಲ್ಲಿ ಕಣ್ಣಿನ ಮೇಲೆ ಚರ್ಮ ಹೊದ್ದುಕೊಂಡಿದ್ದಂತೆ ವರ್ತಮಾನ ಪತ್ರಿಕೆಗಳು ಮುಚ್ಚಿ ಹಾಕಿದವು. ಆದರೆ ಕೆಲವರು ಬುದ್ಧ ಜಯಂತಿಯ ವರದಿಗೆ ತಮ್ಮ ಪತ್ರಿಕೆಯಲ್ಲಿ ಸ್ಥಾನವನ್ನೇ ಕೊಡಲಿಲ್ಲ. ಅದು ಅವರ ನಿತ್ಯ ವರ್ತನೆಯೇ ಆಗಿದೆ. ಡಾ. ಅಂಬೇಡ್ಕರ್ ಅವರ ಕಾರ್ಯ ಎಂದರೆ ಆಯಿತು, ಒಂದೆಡೆ ಅದನ್ನು ಪ್ರಕಟನೆಯನ್ನೇ ಮಾಡಬಾರದು. ಒಂದೊಮ್ಮೆ ಪ್ರಕಟಿಸಿದರೂ ಆ ಕಾರ್ಯಕ್ಕೆ ಗೌಣತ್ವವನ್ನು ಬಿಂಬಿಸುವುದು ಅಥವಾ ವಿರುದ್ಧ ಸ್ವರೂಪದಲ್ಲಿ ಬರೆಯುತ್ತಿರುವುದು ಸಾಮಾನ್ಯ. ಬುದ್ಧ ಜಯಂತಿಯ ಬಗೆಗೆ ವರ್ತಮಾನ ಪತ್ರಿಕೆಯಲ್ಲಿ ಬಂದ ಟೀಕೆಗಳಿಗೆಲ್ಲ ನಾನು ಈಗ ಸಮರ್ಪಕ ಉತ್ತರವನ್ನು ಕೊಡುವವನಿದ್ದೇನೆ. ಈ ವರ್ತಮಾನ ಪತ್ರಿಕೆಗಳಲ್ಲಿ ಬಂದಂತಹ ಟೀಕೆಗಳು ನಿಮ್ಮ ಮನಸ್ಸಿನ ಮೇಲೆ ವಿರುದ್ಧ ಪರಿಣಾಮಗಳನ್ನು ಉಂಟುಮಾಡಲು ಅವಕಾಶ ಮಾಡಿಕೊಡಬೇಡಿ. ನಾನು ನಿಮಗೆ ಏನನ್ನು ಹೇಳುತಿದ್ದೇನೆಯೋ ಅದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಿರಿ. ಆನಂತರವೇ ಅದರ ಬಗೆಗೆ ವಿಶ್ವಾಸ ಇಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿರಿ.

ವರ್ತಮಾನ ಪತ್ರಿಕೆಗಳಲ್ಲಿ ಇಂತಹ ರಾಗವು ಯಾವಾಗಲೂ ಇದ್ದೇ ಇರುತ್ತದೆ, ‘‘ಏನೆಲ್ಲಾ ಮಾಡಿದರೂ ಅಶ್ಪಶ್ಯತೆಯು ಹೋಗುವುದಿಲ್ಲ. ರಾಜಕಾರಣ ಬೇಕಾದರೂ ಅನ್ನಿರಿ ಅಥವಾ ಧರ್ಮ ಕಾರಣ ಎಂದು ಬೇಕಾದರೂ ಹೇಳಿರಿ ಅಶ್ಪಶ್ಯತೆಯು ಮಾತ್ರ ಹೋಗುವುದಿಲ್ಲ.’’ ಇಂತಹ ಜನರು ನನ್ನೊಂದಿಗೆ ಚರ್ಚೆ ಮಾಡಲು ಬರುವವರಿದ್ದರೆ ಅವರೊಂದಿಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಈ ಜನರು ಜನ್ಮಾರಭ್ಯ ಕುರುಡರಾಗಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಅವರು ಇತಿಹಾಸವನ್ನು ಅಭ್ಯಸಿಸಿಲ್ಲ. ಜಗತ್ತಿನಲ್ಲಿ ಈವರೆಗೆ ಎಷ್ಟೊಂದು ಪರಿವರ್ತನೆಗಳು ಆಗಿವೆ ಎಂಬುದರ ಬಗೆಗೇ ಅವರಿಗೆ ಮಾಹಿತಿ ಇಲ್ಲ. ಹಾಗಾಗಿಯೇ ಅವರು ಇಂತಹ ಮೂರ್ಖತನದ ಟೀಕೆಗಳನ್ನು ಮಾಡುತ್ತಿದ್ದಾರೆ. ಇಂದು ಇಲ್ಲಿ ಕುಳಿತಿರುವ ಪ್ರಪಂಚ ಸ್ತ್ರೀ-ಪುರುಷ ಸಮುದಾಯವೇ ಇದಕ್ಕಿಂತಲೂ ಹಿಂದಿನ ಪರಿಸ್ಥಿತಿ ಏನಿತ್ತು ಮತ್ತು ಇಂದಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರ್ಥಮಾಡಿಸಿಕೊಡುತ್ತದೆ. ಜನರು ಏನು ಹೇಳುತ್ತಾರೆ ಎಂಬುದರ ಕಡೆಗೆ ನೀವು ಲಕ್ಷಿಸಬೇಡಿ. ಅವರು ಏನೆಲ್ಲ ಬರೆಯುತ್ತಿದ್ದಾರೆಯೋ ಅದು ನಿಮ್ಮಲ್ಲಿ ತಪ್ಪು ತಿಳಿವಳಿಕೆಯನ್ನು ಹುಟ್ಟುಹಾಕುವುದಕ್ಕಾಗಿ ಮಾಡುತ್ತಿರುವುದಾಗಿದೆ. ಎಲ್ಲಾ ವರ್ತಮಾನ ಪತ್ರಿಕೆಗಳಲ್ಲಿಯೂ ನನ್ನ ಬಗೆಗೆ ಟೀಕೆಗಳನ್ನು ಮಾಡಲಾಗುತ್ತದೆ. ಆದರೆ ಅದರ ಬಗೆಗೆ ನನ್ನಲ್ಲಿ ಯಾವುದೇ ಖೇದವಿಲ್ಲ. ಅವರ ಟೀಕೆಗಳಿಂದಾಗಿ ಸಮಾಜದಲ್ಲಿ ನನ್ನ ತೂಕವು ಕಡಿಮೆಯಾಗುತ್ತಿದೆ ಎಂದು ಭಾವಿಸುವ ಕಾರಣವಿಲ್ಲ. ನಾನು ಪ್ರತಿ ವರ್ಷವೂ ನೋಡುತ್ತಿದ್ದೇನೆ ನನ್ನ ತೂಕವು ಇನ್ನೂ ಹೆಚ್ಚಾಗುತ್ತಲೇ ಇದೆ.

ನಾಸಿಕ್‌ನಲ್ಲಿ ನಡೆಸಿದ ಸತ್ಯಾಗ್ರಹದ ವಿಚಾರವನ್ನೇ ತೆಗೆದುಕೊಳ್ಳೋಣ. ಈಗ ಅದರ ನಿಜವಾದ ವಿಚಾರಗಳೇನು ಎಂದು ನಾನು ನಿಮಗೆ ಹೇಳಬೇಕಾದ ಅಗತ್ಯವಿಲ್ಲ. ಭಾವುರಾವ ಗಾಯಕವಾಡರೇ ಮೊದಲಾದ ಐದಾರು ಜನರು ನನ್ನ ಸಹಾಯಕ್ಕಾಗಿ ಅಲ್ಲಿ ಬಂದಿದ್ದರು. ಆ ಹೊತ್ತಿನಲ್ಲಿ ರಾತ್ರಿ 12 ಗಂಟೆಗೆ ನಾನು ಸಭೆಯನ್ನು ಕರೆದೆನು. ಸತ್ಯಾಗ್ರಹಕ್ಕಾಗಿ ಎಷ್ಟು ಜನರು ಹೆಸರು ಕೊಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿತ್ತು. ಆಗ ನಾವು ಏನನ್ನು ನೋಡಿದೆವು? ಬೆಳಗಿನವರೆಗೆ ಒಬ್ಬ ಮನುಷ್ಯನಾದರೂ ನಮಗೆ ಸತ್ಯಾಗ್ರಹಕ್ಕಾಗಿ ಸಿಕ್ಕಲಿಲ್ಲ. ಸತ್ಯಾಗ್ರಹ ಮಾಡಿದರೆ ಏನಾಗುತ್ತದೆಯೋ ಎಂಬ ಭೀತಿಯು ಜನರ ಮನಸ್ಸಿನಲ್ಲಿತ್ತು. ಬೆಳಗ್ಗೆ ನಾವು ಮೆರವಣಿಗೆ ಹೊರಡುವುದೆಂದು ನಿರ್ಧರಿಸಿದೆವು. ಸುದೈವದಿಂದ ಅನ್ನಿರಿ ಅಥವಾ ದುರ್ದೈವದಿಂದ ಎಂದು ಬೇಕಾದರೂ ಹೇಳಿರಿ. ಈ ಮೆರವಣಿಗೆಯಲ್ಲಿ ಬರುತ್ತಿದ್ದ ಜನರ ಮೇಲೆ ಇತರರು ಕಲ್ಲುಗಳನ್ನು ಬೀರಿದರು. ಅದರಿಂದಾಗಿ ನಮಗೆ ಹದಿನೈದು ಇಪ್ಪತ್ತು ಸತ್ಯಾಗ್ರಹಿಗಳಷ್ಟೇ ಸಿಕ್ಕರು. ಆನಂತರ ಜನರ ಗಮನಕ್ಕೆ ಬಂದುದೇನೆಂದರೆ ಸತ್ಯಾಗ್ರಹ ಮಾಡುವುದು ಸ್ವಾಭಿಮಾನದ ವಿಚಾರವಾಗಿದೆ. ಹಾಗೆ ತಿಳಿದು ಬರುತ್ತಲೇ ನಮಗೆ ಸತ್ಯಾಗ್ರಹಿಗಳು ಸಿಕ್ಕುವುದಕ್ಕೆ ಅಡಚಣೆಗಳಾಗಲಿಲ್ಲ. ನಂತರ ನಾವು ಒಂದೆರಡು ವರ್ಷಗಳು ಮಾತ್ರವಲ್ಲ ನಾಲ್ಕೈದು ವರ್ಷಗಳವರೆಗೂ ಈ ಸತ್ಯಾಗ್ರಹವನ್ನು ನಡೆಸಿಕೊಂಡು ಹೋದೆವು. ಮೊದಲಿನ ಸಂಗತಿಗಳನ್ನು ಕುರಿತು ವಿಚಾರ ಮಾಡಿದರೆ, ಈಗ ಬಹಳಷ್ಟು ಸುಧಾರಣೆಯಾಗಿದೆ ಎಂಬುದಾಗಿ ನಾನು ನಿಮಗೆ ಹೇಳಬಯಸುತ್ತೇನೆ.

ನಾವು ಈಗ ಶಿಕ್ಷಣದ ವಿಚಾರವನ್ನೇ ತೆಗೆದು ಕೊಳ್ಳಬಹುದು. ನನ್ನ ಕಾಲಕ್ಕೆ ನನ್ನನ್ನು ಶಾಲೆಗೆ ಸೇರಿಸಿಕೊಳ್ಳಬೇಕೋ ಬೇಡವೋ ಎಂಬ ಬಗೆಗೆ ಮೂರು ದಿನಗಳವರೆಗೆ ಮಾಸ್ತರರೆಲ್ಲ ಸಭೆ ಸೇರಿ ವಿಚಾರ ನಡೆಸಿದ್ದರು. ಆಗ ನನಗೆ ಸರಕಾರದ ವತಿಯಿಂದ 3 ರೂಪಾಯಿ ವಿದ್ಯಾರ್ಥಿ ವೇತನವು ಬರುತ್ತಿತ್ತು. ಈ ಹುಡುಗನಿಗೆ ಶಾಲೆಗೆ ಸೇರಿಸಿಕೊಳ್ಳದಿದ್ದರೆ ಸರಕಾರದ ಕೋಪಕ್ಕೆ ಪಾತ್ರವಾಗುವ ಸಂಭವವಿದೆ ಎಂದು ತಿಳಿದು ನನಗೆ ಸರಕಾರಿ ಹೈಸ್ಕೂಲ್‌ಗೆ ಸೇರಿಸಿಕೊಳ್ಳಲು ನಿರ್ಧರಿಸಿದರು. ಆ ಹೊತ್ತಿನಲ್ಲಿ ನಾನು ಪೂರ್ಣ ಹಳ್ಳಿಯ ಹುಡುಗನಾಗಿದ್ದೆನು. ಹಾಗಿರುವಾಗ ನನ್ನನ್ನು ಬ್ರಾಹ್ಮಣರ ಜೊತೆಗೆ ಹೇಗೆ ಕೂರಿಸುವುದು. ಮೊದಲ ದಿನ ನಾನು ಶಾಲೆಗೆ ಹೋದಾಗ ನನ್ನ 40 ವರ್ಷ ವಯಸ್ಸಿನ ಅಣ್ಣನ ಅಂಗಿಯನ್ನು ಧರಿಸಿಕೊಂಡಿದ್ದೆನು. ಕಾಲಿನವರೆಗೂ ಉದ್ದವಾಗಿತ್ತು ಆ ಶರ್ಟು. ಹೀಗಿತ್ತು ನನ್ನ ಆವಾಗಿನ ಅವತಾರ. ಆ ಹೊತ್ತಿನಲ್ಲಿ ಎಲ್ಫಿ ನ್‌ಸ್ಟ್ಟನ್ ಹೈಸ್ಕೂಲಿನಲ್ಲಿ ಅಸಂಖ್ಯಾತ ಮಕ್ಕಳು ಕಲಿಯುತ್ತಿದ್ದರು. ಆದರೆ ಆಗ ನಾನು ಆ ಶಾಲೆಯಲ್ಲಿ ಹೊಲೆಯರ ಜಾತಿಗೆ ಸೇರಿದ್ದ ಒಬ್ಬನೇ ಒಬ್ಬ ಹುಡುಗನಾಗಿದ್ದೆನು. ಈಗ ಸಿದ್ಧಾರ್ಥ ಶಾಲೆಯನ್ನು ನೋಡಿರಿ, ಇತರರಿಗಿಂತಲೂ ನಮ್ಮ ಹುಡುಗರ ಪೋಷಾಕುಗಳೇ ಬಹಳ ಚೆನ್ನಾಗಿರುತ್ತದೆ.

ಮೊದಲ ವರ್ಷದಲ್ಲಿ ಸಿದ್ಧಾರ್ಥ ಕಾಲೇಜಿನಲ್ಲಿ ಕೇವಲ 15-20 ಅಸ್ಪಶ್ಯ ಮಕ್ಕಳಷ್ಟೇ ಇದ್ದರು. ಆದರೆ ಇಂದು ನೋಡಿರಿ. ಅಸ್ಪಶ್ಯರ ಸುಮಾರು 300 ಮಕ್ಕಳು ಸಿದ್ಧಾರ್ಥ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಮತ್ತೊಂದು ವಿಚಾರ ಧರ್ಮದ್ದು. ಮನುಷ್ಯನು ಕೇವಲ ಸ್ವಾರ್ಥಿಯಾಗಷ್ಟೇ ಉಳಿಯಬಾರದು. ಸ್ವಲ್ಪ ಪರಾರ್ಥವನ್ನೂ ಮಾಡುತ್ತಿರಬೇಕು. ಅದಕ್ಕಾಗಿ ಧರ್ಮದ ಆವಶ್ಯಕತೆಯೂ ಇದೆ. ನಾನು ಇದೆಲ್ಲವನ್ನೂ ನಿಮಗಾಗಿಯೇ ಮಾಡುತ್ತಿದ್ದೇನೆ. ಇದನ್ನು ನನಗೆ ಧರ್ಮವು ಕಲಿಸಿಕೊಟ್ಟಿತು. ಕೇವಲ ಹೊಟ್ಟೆ ತುಂಬಿತು ಎಂದೊಡನೆ ಎಲ್ಲವೂ ಆಯಿತು ಎಂಬುದಾಗಿ ನೀವುಗಳೆಲ್ಲರೂ ತಿಳಿದುಕೊಳ್ಳಬೇಡಿರಿ. ಹೊಟ್ಟೆಯೇನು ಮುಂಡೆಗಂಡರೂ ತುಂಬಿಕೊಳ್ಳುತ್ತಾರೆ. ‘‘ಕಬೀರ ಕಹೇ ಕೂಚ ಉಧಮ ಕೀಜೆ ಆಪ ಖಾಯೇ ಔರ್ ಔರನೋಕೋ ದೀಜೆ’’ (ಕಬೀರ ಹೇಳುತ್ತಾನೆ, ಕೊಂಚ ಉದಾರ ಮನದವರಾಗಿ. ನೀವೂ ತಿನ್ನಿರಿ, ಉಳಿದವರಿಗೂ ನೀಡಿರಿ.) ಕಬೀರನ ಈ ದೋಹೆಯ ಅನುಸಾರ ಕಾರ್ಯಪ್ರವೃತ್ತರಾಗಿ. ಅಂದರೆ ನೀವೂ ತಿನ್ನಿರಿ ಮತ್ತು ಬೇರೆಯವರಿಗೂ ಒಂದಷ್ಟನ್ನು ನೀಡಿರಿ. ಅಂದರೆ ಸ್ವಾರ್ಥ ಮತ್ತು ಪರಾರ್ಥ ಇವೆರಡನ್ನೂ ಪಾಲಿಸಿ. ಮನೆಯನ್ನು ಮೊದಲು ಕಾಪಾಡಿಕೊಳ್ಳಿರಿ; ಹಾಗೆಯೇ ಸಮಾಜ ಕಾರ್ಯಕ್ಕೂ ಸಹಾಯ ಮಾಡಿರಿ.

ಲೋಹಿತ ಎಂಬ ಬ್ರಾಹ್ಮಣನೊಬ್ಬನು ಬುದ್ಧನಿಗೆ ಎರಡು ಪ್ರಶ್ನೆಗಳನ್ನು ಕೇಳುತ್ತಾನೆ. ಮೊದಲನೆಯದು, ವಿದ್ಯೆಯನ್ನು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗಷ್ಟೆ ಕಲಿಸಬೇಕು. ಶೂದ್ರರೆಂಬ ನಾಲ್ಕನೆಯ ವರ್ಣದವರಿಗೆ ವಿದ್ಯೆ ಯನ್ನು ಕಲಿಸಬೇಕಾದ ಅಗತ್ಯವಿಲ್ಲ. ಈ ತತ್ತ್ವವನ್ನು ನೀನು ಏಕೆ ಮಾನ್ಯ ಮಾಡುವುದಿಲ್ಲ? ಇದಕ್ಕೆ ಸಿಕ್ಕ ಉತ್ತರ ಹೀಗಿತ್ತು: ನಾಲ್ಕು ವರ್ಣಗಳು ಹುಟ್ಟಿ ಕೊಂಡದ್ದು ಅವರವರು ಮಾಡುತ್ತಿದ್ದ ಕೆಲಸಗಳ ಆಧಾರದಿಂದ. ಹಾಗಾಗಿ ಜ್ಞಾನವೇನು ಅವರ ನಿತ್ಯ ಕೆಲಸಕಾರ್ಯಗಳ ಪ್ರಶ್ನೆಯಾಗುವುದಿಲ್ಲ. ಜ್ಞಾನವು ಅವರ ಜೀವನಕ್ಕೆ ಬಹಳ ಆವಶ್ಯಕವಾದುದು.

ಉದಾಹರಣೆಗೆ ನಾಶಿಕದ ಒಬ್ಬ ರೈತನ ಹತ್ತಿರ ಒಂದು ಹೊಲದ ಪತ್ರವಿತ್ತು. ಅವನ ಎಲ್ಲಾ ಕಾರ್ಯಗಳೂ ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಮೊಕದ್ದಮೆಯು ಅವನ ಪರವಾಗಿಯೇ ಆಗಬೇಕಿತ್ತು. ಆದರೆ ಅವನ ವಕೀಲನು ಅವನಿಗೆ ಮೋಸ ಮಾಡಿದುದರಿಂದ ಮೊಕದ್ದಮೆಯ ತೀರ್ಪು ಅವನಿಗೆ ವಿರುದ್ಧವಾಯಿತು. ಇದೆಲ್ಲಾ ಆದುದು ಆ ರೈತನ ಅಜ್ಞಾನದ ಕಾರಣದಿಂದಾಗಿಯೇ.

ಹಿಂದೂಸ್ಥಾನದಲ್ಲಿ ಜಾತಿಭೇದವು ಇದೆ. ಅದಕ್ಕೆ ಮುಖ್ಯವಾದ ಕಾರಣಗಳು ಎರಡು. ಒಂದೆಡೆ ಎಲ್ಲರಿಗೂ ಶಸ್ತ್ರಗಳನ್ನು ಬಳಸುವುದಕ್ಕೆ ಅನುಮತಿ ಇಲ್ಲ; ಮತ್ತೊಂದು ಸಂಗತಿಯೆಂದರೆ ಅಜ್ಞಾನ. ನಾವು ನಮ್ಮ ಪೂರ್ವಜನರಿಗೆ ಬಹಳಷ್ಟು ನಿಂದನೆ ಮಾಡುತ್ತೇವೆ, ಕಾರಣ ಅವರು ತಮ್ಮ ಮೇಲೆ ಆಗುತ್ತಿದ್ದ ಅನ್ಯಾಯಗಳಿಗೆ ಪ್ರತೀಕಾರವನ್ನು ಏಕೆ ಮಾಡಲಿಲ್ಲ. ಆದರೆ ಅದಕ್ಕೆ ಮೇಲೆ ಹೇಳಿದ ಪರಿಸ್ಥಿತಿಯೇ ಮುಖ್ಯ ಕಾರಣವಾಗಿತ್ತು.

‘ಹೋಗಲಿ ಆ ಕೊಳಕು, ಆಗಲಿ ಸಹಜತೆಯೊಳು ತಿಳಿಗನ್ನಡಿ’ ಎಂಬ ನ್ಯಾಯದಂತೆ ನಾವು ಈಗ ನಮ್ಮಲ್ಲಿನ ಕೀಳುತನವನ್ನು ತೆಗೆದು ಹಾಕುವ ಪ್ರಯತ್ನವನ್ನು ಮಾಡಬೇಕಾಗಿದೆ. ಇತರರು ಸಹಾಯ ಮಾಡುತ್ತಿಲ್ಲವೆಂದರೆ ನಾವೇ ನಮ್ಮ ಸುಧಾರಣೆಯನ್ನು ಮಾಡಿಕೊಳ್ಳಬೇಕು. ಅಲ್ಲದೆ ನಾವು ಈ ರೀತಿಯಿಂದ ಸುಧಾರಣೆ ಹೊಂದಿದರೆ ಇತರರು ನಮ್ಮನ್ನು ದೂಷಿಗಳೆಂದು ಹೇಳಲಾಗುವುದಿಲ್ಲ. ನಮ್ಮ ಕಳಂಕವನ್ನೆಲ್ಲ ನಾವೇ ತೆಗೆದು ಹಾಕಬೇಕಾಗಿದೆ. ತಿಳಿದುಕೊಳ್ಳಿರಿ, ನಮ್ಮ ಜನರು ವಿದ್ಯೆ ಕಲಿತರು, ಆಫೀಸರುಗಳಾದರು ಎಂದರೆ ಇತರರು ಅವರ ಕೈಕೆಳಗೆ ಕೆಲಸ ಮಾಡಲೇಬೇಕಾಗುತ್ತದೆ; ಅವರಿಗೆ ಅಗತ್ಯವಾಗಿ ಗೌರವ ತೋರಿಸಲೇಬೇಕಾಗುವುದು. ನಮ್ಮ ಮತ್ತು ಅವರ ಸ್ಥಿತಿಯು ಒಂದೇ ಆದ ಮೇಲೆ ಅವರು ನಮ್ಮನ್ನು ಕಡಿಮೆ ಎಂದು ಪರಿಗಣಿಸುವುದೇ ಇಲ್ಲ.

ಪ್ರತಿಯೊಬ್ಬ ಮನುಷ್ಯರೂ ಕಾಯಾ, ವಾಚಾ ಮತ್ತು ಮನಸಾ ಹೀಗೆ ತ್ರಿಶುದ್ಧಿಗಳಾಗಿರಬೇಕು. ಹೀಗೆ ಪವಿತ್ರವಾದ ಮನುಷ್ಯರನ್ನು ಅಪವಿತ್ರ ಎಂಬುದಾಗಿ ಯಾರು ಹೇಳುತ್ತಾರೆ? ಅವರಿಗಿಂತಲೂ ನಿಮ್ಮ ಬಟ್ಟೆಗಳು ಅತ್ಯಂತ ಡೌಲಿನವಾಗಿದ್ದರೆ ನಿಮ್ಮನ್ನು ಯಾರು ಕಡಿಮೆಯಾಗಿ ಭಾವಿಸುತ್ತಾರೆ? ನಮ್ಮ ಉನ್ನತಿಯ ಪ್ರಯತ್ನವನ್ನು ಈಗ ನಾವೇ ಮಾಡಬೇಕಾಗಿದೆ.

ನಾವು ಧರ್ಮಕ್ಕಾಗಿ ಸತ್ಯಾಗ್ರಹ ಮಾಡಿದೆವು. ಧರ್ಮಾಂತರದ ನಿರ್ಧಾರವನ್ನು ಕೈಗೊಂಡೆವು. ಏನೆಲ್ಲವನ್ನೂ ಮಾಡಿದೆವು. ಆದರೆ ಈಗ ನಾವು ನಮ್ಮ ಮನಸ್ಸನ್ನು ಪವಿತ್ರವಾಗಿ ಮಾಡಿಕೊಳ್ಳಬೇಕಾಗಿದೆ. ನಿಮಗೆ ಸದ್ಗುಣಗಳ ಕಡೆಗೆ ಸೆಳೆತವಿರಬೇಕು. ಈ ರೀತಿಯಲ್ಲಿ ನಾವು ಧಾರ್ಮಿಕರಾಗಿ ರೂಪುಗೊಳ್ಳಬೇಕು. ನಾವು ವಿದ್ಯಾವಂತರಾದೆವೆಂದರೆ ಏನೆಲ್ಲಾ ಆಗಿಬಿಟ್ಟೆವು ಎಂದು ಭಾವಿಸಬೇಕಾಗಿಲ್ಲ. ಶಿಕ್ಷಣವು ಬಹಳ ಮಹತ್ವವಾದುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಶಿಕ್ಷಣದ ಬೆಲೆಯು ಶೂನ್ಯ. ಜ್ಞಾನವು ಒಂದು ಶಸ್ತ್ರವಿದ್ದಂತೆ. ಒಬ್ಬ ಮನುಷ್ಯನ ಕೈಯಲ್ಲಿ ಇಂತಹ ಶಸ್ತ್ರವು ಸಿಕ್ಕಿತು ಎಂದರೆ ತಿಳಿಯಿರಿ, ಅದರ ಸದುಪಯೋಗ ಅಥವಾ ದುರುಪಯೋಗವು ಅವನ ಶೀಲವನ್ನು ಅವಲಂಬಿಸಿರುತ್ತದೆ. ಅವನು ಆ ಶಸ್ತ್ರದಿಂದ ಒಬ್ಬನನ್ನು ಕೊಲೆಯೂ ಮಾಡಬಹುದು; ಅಥವಾ ಒಬ್ಬನ ರಕ್ಷಣೆಯನ್ನೂ ಮಾಡಬಹುದು.

ಜ್ಞಾನದ ವಿಚಾರವೂ ಹಾಗೆಯೇ. ಒಬ್ಬ ವಿದ್ಯಾವಂತ ಮನುಷ್ಯನು ಸುಶೀಲವಂತನೂ ಆಗಿದ್ದರೆ ತನ್ನ ಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಉಪಯೋಗಿಸಬಹುದು. ಆದರೆ ಅವನು ಕುಶೀಲನಾಗಿದ್ದರೆ ಅದನ್ನು ಜನರ ಅವನತಿಗೆ ವ್ಯಯಿಸಬಹುದು. ಶೀಲವೆಂಬುದು ಧರ್ಮದ ಬಹಳ ಮುಖ್ಯವಾದ ಒಂದು ಅಂಗ, ವಿದ್ಯಾವಂತ ಮನುಷ್ಯರು ಕೇವಲ ಹೊಟ್ಟೆ ಹೊರೆದುಕೊಳ್ಳುವಂತಹವರಾಗಿ ಉಳಿದರೆ ಒಳ್ಳೆಯದಲ್ಲ. ಅಂಥವರಿಗೆ ತಮ್ಮ ಸ್ವಾರ್ಥದಿಂದಾಗಿ ಅದರಿಂದಾಚೆಗೆ ಇರುವ ಯಾವುದೂ ಕಾಣಿಸುವುದಿಲ್ಲ. ಯಾರಿಗೆ ಸ್ವಲ್ಪವಾದರೂ ಪರಾರ್ಥವನ್ನು ಮಾಡುವುದಕ್ಕೆ ಆಗುವುದಿಲ್ಲವೋ ಅಂಥವರು ಕೇವಲ ವಿದ್ಯಾವಂತರು ಎನ್ನುವುದರಿಂದ ಏನು ಉಪಯೋಗ? ಅವರಿಂದ ಬೇರೆಯವರಿಗೆ ಆಗುವ ಉಪಯೋಗವಾದರೂ ಏನು? ‘ಹಂಚಿನ ಕೊಳೆಯು ಹೋಗಲಿ; ಸಹಜದಿ ಆಗುವುದದು ಕನ್ನಡಿ’. ಶಿಕ್ಷಣದ ಉಪಯೋಗವೂ ಕೂಡಾ ಹೀಗೆಯೇ ಆಗಬೇಕು.

ಜ್ಯೋತಿಬಾ ಫುಲೆ ಅವರನ್ನು ನಾನು ನನ್ನ ಗುರುಗಳೆಂದು ಒಪ್ಪಿಕೊಳ್ಳುತ್ತೇನೆ. ಮಾಳಿ(ಹೂಗಾರ) ಸಮಾಜದಲ್ಲಿ ಅವರು ಜನ್ಮವೆತ್ತಿದ್ದರು ಮತ್ತು ಬಹಳಷ್ಟು ಮರಾಠರೂ ಅವರಿಗೆ ಶಿಷ್ಯರಾಗಿದ್ದರು. ಆದರೆ ಇಂದಿನ ಪರಿಸ್ಥಿತಿಯು ಬಹಳ ದೊಡ್ಡ ಚಮತ್ಕಾರಿಕವಾಗಿದೆ. ಜ್ಯೋತಿಬಾರ ಹೆಸರನ್ನು ಇಂದು ಯಾರೂ ಸ್ಮರಿಸುತ್ತಿಲ್ಲ. ಇಂದು ಮಾದಿಗ ಮತ್ತು ಚಮ್ಮಾರರು ನಿವ್ವಳ ಎಂಜಲಿನ ಧಣಿಗಳಾಗಿದ್ದಾರೆ. ಪ್ರಗತಿಯ ನಿಜವಾದ ಮಾಲಕರು ನಾವಾಗಿದ್ದೇವೆ. ಆದರೂ ಇಂದು ನಮ್ಮ ಮೇಲೆ ಅನ್ಯಾಯಗಳು ಆಗುತ್ತಲೇ ಇವೆ. ನಾವು ಚಳವಳಿ ಮಾಡುತ್ತೇವೆ ಎಂಬ ಕಾರಣದಿಂದ ಇತರ ಜನರು ನಮ್ಮತ್ತ ಕ್ರೋಧದಿಂದ ನೋಡುತ್ತಿದ್ದಾರೆ. ಆದರೆ ನಮ್ಮ ಚಳವಳಿಯು ನಿಷ್ಕಾಮ ಬುದ್ಧಿಯ ಮತ್ತು ಯಾವುದೇ ಫಲದ ಆಸಕ್ತಿ ಇಲ್ಲದಂತೆಯೇ ನಡೆಯುತ್ತಿದೆ. ನಮಗೆ ಇರುವ ಆಶಾವಾದವೆಂದರೆ, ನಾವೂ ಕೂಡಾ ಆ ಮರದ ಒಡೆಯರಾಗುವಂತಹ ಆ ಒಂದು ದಿನವು ಬಂದೇ ಬರುತ್ತದೆ. ಇಂದು ಯಾರು ಏನನ್ನೂ ಮಾಡದೆಯೇ ಮಜಾ ಉಡಾಯಿಸುತ್ತಾ ಇದ್ದಾರೆಯೋ, ತಾವೇನೂ ದುಡಿಯದೆಯೂ ತಿನ್ನುತ್ತಿದ್ದಾರೆಯೋ ಅವರಿಗೇ ಮುಂದೊಂದು ದಿನ ನಾಚಿಕೆಯಾಗುತ್ತದೆ.
ಪ್ರತಿಯೊಬ್ಬರೂ ಬುದ್ಧನ ಭಾವಚಿತ್ರವನ್ನು ನಿಮ್ಮ ನಿಮ್ಮ ಮನೆಗಳಲ್ಲಿ ಇಡಬೇಕು ಎಂಬುದನ್ನು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)