ಕೆಲವು ಹನಿಗಳು
ಕಥಾಸಂಗಮ
ವಿಶ್ವನಾಥ ಎನ್. ನೇರಳಕಟ್ಟೆ
►ಅಪಘಾತವಾದ ಮೇಲೆ...
ರಾಷ್ಟೀಯ ಹೆದ್ದಾರಿಯಲ್ಲಿದ್ದ ಆ ತಿರುವು ತೀರಾ ಅಪಾಯಕಾರಿಯಾಗಿತ್ತು. ಅಲ್ಲಿ ಅಪಘಾತ ಗಳು ಮಾಮೂಲು.
ರಾತ್ರಿ ಹತ್ತರ ಸಮಯದಲ್ಲಿ ಲಾರಿಯೊಂದು ಉರುಳಿ ಬಿತ್ತು. ಅಪಘಾತದ ಸದ್ದು ಕೇಳಿದ ತಕ್ಷಣ ಸಮೀಪದಲ್ಲಿಯೇ ಇದ್ದ ಜನರೆಲ್ಲರೂ ಲಾರಿಯ ಸುತ್ತ ಸೇರಿದ್ದರು.
ಒಂದಷ್ಟು ಜನ ‘ಲಾರಿ ಚಾಲಕನ ಬೇಜವಾಬ್ದಾರಿತನದಿಂದಲೇ ಹೀಗಾಗಿದೆ’ ಎಂದು ದೂರ ತೊಡಗಿದರು. ಇನ್ನೂ ಕೆಲವರು ‘ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ’ ಎಂದು ರಸ್ತೆ ಗುತ್ತಿಗೆ ತೆಗೆದುಕೊಂಡ ಕಂಪೆನಿಯನ್ನು ಬೈದರು. ಇನ್ನೂ ಹಲವರು ‘ಸೂಚನಾ ಫಲಕ ಅಳವಡಿಸಿಲ್ಲ’ ಎಂದು ಹೆದ್ದಾರಿ ಪ್ರಾಧಿಕಾರವನ್ನು ಮನಸೋ ಇಚ್ಛೆ ತೆಗಳಿದರು. ಸರಕಾರಕ್ಕೆ ಕಾಳಜಿ ಇಲ್ಲ ಎಂದರು ಯಾರೋ ಒಬ್ಬರು. ‘ಸರಕಾರ ಸೂಚನಾಫಲಕ ಅಳವಡಿಸಿತ್ತು. ಯಾರೋ ಬುದ್ಧಿಗೆಟ್ಟವರು ಅದನ್ನೂ ಕಿತ್ತುಕೊಂಡು ಹೋಗಿದ್ದಾರೆ’ ಎಂದರು ಆಡಳಿತ ಪಕ್ಷದ ಕಾರ್ಯಕರ್ತರೊಬ್ಬರು. ‘ಆ್ಯಂಬುಲೆನ್ಸ್ ಗೆ ಕಾಲ್ ಮಾಡಿ’ ಎಂಬ ಧ್ವನಿ ಕೇಳಿಬಂತು. ‘ಕಾಲ್ ಮಾಡಿದ್ದೇನೆ. ಅವರು ಬರುವವರೆಗೂ ನಾವೇನೂ ಮಾಡುವಂತಿಲ್ಲ. ಕೇಸ್ ಆದರೆ ಕಷ್ಟ’ ಎಂದರೊಬ್ಬರು. ‘ಕೇಸ್ ಏನೂ ಆಗುವುದಿಲ್ಲ. ಈಗ ಕಾನೂನು ಬದಲಾಗಿದೆ’ ಎಂದರು ಒಬ್ಬ ಹಿರಿಯರು. ಈ ಎಲ್ಲಾ ಗೊಂದಲದ ನಡುವೆ ಯಾರೋ ಇಬ್ಬರು ಲಾರಿಯೊಳಗಿದ್ದ ಟೇಪ್ರೆಕಾರ್ಡರ್ ಮತ್ತು ಕಬ್ಬಿಣದ ರಾಡ್ಗಳನ್ನು ಹಿಡಿದುಕೊಂಡು ಪರಾರಿಯಾಗಿದ್ದರು. ಬಹುತೇಕರು ವೀಡಿಯೋ ತೆಗೆದು ವಾಟ್ಸ್ ಆ್ಯಪ್ನಲ್ಲಿ ಹರಿಯಬಿಡುವುದರಲ್ಲಿ ನಿರತರಾಗಿದ್ದರು.
ಲಾರಿಯೊಳಗೆ ಸಿಲುಕಿಕೊಂಡು ರಕ್ತದಲ್ಲಿ ತೊಯ್ದು ಹೋಗಿದ್ದ ಡ್ರೈವರ್ ಮಾತ್ರ ಅ್ಯಂಬುಲೆನ್ಸ್ ಬರುವವರೆಗೂ ಒದ್ದಾಡುತ್ತಲೇ ಇದ್ದ.
►ಫೇಸ್(ಕ್) ಬುಕ್
ಫೇಸ್ಬುಕ್ಲ್ಲಿ ಕಣ್ಣಾಡಿಸುತ್ತಿದ್ದ ಆತನಿಗೆ ಮುದ್ದು ಮುಖದ ಯುವತಿಯೊಬ್ಬಳ ಫೋಟೊ ಸುಂದರವಾಗಿ ಕಂಡಿತು. ಫ್ರೆಂಡ್ ರಿಕ್ವೆಸ್ಟ್ ಕಳಿಸಿದ. ಐದು ನಿಮಿಷದಲ್ಲೇ ಒಪ್ಪಿಗೆಯ ಸಂದೇಶ ಬಂದಿತ್ತು. ಖುಷಿಗೊಂಡ ಈತ ಚಾಟಿಂಗ್ ಆರಂಭಿಸಿದ್ದ. ಪರಸ್ಪರ ಸಂದೇಶ ರವಾನೆ, ನೇರ ಭೇಟಿ ಎಲ್ಲ ನಡೆದ ಮೇಲೆ ಇಬ್ಬರೂ ಪರಸ್ಪರ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ತಮ್ಮಿಬ್ಬರ ವಿವಾಹಕ್ಕೆ ಮನೆಯವರು ಒಪ್ಪಿಕೊಳ್ಳಲಿಕ್ಕಿಲ್ಲ ಎಂಬ ತೀರ್ಮಾನಕ್ಕೆ ಬಂದ ಅವರಿಬ್ಬರೂ ದೇವಸ್ಧಾನದಲ್ಲಿ ಮದುವೆ ಮುಗಿಸಿಕೊಂಡರು.
ದೇವಸ್ಧಾನದಿಂದ ಹೊರಬರುತ್ತಿದ್ದಂತೆ ಆತನಿಗೆ ತಾನು ಆ ಯುವತಿಯಿಂದ ಮುಚ್ಚಿಟ್ಟ ವಿಚಾರವನ್ನು ಹೇಳಬೇಕೆನ್ನಿಸಿತು. ಹೇಳಲು ಶುರುಮಾಡಿದ.
‘‘ನೋಡು, ನಾನು ನಿನ್ನಿಂದ ಒಂದು ವಿಚಾರ ಮುಚ್ಚಿಟ್ಟಿದ್ದೇನೆ. ನನಗೆ ಈಗಾಗಲೇ ಮದುವೆಯಾಗಿದೆ. ಇಬ್ಬರು ಮಕ್ಕಳೂ ಇದ್ದಾರೆ. ಹೆಂಡತಿ ಎರಡು ವರ್ಷದ ಹಿಂದೆ ಜಗಳ ಆಡಿ ತವರು ಸೇರಿದ್ದಾಳೆ. ಈ ವಿಚಾರವನ್ನು ನಿನ್ನಿಂದ ಮುಚ್ಚಿಟ್ಟಿದ್ದೇನೆಂದು ನೀನು ಬೇಜಾರು ಮಾಡಿ ಕೊಳ್ಳಬಾರದು, ಬೈಯಬಾರದು’’.
ಹೀಗೆ ಹೇಳಿ ಆ ಯುವತಿಯ ಮುಖ ನೋಡಿದರೆ ಅವಳ ಮುಖದಲ್ಲಿ ಗಾಬರಿ, ಕೋಪದ ಬದಲಿಗೆ ಒಂದು ರೀತಿಯ ನಿರಾಳತೆ ಇತ್ತು. ಅಷ್ಟೇ ನಿರಾಳತೆಯಲ್ಲಿ ಹೇಳತೊಡಗಿದಳು ‘‘ನಾನ್ಯಾಕೆ ನಿನ್ನನ್ನು ಬೈಯಲಿ? ನಿನಗಾದರೂ ಇದು ಎರಡನೇ ಮದುವೆ, ನನಗೆ ಮೂರನೆಯದ್ದು!’’
► ಕವಿ ಸಮಯ
ಕವಿಯೊಬ್ಬ ಕವನ ಬರೆಯಲು ಕುಳಿತ. ತಾನು ಕುಳಿತ ಕೊಠಡಿಯನ್ನೊಮ್ಮೆ ದಿಟ್ಟಿಸಿದ. ಅಲ್ಲಿದ್ದ ಪರಿಕರಗಳು ಯಾವುವೂ ಆತನಿಗೆ ಕವನಕ್ಕೆ ವಿಷಯವನ್ನು ನೀಡಲಿಲ್ಲ. ಕಿಟಕಿಯಾಚೆಗೆ ತನ್ನ ದೃಷ್ಟಿಯನ್ನು ಹರಿಸಿದ. ಮಳೆಹನಿಯನ್ನು ಬಚ್ಚಿಟ್ಟುಕೊಂಡಿದ್ದ ಕಪ್ಪುಮೋಡ, ಮಳೆಗಾಗಿ ಕಾದು ಕುಳಿತ ಭೂಮಿ, ಗಾಳಿಯ ಚಲನೆಗೆ ತಲೆದೂಗುತ್ತಿರುವ ಬಂಗಾರದ ಬಣ್ಣದ ಹೂವು- ಇವು ಯಾವುವೂ ಅವನಿಗೆ ಕವನದ ಜಾಡನ್ನು ನೀಡಲಿಲ್ಲ. ತನ್ನ ಕವಿಮನಸ್ಸು ಜಡಗಟ್ಟಿದಂತೆ ಆತನಿಗೆ ಅನ್ನಿಸಿತು.
ಅಷ್ಟರಲ್ಲಿ ಆತ ಕುಳಿತಿದ್ದ ಕೊಠಡಿಯಲ್ಲಿದ್ದ ಕೆಟ್ಟಿದ್ದ ನಳ್ಳಿಯಿಂದ ಹನಿ ಹನಿ ನೀರು ಒಂದೇ ಲಯ ದಲ್ಲಿ ತೊಟ್ಟಿಕ್ಕಲಾರಂಭಿಸಿತು. ಇನ್ನೊಂದು ಕೊಠಡಿಯಲ್ಲಿದ್ದ ಆತನ ಮೂರು ವರ್ಷದ ಹೆಣ್ಣು ಮಗು ನಿದ್ರೆಯಿಂದ ಎಚ್ಚೆತ್ತು, ಇಂಪಾದ ಧ್ವನಿಯಲ್ಲಿ ತಾಳಬದ್ಧವಾಗಿ ಅಳಲಾರಂಭಿಸಿತು. ತಕ್ಷಣವೇ ಲೇಖನಿಯನ್ನು ಹಿಡಿದ ಕವಿಯ ಕೈ ಹಾಳೆಯ ಮೇಲೆ ಓಡಲಾರಂಭಿಸಿತು.
► ರಾಜಕಾರಣ
ಅವನೊಬ್ಬ ಶುದ್ಧ ಚಾರಿತ್ರದ ರಾಜಕಾರಣಿ. ಉಳಿದ ರಾಜಕೀಯ ಪಕ್ಷಗಳಿಗಿಂತ ಭಿನ್ನವಾದ ಪಕ್ಷ ಅವನದಾಗಿತ್ತು. ಮುಂದಿನ ಚುನಾವಣೆಯಲ್ಲಿ ಆತನ ಪಕ್ಷವೇ ಅಧಿಕಾರಕ್ಕೆ ಬರುವ ಸಾಧ್ಯತೆ ಸ್ಪಷ್ಟವಾಗಿತ್ತು. ಉಳಿದ ರಾಜಕೀಯ ಪಕ್ಷಗಳಿಗೆ ಇದು ತಲೆನೋವು ತಂದಿತ್ತು.
ಅದೊಂದು ದಿನ ಆತನ ಮನೆ ಮುಂದೆ ಬೇರೆ ರಾಜಕೀಯ ಪಕ್ಷದ ಮುಖಂಡನೊಬ್ಬನ ಕಾರು ನಿಂತಿತು. ದೃಶ್ಯ ಮಾಧ್ಯಮಗಳಲ್ಲಿ ಇದುವೇ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರಗೊಳ್ಳಲಾರಂಭಿಸಿತು. ಆತ ಉಳಿದ ರಾಜಕೀಯ ಪಕ್ಷಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾನೆ. ಇದಕ್ಕಾಗಿ ಹಣವನ್ನೂ ಪಡೆದಿದ್ದಾನೆ ಎಂಬುದಾಗಿ ವರದಿಗಾರರು ಹೇಳಿದ್ದನ್ನೇ ತರಹೇವಾರಿ ಶೈಲಿಗಳಲ್ಲಿ, ತಮ್ಮ ಕಿಸೆಯಿಂದಲೂ ಒಂದಿಷ್ಟು ಸೇರಿಸಿ ಹೇಳತೊಡಗಿದರು. ಮಾಧ್ಯಮಗಳಿಗೆ ಒಳ್ಳೆ ಟಿ.ಆರ್.ಪಿ. ಸಿಕ್ಕಿತ್ತು.
ಇದನ್ನೆಲ್ಲಾ ನೋಡಿದ ಜನ ಗೊಂದಲಕ್ಕೊಳಗಾದರು. ಮುಂದಿನ ಚುನಾವಣೆಯಲ್ಲಿ ಆತನ ಪಕ್ಷ ಅಡ್ಡಡ್ಡ ಮಲಗಿತ್ತು. ಉಳಿದ ರಾಜಕೀಯ ಪಕ್ಷಗಳ ಮುಖಂಡರು ಮೀಸೆಯಡಿಯಲ್ಲೇ ಕುಹಕದ ನಗೆ ನಗುತ್ತಿದ್ದರು.
► ದೃಷ್ಟಿ
ರಾತ್ರಿ ಏಳು ದಾಟಿತ್ತು. ಮೋಜು ಮಾಡಲೆಂದೇ ಬೈಕ್ ಹತ್ತಿ ಹೊರಟಿದ್ದ ಆ ಯುವಕ ಮತ್ತು ಆತನ ಏಳುಮಂದಿ ಗೆಳೆಯರು ಬಾರೊಂದರ ಮುಂದೆ ಬೈಕ್ ನಿಲ್ಲಿಸಿದರು. ಬೇಕಾಬಿಟ್ಟಿ ನಶೆ ಏರಿಸಿಕೊಂಡ ಅವರ ಪ್ರಯಾಣ ಮತ್ತೆ ಸಾಗಿತು.
ಮುಂದೆ ಹೋಗುತ್ತಿರಬೇಕಾದರೆ ಆ ಯುವಕ ತಕ್ಷಣ ಬೈಕ್ ನಿಲ್ಲಿಸಿದ. ತನ್ನ ಗೆಳೆಯರಿಗೂ ನಿಲ್ಲಿಸಲು ಸೂಚಿಸಿದ. ಅವನ ಗಮನ ಅರೆಗತ್ತಲು ತುಂಬಿದ್ದ ಬಸ್ಸ್ಟಾಂಡ್ವೊಂದರಲ್ಲಿ ನಿಂತಿದ್ದ ಯುವತಿಯ ಕಡೆಗಿತ್ತು. ಮಂದಬೆಳಕಿನಲ್ಲಿ ಆ ಯುವತಿಯ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
‘‘ಏನು ಫಿಗರ್ ಮಾರಾಯ! ಯಾರಿಗೋ ಕಾಯ್ತ ಇದೆ’’ ಆ ಯುವಕನ ಬಾಯಿಯಿಂದ ಸರಾಗವಾಗಿ ಮಾತು ಹೊರಬಂತು.
‘‘ಅವ್ಳ ಕಾಯ್ತ ಇರುವುದು ನೋಡಿದರೆ ಆ ತರಹದವ್ಳ ಅಂತ ಕಾಣ್ತಾ ಇಲ್ಲ ಮಾರಾಯ. ಭಾರೀ ಟೆನ್ಶನ್ನಲ್ಲಿ ಇದ್ದ ಹಾಗೆ ಇದ್ದಾಳೆ’’ ಸ್ನೇಹಿತರಲ್ಲೊಬ್ಬ ನುಡಿದ.
‘‘ಇಂಥ ಹುಡುಗಿಯರ ಕಥೆ ನಂಗೆ ಗೊತ್ತಿಲ್ವಾ ಮಾರಾಯ? ರಾತ್ರಿ ಏಳಾದ್ರೂ ಬೀದಿಯಲ್ಲಿದ್ದಾಳೆ ಅಂತಾದ್ರೆ ಇವ್ಳ ಆ ತರಹದವ್ಳೇ! ಇವ್ಳಿಗಲ್ಲ, ಇವ್ಳ ಮನೆಯವ್ರಿಗೆ ಮೊದ್ಲು ಬುದ್ಧಿ ಹೇಳ್ಬೇಕು. ಇವ್ಳನ್ನು ಇಲ್ಲಿ ಬಿಟ್ಟು ಅವ್ರೆಲ್ಲಿದ್ದಾರೋ?’’ ಹೀಗೆ ಹೇಳುವಾಗ ಮದ್ಯದ ವಾಸನೆ ಆತನ ಬಾಯಿಯಿಂದ ಹೊರಬರುತ್ತಿತ್ತು.
‘‘ಈಗ ತಮಾಷೆ ತೋರಿಸ್ತೇನೆ ನೋಡಿ. ಅವ್ಳಲ್ಲಿ ರೇಟು ಎಷ್ಟು? ಅಂತ ಕೇಳಿ ಬರ್ತೇನೆ. ನೋಡ್ತಾ ಇರಿ’’ ಹೀಗೆ ಹೇಳಿದ ಆ ಯುವಕ ಆ ಯುವತಿಯ ಸಮೀಪಕ್ಕೆ ಹೋದ.
ಆ ಯುವತಿ ಈತನನ್ನು ತಿರುಗಿ ನೋಡಿದವಳೇ, ‘‘ಓ! ಅಣ್ಣಾ, ನೀನು ಬಂದದ್ದು ಒಳ್ಳೆಯದಾಯಿತು. ಇವತ್ತು ಆಫೀಸಿನಲ್ಲಿ ಕೆಲಸ ಜಾಸ್ತಿ ಇತ್ತು. ರಿಕ್ಷಾದಲ್ಲಿ ಹೊರಟಿದ್ದೆ. ಇಲ್ಲಿಗೆ ಬರುವಾಗ ರಿಕ್ಷಾ ಕೆಟ್ಟು ಹೋಯಿತು. ಬೇರೆ ರಿಕ್ಷಾಕ್ಕೆ ಕಾದು ನಿಂತಿದ್ದೆ. ಬೈಕ್ ತಂದಿದ್ದಿ ತಾನೇ?’’ ಆತನ ತಂಗಿಯ ಮಾತು ಸಾಗುತ್ತಲೇ ಇತ್ತು. ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ತೂಕ ಹಾಕಿದ ಆತನ ದೃಷ್ಟಿ ಮಾತ್ರ ನೆಲಕಚ್ಚಿತ್ತು.
► ಮೂವತ್ತು ರೂಪಾಯಿ
ಅವನೊಬ್ಬ ಶ್ರೀಮಂತ ವ್ಯಕ್ತಿ. ಐಷಾರಾಮಿ ಕಾರಿನಿಂದ ಇಳಿದ ಆತ ಮಾಲ್ವೊಂದರ ಒಳಹೊಕ್ಕ. ತನಗೆ ಬೇಕಾದುದೆಲ್ಲವನ್ನೂ ತೆಗೆದುಕೊಂಡ ಆತ ಬಿಲ್ಲು ಪಾವತಿಸಲು ಕೌಂಟರಿನ ಕಡೆಗೆ ಹೊರಟ. ಬಿಲ್ಲು 470 ರೂಪಾಯಿ ಆಗಿತ್ತು. 500 ರೂಪಾಯಿ ನೋಟನ್ನು ನೀಡಿದ ಆತ ಸುತ್ತಲೂ ಇದ್ದವರ ಕಡೆಗೊಮ್ಮೆ ನೋಟ ಬೀರಿದ. ಎಲ್ಲರೂ ತನ್ನನ್ನೇ ಗಮನಿಸುತ್ತಿದ್ದಾರೆ ಎಂಬುದನ್ನು ಅರಿತ ಆತನ ಮೃದು ಮಾತುಗಳು ಹೊರಬಂದವು.
‘‘30 ರೂಪಾಯಿ ನೀವೇ ಇಟ್ಕೊಳ್ಳಿ ಪರ್ವಾಗಿಲ್ಲ’’. ಆತನ ಉದಾರತೆಯನ್ನು ಕಂಡು ಅಲ್ಲಿದ್ದ ಬಹುತೇಕರ ಕಣ್ಣುಗಳು ಅರಳಿದ್ದವು.
ಮಾಲ್ನಿಂದ ಹೊರಬಂದು ಕಾರು ಹತ್ತಿ ಹೊರಡುತ್ತಿದ್ದಂತೆ ಆತನಿಗೆ ನೆನಪಾಯಿತು -ಹೆಂಡತಿ ತರಕಾರಿ ತರಲು ಹೇಳಿದ್ದಾಳೆ. ತಾನು ತೆಗೆದುಕೊಂಡಿಲ್ಲ. ಅಲ್ಲೇ ರಸ್ತೆ ಬದಿಯಲ್ಲಿ ಕಾರ್ ಪಾರ್ಕ್ ಮಾಡಿದ ಆತ ಸಂತೆ ಕಡೆಗೆ ಹೊರಟ.
ಐವತ್ತು ದಾಟಿದ್ದ ವ್ಯಕ್ತಿಯೊಬ್ಬ ತರಕಾರಿ ಮಾರುತ್ತಾ ಕೂತಿದ್ದ. ‘‘ಬೀಟ್ರೂಟ್ ಎಷ್ಟಪ್ಪಾ?’’ ಕೇಳಿದ ಈತ. ‘‘ಕೆಜಿಗೆ 30 ಧಣಿ’’ ಎಂದ ಆ ವ್ಯಾಪಾರಿ ತೂಕ ಮಾಡುವುದಕ್ಕೆ ಸಿದ್ಧನಾದಂತೆ ಕಂಡುಬಂದ.
‘‘20 ಆದರೆ ಬೇಕಿತ್ತು, 30 ಜಾಸ್ತಿಯಾಯ್ತು’’ ಹೀಗೆಂದ ಆ ವ್ಯಕ್ತಿ ಬೇಡ ಎಂಬವನಂತೆ ದುರದುರನೆ ಹೆಜ್ಜೆ ಹಾಕತೊಡಗಿದ.
‘‘ಇಲ್ಲಿ ಬನ್ನಿ ಧಣಿ, ನೀವು ಹೇಳಿದ ರೇಟಿಗೆ ಕೊಡ್ತೇನೆ’’ ವ್ಯಾಪಾರಿಯ ಮಾತು ಕೇಳಿದ ಆ ವ್ಯಕ್ತಿ ಸಂತೋಷದಿಂದ ತರಕಾರಿ ಕೊಂಡುಕೊಂಡ. ಕಾರು ಹತ್ತಿ ಹೊರಡುವಾಗಲೂ ಕೂಡಾ ಆತನಲ್ಲಿದ್ದ ವಿಚಿತ್ರ ಸಂತೋಷ ಹಾಗೆಯೇ ಇತ್ತು.