ನಿಸರ್ಗವೇ ಸೃಜಿಸಿದ ಬಂಡೆಗಳೆಂಬ ಕವಿತೆ
ಮುನವ್ವರ್, ಜೋಗಿಬೆಟ್ಟು
‘‘ಯಾವ ಅದ್ಭುತ ಕಾಣ್ಕೆಯೂ ನಿನ್ನ ಕಣ್ಣಿಗೆ ಬೀಳದಿರಲಿ, ಅದನ್ನು ಕವಿತೆಯಾಗಿಸುವ ರೋದನೆ ಸಹಿಸಿ ಕೊಳ್ಳಲಾಗುವುದಿಲ್ಲ ಮಾರಾಯ’’ ಹೀಗೆ ವಾರದಲ್ಲಿ ಒಮ್ಮೆಯಾದರೂ ಸಹೋದ್ಯೋಗಿ ಗಳಿಗೆ ನನ್ನನ್ನು ಕಿಚಾಯಿಸದಿದ್ದರೆ ತಿಂದದ್ದು ಕರಗುವು ದಿಲ್ಲ. ಅವರಿದನ್ನು ಗಂಭೀರವಾಗಿ ಹೇಳುತ್ತಿದ್ದರೋ, ತಮಾಷೆಗಾಗಿ ಹೇಳುತ್ತಿದ್ದರೋ? ಎಂದು ನಿರ್ಧರಿಸುವುದು ಕಷ್ಟವಾಗುತಿತ್ತು. ಈ ಮಂತ್ರ ಅವರೆಲ್ಲಾ ಉರು ಹೊಡೆದರೆ ನನ್ನ ತಲೆ ಬೇರೆನೋ ಚಿಂತಿಸುತ್ತಿರುತ್ತಿತ್ತು.
‘‘ಛೇ, ಇದೇ ದೃಶ್ಯ ಇನ್ನೊಬ್ಬ ಪ್ರಬುದ್ಧ ಕವಿಯ ಕಣ್ಣಿಗೆ ಬಿದ್ದಿದ್ದರೆ, ಆತ ಅದನ್ನೊಂದು ಅದ್ಭುತ ಕಾವ್ಯವಾಗಿಸುತ್ತಿದ್ದರೆ, ಆಹಾ... ಆ ಕವಿತೆ ಯನ್ನು ಅನುಭವಿಸಿ ಆಹ್ಲಾದಿಸಬಹುದಿತ್ತಲ್ವಾ?’’ ಅಂತ. ಈಗ ಕವಿತೆ ಗಳಿಗೆ ಮನಸ್ಸು ವಾಲುವುದು ಸ್ವಲ್ಪ ಕಡಿಮೆಯಾಗಿದೆ. ಈ ಭಾವನೆ ಗಳೆಂಬುದು ಕವಿಗೆ; ಶಿಲ್ಪಿಗೆ ಸಿಕ್ಕ ಕಲ್ಲಿನಂತೆ. ಅವನು ಕೆತ್ತಿ ಹೊಸ ರೂಪ ಕೊಡುವವರೆಗೂ ಅದು ಬರಿಯ ಬಂಡೆ ಮಾತ್ರ. ಈ ಅರ್ಥ ದಲ್ಲಿ ನೋಡುವುದಾದರೆ, ಕವಿ ಮತ್ತು ಪ್ರಕೃತಿಯ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ.
ಅದೆಷ್ಟೋ ಕರಿಯ ಬಂಡೆಗಳನ್ನು ವಿವಿಧ ರೂಪ ಕೊಟ್ಟು ಸಾಕುತ್ತಿರುವ ಪ್ರಕೃತಿಯ ಬಗ್ಗೆ ಹೆಮ್ಮೆ ನನಗೆ. ಕಡು ಕಠಿಣ, ಬಲಿಷ್ಠ ಕಲ್ಲುಗಳು ಯಾವ ಉಳಿಯಾಗಲಿ, ಸುತ್ತಿಗೆಯಾಗಲೀ ಇಲ್ಲದೆ ಕೆಲವು ಮಾನವೋಪ ಯೋಗಿ ಸಾಧನಗಳಂತೆ ರೂಪ ಕೊಡುವುದು ಅದ್ಭುತಲ್ಲವೇ.ಇದಕ್ಕೆ ನಿದರ್ಶನವೆಂಬಂತೆ ನೀವು ನನ್ನ ಕಥೆಯನ್ನೊಮ್ಮೆ ಕೇಳಬೇಕು. ನಮ್ಮ ಮನೆಯ ಪೂರ್ವಕ್ಕೆ ಒಂದು ಮಾವಿನ ಮರವಿತ್ತು. ಹಿರಿಯರು ಅದನ್ನೆಲ್ಲಾ ‘‘ಬೊಂಬಾಯಿ ಮಾವು’’ ಎಂದೇ ಹೆಸರಿಟ್ಟು ಕರೆಯಲು ಹೇಳಿಕೊಟ್ಟಿದ್ದರು. ಆ ಹೆಸರು ಹೇಗೆ ಬಂತೆಂದು ನಮ್ಮ ಹಿಂದಿನ ಉಮ್ಮನ ತಲೆಮಾರು ಗಳಿಗೂ ಗೊತ್ತಿಲ್ಲ. ಅವರೂ ಹಾಗೆ ಕರೆದು ಅಭ್ಯಾಸ ಮಾಡಿಸಿಬಿಟ್ಟಿದ್ದರು. ಮರವೆಂದರೆ ಎಷ್ಟೋ ವರ್ಷಗಳ ಹಿಂದಿನದ್ದು.ಆ ಮರವನ್ನು ಈಚೆಗೆ ಯಾವುದೋ ಆವಶ್ಯಕತೆಗಾಗಿ ಅರಣ್ಯ ಇಲಾಖೆಯ ಸಮ್ಮತಿಯ ಮೇರೆಗೆ ಕಡಿಸಲಾಗಿತ್ತು. ಕಡಿಸಿದ ಮರದ ಕಾಂಡದಲ್ಲಿ ಕಾಣುವ ಸುರುಳಿಯೂ ಅಸಂಖ್ಯವಾಗಿತ್ತು.ಅರುವತ್ತೋ, ಎಪ್ಪತ್ತೋ ಸುರುಳಿಗಳನ್ನು ನನ್ನ ಕಣ್ಣುಗಳೇ ಲೆಕ್ಕ ಹಾಕಿದ್ದವು. ನನ್ನ ಪ್ರಕಾರ ನನ್ನ ಅಜ್ಜಂದಿರಿಗೂ ಇದು ಚಿರ ಯೌವನದ ಯುವಕನಾಗಿ ಮಾವು ಕೊಟ್ಟಿದ್ದಂಥದ್ದು. ‘‘ಪುಲಿ ಮುಂಚಿ’’ ಮಾಡಲು ಯೋಗ್ಯವಾದ ಮಾವನ್ನೇ ಕೊಡುತ್ತಿದ್ದ ಈ ಮರವೆಂದರೆ ನಮಗೆ ಸಣ್ಣದರಲ್ಲೇ ಅಚ್ಚು ಮೆಚ್ಚು. ಒಂದಷ್ಟು ಹಕ್ಕಿಗಳಿಗೆ ತಾನು ಗೂಡು ಕಟ್ಟಲು ಜಾಗ ಕೊಟ್ಟದ್ದಲ್ಲದೆ, ಬಾವಲಿ, ಅಳಿಲುಗಳ ಹೊಟ್ಟೆಯನ್ನೂ ತುಂಬಿಸಿದ್ದುಂಟು. ಮಂಗಗಳ ಅವಿಭಕ್ತ ಕುಟುಂಬಗಳಿಗೂ ಸಹ ಸಂಸಾರ ಹೂಡಲು ನೆರವಾದಂತೆಯೂ ಅನಿಸುತ್ತಿತ್ತು. ವಿಷಯ ಅದಲ್ಲ, ಅದರ ಬುಡದಲ್ಲಿ ನೆರಳು ಹಾಸಿದಂತಿರುವ ಕರಿಯ ಬಂಡೆಗಳು.
ಚಂಪಕದಲ್ಲಿ ಫ್ರಾಕು ಹಾಕಿ ಬರುವ ಮೊಲ, ಜಿಂಕೆಗಳೇ ಜೀವಾಳವಾಗಿದ್ದ ನಮಗೆ ಪುಟಾಣಿ ಜಗತ್ತಿಗೆ ಆಟದ ಮನೆಯ ವಿಜೃಂಭಣೆಗೆ ಅವಕಾಶ ಕೊಟ್ಟಿದ್ದೇ ಆ ಬಂಡೆಯ ವಿಶೇಷತೆ. ಮರದ ಬುಡದಲ್ಲಿ ಒಂದೇ ಕರಿಬಂಡೆ ನೀಳವಾಗಿ ಜಮಖಾನೆ ಹಾಸಿದಂತಿತ್ತು. ಸಾಲದ್ದಕ್ಕೆ ಕುಳಿತು ಕೊಳ್ಳಲು ಕುರ್ಚಿಯಂಥ ನಿಸರ್ಗದತ್ತ ಅಕೃತಿ.ಅದು ಹೇಗೆ ಕುರ್ಚಿಯಾಕಾರಕ್ಕೆ ತಿರುಗಿತ್ತೋ ನಮಗೂ ಅಚ್ಚರಿಯಾಗುವಂತಿತ್ತು. ಸರಿಯಾಗಿ ಕುರ್ಚಿಯಾಕಾರಕ್ಕೆ ಕತ್ತರಿಸಲ್ಪಟ್ಟಂತಿತ್ತು. ಎಡ ಮತ್ತು ಬಲ ಬದಿಗೆ ಇಬ್ಬರು ಕುಳಿತುಕೊಳ್ಳಬಹುದಾದ್ದರಿಂದ ಸರಿಯಾಗಿ ಚಾಲಕನ ಕುರ್ಚಿಗಳಂತಿತ್ತು. ಕುರ್ಚಿಗಳ ಮಧ್ಯಕ್ಕೆ ಬೆಳೆದ ಸಸ್ಯಗಳನ್ನು ನಾವು ಗೇರಿನಂತೆ ಅಲುಗಾಡಿಸುವುದು ಮಾಡುತ್ತಿದ್ದೆವು. ನಮ್ಮ ಈ ಉಪದ್ರವ ದಿಂದಾಗಿ ಆ ಸಸ್ಯ ಒಂದೆರಡು ಆಟ ಮುಗಿಯುವ ಹೊತ್ತಿಗೆ ಎಲೆಗಳೆಲ್ಲಾ ಉದುರಿ ನರ ಪೇತಲನಂತಾಗುತ್ತಿತ್ತು. ನಾವು ರಜೆಯಲ್ಲೆಲ್ಲಾ ಅದರಲ್ಲಿ ಕುಳಿತು ಏರೋಪ್ಲೇನ್ ಡ್ರೈವ್ ಮಾಡುವಂಥ ಆಟ ಆಡುತ್ತಿದ್ದೆವು. ಸಾಲದ್ದಕ್ಕೆ ಚಿಕ್ಕಮ್ಮನ ಮಕ್ಕಳು ನಮ್ಮ ಹಿಂಬದಿಯ ಬಂಡೆಯಲ್ಲಿ ಕುಳಿತು ಸಹ ಪ್ರಯಾಣಿಕರಾಗುತ್ತಿದ್ದರು. ಕೈಯಲ್ಲಿ ನೆರೋಲ್ಯಾಕ್ ಪೈಂಟ್ ಡಬ್ಬಿಯ ಮುಚ್ಚಲವನ್ನು ತಿರುಗಿಸುತ್ತಾ ಸ್ಟೈರಿಂಗ್ ಎಂದು ನಂಬುತ್ತಿದ್ದೆವು. ಸುಮ್ಮನೆ ‘‘ಪ್ರೂ... ಪ್ರೂ’’ ಎಂದು ಬಾಯಿಯಿಂದ ಸದ್ದು ಹೊರಡಿಸುವಾಗ ಚಾಲಕನ ಮುಖ ತುಂಬ ಉಗುಳಿನ ಮಜ್ಜನವಾಗುತ್ತಿತ್ತು. ಕ್ಲಚ್ಚಿನಂತೆ ತುಳಿಯಲು ನಾಲ್ಕೈದು ಮರದ ಕೊರಡುಗಳನ್ನು ಇಟ್ಟು ಮೆಟ್ಟಲೂ ಸ್ಥಳ ಲಭ್ಯವಿತ್ತು. ಐದನೇ ಕ್ಲಾಸು ವರೆಗೂ ಹಾಗೇ ಆಡಿದ್ದು ನೆನಪು. ಅದು ಹೇಗೆ ಕುರ್ಚಾಕೃತಿಗೆ ಕ್ವಚಿತ್ತಾಗಿ ತಿರುಗಿತೆಂಬುದು ನಮಗೆ ಹೊಳೆದಿರಲಿಲ್ಲ. ಮೊದಲೇ ಹೇಳಿದಂತೆ ಪ್ರಕೃತಿಯೆಂಬ ಕವಿಗೆ ಕಲ್ಲುಗಳು ಕವಿತೆಯಾಗಿ ಹೊಳೆಯಿತೇನೋ?. ಮಳೆಗಾಲದಲ್ಲಿ ನೀರು ಬಿದ್ದು, ಆ ಕುರ್ಚಿ ಮುಖಾಂತರ ಹರಿಯುವುದನ್ನು ಬಹಳಷ್ಟು ಬಾರಿ ನೋಡಿದ್ದಿದ್ದೆ. ಮಳೆಯ ನೀರು ಮರಕ್ಕೆ ತಾಗಿ ನೆಲ ಪ್ರವೇಶಿಸುವಾಗ ಸಮತಟ್ಟಾಗಿದ್ದ ಕಲ್ಲುಗಳೂ ನಮ್ಮ ಭಾವನೆಗೆ ಹೊಳೆಯುವಂತೆ ಚಿತ್ರಿತವಾಯಿತೋ, ಏನೋ ಯಾರು ಬಲ್ಲವರು.
ಒಂದು ಬಂಡೆ ಕುರ್ಚಿ ರೂಪ ತಾಳಿ ಆಟಕ್ಕೆ ತನ್ನ ಬೆನ್ನು ಕೊಡುತ್ತಿತ್ತು. ಎಲ್ಲರಿಗೂ ಅದರಲ್ಲಿ ಕುಳಿತು ಆಟವಾಡಲಾಗದು. ತುಂಬು ಸಂಸಾರಿಗಳಾದ ಆಗಿನವರಿಗೆ ಮನೆ ತುಂಬಾ ಮಕ್ಕಳು, ನಾಲ್ಕೈದು ಜನ ಕುಳಿತುಕೊಂಡರೆ ಐದನೆಯವನು ಜಾಗ ಮಾಡಿ ಕುಳಿತುಕೊಂಡರೂ ಜಾರಿ ಬೀಳುತ್ತಿದ್ದ. ವಿಶೇಷವೆಂದರೆ ಅದೇ ಮಾವಿನ ಮರದ ಬಲಕ್ಕೆ ಸಣ್ಣ ಕಲ್ಲಿದೆ. ಅದೇ ಬಂಡೆಯಿಂದ ಪ್ರತ್ಯೇಕಗೊಂಡದ್ದಲ್ಲ. ಇಬ್ಬರೂ ಕುಳಿತುಕೊಳ್ಳಬಹುದಾದ ರಚನೆ. ನೋಡಲು ಥೇಟ್ ಚೇತಕ್ ಸ್ಕೂಟರ್ ನಂತೇ ಇದೆ. ಕುಳಿತುಕೊಂಡು ತುಳಿಯಲು ಯಾವುದೋ ಕಾಡು ಸಸ್ಯವೂ ಇದೆ. ನಾವೆಷ್ಟೇ ತುಳಿದರೂ ಜೀವ ಮೊಳೆತು ಮತ್ತೆ ನಮ್ಮ ಬಂಡೆಯ ಚೇತಕ್ಗೆ ಕಿಕ್ಕರಾಗಿ ಉಪಯೋಗವಾಗುತ್ತಿದ್ದುದೇ ನಮಗೆ ಖುಷಿ. ಬೇಸಿಗೆ ರಜೆಯಲ್ಲಿ ಕ್ರಿಕೆಟ್ ಹುಚ್ಚು ಹಿಡಿಯುವಷ್ಟೂ ಕಾಲದ ವರೆಗೇ ಏರೋಪ್ಲೇನ್ ಹಾರಿಸುವುದು, ಚೇತಕ್ ತುಳಿಯು ವುದೂ ನಾವು ನಿಲ್ಲಿಸಿರಲೇ ಇಲ್ಲ. ಮನೆಯಲ್ಲಿ ಕೊನೆಯ ತಂಗಿ ಮೂರನೇ ಕ್ಲಾಸು ಹೋಗುವವರೆಗೂ ಮಕ್ಕಳ ಆಟವನ್ನು ಆ ಎರಡೂ ಬಂಡೆಗಳು ಸಹಿಸಿಕೊಂಡವು. ಹೊಸ ಮನೆ ಕಟ್ಟಲು ತಳ ಹಾಕುವಾಗ ಕಲ್ಲು ಬೇಕಾದ್ದರಿಂದ, ಮದ್ದು ಹಾಕಿ ಸ್ಫೋಟಿಸಿ ಆ ಕಲ್ಲನ್ನು ಛಿದ್ರಗೊಳಿಸಲಾಯಿತು. ಹೀಗೆ ಎಲ್ಲ ಊರಲ್ಲೂ ಮಕ್ಕಳಿಗೆ ಬಾಲ್ಯದ ನಂಟಾಗಿರುವ ಬಂಡೆಗಳು ಇದ್ದೇ ಇರುತ್ತವೆ. ಮೊಬೈಲ್ ಬಂದ ಬಳಿಕ ಬಂಡೆಗಳ ಸುತ್ತ ಕಾಡು ಬೆಳೆದು ಅವುಗಳು ತಮ್ಮ ಶಿಲಾಯುಗ ಏಕತಾನತೆಗೆ ಮರಳಿದವು. ಒಮ್ಮೆ ಗೆಳೆಯರು ನಮ್ಮೂರಿಗೆ ಬಂದಾಗ ‘‘ಎಲ್ಲಿಗಾದರೂ ಕರೆದುಕೊಂಡು ಹೋಗು ಮಾರಾಯ, ಅಷ್ಟು ಪರಿಸರ ಕಥೆ ಬರ್ದು ಆಸೆ ಹುಟ್ಟಿಸಿದಿಯಲ್ಲಾ’’ ಎಂದು ದುಂಬಾಲು ಬಿದ್ದರು. ಹಾಗೇ ಮನೆ ಮುಂಭಾಗದ ಕಾಡು ದಾರಿಯಲ್ಲಿ ನುಗ್ಗಿ ಕೊಂಡು ಹೋದೆವು. ನಮ್ಮ ಮನೆಯ ನೆತ್ತಿಯಲ್ಲಿ ದೊಡ್ಡ ಗುಡ್ಡ. ಗುಡ್ಡದ ಮೇಲೆ ವಿಶಾಲವಾಗಿ ಹರಡಿಕೊಂಡ ಬಂಡೆ. ಮೇಲೆ ಹೋಗಿ ಕುಳಿತುಕೊಂಡರೆ ಮೂಡಣ, ಪಡುವಣ, ತೆಂಕಣಗಳಲ್ಲೂ ತಂಗಾಳಿಯ ಲಾಲಿ ಹಾಡು.ಎಂಥವನೂ ಮೈಮರೆಯುವಂಥ ನಿಸರ್ಗ ರಮಣೀಯ ಸ್ಥಳ. ಕುವೆಂಪುರವರ ಕವಿಶೈಲದಂತೆ ವಿಶಾಲವಾಗಿ ಹಾಸಿದ ಕರಿಯ ಕಲ್ಲು. ಒಮ್ಮೆಗೆ ನೂರಾರು ಮಂದಿ ಕೂರಬಹುದು. ಸುತ್ತಲೂ ತಗ್ಗಿನ ಎಲ್ಲಾ ಪ್ರದೇಶಗಳನ್ನು ವೀಕ್ಷಿಸಬಹುದು. ನೇತ್ರಾವತಿ ನದಿ ತೀರ ಅಜಿಲಮೊಗರಿನವರೆಗೆ, ಈಚೆ ಕುಮಾರಧಾರಾ ನದಿಯ ಕಡಬದ ಬಳಿಯ ಸೇತುವೆ, ಮತ್ತೆ ಚುಕ್ಕಿಯಂತೆ ಕಾಣುವ ಪಾಣೆ ಮಂಗಳೂರು ಸೇತುವೆ. ಒಟ್ಟಾರೆ ಮೂರು ಸೇತುವೆಗಳು, ದೂರದ ಉಪ್ಪಿನಂಗಡಿಯಿಂದ ಪಾಣೆ ಮಂಗಳೂರಿನಷ್ಟು ದೂರ ಕಾಣಿಸುವಷ್ಟು ಎತ್ತರ ಪ್ರದೇಶವದು. ಅವರೆಲ್ಲರೂ ಕಣ್ಣು ತುಂಬಿಕೊಂಡರು. ನಾವು ಹಿಂದೆ ಸಣ್ಣವರಿರುವಾಗ ಗಾಳಿ ಪಟ ಹಾರಿಸಿದ್ದುಂಟು. ಚಂದ್ರ ನೋಡಲು ಹತ್ತಿದ್ದುಂಟು ಹೀಗೆ ಎಷ್ಟೋ ನೆನಪುಗಳ ತಿಜೋರಿಯದು. ಉಮ್ಮ ಅದಕ್ಕೆ ‘‘ಮೈಲ್ ಪಾದೆ’’ ಎಂದು ಹೆಸರಿಟ್ಟು ಕರೆದರು. ಕನ್ನಡೀಕರಿಸುವುದಾದರೆ ‘‘ನವಿಲು ಪಾದೆ’’. ನವಿಲುಗಳು ತಮ್ಮ ಸಂಗಾತಿಗಳನ್ನು ಸೆಲೆಯಲು ನವಿಲುಗರಿ ಬಿಚ್ಚಿ ನೃತ್ಯ ಮಾಡುವುದು ಸುಮಾರು ಬಾರಿ ಅಲ್ಲೇ ನೋಡಿದ್ದಿದೆ. ಉಮ್ಮನವರು ಸಣ್ಣವರಿರುವಾಗ ಸೊಪ್ಪು ತರಲು ಕಾಡಿಗೆ ಹೋದಾಗ ಇಂಥದ್ದೇ ದೃಶ್ಯ ಸುಮಾರು ಕಂಡದ್ದರಿಂದಲೇ ಆ ಹೆಸರಿಟ್ಟು ಕರೆದಿರಬೇಕು. 2005 ರಲ್ಲಿ ಸುನಾಮಿಯಾದಾಗ, ನನ್ನ ಆರನೇ ಇಂದ್ರಿಯವೊಂದು ಸುನಾಮಿ ಬಂದರೆ ನಾವು ಮನೆಯವರೆಲ್ಲಾ ಆ ಪಾದೆ ಹತ್ತಿ ಕುಳಿತು ಕೊಳ್ಳ ಬಹುದೆಂದು ತೀರ್ಮಾನ ಮಾಡಿದ್ದೆ.ಪುಣ್ಯಕ್ಕೆ ಕರಾವಳಿಗೇನೋ ಅಪ್ಪಳಿಸದೆ ಬೃಹತ್ ಪ್ರಕೃತಿ ವಿಕೋಪದಿಂದ ಪಾರಾಗಿದ್ದೆವು.
ಈಗಲೂ ಕೆಲವೊಮ್ಮೆ ಪರಿಚಯದ ಹುಡುಗರು ಹೋಗಿ ರಾತ್ರಿಯಲ್ಲಿ ಟಿಕ್ಕ- ಗ್ರಿಲ್ ಕಾಯಿಸುವುದನ್ನೆಲ್ಲಾ ಮಾಡುತ್ತಾರೆ. ಹಿಂದೆ ಊರ ಹಿರಿಯರು ಶಿಕಾರಿಗೆ ಹೋಗುತ್ತಾ ಆ ಬಂಡೆಯಲ್ಲೇ ಅಲೆದಾಡಿದ್ದುಂಟು. ಅವರು ಕಾಡು ಹಂದಿ, ಹುಲಿ, ಜಿಂಕೆಯನ್ನೂ ಆ ಪರಿಸರದಲ್ಲಿ ನೋಡಿದ್ದಾಗಿ ಹೇಳಿದ್ದರು. ಈಗೀಗ ಅರಣ್ಯ ನಾಶ, ಮಾನವನ ಹಸ್ತಕ್ಷೇಪದಿಂದಾಗಿ ಅವುಗಳ ಸಂತತಿ ಅಳಿದಿದೆ. ಇತ್ತೀಚೆಗೆ ಇವು ಯಾವುವೂ ನಮ್ಮ ಕಣ್ಣಿಗೆ ಬಿದ್ದಿಲ್ಲ. ಈಗ್ಗೆ ಒಮ್ಮೆ ಮೈಲ್ಪಾದೆ ಸುತ್ತಿ ಬಂದ ದಿನ ಊರವರೊಬ್ಬರು ಅಲ್ಲಿ ಕಾಡು ಹಂದಿಯಿದೆ, ಜಾಗ್ರತೆ ಮಾಡ್ಕೊಳ್ಳಿ ಅಂಥ ಹೆದರಿಸಿದ್ದರು. ಎಲ್ಲಾ ಊರುಗಳಲ್ಲೂ ಇಂತಹ ಹಲವಷ್ಟು ನೆನಪುಗಳನ್ನು ಪುಂಖಾನುಪುಂಖವಾಗಿ ಕಟ್ಟಿ ಕೊಡುವ ಕಲ್ಲು ಬಂಡೆಗಳನ್ನು ನೆನಪಿಸುವಾಗ ಮೈ ನವಿರೇಳುತ್ತದೆ. ಅವುಗಳೂ ಸದ್ಯಕ್ಕೆ, ಕೋರೆ - ಜಲ್ಲಿ ಮಾಡುವ ಮನುಷ್ಯನ ಸ್ವಾರ್ಥದ ಕೈಂಕರ್ಯಕ್ಕೆ ಸಿಕ್ಕಿ ವಿರೂಪಗೊಂಡಿವೆೆ. ಮನೆಯ ನೇರ ಹಿಂದೆ ಬಂಡೆಯೊಂದು ಮೇಲೆದ್ದಿತ್ತು. ಅದನ್ನು ನೋಡಿದರೆ ನನಗೆ ಯಾವತ್ತೂ ಪುಣ್ಯಕೋಟಿಯ ಕೊನೆಯ ಸಾಲುಗಳು ನೆನಪಾಗುವುದುಂಟು.
‘‘ಎನ್ನುತಾ ಹುಲಿ ಹಾರಿ ನೆಗೆದು ತನ್ನ
ಪ್ರಾಣವ ಬಿಟ್ಟಿತು’’
ಎಂದು ತೋರಿಸುವಲ್ಲಿ ಇಂತಹದ್ದೇ ಬಂಡೆಯ ಮೇಲೆ ಹುಲಿ ಹಾರುವ ಚಿತ್ರವನ್ನು ಬಿಡಿಸಿದ್ದರು. ಅದನ್ನೇ ನಾನು ಮನಸ್ಸಲ್ಲೇ ಚಿತ್ರಿಸಿಕೊಂಡು ಹಾರಿ ,ಕಾಲು ಉಳುಕಿಸಿಕೊಂಡ ಬಳಿಕ ಅದಕ್ಕೂ ವಿರಾಮ ಹಾಕಿದ್ದೆ. ದಟ್ಟ ಕಾನನದ ಮಧ್ಯೆ ಒಂಟಿಯಾಗಿ ಬಾಳುವ ಕರಿಯ ಬಂಡೆಗಳಾಳದಲ್ಲಿ ಎಷ್ಟೊಂದು ನೆನಪುಗಳು ಹುದುಗಿರಬಹುದು, ಎಷ್ಟೊಂದು ಪ್ರಣಯ ಕಥೆಗಳು ಅಡಗಿರಬಹುದು, ಜೀವನ ಮುಗಿಸಿದವರ ದಾರುಣ ಚರಿತ್ರೆಗಳೆಷ್ಟು ಅಲ್ಲಿರಬಹುದು. ಪ್ರಕೃತಿಯೊಳಗೆ ಅಜರಾಮರನಾಗಿ ಮನುಷ್ಯರ ಋಣದ ಅಪೇಕ್ಷೆಯಿಲ್ಲದೆ ಮನೋರಂಜನೆ ನೀಡುವ ಇಂಥ ಬಂಡೆಗಳನ್ನೆಲ್ಲ ನೆನೆಯುತ್ತಿದ್ದರೆ ನೆರೆ ಕೂದಲಿನ ಅಜ್ಜಂದಿರೂ ಮಗುವಾಗುವುದುಂಟು. ಚರಿತ್ರೆಗಳೇ ಹಾಸು ಹೊಕ್ಕಾದ ಶಿಲಾ ಮಂದಿರಗಳು, ದೇವಸ್ಥಾನಗಳೂ ಇಂಥವೇ ಕಲ್ಲು ಬಂಡೆಗಳಿಂದ ಸೃಷ್ಟಿಯಾದಂಥವುಗಳು. ಚರಿತ್ರೆ ಪ್ರಸಿದ್ಧ ಬೆಳ್ತಂಗಡಿಯ ಜಮಲಾಬಾದ್ ಕೋಟೆ ಕೂಡ ಏಕ ಬೃಹತ್ ಬಂಡೆಯನ್ನು ಬಳಸಿಕೊಂಡು ನಿರ್ಮಿಸಿದ ಟಿಪ್ಪು ಸುಲ್ತಾನರ ಅತಿದೊಡ್ಡ ಕೋಟೆ. ನಾಲ್ಕು ಬಾರಿ ಚಾರಣ ಮಾಡಿದ ನೆನಪು ಚೆನ್ನಾಗಿದೆ. ಈಗಲೂ ಮತ್ತೊಮ್ಮೆ ಹತ್ತಿ ಇಳಿಯುವ ಆಸಕ್ತಿ ಸ್ವಲ್ಪವೂ ಕಳೆಗುಂದಿಲ್ಲ. ಹೀಗೆ ನಮ್ಮಿಳಗಿನ ಹಲವಷ್ಟು ಬಂಡೆಗಳೂ ಒಮ್ಮೆ ನೆನಪಾದರೆ, ಎಷ್ಟೇ ದೂರದಲ್ಲಿದ್ದರೂ ಇಂತಹ ‘‘ನಾಸ್ಟಾಲಜಿಸ್ಟ್’’ ಚಿಂತನೆಗೆ ಹಚ್ಚುವುದರಲ್ಲಿ ಸಂಶಯವಿಲ್ಲ.