varthabharthi


ತುಂಬಿ ತಂದ ಗಂಧ

ತುಂಬಿ ತಂದ ಗಂಧ

ಪಾರ್ಸಿ ರಂಗಭೂಮಿ: ವೃತ್ತಿರಂಗಭೂಮಿ ಮತ್ತು ಚಿತ್ರರಂಗದ ತಾಯಿಬೇರು

ವಾರ್ತಾ ಭಾರತಿ : 31 Mar, 2019
ಕೆ. ಪುಟ್ಟಸ್ವಾಮಿ

ಇದೇ ಮಾರ್ಚ್ 27ರಂದು ಜಗತ್ತಿನಾದ್ಯಂತ ವಿಶ್ವರಂಗಭೂಮಿ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರ ನೆಪದಲ್ಲಿ ಭಾರತದಲ್ಲಿ ವೃತ್ತಿರಂಗಭೂಮಿಗೆ ನಾಂದಿ ಹಾಡಿ, ಚಲನಚಿತ್ರರಂಗಕ್ಕೂ ಬಹು ದೊಡ್ಡಕಾಣಿಕೆ ನೀಡಿದ ಪಾರ್ಸಿ ರಂಗಭೂಮಿಯ ಸೇವೆಯನ್ನು ಇಲ್ಲಿ ಸ್ಮರಿಸಲಾಗಿದೆ.

ಜಗತ್ತಿನ ಸಂಸ್ಕೃತಿಯ ಬೆಳವಣಿಗೆ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ನಾಟಕ ಮತ್ತು ರಂಗಭೂಮಿ ನೀಡಿರುವ ಕೊಡುಗೆ ಅಸಾಧಾರಣ. ರಂಗಭೂಮಿಯು ತನ್ನ ಮಡಿಲಿನಿಂದ ಸಂಗೀತ, ನೃತ್ಯ, ಸಾಹಿತ್ಯ, ಅಭಿನಯ ಮುಂತಾದ ಅನೇಕ ಪ್ರಕಾರಗಳನ್ನು ಪೋಷಿಸಿದಂತೆಯೇ ಚಲನಚಿತ್ರದಂತಹ ತಂತ್ರಜ್ಞಾನ ಆಧಾರಿತ ಕಲಾಮಾಧ್ಯಮಕ್ಕೂ ಆಸರೆಯಾದದ್ದು ವಿಸ್ಮಯಕಾರಿ. ಸಾಹಿತ್ಯ ಮತ್ತು ರಂಗಭೂಮಿಯೆಂಬ ಊರುಗೋಲುಗಳೇ ಚಲನಚಿತ್ರ ನಿಲ್ಲಲು ಆಧಾರ ಎಂಬ ಚಿತ್ರ ವಿಮರ್ಶಕ ಆಂದ್ರೆ ಬೈಜನ್‌ನ ಅಭಿಪ್ರಾಯವು ರಂಗಭೂಮಿಗಿರುವ ವಿಶಿಷ್ಟ ಶಕ್ತಿಯನ್ನು ಹೇಳುತ್ತದೆ. ಪ್ರತಿವರ್ಷ ಮಾರ್ಚ್ 27ರಂದು ವಿಶ್ವರಂಗಭೂಮಿ ದಿನಾಚರಣೆಯಾಗಿ ಆಚರಿಸಿ ಈ ಅನನ್ಯ ಕಲಾಪ್ರಕಾರಕ್ಕೆ ಜಗತ್ತು ಗೌರವ ಸಲ್ಲಿಸುತ್ತದೆ.
ಭಾರತದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ರಂಗದ ನಡುವಣ ಅವಯವ ಸಂಬಂಧಗಳ ಸ್ವರೂಪ ಕುತೂಹಲಕಾರಿಯಾದದ್ದು. ಭಾರತದ ರಂಗಭೂಮಿಯ ಇತಿಹಾಸ ಪ್ರಾಚೀನವಾದದ್ದು. ಒಂದೆಡೆ ಸಂಗೀತ, ನಾಟ್ಯ, ಅಭಿನಯ ಸಾಹಿತ್ಯಗಳ ಸಂಗಮದ ಸಂಸ್ಕೃತ ನಾಟಕಗಳ ಜೊತೆಯಲ್ಲಿಯೇ ಜನಸಮುದಾಯ ತನ್ನ ರಂಜನೆಗಾಗಿ ಕಟ್ಟಿದ ಬಯಲಾಟ, ಸಣ್ಣಾಟ, ದೊಡ್ಡಾಟ, ಗೊಂಬೆಯಾಟ ಇತ್ಯಾದಿಗಳ ಜನಪದ ರಂಗಭೂಮಿ ಜೀವಂತವಾಗಿತ್ತು. ಕಲಾಪೋಷಣೆ ರಾಜರ ಕರ್ತವ್ಯಗಳಲ್ಲೊಂದಾದ ಕಾರಣ ರಾಜರ ಆಸ್ಥಾನದಲ್ಲಿ ನಾಟಕಗಳನ್ನು ಏರ್ಪಡಿಸುವ ಪರಿಪಾಠವಿತ್ತು. ಇವು ಸಂಸ್ಕೃತ ರಂಗಭೂಮಿಯನ್ನು ಅನುಕರಿಸುತ್ತಿದ್ದವು. ಈ ನಾಟಕ ರೂಪಗಳು ಎಂದೂ ಉದ್ಯಮವಾಗಿರಲಿಲ್ಲ. ಒಂದು ಆರ್ಥಿಕ ರೀತಿ-ನೀತಿಗಳನ್ನು ಅಳವಡಿಸಿಕೊಂಡಿರಲಿಲ್ಲ. ಜನರಂಜನೆ, ಬೋಧನೆಗಳೇ ಅವುಗಳ ಹಿಂದಿನ ಉದ್ದೇಶಗಳಾಗಿದ್ದವು.
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ ಭಾರತದಲ್ಲಿ ವೃತ್ತಿ ರಂಗಭೂಮಿಗಳು ತಲೆಯೆತ್ತಿದ್ದವು. ಜನರಂಜನೆಯ ಮೂಲಕ ರಂಗಭೂಮಿಯನ್ನು ಉದ್ಯಮವನ್ನಾಗಿಸಿದ ಖ್ಯಾತಿ ಅವುಗಳಿಗೆ ಸಲ್ಲುತ್ತದೆ. ಹಾಗಾಗಿ ರಂಗಭೂಮಿಯು ಒಂದು ಸಾಂಸ್ಥಿಕ ಸ್ವರೂಪ ಪಡೆಯಿತು. ಮುಖ್ಯವಾಗಿ ಪಾರ್ಸಿ ರಂಗಭೂಮಿಯು ಭಾರತದಲ್ಲಿ ವೃತ್ತಿರಂಗ ಭೂಮಿಯನ್ನು ಉದ್ಘಾಟಿಸಿದ್ದು ಮಾತ್ರವಲ್ಲ; ಇಡೀ ಭಾರತೀಯ ವೃತ್ತಿರಂಗಭೂಮಿಯ ಮೇಲೆ ಮತ್ತೆ ನಂತರದ ಚಲನಚಿತ್ರರಂಗದ ಬೆಳವಣಿಗೆ, ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಿತು. ಇಂದಿಗೂ ಪಾರ್ಸಿ ರಂಗಭೂಮಿಯ ಪ್ರಭಾವವನ್ನು ಚಲನಚಿತ್ರರಂಗ ತಪ್ಪಿಸಿಕೊಳ್ಳಲು ಹೆಣಗಾಡುತ್ತಲೇ ಇದೆ.


 ವಾಣಿಜ್ಯ ವ್ಯವಹಾರ ಮತ್ತು ಹಡಗು ನಿರ್ಮಾಣದ ಉದ್ದಿಮೆ, ಕ್ರೀಡೆ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಶ್ರೀಮಂತಿಕೆಯನ್ನು ಗಳಿಸಿಕೊಂಡದ್ದು ಪಾರ್ಸಿ ಸಮುದಾಯ. ಪ್ರಮುಖವಾಗಿ ಪಶ್ಚಿಮ ಕರಾವಳಿಯಲ್ಲಿ ನೆಲೆ ನಿಂತ ಈ ವರ್ಗ ತನ್ನ ಕಾರ್ಯಕ್ಷೇತ್ರವನ್ನು ನಾನಾ ರಂಗಗಳಿಗೆ ವಿಸ್ತರಿಸಿಕೊಂಡಿತು. ಜನೋಪಕಾರ ಮತ್ತು ಸಾಂಸ್ಕೃತಿಕ ರಂಗ ಅವರು ಕೈಚಾಚಿದ ಎರಡು ಪ್ರಮುಖ ಕ್ಷೇತ್ರಗಳು. ವಣಿಕರಾಗಿದ್ದ ಅವರು ಸಹಜವಾಗಿಯೇ ರಂಗಭೂಮಿಯನ್ನು ಉದ್ಯಮವಾಗಿ ಪರಿವರ್ತಿಸಲು ತೊಡಗಿದರು. ಜನರಿಗೆ ನಾಟಕಗಳನ್ನು ಪ್ರದರ್ಶಿಸಲು ರಂಗಭೂಮಿ ನಿರ್ಮಿಸಿದರು. ಕಲಾವಿದರನ್ನು ತಿಂಗಳ ವೇತನದ ಆಧಾರದಲ್ಲಿ ಕಲೆ ಹಾಕಿದರು. ಸಂಗೀತಕಾರರಿಗೆ ಪ್ರಯೋಗಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಿದರು. ಸಾಹಿತಿಗಳಿಂದ ನಾಟಕಗಳನ್ನು ಬರೆಸಿ ಪ್ರಯೋಗಿಸಿದರು.
ಮುಂಬೈಯ ವಾಣಿಜ್ಯೋದ್ಯಮಿ ಜೆಮ್‌ಶೇಟ್‌ಜೀ ಜೀಜಾಭಾಯಿ ಅವರ ಉದಾರ ದೇಣಿಗೆಯಿಂದ 1846ರಲ್ಲಿ ಆರಂಭವಾದ ಗ್ರಾಂಟ್‌ರೋಡ್ ಥಿಯೇಟರ್ ಅಲ್ಲಿನ ನಗರ ಬದುಕು ಮತ್ತು ಜನಸಂಸ್ಕೃತಿಯ ಹೊಸ ಯುಗವೊಂದಕ್ಕೆ ನಾಂದಿ ಹಾಡಿತು. ವೃತ್ತಿ ನಾಟಕ ತಂಡಗಳನ್ನು ಬ್ರಿಟಿಷರೇ ಪರಿಚಯಿಸಿದ ಕಾರಣ ಆರಂಭದಲ್ಲಿ ಅಲ್ಲಿ ಇಂಗ್ಲಿಷ್ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ನಾಟಕಗಳು ಜನರನ್ನು ಸೆಳೆಯುವ ಸಾಮರ್ಥ್ಯವನ್ನು ಮನಗಂಡ ಪಾರ್ಸಿ ಸಮುದಾಯದ ಉತ್ಸಾಹಿ ತಂಡಗಳು ಭಾರತೀಯ ಭಾಷೆಯಲ್ಲಿ ನಾಟಕಗಳನ್ನು ಪ್ರಯೋಗಿಸಲು ಗ್ರಾಂಟ್‌ರೋಡ್ ಥಿಯೇಟರ್ ಅನ್ನು ತಮ್ಮ ಪ್ರಯೋಗಗಳಿಗೆ ಬಳಸಿಕೊಂಡು ಸಫಲವಾದವು. 1953ರಿಂದ ಮುಂದಿನ ಮೂರು ದಶಕಗಳವರೆಗೆ ಗ್ರಾಂಟ್‌ರೋಡ್ ಥಿಯೇಟರ್ ಮತ್ತು ಪಾರ್ಸಿ ರಂಗಭೂಮಿ ಮುಂಬೈ ಬದುಕಿನ ಅವಿಭಾಜ್ಯ ಅಂಗವಾಯಿತು. ಅಲ್ಲದೆ ಈ ಯಶಸ್ಸನ್ನು ಅನುಸರಿಸಿ ಪಾರ್ಸಿಗಳು ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ರಂಗಮಂದಿರಗಳು ತಲೆಯೆತ್ತಿದವು. ಅವುಗಳನ್ನು ಪೀಲಾ ಹೌಸ್ (ಪ್ಲೇ ಹೌಸ್‌ನ ಅಪಭ್ರಂಶ) ಎನ್ನುತ್ತಿದ್ದರು. ತಂಡದ ಮಾಲಕರು ಬೇರೆ ಬೇರೆ ನಗರ ಪಟ್ಟಣಗಳಲ್ಲಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಂದ ಹಣ ಪಡೆದು ಜನರಂಜನೆ ಒದಗಿಸುವ ರಂಗೋದ್ಯಮವನ್ನು ವಿಸ್ತರಿಸಿದರು. ಪಾರ್ಸಿ ನಾಟಕ ಮಂಡಳಿಗಳು ದೂರದೂರದ ಊರುಗಳಿಗೆ ಸಂಚರಿಸಿದಂತೆ, ಹೋದಲ್ಲೆಲ್ಲ ನಾಟಕದ ಹಣತೆಗಳು ಹತ್ತಿಕೊಂಡವು. ಹಾಗೆ ಹತ್ತಿಕೊಂಡು ಪ್ರತಿಯೊಂದು ಜ್ಯೋತಿಯೂ ಆಯಾ ಪ್ರಾಂತದ ಭಾಷೆಯನ್ನಾಡಿತು.
1850ರಿಂದ 1950ರವರೆಗೆ, ಒಂದು ಶತಮಾನ ಕಾಲ ಪಾರ್ಸಿ ರಂಗಭೂಮಿ ಭಾರತದ ಸಾಂಸ್ಕೃತಿಕ ರಂಗದ ಮೇಲೆ ಪ್ರಾಬಲ್ಯ ಸಾಧಿಸಿತು. ರಂಗಭೂಮಿಯ ಬಗ್ಗೆ ಜನರಲ್ಲಿದ್ದ ಮನೋಭಾವನೆ ಯನ್ನು ಅದು ಸಂಪೂರ್ಣ ಬದಲಿಸಿತು. ಮೊತ್ತ ಮೊದಲ ಪಾರ್ಸಿ ವೃತ್ತಿತಂಡ ಪಾರ್ಸಿ ನಾಟಕ ಮಂಡಲಿ 1853ರಲ್ಲಿ ಅಸ್ತಿತ್ವಕ್ಕೆ ಬಂತು. ಫ್ರಾಮ್‌ಜಿ ಜಿ. ದಲಾಲ್ ಅದರ ಮಾಲಕ. ಗ್ರಾಂಟ್‌ರೋಡ್ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡ ಮೊದಲ ನಾಟಕ ‘ರುಸ್ತುಂ ಆ್ಯಂಡ್ ಸೊಹ್ರಾಬ್’. ಆನಂತರ ಸುಮಾರು 20 ಪಾರ್ಸಿ ವೃತ್ತಿ ನಾಟಕ ಮಂಡಲಿಗಳು ಮುಂಬೈಯಲ್ಲಿ ಜನ್ಮ ತಾಳಿದವು. ನಾಟಕ ಚಳವಳಿಯನ್ನು ಮುನ್ನಡೆಸಿದವು. ಉತ್ತೇಜಕ್ ಮಂಡಲಿ ಎಂಬ ಪಾರ್ಸಿ ಕಂಪೆನಿ 16 ವರ್ಷಗಳಲ್ಲಿ 1,100 ಆಟಗಳನ್ನು ಸತತವಾಗಿ ಪ್ರದರ್ಶಿಸಿತು. ಈ ವೃತ್ತಿ ಕಂಪೆನಿಗಳನ್ನು ಆರಂಭದಲ್ಲಿ ಸ್ಥಾಪಿಸಿದವರೆಲ್ಲರೂ ವಿದ್ಯಾವಂತರೆ! ಸಾಮಾನ್ಯ ಜನರೊಡನೆ ಸಂವಹನ ಸಾಧಿಸಲು, ನೀತಿ, ರಂಜನೆ ಮತ್ತು ಸಾಮಾಜಿಕ ಸಂದೇಶಗಳನ್ನು ನೀಡಲು ನಾಟಕ ಒಂದು ಸಶಕ್ತ ಮಾಧ್ಯಮ ಎಂದು ಅವರು ಭಾವಿಸಿದ್ದರು.
ಪಾರ್ಸಿ ವೃತ್ತಿರಂಗ ಕಂಪೆನಿಗಳು ನಿಜವಾದ ಅರ್ಥದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಂಡಿದ್ದವು. ನಾಟಕ ನಿರ್ಮಾಣ ಮತ್ತು ಪ್ರದರ್ಶನ ಅಪಾರ ಹಣಕಾಸನ್ನು ಬೇಡುವ ಮಾಧ್ಯಮ. ಪಾರ್ಸಿ ತಂಡದ ಮಾಲಕರು ಹಣ ಹೂಡಲು ಹಿಂಜರಿಯಲಿಲ್ಲ. ಅದರ ಜೊತೆಗೆ ನಾಟಕದ ಆಯ್ಕೆ, ರಂಗಸಜ್ಜಿಕೆ, ಕಲಾವಿದರ ಅಭಿನಯ, ಸಂಗೀತ, ನಾಟಕದ ಸಮಯ, ಎಲ್ಲದರಲ್ಲೂ ಅಚ್ಚುಕಟ್ಟುತನ ಸಾಧಿಸಲು ಯತ್ನಿಸಿ ಮಾಲಕರು ಯಶಸ್ವಿಯಾದರು. ವೃತ್ತಿ ನಾಟಕ ಕಂಪೆನಿಗಳು ನಡೆಸುವವರಿಗೆ ಮಾದರಿಯನ್ನು ಹಾಕಿಕೊಟ್ಟರು. ತಾವು ನೆಲೆನಿಂತಿದ್ದ ಗುಜರಾತಿ, ಹಿಂದಿ, ಉರ್ದು ಭಾಷೆಗಳಲ್ಲಿ ನಾಟಕಗಳನ್ನು ಪ್ರಯೋಗಿಸಿ ಭಾರತದ ಇತರ ಭಾಷೆಯಲ್ಲಿಯೂ ವೃತ್ತಿ ರಂಗಭೂಮಿಗಳು ಜನ್ಮ ತಾಳಲು ಪಾರ್ಸಿ ರಂಗಭೂಮಿ ಬಹುದೊಡ್ಡ ಕಾಣಿಕೆ ನೀಡಿತು.


ಪಾರ್ಸಿ ರಂಗಭೂಮಿಯು ಈ ಶತಮಾನದ ಅವಧಿಯಲ್ಲಿ ಜಗತ್ತಿನ ಹಲವಾರು ರಂಗಭೂಮಿಗಳಿಂದ ವಸ್ತು, ವಿಷಯ, ವಿನ್ಯಾಸಗಳನ್ನು ಎರವಲು ಪಡೆದುಕೊಂಡು ಒಂದು ವಿಶಿಷ್ಟ ರಂಗಪ್ರಕಾರವನ್ನು ಹುಟ್ಟು ಹಾಕಿತು. ಪ್ರಧಾನವಾಗಿ ಮಧ್ಯಮ ವರ್ಗದ ಜನರಿಗೆ ರಂಜನೆ ನೀಡುವ ಮೂಲಕ ಆರ್ಥಿಕ ಲಾಭ ಸಂಪಾದನೆಗೆ ವೃತ್ತಿರಂಗಭೂಮಿ ಮಾಧ್ಯಮವಾಯಿತು. ಜನಪದರಂಗದ ಧ್ಯೇಯಗಳಾದ ದೇವತಾರಾಧನೆ, ನೀತಿಬೋಧೆ ಮತ್ತು ಆಸ್ಥಾನ ರಂಗದ ಕಲಾ ಪ್ರೌಢಿಮೆ, ಕಲಾರಸಿಕತೆ, ಕಲಾಪ್ರತಿಷ್ಠೆಗಳಿಗಿಂತ ಭಿನ್ನವಾದ ಮನರಂಜನೆ, ಹಣ ಸಂಪಾದನೆಯೇ ಗುರಿಯಾದ ವೃತ್ತಿರಂಗಭೂಮಿಗೆ ಅನುಗುಣವಾಗಿ ನಾಟಕ ವಿಧಾನವನ್ನು ರೂಪಿಸಿಕೊಂಡಿತು. ಮುಖ್ಯವಾಗಿ ಬ್ರಿಟಿಷ್ ನಾಟಕಗಳ ರಂಗಸಜ್ಜಿಕೆ, ದೃಶ್ಯ ಸಂಯೋಜನೆ, ಯೂರೋಪ್ ರಂಗಭೂಮಿಯ ವೇದಿಕೆ, ಭಾರತದ ಪುರಾಣ ವಸ್ತುಗಳು, ಪಾಶ್ಚಾತ್ಯ ನಾಟಕಗಳು ಮತ್ತು ಅರಬ್ ರಾಷ್ಟ್ರಗಳ ಕಥಾವಸ್ತುಗಳನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿತು. ರಾಮಾಯಣ, ಮಹಾಭಾರತ ಮತ್ತು ಪೌರಾಣಿಕ ವಸ್ತುಗಳನ್ನೊಳಗೊಂಡಂತೆ, ಷೇಕ್ಸ್‌ಪಿಯರ್‌ನ ‘ರೋಮಿಯೋ ಜೂಲಿಯಟ್’, ಅರಬ್ ಮೂಲದ ‘ಗುಲ್‌ಎ ಬಕಾವಲಿ’, ‘ಸೊಹ್ರಾಬ್ ರುಸ್ತುಂ’, ‘ಅಲ್ಲಾವುದ್ದೀನ್’ ಮುಂತಾದ ವಸ್ತುಗಳನ್ನು ನಾಟಕಕ್ಕೆ ಪಾರ್ಸಿ ರಂಗಭೂಮಿಯ ಸಂಘಟಕರು ಒಗ್ಗಿಸಿದರು. ಮುಖ್ಯವಾಗಿ ಪೌರಾಣಿಕ ನಾಟಕಗಳ ವಸ್ತ್ರವಿನ್ಯಾಸ, ಪ್ರಸಾಧನ ಮತ್ತು ಪರಿಸರ ಸೃಷ್ಟಿಗೆ ಅವರು ಕಲಾವಿದ ರಾಜಾರವಿವರ್ಮ ಚಿತ್ರಿಸಿದ ಪೌರಾಣಿಕ ವ್ಯಕ್ತಿಗಳ ಕ್ಯಾನ್‌ವಾಸ್‌ಗಳನ್ನು ಅನುಕರಿಸಿದರು. ಉಡುಗೆ-ತೊಡುಗೆ, ಒಡವೆ-ಕಿರೀಟಗಳಿಂದ ಹಿಡಿದು ಚಿತ್ರಗಳ ಸೂಕ್ಷ್ಮಾತಿ ಸೂಕ್ಷ್ಮಗಳನ್ನೆಲ್ಲ ರಂಗದ ಮೇಲೆ ಮೂರ್ತರೂಪಕ್ಕೆ ತಂದ ಖ್ಯಾತಿ ಅವರದು. ಇದೇ ಆಧಾರದ ಮೇಲೆ ಅವರು ಎಲ್ಲ ಪೌರಾಣಿಕ, ಚಾರಿತ್ರಿಕ ವ್ಯಕ್ತಿಗಳ ವಸ್ತ್ರವಿನ್ಯಾಸವನ್ನು ಮಾಡಿಸಿದರು. ಒಂದು ಕಾಲಕ್ಕೆ ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲ ವೃತ್ತಿನಾಟಕಗಳು ಪ್ರಯೋಗಿಸುವ ನಾಟಕಗಳ ಪಾತ್ರಗಳಿಗೆ ವಸ್ತ್ರವಿನ್ಯಾಸ, ಪ್ರಸಾಧನ, ಅಲಂಕಾರ, ದೃಶ್ಯ ಸಂಯೋಜನೆಗಳಿಗೆ ಪಾರ್ಸಿ ನಾಟಕಗಳೇ ಆಧಾರವಾಗಿದ್ದವು. ಭಾರತದ ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಬರುವ ರಾಜ, ಮಂತ್ರಿ, ಸೇನಾಪತಿ, ಸೈನಿಕ, ರಾಣಿಯರು, ಸಖಿಯರು, ರೈತರು ಮುಂತಾದವುಗಳಿಗೆಲ್ಲ ವಸ್ತ್ರ ವಿನ್ಯಾಸ, ತೊಡುವ ಆಭರಣ, ಕಿರೀಟ, ಭುಜಕೀರ್ತಿ ಇತ್ಯಾದಿಗಳೆಲ್ಲವೂ ಪಾರ್ಸಿ ಕಂಪೆನಿಗಳು ವಿನ್ಯಾಸಗೊಳಿಸಿದಂಥವು. ಹನ್ನೆರಡನೇ ಶತಮಾನದ ಬಸವಣ್ಣ, ಹದಿನಾಲ್ಕನೇ ಶತಮಾನದ ಶ್ರೀಕೃಷ್ಣದೇವರಾಯ, ಛತ್ರಪತಿ ಶಿವಾಜಿ ಮುಂತಾದ ಐತಿಹಾಸಿಕ ಪಾತ್ರಗಳೂ ರಾಜಾ ರವಿವರ್ಮನ ದೇವರುಗಳಂತೆ ಕಿರೀಟ, ಭುಜಕೀರ್ತಿ ಮತ್ತು ಉಡುಪಿನಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವುದರ ಹಿಂದೆ ಪಾರ್ಸಿ ರಂಗಭೂಮಿಯ ಕೊಡುಗೆಯಿದೆ.
ಪಾರ್ಸಿ ರಂಗಭೂಮಿಯ ಪ್ರಭಾವದಿಂದಲೇ ಕರ್ನಾಟಕದಲ್ಲೂ ವೃತ್ತಿರಂಗಭೂಮಿಗಳು ತಲೆಯೆತ್ತಿದ್ದವು. ಅಲ್ಲದೆ, ಮರಾಠೀ ರಂಗಭೂಮಿಯ ಪ್ರಭಾವವನ್ನು ಪ್ರತಿರೋಧಿಸಲು ಗದಗಿನಲ್ಲಿ ಮೊದಲ ವೃತ್ತಿರಂಗಭೂಮಿ ಆರಂಭವಾಯಿತು.
ಹಿಂದಿ ಸಿನೆಮಾಕ್ಷೇತ್ರಕ್ಕೆ ಪಾರ್ಸಿಗಳು ನೀಡಿರುವ ಕೊಡುಗೆ ಅಪಾರ. ತನ್ನ ಆರಂಭದ ಕಾಲದಲ್ಲಿ ಹಿಂದಿ ಸಿನೆಮಾ ಪಾರ್ಸಿ ರಂಗಭೂಮಿಯ ಪ್ರಭಾವದಿಂದಲೇ ಅರಳಿತು. ಹಾಗೆ ನೋಡಿದರೆ, ಭಾರತದ ಮೊದಲ ಮೂಕಿ ಕಥಾಚಿತ್ರ ‘ರಾಜಾ ಹರಿಶ್ಚಂದ್ರ’, ಪಾರ್ಸಿ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕರೂಪವನ್ನೇ ಆಧರಿಸಿತ್ತು. ಅಲ್ಲಿಂದ ಪಾರ್ಸಿ ರಂಗಭೂಮಿಯಲ್ಲಿ ನಾಟಕಗಳಾಗಿ ಜನಪ್ರಿಯವಾಗಿದ್ದ ‘ಲೈಲಾ ಮಜ್ನು’, ‘ಸೊಹ್ರಾಬ್‌ರುಸ್ತುಂ’, ‘ಗುಲ್ ಎ ಬಕಾವಲಿ’, ಭಾರತೀಯ ಕಥಾನಕಗಳಾದ ‘ಶಕುಂತಲಾ’, ‘ಕೀಚಕವಧೆ’ ಮುಂತಾದ ಪೌರಾಣಿಕ ನಾಟಕಗಳು ಚಲನಚಿತ್ರರೂಪ ತಾಳಿದವು. ಆರಂಭದ ಭಾರತೀಯ ಮಾತಿನ ಸಿನೆಮಾಗಳಲ್ಲಿನ ನಿರೂಪಣೆ, ಅಭಿನಯ, ಹಾಡುಗಳ ಅಳವಡಿಕೆ ಮೊದಲಾದ ಸಿನೆಮಾ ನಿರ್ಮಾಣದಲ್ಲಿ ಪಾರ್ಸಿ ರಂಗನಾಟಕಗಳ ಪ್ರಭಾವವನ್ನು ಕಾಣಬಹುದು. ಮಾತಿನ ಚಲನಚಿತ್ರ ಯುಗ ಆರಂಭವಾದ ನಂತರ ಪಾರ್ಸಿ ರಂಗಭೂಮಿಯಿಂದ ಚಲನಚಿತ್ರಕ್ಕೆ ದೊಡ್ಡ ವಲಸೆಯೇ ಆರಂಭವಾಯಿತು.
‘ಆಲಂ ಅರಾ ಎಂಬ’ ಮಾತಿನ ಚಿತ್ರವನ್ನು 1931ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ತಯಾರಿಸಿ ಚಿತ್ರರಂಗ ಹೊರಳುದಾರಿ ಹಿಡಿಯಲು ಕಾರಣರಾದವರು ಖಾನ್ ಬಹದ್ದೂರ್ ಅರ್ದೇಶಿರ್ ಇರಾನಿ. ಮುಂಬೈನಲ್ಲಿ ಅಲೆಕ್ಸಾಂಡರ್ ಚಿತ್ರಮಂದಿರವನ್ನು ನಿರ್ವಹಿಸುತ್ತಿದ್ದ ಇರಾನಿ ಚಲನಚಿತ್ರ ನಿರ್ಮಾಣದಲ್ಲಿ ಆಸಕ್ತಿ ತಳೆದು ‘ನಳ ದಮಯಂತಿ’, ‘ವೀರ ಅಭಿಮನ್ಯು’ ಮೂಕಿ ಚಿತ್ರಗಳೂ ಸೇರಿದಂತೆ ತಮ್ಮ ನಲವತ್ತನೇ ವಯಸ್ಸಿಗೆ ಅರವತ್ತೆರಡು ಮೂಕಿ ಸಿನೆಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಸಾಹಸಿ. ಚಲನಚಿತ್ರದಲ್ಲಿ ಧ್ವನಿಯು ಮೂಡಿಸಿದ ಸಂಚಲನವನ್ನು ಭಾರತೀಯ ಚಲನಚಿತ್ರಗಳಲ್ಲಿ ಅಳವಡಿಸುವ ಸಾಹಸಕ್ಕೆ ಕೈಹಾಕಿ 1931ರಲ್ಲಿ ‘ಆಲಂ ಅರಾ’ ಚಿತ್ರವನ್ನು ಬಿಡುಗಡೆ ಮಾಡಿ ವಾಕ್ಚಿತ್ರ ಪಿತಾಮಹ ಎನಿಸಿದರು. ರಾಜಕುಮಾರ ಮತ್ತು ಅಲೆಮಾರಿ ಜಿಪ್ಸಿ ಸಮುದಾಯದ ಹೆಣ್ಣೊಬ್ಬಳ ನಡುವಿನ ಪ್ರೇಮಕಥಾನಕವಾದ ‘ಆಲಂ ಅರಾ’ ಸಹಜವಾಗಿಯೇ ರಂಗಭೂಮಿಯ ಮೇಲೆ ಯಶಸ್ಸು ಪಡೆದಿದ್ದ ಪಾರ್ಸಿ ನಾಟಕವನ್ನೇ ಆಧರಿಸಿತ್ತು.
ಭಾರತೀಯ ಚಲನಚಿತ್ರರಂಗವನ್ನು ತನ್ನ ಅಭಿನಯ ಮತ್ತು ಮರೆಯಲಾಗದ ಚಾರಿತ್ರಿಕ ಚಿತ್ರಗಳ ನಿರ್ಮಾಪಕ ನಿರ್ದೇಶಕನಾಗಿ ಆರಂಭದ ಭಾರತೀಯ ಚಲನಚಿತ್ರರಂಗಕ್ಕೆ ಶ್ರೀಮಂತಿಕೆ ತಂದುಕೊಟ್ಟವರು ಸೊಹ್ರಾಬ್ ಮೋದಿ-ಮತ್ತೋರ್ವ ಪಾರ್ಸಿ. ಹ್ಯಾಮ್ಲೆಟ್ ನಾಟಕವನ್ನು ಆಧರಿಸಿ ಅವರು ನಿರ್ಮಿಸಿದ ‘ಖೂನ್ ಕಾ ಖೂನ್’ (1935) ಮತ್ತು ಕಿಂಗ್‌ಜಾನ್ ನಾಟಕವನ್ನು ಆಧರಿಸಿದ ‘ಸೈಯಿದ್ ಎ ಅವಾಸ್’ (1936) ಯಶಸ್ಸು ಕಂಡ ನಂತರ ಮಿನರ್ವ ಮೂವಿಟೋನ್ ಸ್ಟುಡಿಯೋ ಸ್ಥಾಪಿಸಿ ‘ಪ್ರಕಾರ್’ (1939), ‘ಸಿಕಂದರ್’ (1941), ‘ಪೃಥ್ವಿ ವಲ್ಲಬ್’ (1943), ‘ಶೀಷ್ ಮಹಲ್’ (1950), ‘ಜಾನ್ಸಿ ಕಿ ರಾಣಿ’ (1953), ‘ಮಿರ್ಝಾ ಗಾಲಿಬ್’ (1954) ಮುಂತಾದ 25 ಅಮೋಘ ಚಿತ್ರಗಳನ್ನು ನಿರ್ದೇಶಿಸಿದರು. ಮೂಲ ಪಾರ್ಸಿ ರಂಗಭೂಮಿಯ ನಟರಾಗಿದ್ದ ಅವರ ಐತಿಹಾಸಿಕ ಚಿತ್ರಗಳು ನಿರ್ಮಾಣದಲ್ಲಿ ಹಾಲಿವುಡ್ ಚಿತ್ರಗಳಿಗೆ ಸರಿಸಮಾನವಾಗಿರುತ್ತಿದ್ದವು. ದೃಶ್ಯ ವೈಭವಗಳ ಅವರ ಬಹುತೇಕ ಚಿತ್ರಗಳು ಯಶಸ್ವಿಯಾಗಿ ಭಾರತೀಯ ಚಿತ್ರರಂಗದಲ್ಲಿ ಚರಿತ್ರೆಯೊಂದನ್ನು ಬರೆದವು.
ಚಲನಚಿತ್ರರಂಗದ ಈ ಪಾರ್ಸಿ ಪರಂಪರೆಯನ್ನು ಮುಂದು ವರಿಸಿದವರಲ್ಲಿ ವಾಡಿಯಾ ಮೂವಿಟೋನ್‌ನ ಜೆ.ಬಿ.ಎಚ್. ವಾಡಿಯಾ, ಹೋಮಿವಾಡಿಯಾ ಪ್ರಮುಖರು. ಮೇರಿ ಇವಾನ್ಸ್ ಎಂಬ ಆಸ್ಟ್ರೇಲಿಯಾದ ಸರ್ಕಸ್ ಪಟುವನ್ನು ನಾಡಿಯಾ ಎಂದು ನಾಮಕರಣ ಮಾಡಿ ನಾಯಕಿಯನ್ನಾಗಿಸಿ ತಯಾರಿಸಿದ ಸರಣಿ ಸಾಹಸ ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ಸೂರೆ ಮಾಡಿದವು.
ಸಿನೆಮಾ ತಂತ್ರಜ್ಞಾನಕ್ಕೂ ಹೊಸ ಭಾಷ್ಯ ಬರೆದವರಲ್ಲಿ ಪಾರ್ಸಿ ತಂತ್ರಜ್ಞರು ಪ್ರಮುಖರು. 1940-50ರ ದಶಕದಲ್ಲಿ ಫರೆದೂನ್ ಎ ಇರಾನಿ ಅತ್ಯಂತ ಬೇಡಿಕೆಯ ಛಾಯಾಚಿತ್ರಗ್ರಾಹಕರಾಗಿದ್ದರು. ಮೆಹಬೂಬ್ ಖಾನ್‌ರವರ ಬಹುತೇಕ ಚಿತ್ರಗಳಿಗೆ (ಅನ್ಮೂಲ್ ಫಾಡಿ, ಅಂದಾಜ್, ಆನ್, ಮದರ್ ಇಂಡಿಯಾ) ಮಾಡಿರುವ ಛಾಯಾಗ್ರಹಣ ಇಂದಿಗೂ ಅಧ್ಯಯನ ಯೋಗ್ಯ. ಹಾಗೆಯೇ ಅರುಣಾ ಇರಾನಿಯವರಿಂದ ಬೊಮ್ಮನ್ ಇರಾನಿವರೆಗೆ ಕಲಾವಿದರು ನೀಡಿರುವ ಕಾಣಿಕೆ ಕಡಿಮೆಯದಲ್ಲ.
ಹೀಗೆ ಭಾರತೀಯ ವೃತ್ತಿರಂಗಭೂಮಿ ಮತ್ತು ಚಲನಚಿತ್ರರಂಗಕ್ಕೆ ಮೂಲಾಧಾರವೆನಿಸಿದ ಪಾರ್ಸಿ ರಂಗಭೂಮಿ ಮತ್ತು ಅದರ ಹಿಂದಿನ ಚೈತನ್ಯಗಳಿಗೆ ವಿಶ್ವರಂಗಭೂಮಿ ದಿನದ ನೆನಪಿಗಾಗಿ ಒಂದು ಸಲಾಮ್.

ಪಾರ್ಸಿ ರಂಗಭೂಮಿಯು ಭಾರತದಲ್ಲಿ ವೃತ್ತಿರಂಗ ಭೂಮಿಯನ್ನು ಉದ್ಘಾಟಿಸಿದ್ದು ಮಾತ್ರವಲ್ಲ; ಇಡೀ ಭಾರತೀಯ ವೃತ್ತಿರಂಗಭೂಮಿಯ ಮೇಲೆ ಮತ್ತೆ ನಂತರದ ಚಲನಚಿತ್ರರಂಗದ ಬೆಳವಣಿಗೆ, ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಿತು. ಇಂದಿಗೂ ಪಾರ್ಸಿ ರಂಗಭೂಮಿಯ ಪ್ರಭಾವವನ್ನು ಚಲನಚಿತ್ರರಂಗ ತಪ್ಪಿಸಿಕೊಳ್ಳಲು ಹೆಣಗಾಡುತ್ತಲೇ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)