ಎನ್ಐಎ ವಿಶ್ವಸನೀಯತೆಗೆ ಕಪ್ಪು ಚುಕ್ಕೆ
ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ತನಿಖೆ
ಸಂಜೋತಾ ಸ್ಫೋಟ ಪ್ರಕರಣದ ಪೂರ್ಣ ತೀರ್ಪು ಘೋಷಣೆಯಾಗುವ ಮೊದಲೇ ಕೇಂದ್ರ ಗೃಹ ಸಚಿವರು ತೀರ್ಪನ್ನು ಪ್ರಶ್ನಿಸಿ ಪ್ರಾಸಿಕ್ಯೂಶನ್ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಿಲ್ಲವೆಂದು ಹೇಳಿಕೆ ನೀಡಿದ್ದುದು ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಪಕ್ಷಪಾತದ ಧೋರಣೆಗೆ ಸ್ಪಷ್ಟ ನಿದರ್ಶನವಾಗಿದೆ. ಇದು ನಿಜಕ್ಕೂ ಆಘಾತಕಾರಿಯಾದುದಾಗಿದೆ.
ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಪ್ರಕರಣದ ನ್ಯಾಯಾಂಗ ತನಿಖೆಯಲ್ಲಿ ಪ್ರಾಸಿಕ್ಯೂಶನ್ ಮಹತ್ವದ ಸಾಕ್ಷವನ್ನು ತಡೆಹಿಡಿದಿದ್ದುದು, ಎಲ್ಲಾ ಆರೋಪಿಗಳ ಬಿಡುಗಡೆಗೆ ಕಾರಣವಾಯಿತೆಂಬ ವಿವರಣೆಯನ್ನು ನ್ಯಾಯಾಧೀಶರು ನೀಡುವುದರೊಂದಿಗೆ, ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣ ಕೊನೆಗೊಂಡಿರುವುದು, ಇಡೀ ದೇಶದ ಆತ್ಮಸಾಕ್ಷಿಯನ್ನು ನಡುಗಿಸಿದೆ.
10 ಮಂದಿ ಭಾರತೀಯರು ಹಾಗೂ 43 ಮಂದಿ ಪಾಕ್ ಪ್ರಜೆಗಳು ಸೇರಿದಂತೆ 68 ಮಂದಿ ಸಾವನ್ನಪ್ಪಿದ ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಭಾರತದ ಪ್ರಮುಖ ತನಿಖಾ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ)ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಹಾಗೂ ಪ್ರಾಸಿಕ್ಯೂಶನ್ ಹಲವಾರು ಸಾಕ್ಷಿಗಳ ವಿಚಾರಣೆ ನಡೆಸುವಲ್ಲಿ ಹಾಗೂ ಅತ್ಯುತ್ತಮವಾದ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ವಿಧಿಯಿಲ್ಲದೆ ತಾನು ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.
ಘೋರವಾದ ಭಯೋತ್ಪಾದಕ ದಾಳಿಯಂತಹ ಉನ್ನತ ಪ್ರಕರಣಗಳ ವಿಚಾರಣೆಯಲ್ಲಿ ಎನ್ಐಎನಂತಹ ಪ್ರಮುಖ ತನಿಖಾಸಂಸ್ಥೆಯು ಈ ರೀತಿಯಾಗಿ ವರ್ತಿಸಿದರೆ, ಭಾರತದ ತನಿಖಾ ಹಾಗೂ ಪ್ರಾಸಿಕ್ಯೂಶನ್ ವ್ಯವಸ್ಥೆಯ ವಿಶ್ವಸನೀಯತೆ ಏನಾದೀತೆಂಬ ದೊಡ್ಡ ಪ್ರಶ್ನೆಯನ್ನೇ ಈ ತೀರ್ಪು ದೇಶದ ಮುಂದಿಟ್ಟಿದೆ.
ಈ ಪ್ರಕರಣದಲ್ಲಿ ಎದುರಾದ ಸಮಸ್ಯೆಯು ವಿಶಿಷ್ಟವಾದುದಾಗಿದೆ. ಯಾಕೆಂದರೆ 2007 ಫೆಬ್ರವರಿಯಲ್ಲಿ ನಡೆದ ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣವು ಮಕ್ಕಾ ಮಸೀದಿ, ಹೈದರಾಬಾದ್, ಅಜ್ಮೀರ್ ಶರೀಫ್ ಹಾಗೂ ಮಾಲೇಗಾಂವ್ಗಳಲ್ಲಿ ಸಂಭವಿಸಿದ ಇದೇ ರೀತಿಯ ಸ್ಫೋಟ ಪ್ರಕರಣಗಳ ಜೊತೆಗೂ ನಂಟನ್ನು ಹೊಂದಿದೆ. ದೋಷಾರೋಪ ಪಟ್ಟಿಗಳ ಪ್ರಕಾರ ಸ್ವಾಮಿ ಅಸೀಮಾನಂದ (ನಭ ಕುಮಾರ್ ಸರ್ಕಾರ್) ಈ ಎಲ್ಲಾ ಸ್ಫೋಟ ಪ್ರಕರಣಗಳ ಹಿಂದಿರುವ ರೂವಾರಿಯೆಂದು ತೀರ್ಮಾನಿಸಲಾದ ಕಾರಣ, ಈ ಪ್ರಕರಣಗಳು ಪರಸ್ಪರ ನಂಟು ಹೊಂದಿವೆ.
ದುರದೃಷ್ಟವಶಾತ್, ಈ ಸ್ಫೋಟ ಪ್ರಕರಣಗಳನ್ನು ಹಿಂದುತ್ವ ಭಯೋತ್ಪಾದನೆಯ ಪ್ರಕರಣಗಳೆಂದು ಬಿಂಬಿಸಿ ರಾಜಕೀಯಕರಣಗೊಳಿಸಲಾಗಿತ್ತು ಹಾಗೂ ಆನಂತರ ಬಿಜೆಪಿ ಸರಕಾರವು ಅಧಿಕಾರಕ್ಕೇರಿದ ಬಳಿಕ ಈ ಪ್ರಕರಣಗಳ ಪ್ರಾಸಿಕ್ಯೂಶನ್ ವಿಚಾರಣೆಯನ್ನು ದುರ್ಬಲಗೊಳಿಸಲು ವ್ಯವಸ್ಥಿತವಾದ ಪ್ರಯತ್ನವನ್ನು ಮಾಡಲಾಯಿತು. ತರುವಾಯ ‘‘ಹಿಂದೂ ಭಯೋತ್ಪಾದನೆಯೆಂಬುದೇ ಇಲ್ಲ’’ ಎಂಬ ಅಭಿಪ್ರಾಯಕ್ಕೆ ಎನ್ಐಎ ವರಿಷ್ಠರು ಸಹಾನೂಭೂತಿಯನ್ನು ವ್ಯಕ್ತಪಡಿಸಿರುವುದನ್ನು ಕೂಡಾ ನಾವು ನೋಡಿದ್ದೇವೆ.
ಸಂಜೋತಾ ಸ್ಫೋಟ ಪ್ರಕರಣದಲ್ಲಿ ನ್ಯಾಯಾಧೀಶರು, ‘‘ ಪ್ರಾಸಿಕ್ಯೂಶನ್ ಪುರಾವೆ ಹಾಗೂ ಭಯೋತ್ಪಾದಕ ಕೃತ್ಯದ ಆರೋಪಗಳಲ್ಲಿ ಎದ್ದುಕಾಣುವ ವೈಫಲ್ಯಗಳು ಇತ್ಯರ್ಥಗೊಳ್ಳದೆ ಉಳಿದಿವೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಭಯೋತ್ಪಾದನೆಗೆ ಧರ್ಮವೆಂಬುದೇ ಇಲ್ಲ. ಯಾಕೆಂದರೆ ಜಗತ್ತಿನಲ್ಲಿ ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ನ್ಯಾಯಾಲಯವು ಜನಪ್ರಿಯ ಹಾಗೂ ಪ್ರಚಲಿತದಲ್ಲಿರುವ ಸಾರ್ವಜನಿಕ ಗ್ರಹಿಕೆ ಅಥವಾ ಸಾರ್ವಜನಿಕ ಚಿಂತನೆಗಳನ್ನು ಆಧರಿಸಿ ವಿಚಾರಣೆಯನ್ನು ಮುನ್ನಡೆಸುವುದಿಲ್ಲ ಹಾಗೂ ಅಂತಿಮವಾಗಿ ಅದು ಪುರಾವೆಯನ್ನು ಆಧರಿಸಿ ಪರಾಮರ್ಶೆ ನಡೆಸುತ್ತದೆ’’ ಎಂದು ನೋವಿನಿಂದಲೇ ಹೇಳಿದ್ದರು.
ಸಾರ್ವಜನಿಕ ಚಿಂತನೆಗಳ ಆಧಾರದಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುನ್ನಡೆಸುವುದಿಲ್ಲ ಎಂಬ ನ್ಯಾಯಾಧೀಶರ ಹೇಳಿಕೆಯು, ಈ ಬಾಂಬ್ ಸ್ಫೋಟ ಪ್ರಕರಣಗಳನ್ನು ಬಹುಸಂಖ್ಯಾತವಾದದ ಕನ್ನಡಿಯಿಂದಲೇ ನೋಡುತ್ತಾ ಬಂದಿದ್ದ ಮೋದಿ ಸರಕಾರದ ವಿರುದ್ಧ ಮಾಡಿದ ಕಟುವಾದ ದೋಷಾರೋಪಣೆಯಾಗಿದೆ. ನ್ಯಾಯಾಲಯದ ಮುಂದೆ ದೃಢವಾದ ಪುರಾವೆಗಳನ್ನು ತರಲು ಎನ್ಎಐ ಬಯಸುತ್ತಿಲ್ಲವೆಂಬುದು ನ್ಯಾಯಾಧೀಶರಿಗೆ ಮೊದಲೇ ಅರಿವಾಗಿತ್ತು. ಹಳೆ ದಿಲ್ಲಿ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾಗಳನ್ನು, ಪುರಾವೆಯಾಗಿ ನ್ಯಾಯಾಲಯದ ಮುಂದೆ ಸಮರ್ಪಕವಾಗಿ ಸಲ್ಲಿಸಲಾಗಿಲ್ಲವೆಂದು ನ್ಯಾಯಾಧೀಶರು ತನ್ನ 160 ಪುಟಗಳ ಆದೇಶದಲ್ಲಿ ಅಭಿಪ್ರಾಯಿಸಿರುವುದರಲ್ಲಿ ಅಚ್ಚರಿಯೇನೂ ಇಲ್ಲ.
ಹೈದರಾಬಾದ್ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿಯೂ ಎನ್ಐಎ ಇದೇ ರೀತಿಯಾಗಿ ಪ್ರಾಸಿಕ್ಯೂಶನ್ ಅನ್ನು ದಾರಿ ತಪ್ಪಿಸಿದೆ. ಅದರಲ್ಲಿಯೂ ಅಸೀಮಾನಂದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಾಗೂ ತಾನಿದ್ದ ಜೈಲಿನಲ್ಲಿ ಕೈದಿಯೊಂದಿಗೆ ಮಾತುಕತೆ ನಡೆಸಿದ್ದ ವೇಳೆ ಆತ ಸ್ಫೋಟ ಪ್ರಕರಣದಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡಿದ್ದ. ಆ ಪ್ರಕರಣದಲ್ಲಿ ಕೈದಿಯು ಅಸೀಮಾನಂದ ಜೊತೆ ಇದ್ದುದನ್ನು ಸಾಬೀತುಪಡಿಸುವ ಪುರಾವೆಗಳನ್ನು ನೀಡದಿದ್ದುದಕ್ಕಾಗಿ ನ್ಯಾಯಾಲಯವು ಅಸೀಮಾ ನಂದನನ್ನು ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ದೋಷಮುಕ್ತಗೊಳಿಸಿತ್ತು. ಅಸೀಮಾ ನಂದ ಹಾಗೂ ಇನ್ನೋರ್ವ ಕೈದಿ, ಜೈಲಿನಲ್ಲಿ ಜೊತೆಯಾಗಿ ಇದ್ದರೆಂಬುದನ್ನು ಸಾಬೀತು ಪಡಿಸಲು ಜೈಲಿನ ರಿಜಿಸ್ಟರ್ ಪುಸ್ತಕವನ್ನು ನ್ಯಾಯಾಲಯದಲ್ಲಿ ಸಲ್ಲಿಸಿದರೆ ಸಾಕಾಗುತ್ತಿತ್ತು. ಆದರೆ, ಎನ್ಐಎ, ಅಷ್ಟೊಂದು ಮೂಲಭೂತ ಪುರಾವೆಯನ್ನು ಕೂಡಾ ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ.
ಪ್ರಕರಣಗಳನ್ನು ದುರ್ಬಲಗೊಳಿಸುವುದೇ ಇದರ ಹಿಂದಿರುವ ವಿಶಾಲವಾದ ಉದ್ದೇಶ ವಾಗಿತ್ತು. ಇದೀಗ ಸ್ವತಃ ನ್ಯಾಯಾಧೀಶರೇ ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವುದನ್ನು ನೋಡಿದಾಗ, ಪ್ರಾಸಿಕ್ಯೂಶನ್ ವ್ಯವಸ್ಥೆಯನ್ನು ಹೇಗೆ ದಾರಿತಪ್ಪಿಸಲಾಯಿತೆಂಬುದರ ಬಗ್ಗೆ ಈಗ ಯಾವುದೇ ಸಂದೇಹ ಉಳಿದಿಲ್ಲ.
ಮೋದಿ- ಶಾ ಆಡಳಿತದಲ್ಲಿ ತನಿಖಾ ಹಾಗೂ ಪ್ರಾಸಿಕ್ಯೂಶನ್ ವ್ಯವಸ್ಥೆ ಗಳು ಘನಘೋರವಾದ ಪ್ರಹಾರಗಳನ್ನು ಎದುರಿಸುತ್ತಿವೆಯೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನೆನಪಿಡಿ, 2ಜಿ ಅಂತಹ ಭ್ರಷ್ಟಾಚಾರ ಹಗರಣಗಳ ತನಿಖೆಯಲ್ಲಿಯೂ ಕೂಡಾ ಪ್ರಭಾವಿ ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ವಿವಿಧ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ದುರ್ಬಲಗೊಳಿಸಲು ಪ್ರಾಸಿಕ್ಯೂಶನ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆಯೆಂದು ವಿಶೇಷ ನ್ಯಾಯಾಧೀಶರುಗಳು ಆತಂಕ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಸಂಜೋತಾ ಸ್ಫೋಟ ಪ್ರಕರಣದ ಪೂರ್ಣ ತೀರ್ಪು ಘೋಷಣೆಯಾಗುವ ಮೊದಲೇ ಕೇಂದ್ರ ಗೃಹ ಸಚಿವರು ತೀರ್ಪನ್ನು ಪ್ರಶ್ನಿಸಿ ಪ್ರಾಸಿಕ್ಯೂಶನ್ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಿಲ್ಲವೆಂದು ಹೇಳಿಕೆ ನೀಡಿದ್ದುದು ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಪಕ್ಷಪಾತದ ಧೋರಣೆಗೆ ಸ್ಪಷ್ಟ ನಿದರ್ಶನವಾಗಿದೆ. ಇದು ನಿಜಕ್ಕೂ ಆಘಾತಕಾರಿಯಾದುದಾಗಿದೆ.
ಕೃಪೆ: thewire.in