‘ನಾಗರಿಕತೆಗಳ ತಿಕ್ಕಾಟ’ ಸಿದ್ಧಾಂತ ಜಗತ್ತನ್ನು ಕಾಡುತ್ತಿದೆ!
ನ್ಯೂಝಿಲ್ಯಾಂಡ್ ನರಮೇಧ
ರಾಜಕಾರಣ ಮತ್ತು ಇತಿಹಾಸವನ್ನು ಮತೀಯ ದೃಷ್ಟಿಕೋನದಿಂದ ನೋಡುವವರ ನಿಲುವಿಗೂ ಟೆರಂಟ್‌ನ ದ್ವೇಷ ಸಿದ್ಧಾಂತಕ್ಕೂ ಹೋಲಿಕೆ ಇದೆ. ಗತ ಇತಿಹಾಸದಲ್ಲಿ ನಡೆದು ಹೋದ ಘಟನೆಗಳಿಗೆ ಪ್ರತೀಕಾರ ಮಾಡುವುದು ಇಂತಹ ಸಿದ್ಧಾಂತಗಳ ಒಂದು ಮುಖ್ಯ ಆಯಾಮ. ಯುರೋಪಿನಲ್ಲಿ ವಿದೇಶಿ ದಾಳಿಕೋರರು ನಡೆಸಿದ್ದ ಸಾವಿರಾರು ಹತ್ಯೆಗಳಿಗೆ ಈಗ ಪ್ರತೀಕಾರ ಮಾಡುವುದು ಈ ಸಿದ್ಧಾಂತದ ಒಂದು ಅಂಶವಾಗಿದೆ. ಪಾಶ್ಚಾತ್ಯ ಮಾಧ್ಯಮಗಳಲ್ಲಿ ಮುಸ್ಲಿಮರನ್ನು ಋಣಾತ್ಮಕವಾಗಿ (ನೆಗೆಟಿವ್) ಬಿಂಬಿಸುತ್ತಿರುವುದು ಕೂಡ ಟೆರಂಟ್‌ನಂತಹವರ ತೀವ್ರಗಾಮಿತನಕ್ಕೆ ಒಂದು ಕಾರಣವಾಗಿದೆ.
2019 ರ ಮಾರ್ಚ್ 15, ಶುಕ್ರ ವಾರದಂದು ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಯಾನಕ ನರಮೇಧ ಜಗತ್ತನ್ನು ಕಂಗಾಲಾಗಿಸಿದೆ. ಕೊಲೆಗಾರ, ಬ್ರೆಂಟನ್ ಹ್ಯಾರಿಸನ್ ಟೆರಂಟ್ ಓರ್ವ ಆಸ್ಟ್ರೇಲಿಯನ್ ನಾಗರಿಕ. ಎರಡು ಮಸೀದಿಗಳ ಮೇಲೆ ಆತ ನಡೆಸಿದ ದಾಳಿಗಳಲ್ಲಿ ಸುಮಾರು 50 ಮಂದಿ ಮೃತಪಟ್ಟರು. ಮೃತಪಟ್ಟವರಲ್ಲಿ ಐವರು ಭಾರತೀಯರು ಇದ್ದರು. ಟೆರಂಟ್ ತಾನು ನಡೆಸಿದ ನರಮೇಧವನ್ನು ನೇರ ಪ್ರಸಾರ ಮಾಡುವುದಕ್ಕಾಗಿ ತನ್ನ ತಲೆಯ ಮೇಲೆಯೆ ಕ್ಯಾಮರಾವನ್ನು ಸಿಕ್ಕಿಸಿಕೊಂಡಿದ್ದ. ಯುರೋಪ್ ಇಂದು ಮುಸ್ಲಿಮರ ವಲಸೆ ಮತ್ತು ಹಿಂಸೆಯ ಬೆದರಿಕೆಯನ್ನೆದುರಿಸುತ್ತಿದೆ ಎಂಬ ಅವನ ಸಿದ್ಧಾಂತವೇ ಅವನ ಈ ದಾಳಿಗೆ ಪ್ರೇರಕವಾಗಿತ್ತು.
ಈ ಭಯಾನಕ ಕೃತ್ಯಕ್ಕೆ ವಿಶ್ವದಾದ್ಯಂತ ಖಂಡನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ಕೃತ್ಯವನ್ನು ಖಂಡಿಸುತ್ತ ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂದ ಆರ್ಡರ್ನ್ ತನ್ನ ದೇಶ ‘ವಿವಿಧತೆ, ದಯೆ ಮತ್ತು ಆಶ್ರಯ’ವನ್ನು ಪ್ರತಿನಿಧಿಸುತ್ತಿದೆ ಎಂದರು.‘ನಾನು ನಮ್ಮ ಮುಸ್ಲಿಂ ಸಹೋದರರಿಗೆ ಆಪ್ತನಾಗಿದ್ದೇನೆ’ ಎಂದು ಪೋಪ್ ಮನಕಲಕುವ ಭಾಷಣವೊಂದರಲ್ಲಿ ಹೇಳಿದರು. ಕುತೂಹಲದ ವಿಷಯವೆಂದರೆ ಭಾರತದಲ್ಲಿ ಆಗಿರುವಂತೆ ಇಸ್ಲಾಂ-ಮುಸ್ಲಿಂ ಭಯ (ಫೋಬಿಯಾ) ಇತಿಹಾಸದ ಸಂಕುಚಿತ ಅರ್ಥೈಸುವಿಕೆಯನ್ನೇ ಆಧರಿಸಿರುವ ಒಂದು ಭಯವಾಗಿದೆ. 9/11ರ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯ ಬಳಿಕ ಮುಸ್ಲಿಮರ ಕುರಿತಾದ ಈ ಭಯ ವಿಶೇಷವಾಗಿ ಆರಂಭವಾಯಿತು. ಈ ಫೋಬಿಯಾ ಈಗ ಮುಸ್ಲಿಂ ದಾಳಿಕೋರರ ವಿವರಗಳನ್ನು ನೀಡುವ ಒಂದು ಇತಿಹಾಸವನ್ನು ಸೃಷ್ಟಿಸಿದೆ. ಭಾರತದಲ್ಲಿ ಇದು ಕೆಲವು ಸಮುದಾಯಗಳ ವಿರುದ್ಧ ಸೃಷ್ಟಿಯಾಗಿರುವುದನ್ನು ನಾವು ನೋಡುತ್ತಿದ್ದೇವೆ.
ರಾಜಕಾರಣ ಮತ್ತು ಇತಿಹಾಸವನ್ನು ಮತೀಯ ದೃಷ್ಟಿಕೋನದಿಂದ ನೋಡುವವರ ನಿಲುವಿಗೂ ಟೆರಂಟ್‌ನ ದ್ವೇಷ ಸಿದ್ಧಾಂತಕ್ಕೂ ಹೋಲಿಕೆ ಇದೆ. ಗತ ಇತಿಹಾಸದಲ್ಲಿ ನಡೆದು ಹೋದ ಘಟನೆಗಳಿಗೆ ಪ್ರತೀಕಾರ ಮಾಡುವುದು ಇಂತಹ ಸಿದ್ಧಾಂತಗಳ ಒಂದು ಮುಖ್ಯ ಆಯಾಮ. ಯುರೋಪಿನಲ್ಲಿ ವಿದೇಶಿ ದಾಳಿಕೋರರು ನಡೆಸಿದ್ದ ಸಾವಿರಾರು ಹತ್ಯೆಗಳಿಗೆ ಈಗ ಪ್ರತೀಕಾರ ಮಾಡುವುದು ಈ ಸಿದ್ಧಾಂತದ ಒಂದು ಅಂಶವಾಗಿದೆ.ಪಾಶ್ಚಾತ್ಯ ಮಾಧ್ಯಮಗಳಲ್ಲಿ ಮುಸ್ಲಿಮರನ್ನು ಋಣಾತ್ಮಕವಾಗಿ (ನೆಗೆಟಿವ್) ಬಿಂಬಿಸುತ್ತಿರುವುದು ಕೂಡ ಟೆರಂಟ್‌ನಂತಹವರ ತೀವ್ರಗಾಮಿತನಕ್ಕೆ ಒಂದು ಕಾರಣವಾಗಿದೆ.
ಇಂಗ್ಲೆಂಡಿನಲ್ಲಿ ಡೈಲಿ ಮೈಲ್ ಮತ್ತು ಅಮೆರಿಕದಲ್ಲಿ ಫಾಕ್ಸ್ ನ್ಯೂಸ್‌ನಂತಹ ಹಲವು ವರ್ತಮಾನ ಪತ್ರಿಕೆಗಳು ಹಾಗೂ ಮಾಧ್ಯಮ ಗ್ರೂಪ್‌ಗಳು ಮುಸ್ಲಿಮರ ವಿರುದ್ಧ ನೆಗೆಟಿವ್ ಭಾವನೆಗಳನ್ನು ಹರಡುವ ಅಭಿಯಾನದ ಮುಂಚೂಣಿಯಲ್ಲಿವೆ.
ಈ ಸಂದರ್ಭದಲ್ಲಿ ನಾರ್ವೆಯ ಕ್ರಿಶ್ಚಿಯನ್ ಭಯೋತ್ಪಾದಕ ಆ್ಯಂಡರ್ಸ್ ಬೆಹ್ರಿಂಗ್ ಬ್ರೇವಿಕ್ ನೆನಪಾಗುತ್ತಾನೆ. ಆತ ತನ್ನ ಮೆಶಿನ್ ಗನ್‌ನಿಂದ 69 ಮಂದಿಯನ್ನು ಹತ್ಯೆಗೈದಿದ್ದ.ಮುಸ್ಲಿಮರನ್ನು ಯುರೋಪಿನಿಂದ ಓಡಿಸುವುದು, ಮುಸ್ಲಿಮರನ್ನು ನಿರ್ನಾಮಮಾಡುವುದು ಅವನ ಗುರಿಯಾಗಿತ್ತು.
ಬ್ರೇವಿಕ್‌ನ ಮ್ಯಾನಿಫೆಸ್ಟೊ ಮತ್ತು ಹಿಂದೂ ರಾಷ್ಟ್ರೀಯತೆ ಅಥವಾ ಹಿಂದುತ್ವ ಸಿದ್ಧಾಂತದ ನಡುವೆ ಭಾರೀ ಸಾಮ್ಯತೆಗಳಿವೆ. ಯುರೋಪಿನ ಮುಖ್ಯಧಾರೆಯ ಬಲಪಂಥೀಯ ಪಕ್ಷಗಳ ಹಾಗೆಯೇ, ಬಿಜೆಪಿ ನಾಮ್ ಕೇ ವಾಸ್ತೇ ಹಿಂಸೆಯನ್ನು ಖಂಡಿಸುತ್ತದೆ; ಆದರೆ ಇಸ್ಲಾಂ ಫೋಬಿಯಾ ಯಾವ ಸಿದ್ಧಾಂತವನ್ನಾಧರಿಸಿದೆಯೋ ಆ ಸಿದ್ಧಾಂತವನ್ನು ಅದು ಖಂಡಿಸುವುದಿಲ್ಲ.
ಈ ತಿರಸ್ಕಾರ ಯೋಗ್ಯವಾದ ರಾಜಕಾರಣವು ಒಂದು ರೀತಿಯಲ್ಲಿ ಸ್ಯಾಮ್ಯುವೆಲ್ ಹಂಟಿಗ್ಟನ್ ಪ್ರತಿಪಾದಿಸಿದ ‘ನಾಗರಿಕತೆಗಳ ತಿಕ್ಕಾಟ’ ಎಂಬ ಸಿದ್ಧಾಂತದ ಫಲಶ್ರುತಿ. ಶೀತಲ ಸಮರದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟದ ಕಣ್ಮರೆಯ ಬಳಿಕ ಪಾಶ್ಚಾತ್ಯ ಉದಾರವಾದಿ ಪ್ರಜಾಪ್ರಭುತ್ವವೇ ರಾಜಕೀಯ ವ್ಯವಸ್ಥೆಯ ಅಂತಿಮ ರೂಪವಾಗಲಿದೆ ಎಂದು ಹೇಳಲಾಗಿತ್ತು. ಇದನ್ನಾಧರಿಸಿ ಹಂಟಿಗ್ಟನ್ ಇನ್ನು ನಡೆಯುವ ತಿಕ್ಕಾಟ ನಾಗರಿಕತೆಗಳ ಹಾಗೂ ಸಂಸ್ಕೃತಿಗಳ ಸುತ್ತ ನಡೆಯುತ್ತದೆ ಎಂದು ವಾದಿಸಿದ. ನಾಗರಿಕತೆಗಳ ತಿಕ್ಕಾಟವೇ ಜಾಗತಿಕ ರಾಜಕಾರಣದಲ್ಲಿ ಪ್ರಮುಖವಾಗುತ್ತದೆ ಎಂಬ ವಾದದ ಪ್ರಕಾರ, ಪಾಶ್ಚಾತ್ಯ ನಾಗರಿಕತೆ ಹಿಂದುಳಿದ ಇಸ್ಲಾಮಿಕ್ ನಾಗರಿಕತೆಯನ್ನು ಎದುರಿಸುವ ಸವಾಲಿಗೆ ಮುಖಾಮಖಿಯಾಗಬೇಕಾಗುತ್ತದೆ. ಇದು ಅಫ್ಘಾನಿಸ್ತಾನ, ಇರಾಕ್ ಮತ್ತಿತರ ಮುಸ್ಲಿಂ ದೇಶಗಳ ಮೇಲೆ ದಾಳಿ ನಡೆಸುವ ಅಮೆರಿಕದ ನೀತಿಗೆ ಆಧಾರವಾಯಿತು.
ಈ ಸಿದ್ಧಾಂತವನ್ನು ಹಿಮ್ಮೆಟ್ಟಿಸಲು ವಿಶ್ವ ಸಂಸ್ಥೆಯು ‘ನಾಗರಿಕತೆಗಳ ಮೈತ್ರಿ’ ಎಂಬ ಅಭಿಯಾನವನ್ನು ಆರಂಭಿಸಿತು. ಆಗ ಕೋಫಿ ಅನ್ನಾನ್ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದರು. ಅವರು ನೇಮಿಸಿದ ಉನ್ನತ ಮಟ್ಟದ ಸಮಿತಿಯು ‘ನಾಗರಿಕತೆಗಳ ಮೈತ್ರಿ’ ಎಂಬ ವರದಿಯೊಂದನ್ನು ಸಿದ್ಧಪಡಿಸಿತು. ಜಗತ್ತಿನಲ್ಲಿ ಆಗಿರುವ ಎಲ್ಲಾ ಅಭಿವೃದ್ಧಿ ವಿಭಿನ್ನ ಸಂಸ್ಕೃತಿಗಳ ಹಾಗೂ ನಾಗರಿಕತೆಗಳ ನಡುವಿನ ಮೈತ್ರಿಯಿಂದಾಗಿಯೇ ಸಾಧ್ಯವಾಗಿದೆ ಎಂದು ವರದಿ ಹೇಳುತ್ತದೆ. ತೈಲಬಾವಿಗಳ ಮೇಲೆ ನಿಯಂತ್ರಣ ಸಾಧಿಸುವ ಅಮೆರಿಕನ್ ರಾಜಕಾರಣ ಅಲ್‌ಖಾಯಿದಾದಂತಹ ಉಗ್ರ ಸಂಘಟನೆಗಳು ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ನಂತರ 9/11 ರಂದು ಅಮೆರಿಕದ ಅವಳಿ ವಿಶ್ವ ವಾಣಿಜ್ಯ ಕೇಂದ್ರದ ಗೋಪುರಗಳ ಮೇಲೆ ದಾಳಿ ನಡೆಯಿತು. ಇವೆಲ್ಲದರ ಪರಿಣಾಮವನ್ನು ಅನುಭವಿಸಬೇಕಾಗಿರುವ ಒಂದು ಕಾಲಘಟ್ಟದಲ್ಲಿ ನಾವೀಗ ಬದುಕುತ್ತಿದೇವೆ. ಅಮೆರಿಕದ ಮಾಧ್ಯಮಗಳು ‘ಇಸ್ಲಾಮಿಕ್ ಭಯೋತ್ಪಾದನೆ’ ಎಂಬ ಪದಪುಂಜವನ್ನು ಜನಪ್ರಿಯಗೊಳಿಸಿದವು. ನಾವು ಇವತ್ತು ನೋಡುತ್ತಿರುವುದು ತೈಲ ಸಂಪತ್ತನ್ನು ನಿಯಂತ್ರಿಸಲು, ತನ್ನ ವಶದಲ್ಲಿಟ್ಟುಕೊಳ್ಳಲು ಅಮೆರಿಕ ಅನುಸರಿಸಿದ ವಿದೇಶ ನೀತಿಯ ಪರಿಣಾಮಗಳನ್ನು. ಇದೆಲ್ಲದರ ಬಳಿಕ ಆಗಿರುವ ಬೆಳವಣಿಗೆ ಎಂದರೆ ಶ್ವೇತ ರಾಷ್ಟ್ರೀಯತೆ (ವೈಟ್ ನ್ಯಾಶನಲಿಸಂ). ಈ ಶ್ವೇತ ರಾಷ್ಟ್ರೀಯತೆಯು ಇಸ್ಲಾಂ-ಮುಸ್ಲಿಂ ಫೋಬಿಯಾವನ್ನು ಸೃಷ್ಟಿಸಿದೆ. ವಿಭಿನ್ನ ಸಂಸ್ಕೃತಿಗಳ ನಡುವೆ ಇರುವ, ಮತ್ತು ಆ ಸಂಸ್ಕೃತಿಗಳಲ್ಲೆ ಹುದುಗಿರುವ ಜಾಗತಿಕ ಪ್ರವೃತ್ತಿಗಳನ್ನು, ಭಾವನೆಗಳನ್ನು ಬೆಳೆಸುವುದರ ಮೂಲಕ ಈ ಫೋಬಿಯಾವನ್ನು ನಾವು ಎದುರಿಸಬೇಕಾಗಿದೆ.