ಮೌಢ್ಯದ ಜಡೆಗೆ ಮುಕ್ತಿ ನೀಡಿದ ನಿಜಗುಣಾನಂದಶ್ರೀ !
ಬೆಂಗಳೂರು, ಎ.1: ಧಾರ್ಮಿಕ ಆಚರಣೆ, ಪಾಲನೆ ನೆಪದಲ್ಲಿ ಸ್ತ್ರೀಯರ ವಿರುದ್ಧ ಮೌಢ್ಯ ಸಂಪ್ರದಾಯಗಳನ್ನು ಬಲವಂತವಾಗಿ ಹೇರುವ ಸುದ್ದಿಗಳು ಆಗಾಗ ಕಿವಿಗೆ ತಾಕುತ್ತವೆ. ಆದರೆ, ಇದನ್ನು ವಿರೋಧಿಸುವವರ ಸಂಖ್ಯೆ ತುಂಬಾ ಕಡಿಮೆ.
ಇದಕ್ಕೆ ಭಿನ್ನ ಎಂಬಂತೆ, ಅಜ್ಜಿಯೊಬ್ಬರು, ಬರೋಬ್ಬರಿ 6 ದಶಕಗಳಿಂದ ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದ, ಕೊದಲಿನ ಬೆಟ್ಟಕ್ಕೆ, ಸ್ವಾಮೀಜಿಯೊಬ್ಬರು ಕತ್ತರಿ ಹಾಕುವ ಮೂಲಕ ಮುಕ್ತಿ ಕಲ್ಪಿಸಿದ್ದಾರೆ!
ಹೌದು..., ಬೆಳಗಾವಿಯ ಬೈಲೂರು ಗ್ರಾಮದ ಪಾರ್ವತಮ್ಮ ಎಂಬ ವೃದ್ದೆ ಹಲವು ವರ್ಷಗಳಿಂದ ಎಲ್ಲಮ್ಮ ದೇವರ ಹೆಸರಿನಲ್ಲಿ ಜಡೆ ಬಿಟ್ಟಿದ್ದರು. ಅದು ನಂಬಿಕೆಯೂ, ವೌಢ್ಯವೂ ಎಂಬುವುದು ಅವರಿಗೂ ತಿಳಿದಿರಲಿಲ್ಲ. ಆದರೆ, ಬೈಲೂರಿನ ನಿಷ್ಕಲ ಮಠದ ನಿಜಗುಣಾನಂದ ಸ್ವಾಮೀಜಿ, ತಮ್ಮ ಮಠದಲ್ಲಿಯೇ ಆಕೆಯ ಜಡೆಯನ್ನು ಕತ್ತರಿಸಿ, ಮಾದರಿಯಾಗಿದ್ದಾರೆ.
ಕೆಲ ಮಹಿಳೆಯರು ದೇವರ ಜಡೆ ಎಂದು ಅದಕ್ಕೆ ಹೆಚ್ಚಿಗೆ ಎಣ್ಣೆ ಹಾಕಿ ಅರಿಶಿನ, ಭಂಡಾರ ಹಚ್ಚಿ ಗಂಟು ಕಟ್ಟುತ್ತಾ ಪೂಜೆ ಮಾಡುವುದರಿಂದ ಅದು ಭಾರಿ ಗಾತ್ರವಾದಾಗ ದೇವಿ ಬೆಳೆಯುತ್ತಿದ್ದಾಳೆಂದು ನಂಬುತ್ತಾರೆ. ಇದೇ ರೀತಿ, ಅಜ್ಜಿ ಪಾರ್ವತಮ್ಮ ಹಲವು ವರ್ಷಗಳಿಂದ ದೇವರ ಹೆಸರಿನಲ್ಲಿ ಜಡೆ ಬಿಟ್ಟಿದ್ದರು ಎನ್ನಲಾಗಿದೆ.
ಆದರೆ, ತಲೆ ಕೂದಲು ಒಂದಕ್ಕೊಂದು ಅಂಟಿಕೊಂಡು ದೂಳು, ಕೊಳೆಯಿಂದಾಗಿ ಸೂಕ್ಷ್ಮಣು ಜೀವಿಗಳು ಉತ್ಪತ್ತಿಯಾಗಿ, ಜಡೆಯಲ್ಲಿ ದುರ್ವಾಸನೆ ಬರುತಿತ್ತು. ಆದರೂ, ನಂಬಿಕೆಗೆ ಬದ್ಧರಾಗಿ ಜಡೆ ಕತ್ತರಿಸಿರಲಿಲ್ಲ. ಈ ಬಗ್ಗೆ, ನಿಜಗುಣಾನಂದ ಸ್ವಾಮೀಜಿ ಅವರು ಅಜ್ಜಿಗೆ ಅರಿವು ಮೂಡಿಸಿದ್ದಾರೆ. ಬಳಿಕ ಆಕೆ, ಜಡೆಗೆ ಕತ್ತರಿ ಹಾಕುವಂತೆ ಹೇಳಿದ್ದಾಳೆ.
ಇನ್ನೂ, ಜಡೆಯನ್ನು ನಿರ್ವಹಿಸಲು ತಲೆಯ ಮೇಲೆ ಪೇಟದಾಕಾರದಲ್ಲಿ ಸುತ್ತಿ ಬಿಳಿವಸ್ತ್ರದಿಂದ ಕಟ್ಟುತ್ತಿದ್ದೇ. ಸ್ನಾನ ಮಾಡುವಾಗಲೂ ತುಂಬಾ ಹಿಂಸೆ ಆಗುತಿತ್ತು. ಆದರೆ, ಸ್ಥಳೀಯರು ಜಡೆ ತೆಗೆಯಬೇಡ, ದೇವಿ ಇದ್ದಾಳೆ ಎಂದೆಲ್ಲಾ ಹೇಳುತ್ತಿದ್ದರು. ಕೊನೆಗೂ ಈ ಜಡೆಯಿಂದ ನಿಜಗುಣಾನಂದ ಸ್ವಾಮೀಜಿ ಮುಕ್ತಿ ನೀಡಿದ್ದಾರೆಂದು ಪಾರ್ವತಮ್ಮ ನುಡಿದರು.
ಹಳೇ ಜಡೆಯಲ್ಲಿ ಸೂಕ್ಷ್ಮಜೀವಿಗಳು ಸೇರಿಕೊಂಡು, ಫೈಕಾಫಲಾನಿಕಾ ಎಂಬ ರೋಗ ಬರಲಿದ್ದು, ಇದರಿಂದ ತೊಂದರೆಯಾಗಲಿದೆ. ಇದನ್ನು ಗುಣಪಡಿಸಬೇಕಾದರೆ, ಬುಡದಿಂದ ಕತ್ತರಿಸಿ ಸಂಪೂರ್ಣ ಸ್ವಚ್ಛಗೊಳಿಸಿ ಸೋಪು ಅಥವಾ ಶಾಂಪೂ ಹಾಕಿ ತೊಳೆದುಕೊಳ್ಳಬೇಕು.
-ಡಾ.ಸತೀಶ್ ಭಟ್, ವೈದ್ಯ
ಮಠದಲ್ಲಿ ಇದೇ ಮೊದಲ ಬಾರಿಗೆ ಜಡೆ ಕತ್ತರಿಸಿಲ್ಲ. ಇದು ಹಲವು ದಿನಗಳಿಂದ ನಡೆದುಕೊಂಡು ಬರುತ್ತಿದೆ. ಅಲ್ಲದೆ, ಹಲವು ವರ್ಷ ಜಡೆ ಬಿಡುವುದು ಸರಿಯಲ್ಲ.ಇನ್ನೂ, ವೌಢ್ಯತೆಯನ್ನು ತುಂಬಿಕೊಂಡು ಜಡೆ ಬೆಳೆಸುವುದು ಅಜ್ಞಾನ.
-ನಿಜಗುಣಾನಂದ ಸ್ವಾಮೀಜಿ, ಬೈಲೂರಿನ ನಿಷ್ಕಲ ಮಠ