ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷರಾಗಿ ದಯಾನಂದ ಪೈ ಅವಿರೋಧ ಆಯ್ಕೆ
ಮೂಡುಬಿದಿರೆ: ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷರಾಗಿ ದಯಾನಂದ ಪೈ ಅವಿರೋಧ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ತಹಸೀಲ್ದಾರ್ ಸುದರ್ಶನ್ ಅವರು ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.
14 ಸದಸ್ಯರ ಬೆಂಬಲದೊಂದಿಗೆ ದಯಾನಂದ ಪೈ ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ, ದಯಾನಂದ ಪೈ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದಸ್ಯ ರಮೇಶ್ ಶೆಟ್ಟಿ ಸೂಚನೆ ನೀಡಿದರು.
ಉಪಾಧ್ಯಕ್ಷೆ ಅರುಣ ಹೆಗ್ಡೆ ಸಹಿತ 13 ಮಂದಿ ಸದಸ್ಯರು ಉಪಸ್ಥಿತರಿದ್ದು ಅಭಿನಂದಿಸಿದರು. ಪಿಡಿಒ ರವಿ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ದಯಾನಂದ ಪೈ ಈ ಹಿಂದೆ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ 15 ವರ್ಷಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಕಾರ್ಯವೈಖರಿಗಾಗಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
Next Story