ಉಡುಪಿ ಲೋಕಸಭಾ ಚುನಾವಣೆ: ಮದ್ಯ ಮಾರಾಟ ನಿಷೇಧ
ಬೈಂದೂರು, ಕುಂದಾಪುರಗಳಲ್ಲೂ ನಿಷೇಧ
ಉಡುಪಿ, ಎ.4: ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಎ.18ರಂದು ಮತದಾನ ನಡೆಸಲು ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದೆ.
ಈ ಸಂದರ್ಭ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ, ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಮತದಾನ ಪ್ರಾರಂಭಗೊಳ್ಳಲು 48 ಗಂಟೆ ಮುಂಚಿತವಾಗಿ ಅಂದರೆ ಎ.16 ರಂದು ಸಂಜೆ 6ರಿಂದ ಮತದಾನದ ದಿನ ಅಂದರೆ ಎ.18ರ ಮಧ್ಯರಾತ್ರಿ 12 ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿ ಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್ ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ ಸೂಚಿಸಿರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಯಾವುದೇ ಹೋಟೆಲ್ಗಳಲ್ಲಿ, ಕ್ಲಬ್ಗಳಲ್ಲಿ ಹಾಗೂ ಶೇಂದಿ ಅಂಗಡಿಗಳಲ್ಲಿ ಮದ್ಯ ಮಾರಾಟ/ ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಂದೂರು, ಕುಂದಾಪುರಗಳಲ್ಲೂ ಮದ್ಯ ಮಾರಾಟ ನಿಷೇಧ
ಚುನಾವಣಾ ಆಯೋಗ ಶಿವಮೊಗ್ಗ ಲೋಕಸಭಾ ಚುನಾವಣೆ ಎ.23ರಂದು ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿಪಾಲನೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯ ಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ, ಮತದಾನ ಪ್ರಾರಂವಾಗುವ ದಿನಕ್ಕೆ 48 ಗಂಟೆಗಳ ಮುಂಚಿತವಾಗಿ ಮದ್ಯಮಾರಾಟವನ್ನು ನಿಷೆಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ನಿಷೇಧವು ಎ.21ರ ಸಂಜೆ 6ರಿಂದ ಎ.23ರ ಮಧ್ಯರಾತ್ರಿ 12 ಗಂಟೆ ಯವರೆಗೆ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ ಸೂಚಿಸಿರುವ ದಿನಗಳಲ್ಲಿ, ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಹೋಟೆಲ್, ಕ್ಲಬ್ಗಳಲ್ಲಿ ಹಾಗೂ ಶೇಂದಿ ಅಂಗಡಿಗಳಲ್ಲಿ ಮದ್ಯ ಮಾರಾಟ /ಸರಬರಾಜು ಮಾಡು ವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.