varthabharthi


ಭೀಮ ಚಿಂತನೆ

ದಕ್ಷಿಣದಲ್ಲಿ ಭಾರತದ ಉಪರಾಜಧಾನಿಯೊಂದು ಇರುವುದು ಅತ್ಯವಶ್ಯಕವಾಗಿದೆ

ವಾರ್ತಾ ಭಾರತಿ : 5 Apr, 2019

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಯಿಸಾಹೇಬ ಅಂಬೇಡ್ಕರ್ ಅವರೊಂದಿಗೆ ಹೈದರಾಬಾದಿನ ಬೇಗಂಪೇಟ ವಿಮಾನ ನಿಲ್ದಾಣಕ್ಕೆ ದಿನಾಂಕ 14 ನವೆಂಬರ್ 1954ರಂದು ಮಧ್ಯಾಹ್ನ 12:15ಕ್ಕೆ ಆಗಮಿಸಿದರು. ಅವರ ಸ್ವಾಗತದ ಪ್ರೀತ್ಯರ್ಥವಾಗಿ ಸಿಕಂದರಾಬಾದಿನ ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ಅಧ್ಯಕ್ಷರಾದ ಯಾದಗೀರವಾರ, ಮರಾಠಾವಾಡಾ ಶೆ.ಕಾ.ಫೆ.ನ್ನಿನ ಸಹ ಕಾರ್ಯದರ್ಶಿ ಎಲ್.ಸುರವಸೆ, ಬೀಡ್‌ಜಿಲ್ಲೆಯ ಶೆ.ಕಾ.ಫೆ.ನ್ನಿನ ಅಧ್ಯಕ್ಷರಾದ ಜೆ.ಆರಕ, ಔರಂಗಾಬಾದ್ ಜಿಲ್ಲೆಯ ಶೆ.ಕಾ.ಫೆ.ನ್ನಿನ ಸಹ ಕಾರ್ಯದರ್ಶಿ ಎಂ.ಸಾಳವೆ, ಔರಂಗಾಬಾದ್ ಕಾಲೇಜಿನ ರಿಜಿಸ್ಟ್ರಾರ್ ಎಚ್ ವರಾಳೆ, ಹೈದರಾಬಾದ್ ರಾಜ್ಯದ ಅರ್ಥಮಂತ್ರಿಗಳಾದ ವಿನಾಯಕರಾವ್ ವಿದ್ಯಾಲಂಕಾರ ಇತ್ಯಾದಿ ಸದ್ಗಹಸ್ಥರು ಹಾಜರಾಗಿದ್ದರು.

ಪ್ರಾರಂಭದಲ್ಲಿ ಶೆ.ಕಾ.ಫೆ.ಹಾಸ್ಟೆಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಕೆ.ವೆಂಕಟರಾವ್ ಹಾಸ್ಟೆಲಿನ ವಿದ್ಯಾರ್ಥಿನಿಯರು ಡಾ. ಬಾಬಾಸಾಹೇಬ ಮತ್ತು ಮಾಯಿಸಾಹೇಬ ಅವರಿಗೆ ಪುಷ್ಪಹಾರಗಳನ್ನು ಅರ್ಪಣೆ ಮಾಡಿದರು. ಉಪಸ್ಥಿತ ಜನಸಮುದಾಯವು ‘ಡಾ.ಬಾಬಾಸಾಹೇಬ ಅಂಬೇಡ್ಕರ್ ಕೀ ಜೈ’, ‘ಅಂಬೇಡ್ಕರ್ ಜಿಂದಾಬಾದ್’, ‘ಶೆ.ಕಾ.ಫೆ.ಗೆ ವಿಜಯವಾಗಲಿ’ ಮುಂತಾದ ಘೋಷಣೆಗಳನ್ನು ಮಾಡಿದಾಗ ವಾತಾವರಣವೆಲ್ಲ ದುಮುದುಮುಗುಡುತ್ತಿತ್ತು. ನಂತರ ಅವರನ್ನು ಪರ್ಷಿಯನ್ ಹೊಟೇಲಿಗೆ ಕರೆದುಕೊಂಡು ಹೋದರು.

ಆನಂತರ ಅವರು ಮರಾಠವಾಡಾ ಸಾಹಿತ್ಯ ಪರಿಷತ್ತು ಮತ್ತು ಮರಾಠಿ ಗ್ರಂಥ ಸಂಗ್ರಹಾಲಯಗಳಿಗೆ ಭೇಟಿಕೊಟ್ಟರು.ಅವರಿಗೆ ಈ ಎರಡೂ ಸಂಸ್ಥೆಗಳ ಪ್ರಮುಖರು ಸತ್ಕಾರ ಮಾಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಅವರು ವಿವಿಧ ವಿಷಯಗಳ ಮೇಲೆ ಔಪಚಾರಿಕವಾಗಿ ಚರ್ಚೆ ಮಾಡಿದರು. ಭಾಷಾವಾರು ಪ್ರಾಂತಗಳ ರಚನೆಯ ಮೇಲೆ ಮಾತನಾಡುತ್ತಾ ಅವರು ಹೇಳಿದರು.

ಭಾರತದಲ್ಲಿನ ಎಲ್ಲಾ ಭಾಷಿಕ ಪ್ರಾಂತಗಳಲ್ಲಿ ಅತ್ಯಂತ ದುರ್ದೈವಿ ಪ್ರಾಂತವು ಒಂದೊಮ್ಮೆ ಇರುವುದಾದರೆ ಅದು ಮಹಾರಾಷ್ಟ್ರವೇ ಹೌದು. ಮಹಾರಾಷ್ಟ್ರವು ಇತರರಿಂದ ಸಂಪೂರ್ಣವಾಗಿ ಶೋಷಣೆಗೆ ಒಳಗಾಗುತ್ತಲೇ ಬಂದಿದೆ.ಎಲ್ಲರೂ ಮಹಾರಾಷ್ಟ್ರೀಯರನು ್ನಯಥೇಚ್ಛವಾಗಿ ದಮನ ಮಾಡುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದ ಮೇಲೆ ಗುಜರಾತಿ-ಮಾರವಾಡಿಗಳ ವರ್ಚಸ್ಸು ಅಬಾಧಿತವಾಗಿದೆ. ಹಾಗೆಯೇ ಇತ್ತಕಡೆ ಮರಾಠಾವಾಡದ ಮೇಲೆ ಹೈದರಾಬಾದಿನ ತೆಲುಗು ಜನರದ್ದು. ವರ್ಹಾಡವನ್ನಂತೂ ಹಿಂದಿ ಭಾಷಿಕರು ತಮ್ಮ ವಸಾಹತುವೆಂದೇ ಭಾವಿಸಿದ್ದಾರೆ. ಇದಕ್ಕೆಲ್ಲ ಕಾರಣ ಮಹಾರಾಷ್ಟ್ರೀಯರ ದೌರ್ಬಲ್ಯವೇ. ಅವರಲ್ಲಿ ಯಾವುದೇ ರೀತಿಯಲ್ಲಿಯೂ ಪ್ರಾಣವೇ ಉಳಿದಿಲ್ಲ. ದಿಲ್ಲಿಯನ್ನು ಗೆಲ್ಲುವುದು ಕೇವಲ ಮಾತು ಮಾತ್ರವೇ. ಅವರು ಎದ್ದರೂ ಬಿದ್ದರೂ ಬರಿ ಹೊಡೆದಾಡುತ್ತಿರುತ್ತಾರೆ. 50/60 ರೂಪಾಯಿಗಳ ಕಾರಕೂನರ ಹೊರತಾಗಿ ಅವರಿಗೆ ಇತರ ಏನನ್ನೂ ಮಾಡುವುದಕ್ಕೆ ಬರುವುದಿಲ್ಲ. ಪರಂಪರೆಯು ಬಹಳ ಚೆನ್ನಾಗಿಯೇ ಇದೆ. ಆದರೆ ಕೇವಲ ದಿವ್ಯ ಭೂತಕಾಲವು ಇದ್ದುದರಿಂದ ಏನು ಉಪಯೋಗ? ನಮ್ಮ ಎಲ್ಲಾ ನೇತಾರರು ಹರಟೆಯನ್ನಂತೂ ಧೀರ ಗಂಡಸರ ಹಾಗೆ ಹೊಡೆಯುತ್ತಾರೆ. ಆದರೆ ಒಬ್ಬರಾದರೂ ಮಹಾರಾಷ್ಟ್ರದ ಉತ್ಕರ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿಲ್ಲ. ಪ್ರತಿಯೊಬ್ಬರಿಗೂ ಅನ್ನಿಸುತ್ತದೆ, ಜವಾಹರಲಾಲ್ ಜೀ ಅವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ? ಇಂಥದಕ್ಕೆ ಏನು ಮಾಡಿಬಿಡುವರು? ಎಂಬ ಭೀತಿಯಿಂದ ಎಲ್ಲರೂ ಹಿಮ್ಮೆಟ್ಟುವವರೇ ಆಗಿದ್ದಾರೆ. ಇದು ಒಂದು ಪ್ರಜಾಪ್ರಭುತ್ವವೇ? ಇದಕ್ಕೆ ಎಂತಹ ವಿವೇಕ ಎನ್ನಬೇಕು? ಇಂದು ಯಾರ ಕೈಯಲ್ಲಿ ಅಧಿಕಾರ ಇದೆಯೋ ಅವರಿಗೆ ಪ್ರಜಾಪ್ರಭುತ್ವದ ಸ್ಪರ್ಶವೂ ಆಗಿಲ್ಲ.ಅವರಿಗೆ ಹೇಗೆಲ್ಲಾ ಅನ್ನಿಸುತ್ತಿದೆಯೋ ಹಾಗೆಲ್ಲಾ ಅವರು ಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಇನ್ನು ಅವರಿಗೆ ಅನ್ನಿಸಿದರೆ ಮಾತ್ರವೇ ಸಂಯುಕ್ತ ಮಹಾರಾಷ್ಟ್ರ ಆಗಬಹುದು.

ಎಲ್ಲಾ ದೃಷ್ಟಿಯಿಂದಲೂ ಮುಂಬೈ ನಗರವು ಮಹಾರಾಷ್ಟ್ರದ್ದೇ ಆಗಿದೆ.ಮುಂಬೈಯ ಮೇಲೆ ಇಂದು ಗುಜರಾತಿ, ಪಾರ್ಸಿ ಮತ್ತು ಮಾರವಾಡಿ ಮುಂತಾದ ಮಹಾರಾಷ್ಟ್ರೀಯೇತರರ ವರ್ಚಸ್ಸು ಬಹಳವಾಗಿದೆ. ಆದರೆ ಇಂತಹ ವರ್ಚಸ್ಸು ದೇಶದ ಎಲ್ಲಾ ದೊಡ್ಡ ದೊಡ್ಡ ನಗರಗಳ ಮೇಲೂ ಇದೆ. ಮದ್ರಾಸು, ಕಲ್ಕತ್ತಾ ಇತ್ಯಾದಿ ಎಲ್ಲಾ ದೊಡ್ಡ ನಗರಗಳದ್ದು ಹೆಚ್ಚುಕಮ್ಮಿ ಇಂತಹದ್ದೇ ಸ್ಥಿತಿ. ಮದ್ರಾಸಿನಲ್ಲಿ ಆಂಧ್ರದವರ ಕೈಯಲ್ಲಿ ಶೇ.30ಕ್ಕಿಂತಲೂ ಹೆಚ್ಚು ಪ್ರಮಾಣದ ವ್ಯಾಪಾರವಿದೆ. ಇತರರ ಅಭಿಪ್ರಾಯದಂತೆ ಜನಸಂಖ್ಯೆಯಿಂದಲೂ ಆಂಧ್ರದವರೇ ಹೆಚ್ಚು. ಆದರೆ ಹೀಗಿದ್ದರೂ ಭೌಗೋಳಿಕ ದೃಷ್ಟಿಯಿಂದ ಮದ್ರಾಸು ಆಂಧ್ರಪ್ರದೇಶಕ್ಕೆ ಸಿಕ್ಕಲಿಲ್ಲ. ಕೋಲ್ಕತಾದ ಉದಾಹರಣೆಯೂ ನೋಡುವಂತಹದ್ದೇ ಆಗಿದೆ. ಕೋಲ್ಕತಾದಲ್ಲಿ ಬಂಗಾಳಿ ಜನರಿಗಿಂತಲೂ ಅಸ್ಸಾಮಿ, ಒಡಿಯಾ ಇತ್ಯಾದಿ ಪ್ರಾಂತಗಳಲ್ಲಿನ ಜನರ ಕೈಯಲ್ಲಿಯೇ ವ್ಯಾಪಾರ ಮತ್ತು ವ್ಯವಹಾರಗಳು ಇವೆ. ಬಂಗಾಳಿ ಬಾಬುಗಳು ಅಲ್ಲಿ ಕೇವಲ ಕಾರಕೂನಿಕೆ ಅಥವಾ ಕೂಲಿನಾಲಿ ಮಾಡಿಕೊಂಡು ಇದ್ದಾರೆ. ಹೀಗಿದ್ದರೂ ಕಲ್ಕತ್ತಾವು ಬಂಗಾಳದ್ದೇ ಆಗಿ ಉಳಿದಿದೆ. ಆದರೆ ಮುಂಬೈ ಮಾತ್ರ ಮಹಾರಾಷ್ಟ್ರದ್ದಾಗಿಲ್ಲ ಎಂದು ಹೇಳುವುದು ಕುರುಡುತನ ಮತ್ತು ಅನ್ಯಾಯದ್ದಾಗಿದೆ.

ಮುಂಬೈ ಮಹಾರಾಷ್ಟ್ರಕ್ಕೆ ಸಿಗಬಹುದು. ಅವರಿಗೆ ಇದರಿಂದ ನಿರಾಳವೆನಿಸಲೂಬಹುದು. ಆದರೆ ಅದನ್ನು ಪರಿಶೀಲಿಸಿ ತೋರಿಸಿ ನಿಮಗೆ ಹೇಳಬಹುದು, ನೀವು ಯಾರು ನಮ್ಮನ್ನು ಕೇಳುವುದಕ್ಕೆ? ನೀವು ಏನು ಮಾಡಬೇಕು ಎಂದುಕೊಂಡಿದ್ದೀರೋ ಹಾಗೆ ಮಾಡಿಕೊಳ್ಳಿರಿ.ಮತ್ತೊಂದೆಡೆಯಲ್ಲಿ ಅವರ ಈ ಮಾತು ನಿಜವೂ ಆಗಿದೆ. ಕಾರಣ ಅವರಿಗೆ ತಿಳಿದಿದೆ. ಕಾರಕೂನ ಪ್ರವೃತ್ತಿಯ ಈ ಜನರಿಂದ ನಮಗೆ ಏನು ಮಾಡಲಾದೀತು? ಅಲ್ಲದೆ ಇಂದಿನ ಪ್ರಜಾಪ್ರಭುತ್ವ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯ ಟಿಕೆಟುಗಳು ಮಾರಾಟಕ್ಕೆ ಸಿಕ್ಕುವುವಾಗಿವೆ. ಯಾರು ಹೆಚ್ಚು ಹಣ ಕೊಡುತ್ತಾರೆಯೋ,ಬಹಳ ಒಳಹುನ್ನಾರಗಳನ್ನು ಮಾಡುತ್ತಾರೆಯೋ ಅಂಥವರು ಆರಿಸಿ ಬರುತ್ತಾರೆ ಮತ್ತು ಐದು ವರ್ಷಗಳ ಕಾಲ ಅವರು ಮಜಾ ಉಡಾಯಿಸುತ್ತಾರೆ. ಯಾರ ಬಳಿ ಅಪಾರ ಹಣವಿಲ್ಲವೋ ಅವರು ಸ್ವಸ್ಥವಾಗಿ ಸುಮ್ಮನೆ ಕುಳಿತುಕೊಳ್ಳಬೇಕು ಮತ್ತು ಏನು ಸಿಕ್ಕುತ್ತದೆಯೋ ಅದನ್ನು ಪ್ರಜಾಪ್ರಭುತ್ವವೆಂದು ತಿಳಿದು ಆಶೀರ್ವಾದ ಮಾಡಬೇಕು.

 ರಾಷ್ಟ್ರದ ಸೈನ್ಯದ ಸಂರಕ್ಷಣೆ ಮತ್ತು ಅಧಿಕಾರದ ನಿಯಂತ್ರಣದಲ್ಲಿ ಸಮಪಾಲು ಎಂಬ ದೃಷ್ಟಿಯಿಂದ ದಕ್ಷಿಣದಲ್ಲಿ ಭಾರತದ ಉಪರಾಜಧಾನಿ ಯೊಂದು ಇರುವುದು ಅತ್ಯವಶ್ಯವಾಗಿದೆ. ಬಹಳ ಹಿಂದಿನಿಂದಲೂ ನಾನು ಹೇಳುತ್ತಾ ಬಂದಿರುವುದೇನೆಂದರೆ ಹೈದರಾಬಾದ್, ಸಿಕಂದರಾಬಾದ್‌ಮತ್ತು ಬೋಲಾರಾಮ ಈ ಎಲ್ಲಾ ಭಾಗಗಳನ್ನು ಮಧ್ಯವರ್ತಿ ಸರಕಾರವು ತನ್ನ ವಶಕ್ಕೆ ತೆಗೆದುಕೊಳ್ಳಬೇಕು. ಅಲ್ಲಿ ಖಾಯಮ್ಮಾಗಿ ಒಂದು ಉಪರಾಜಧಾನಿಯನ್ನು ಸ್ಥಾಪಿಸಬೇಕು. ದಿಲ್ಲಿಯಲ್ಲಿ ಕುಳಿತು ಸರಕಾರವು ಆಡಳಿತವನ್ನು ನಡೆಸಬೇಕು ಎನ್ನುತ್ತದೆ, ಆದರೆ ಅದರ ಸೈನ್ಯದ ನಿಪುಣತೆಯನ್ನು ನೋಡಿದಾಗ ನನಗೆ ನಗು ಬರುತ್ತದೆ. ನಮ್ಮ ರಾಷ್ಟ್ರವು ಸೈನ್ಯ ಪ್ರಣೀತವಾಗಬೇಕಾದರೆ ಅದು ದಕ್ಷಿಣ ಭಾರತದಲ್ಲಿ ಉಪರಾಜಧಾನಿಯನ್ನು ರೂಪಿಸಿಕೊಳ್ಳುವುದು ಸಂರಕ್ಷಣೆಯ ದೃಷ್ಟಿಯಿಂದ ಮಾತ್ರವಲ್ಲ, ಅಡಚಣೆಗಳ ನೆಲೆಯಿಂದಲೂ ಬಹಳ ಆವಶ್ಯಕ.ಇಂದು ಮಧ್ಯವರ್ತಿ ಸರಕಾರದಲ್ಲಿ ಉತ್ತರ ಭಾರತೀಯರ ವರ್ಚಸ್ಸೇ ಬಹಳವಾಗಿದೆ. ಅಧ್ಯಕ್ಷ ಮತ್ತು ಪ್ರಧಾನಮಂತ್ರಿಗಳ ಎರಡು ಪ್ರಾಂತಗಳಲ್ಲಿನ ದೊಡ್ಡ ವ್ಯಕ್ತಿಗಳಲ್ಲಿ ಸರತಿಯಂತೆ ಅದಲು-ಬದಲು ಉಂಟಾಗುತ್ತಿದೆ.

ದಕ್ಷಿಣ ಭಾರತದಲ್ಲಿನ ಸಾಮಾನ್ಯ ಜನರು ಸದ್ಯದಲ್ಲಿ ಕೂಡ ಉದ್ಯೋಗದ ನಿಮಿತ್ತವಾಗಿ ದಿಲ್ಲಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ಲೆಕ್ಕದಲ್ಲಿ ಅವರಿಗೆ ಪಾಲು ಸಿಕ್ಕುವುದರಲ್ಲಿಯೂ ದುರವಸ್ಥೆಯೇ ಇದೆ. ಭಾರತೀಯರೆಲ್ಲರೂ ಒಂದೇ ಆಗಿದ್ದಾರೆ ಎಂಬುದು ಒಂದೊಮ್ಮೆ ನಿಜವಾಗಿದ್ದರೂ ವ್ಯವಹಾರದಲ್ಲಿ ಮಾತ್ರ ಈ ಭಾವನೆಯು ನಿರರ್ಥಕವಾಗಿದೆ. ರಾಜಕಾರಣದಲ್ಲಿ ಈ ಔದಾರ್ಯವು ಫಜೀತಿಯನ್ನು ಉಂಟುಮಾಡುವಂತಹದ್ದೇ ಆಗಿದೆ.ಜೊತೆಗೆ ಮುಗ್ಧ ಜನರಿಗೆ ಘಾತುಕತೆಯನ್ನು ತರುತ್ತಲೇ ಇದೆ.ಅದಕ್ಕಾಗಿ ಹೈದರಾಬಾದಿನಲ್ಲಿ ಉಪರಾಜಧಾನಿಯು ಬಂದರೆ, ದಕ್ಷಿಣ ಭಾರತೀಯರಿಗೆ ಸರಕಾರದ ನೆಲೆಯಲ್ಲಿ ಸ್ಥಾನಗಳು ಲಭಿಸುತ್ತವೆ. ಜೊತೆಗೆ ಅಧಿಕಾರದಲ್ಲಿಯೂ ಇಲ್ಲಿನ ಜನರು ಭಾಗವಹಿಸುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ತಲೆಯಲ್ಲಿ ಈ ವ್ಯವಹಾರವು ಬರುವುದಿಲ್ಲ.

‘ಲಿಟರೇಚರ್’ ಎಂಬ ಇಂಗ್ಲಿಷ್ ಶಬ್ದಕ್ಕೆ ಬಳಸುತಿರುವ ‘ಸಾಹಿತ್ಯ’ ಎಂಬ ಶಬ್ದವು ತಪ್ಪು ಭಾಷಾಂತರವಾಗಿದೆ. ಸಾಹಿತ್ಯವು ಅಡುಗೆಯದ್ದೂ ಇರುತ್ತದೆ, ಕ್ಷೌರಿಕರದ್ದೂ ಇರುತ್ತದೆ. ಆ ಅರ್ಥದಲ್ಲಿ ಸಾಹಿತ್ಯ ಎಂಬ ಶಬ್ದಕ್ಕೆ ಇಲ್ಲಿ ಸಮರ್ಪಕತೆಯು ಇದರಲ್ಲಿ ಕಾಣಿಸುವುದಿಲ್ಲ.ಜ್ಞಾನೇಶ್ವರಿ, ಏಕನಾಥೀ, ಭಾಗವತ, ತುಕಾರಾಮರ ಗಾಥೆಗಳು ಇತ್ಯಾದಿಗಳನ್ನೆಲ್ಲ ನಾವು ಓದುತ್ತೇವೆ. ಜ್ಞಾನೇಶ್ವರ ಬಹಳ ದೊಡ್ಡ ವಿದ್ವಾಂಸನಾಗಿದ್ದನು. ಆದರೆ ನನಗೆ ಒಂದು ಅನುಮಾನವಿದೆ.‘ಸಾರ್ಥ ಜ್ಞಾನೇಶ್ವರಿ’ಯಲ್ಲಿ ಜ್ಞಾನೇಶ್ವರನು ವೇದಾಂತ ವಿಷಯದ ಮೇಲೆಯೇ ಭಾಷ್ಯ ಮಾಡಿದ್ದಾನೆ. ‘ಬ್ರಹ್ಮವು ಸತ್ಯವಾದುದು ಮತ್ತು ಅದು ಸರ್ವವ್ಯಾಪಿ’ಯೂ ಆದುದು ಎಂಬುದಾಗಿ ಜ್ಞಾನೇಶ್ವರ ಹೇಳಿದ್ದಾನೆ.

ಆದರೆ ‘ಜ್ಞಾನೇಶ್ವರಿ’ಯ ಕೊನೆಯಲ್ಲಿ ಅವನು ಚಾತುರ್ವರ್ಣವನ್ನು ಬಹಳ ಹಿಗ್ಗಿನಿಂದಲೇ ಸಮರ್ಥನೆ ಮಾಡುತ್ತಾನೆ. ಜ್ಞಾನೇಶ್ವರ ಮತ್ತು ಅವನ ಇತರ ಸೋದರರನ್ನು ಬ್ರಾಹ್ಮಣರು ಜಾತಿಯಿಂದ ಬಹಿಷ್ಕಾರ ಮಾಡಿದರು. ಆದರೆ ಅವರಿಗೆ ಮತ್ತೆ ಆ ಜಾತಿಯಲ್ಲಿ ಹೋಗಬೇಕಾಗಿತ್ತು. ಹಾಗಾಗಿಯೇ ಆತ ಆ ರೂಢಿಗತವಾಗಿದ್ದ ಚಾತುರ್ವರ್ಣದ ಕಲ್ಪನೆಯನ್ನು ಎತ್ತಿ ಹಿಡಿದಿದ್ದಾನೆ. ಕಾರಣ ಸಮಾಜ ದಂಡದ ಎದುರು ಆತ ಭಯಭೀತನಾಗಿದ್ದಿರಬೇಕು. ಬ್ರಹ್ಮನು ಸರ್ವವ್ಯಾಪಿಯಾಗಿದ್ದರೆ, ಜ್ಞಾನೇಶ್ವರನು ಹೀಗೆ ಹೇಳುತ್ತಿದ್ದ, ನೀವು ನಮಗೆ ಬಹಿಷ್ಕಾರ ಹಾಕಿದರೆ ನಾವು ಹೊಲೆಯರ ವಾಡೆಯಲ್ಲಿ ಹೋಗಿ ನೆಲೆಸುತ್ತೇವೆ ಅವರಲ್ಲಿಯೂ ಬ್ರಹ್ಮನೇ ಇದ್ದಾನೆ. ಆದರೆ ಹಾಗೆ ಹೇಳುವುದಕ್ಕೆ ಬದಲಾಗಿ ಆತ ಕೋಣನ ಬಾಯಲ್ಲಿ ವೇದವನ್ನು ಹೇಳಿಸಿದನು.ವಿಚಿತ್ರವೆಂದರೆ ಆ ಕೋಣವು ಅಂದಿನಿಂದ ಸಂಪೂರ್ಣ ಮೂಕವಾಗಿಬಿಟ್ಟಿತು.

ಇಂಗ್ಲೆಂಡಿನ ಪ್ರಜಾಪ್ರಭುತ್ವಕ್ಕೆ ಸಾವಿರಾರು ವರ್ಷಗಳ ವಿಶಿಷ್ಟ ಪರಂಪರೆಯೇ ಇದೆ. ಅಲ್ಲಿನ ಸರ್ವಸಾಮಾನ್ಯ ಸಮಾಜದಲ್ಲಿನ ಎಲ್ಲಾ ಅಪಪ್ರವೃತ್ತಿಗಳು ನಷ್ಟವಾದ ಮೇಲೆ ಅಲ್ಲಿ ಮತದಾನದಂತಹ ಪ್ರೌಢ ಹಕ್ಕುಗಳು ಎಲ್ಲರಿಗೂ ಲಭಿಸಿತು.ಆದರೆ ನಮ್ಮ ಇಲ್ಲಿನ ಜನರ ಅಜ್ಞಾನವೇ ನಮ್ಮ ಪ್ರೌಢ ಮತದಾನದ ಅಧಿಷ್ಠಾನವಾಗಿದೆ. ಜನರಿಗಾಗಲಿ ಮತ್ತು ಅವರ ಪ್ರತಿನಿಧಿಗಳಿಗಾಗಲಿ ಯಾವುದೇ ಜ್ಞಾನವಿಲ್ಲ. ಹಾಗಾಗಿ ಶೂನ್ಯ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಸುಳ್ಳು, ಸಮಯಸಾಧಕರು ಮತ್ತು ಹಿತಸಂಬಂಧಿ ಜನರು ಮಾತ್ರವೇ ಅದರ ಲಾಭ ಪಡೆಯುತ್ತಿದ್ದಾರೆ. ಪದವೀಧರರಾಗುವುದಕ್ಕೆ ಮ್ಯಾಟ್ರಿಕ್‌ನ ನಂತರ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ. ಹೀಗೆ ನಾವು ಒಂದು ಕ್ರಮದಲ್ಲಿ ಪದವೀಧರರಾಗುತ್ತೇವೆ. ಆದರೆ ಲೋಕಸಭೆಯ ವಿಧಿಮಂಡಲದ ಸದಸ್ಯರಾಗಲು, ಅಲ್ಲದೆ ಮಂತ್ರಿಯಾಗುವುದಕ್ಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಯಾವುದೇ ಕ್ರಮವಿಲ್ಲ. ಹೇಗಾದರೂ ಮಾಡಿ ಯಾರಾದರೂ ಚುನಾವಣೆಯಲ್ಲಿ ಆರಿಸಿ ಬಂದರೆ ಸಾಕು, ಸಾವಿರಾರು ಉಪಾಯಗಳನ್ನು ಮಾಡಿ ಮಂತ್ರಿ ಪದವಿಗೆ ಮುಟ್ಟಿದರಾಯಿತು ಎಂಬಂತಹ ವಿಚಿತ್ರ ದೆಶೆ ಇದೆ ನಮ್ಮ ರಾಜಕಾರಣದಲ್ಲಿ.

ಈ ರೀತಿಯಲ್ಲಿ ಆರಿಸಿ ಹೋಗುವವರ ಕೈಯಿಂದ ಪ್ರಜಾಪ್ರಭುತ್ವದಲ್ಲಿ ವಿಶಿಷ್ಟ ಪರಂಪರೆಯು ಹೇಗೆ ನಿರ್ಮಾಣವಾಗುವುದಕ್ಕೆ ಸಾಧ್ಯ. ಬರುವ 20 ವರ್ಷಗಳ ಅವಧಿಯಲ್ಲಿ ಸಮಾಜದ ಶೈಕ್ಷಣಿಕ, ಬೌದ್ಧಿಕ ಮತ್ತು ವೈಚಾರಿಕ ಪಾತಳಿಗಳು ಏಕಸೂತ್ರದಲ್ಲಿಯೇ ಬೆಳವಣಿಗೆಯನ್ನು ಸಾಧಿಸಬೇಕು. ಜನರಿಗೆ ತಿಳಿವಳಿಕೆ ಹೇಳಿ ಅವರಿಗೆ ಒಪ್ಪಿಸುವ ಪದ್ಧತಿ (ಛ್ಟಿಠ್ಠಜಿಛಿ ಞಛಿಠಿಟ)ಯನ್ನು ಹೆಚ್ಚಾಗಿ ಬಳಸಬೇಕಾಗಿದೆ.ಅದು ಸರ್ವಾಧಿಕಾರವೆನಿಸಿದರೂ ಅದು ಅತ್ಯಂತ ಅವಶ್ಯವಾಗಿದೆ.(ಶ್ರೋತೃಗಳಲ್ಲಿ ಒಬ್ಬರು ರಶ್ಯಾದಲ್ಲಿ ಇಂಥ ಸರ್ವಾಧಿಕಾರವು ಕಳೆದ 40 ವರ್ಷಗಳಿಂದಲೂ ಅಬಾಧಿತವಾಗಿದ್ದು, ಅದರ ಆಲಿಂಗನವು ಅಧಿಕಾಧಿಕವಾಗಿ ಗಟ್ಟಿಯಾಗುತ್ತಲೇ ಇರುವುದನ್ನು ಹೇಳಿದರು.

ಅದೇ ರೀತಿಯಲ್ಲಿ ಭಾರತದಲ್ಲಿಯೂ ಸರ್ವಾಧಿಕಾರವನ್ನು ಖಾಯಂ ಸ್ವರೂಪದಲ್ಲಿ ಧಾರಣ ಮಾಡಿಕೊಳ್ಳಬಹುದಲ್ಲವೇ? ಎಂಬುದಾಗಿ ಹೇಳಿದರು.)ಬಾಬಾಸಾಹೇಬರು ಹೇಳಿದರು, ಅಪಾಯವಂತೂ ನಿಶ್ಚಿತವಾಗಿಯೂ ಇದೆ. ಆದರೆ ಎಲ್ಲಿ ಅಪಾಯವಿಲ್ಲ ಹೇಳಿ? ನಮ್ಮ ಪ್ರಜಾಪ್ರಭುತ್ವವು ಅಪಾಯದಿಂದ ಮುಕ್ತವಾಗಿದೆಯೇ? ರಶ್ಯಾದಲ್ಲಿ ಇಂದಿಗೂ ಸರ್ವಾಧಿಕಾರವನ್ನು ಉಳಿಸಿಕೊಂಡಿರುವುದು ನನಗೆ ಒಳ್ಳೆಯದೇ ಅನ್ನಿಸುತ್ತಿದೆ. ಆ ಸುದೀರ್ಘ ಕಾಲದಲ್ಲಿ ನಿಜವಾಗಿಯೂ ಹೇಳುವುದಾದರೆ ರಶ್ಯಾ ದೇಶವು ನಿಜವಾಗಿಯೂ ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರವನ್ನು ಪ್ರಸ್ಥಾಪಿತಗೊಳಿಸುವುದರ ಉಪಯೋಗ ಮಾಡಿಕೊಳ್ಳಬೇಕಾದ್ದು ಅವಶ್ಯವಾಗಿತ್ತು. ಆದರೆ ಅಲ್ಲಿ ಹಾಗೆ ಆಗಲಿಲ್ಲ. ಸರ್ವಾಧಿಕಾರದಲ್ಲಿನ ಈ ಅಪಾಯ ನನಗೆ ಮಾನ್ಯವಿದೆ. ಆದರೆ ಪ್ರಜಾಪ್ರಭುತ್ವಕ್ಕೆ ಇರುವ ಅನುಕೂಲ ಜಾಗೃತಿ ಮತ್ತು ಪರಂಪರೆಯಾದರೂ ಇಲ್ಲಿ ಎಲ್ಲಿದೆ? ಅಂಧಶ್ರದ್ಧೆ, ರೂಢಿಪ್ರಿಯತೆಯೇ ಮೊದಲಾದ ದೋಷಗಳಿಂದಾಗಿ ನಮ್ಮ ಸಮಾಜವು ದೃಷ್ಟಿ ಹೀನವಾಗಿದೆ.
ಕುಂಭಮೇಳದಲ್ಲಿ ನಾಗಾ ಸಾಧುಗಳ ಕಾಲಿನ ಕೆಳಗೆ ಸಿಕ್ಕಿ ಸಾವಿರಾರು ನಾಗರಿಕರು ಪ್ರಾಣವನ್ನೇ ಕಳೆದುಕೊಂಡರು. ಈ ಘಟನೆ ಏನನ್ನು ತೋರಿಸುತ್ತದೆ? ನಾನು ಮಂತ್ರಿಯಾಗಿದ್ದರೆ ಮತ್ತು ಅಧಿಕಾರವು ನನ್ನ ಕೈಯಲ್ಲಿಯೇ ಇದ್ದಿದ್ದರೆ, ನಾನು ಸೈನ್ಯವನ್ನು ಕಳುಹಿಸಿ ಆ ನಾಗಾ ಸಾಧುಗಳನ್ನು ಓಡಿಸುತ್ತಿದ್ದೆನು. ಒಂದೊಮ್ಮೆ ಆವಶ್ಯಕವಾಗಿದ್ದರೆ ಗೋಲಿಬಾರನ್ನೂ ಸಹ ಮಾಡಿಸಲು ಹಿಂಜರಿಯುತ್ತಿರಲಿಲ್ಲ.ಗಿರಿಕಂದರಗಳಲ್ಲಿ ಇರುವಂತಹ ಈ ಸಾಧುಗಳಿಗೆ ಜನರ ನಡುವೆ ಬರಬೇಕು ಅನ್ನಿಸಿದರೆ ತಾವು ಬಟ್ಟೆಗಳನ್ನು ಧರಿಸಿ, ಸರಿಯಾದ ರೀತಿಯಲ್ಲಿ ಬರಬೇಕು. ಆದರೆ ನಮ್ಮ ರಾಜ್ಯಕರ್ತರು ಈ ಪ್ರಸಂಗದಲ್ಲಿ ಏನು ಮಾಡಿದರು? ಜನರ ಧಾರ್ಮಿಕ ಅಂಧಶ್ರದ್ಧೆಗಳನ್ನೇ ಬಂಡವಾಳವಾಗಿ ಮಾಡಿಕೊಂಡು ತಮ್ಮ ಜನಪ್ರಿಯತೆಗಾಗಿ ಅದನ್ನು ಬಳಸಿಕೊಂಡರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)