ವಾಮದಪದವಿನಲ್ಲಿ ಕೇಸರಿ ಶಾಲು, ಮೆಲ್ಕಾರ್ ನಲ್ಲಿ ಕಾಂಗ್ರೆಸ್ ಶಾಲು !
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪ್ರಚಾರ ವೈಖರಿ ಬಗ್ಗೆ ಬಿಸಿಬಿಸಿ ಚರ್ಚೆ
ಮಂಗಳೂರು, ಎ.5 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಚುನಾವಣಾ ಪ್ರಚಾರ ವೈಖರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಮಿಥುನ್ ರೈ ಸಾಮಾನ್ಯವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ನಾಯಕರು ಹಾಕಿಕೊಳ್ಳುವ ತ್ರಿವರ್ಣ ಶಾಲಿಗಿಂತ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರ ಹೆಗ್ಗುರುತು ಎಂದೇ ಗುರುತಿಸಲಾಗುವ ಕೇಸರಿ ಶಾಲನ್ನು ಹೆಚ್ಚು ಧರಿಸುತ್ತಿರುವುದು ಇದಕ್ಕೆ ಕಾರಣ.
ಗುರುವಾರ ಮಿಥುನ್ ರೈ ಬಂಟ್ವಾಳ ಸುತ್ತಮುತ್ತ ಪ್ರಚಾರದಲ್ಲಿದ್ದರು. ಈ ಬಗ್ಗೆ ಅವರ ಫೇಸ್ ಬುಕ್ ಪೇಜ್ ನಲ್ಲಿ ಕೆಲವು ಪೋಸ್ಟ್ ಗಳನ್ನು ಹಾಕಿದ್ದಾರೆ. ವಾಮದಪದವಿನಲ್ಲಿ ನಡೆದ ರೋಡ್ ಶೋ ಹಾಗೂ ಬ್ರಹತ್ ಕಾರ್ಯಕರ್ತರ ಸಭೆಯ ಫೋಟೋಗಳ ಒಂದು ಪೋಸ್ಟ್ ವಿಶೇಷವಾಗಿ ಗಮನ ಸೆಳೆದಿದೆ. ಮೊದಲ ನೋಟಕ್ಕೆ ಇದು ಕಾಂಗ್ರೆಸ್ ಸಭೆಯೋ ಬಿಜೆಪಿ/ಸಂಘ ಪರಿವಾರದ ಸಭೆಯೋ ಎಂದು ಗೊಂದಲ ಆಗುವಷ್ಟು ಕೇಸರಿ ಶಾಲುಗಳು ಅಲ್ಲಿ ಗಮನ ಸೆಳೆಯುತ್ತವೆ.
ಒಂದೆರಡು ಫೋಟೋ ಬಿಟ್ಟರೆ ಅಭ್ಯರ್ಥಿ ಮಿಥುನ್ ರೈ ಸಹಿತ ಎಲ್ಲ ಕಾರ್ಯಕರ್ತರು ಕೇಸರಿ ಶಾಲುಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಎಲ್ಲ ಕಡೆ ಇದೇ ರೀತಿ ಇರುವುದಿಲ್ಲ. ಮೆಲ್ಕಾರ್ ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಿಥುನ್ ರೈ ಮೈಮೇಲೆ ಕಾಂಗ್ರೆಸ್ ಶಾಲು ಇರುವ ಚಿತ್ರ, ವೀಡಿಯೋಗಳಿವೆ.
ಈ ಬಗ್ಗೆ ಮಿಥುನ್ ರೈ ಅವರ ಪೋಸ್ಟ್ ನ ಕೆಳಗೆಯೇ ಕೆಲವರು ಪರ ವಿರೋಧ ಅಭಿಪ್ರಾಯಗಳನ್ನು ದಾಖಲಿಸಿದ್ದರೆ ಫೇಸ್ ಬುಕ್ ಹಾಗೂ ವಾಟ್ಸ್ಆ್ಯಪ್ ಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವರು ಮಿಥುನ್ ರೈ ಮೃದು ಹಿಂದುತ್ವ ಪಾಲಿಸುತ್ತಿದ್ದಾರೆ ಎಂದು ಟೀಕಿಸಿದರೆ ಇನ್ನು ಕೆಲವರು ಯಾರು ಯಾವ ಬಣ್ಣ ಬೇಕಾದರೂ ಬಳಸಬಹುದು. ಅದು ಮುಖ್ಯ ಅಲ್ಲ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಕೆಲವು ಬಿಜೆಪಿ ಬೆಂಬಲಿಗರು ಕೇವಲ ಕೇಸರಿ ಶಾಲು ಹಾಕಿದರೆ ಮತ ಸಿಗುವುದಿಲ್ಲ ಎಂದು ಕಾಲೆಳೆದರೆ, ಮಿಥುನ್ ರ ಟೀಕಾಕಾರರು ಎಲ್ಲಿ ಯಾವ ಧರ್ಮದವರು ಹೆಚ್ಚಿದ್ದಾರೆ ಎಂದು ನೋಡಿ ಮಿಥುನ್ ಶಾಲು ಆಯ್ಕೆ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಮುಂಬರುವ ದಿನಗಳಲ್ಲಿ ಈ ಶಾಲಿನ ಚರ್ಚೆ ಇನ್ನಷ್ಟು ಕಾವೇರುವ ಸಾಧ್ಯತೆಯಂತೂ ಹೆಚ್ಚಿದೆ.