ತಾಂತ್ರಿಕ ಕಾಲೇಜುಗಳ ಹ್ಯಾಂಡ್ಬಾಲ್ ಪಂದ್ಯಾವಳಿ: ನಿಟ್ಟೆಗೆ ಪ್ರಶಸ್ತಿ
ಶಿರ್ವ, ಎ.5: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ಎ.2ರಂದು ಆಯೋಜಿಸಲಾದ ಮಂಗಳೂರು ವಲಯ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳ ಪುರುಷರ ಹ್ಯಾಂಡ್ಬಾಲ್ ಪಂದ್ಯಾವಳಿ ಯಲ್ಲಿ ಎನ್.ಎ.ಎಂ.ಐ.ಟಿ. ನಿಟ್ಟೆ ಪ್ರಥಮ ಸ್ಥಾನ ಗೆದ್ದುಕೊಂಡಿತು.
ಪಂದ್ಯಾಟದಲ್ಲಿ ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಂಟಕಲ್ ಕಾಲೇಜಿನ ಸಂಜಯ್ ಭಂಡಾರಿ ಉತ್ತಮ ಆಟಗಾರ ಪ್ರಶಸ್ತಿ ಹಾಗೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಂಗಮ್ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂದ್ಯಾಟವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಹ್ಯಾಂಡ್ಬಾಲ್ ಸಂಘದ ಕಾರ್ಯದರ್ಶಿ ಸೀತಾರಾಮ ಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಓದಿನ ಜೊತೆಗೆ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಮಂಗಳೂರು ವಲಯ ಕ್ರೀಡಾ ನಿರ್ದೇಶಕ ಗಣೇಶ್ ಪೂಜಾರಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಬಿ.ಎಂ. ಉಪಸ್ಥಿತರಿದ್ದರು.
ಮಂಗಳೂರು ವಲಯದ ವಿವಿಧ ತಾಂತ್ರಿಕ ಕಾಲೇಜುಗಳ 6 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸಂಜಯ್ ಭಂಡಾರಿ ಸ್ವಾಗತಿಸಿ ದರು. ಸಹಾಯಕ ಪ್ರಾಧ್ಯಾಪಕ ಸಚಿನ್ ಪ್ರಭು ವಂದಿಸಿದರು. ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.